ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದತ್ತಾತ್ರೇಯ ಎಂದರೆ ಯಾರು? ಆತ ಯಾರ ಮಗನಾಗಿದ್ದನು? ಆತನು ನೋಡಲು ಹೇಗಿದ್ದಾನು? ಆತನ ಶಿಷ್ಯರಾಗಲು ಏನು ಮಾಡಬೇಕು? ಎಂಬೆಲ್ಲ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡಿರಬಹುದು ಅವೆಲ್ಲ ಪ್ರಶ್ನೆಗಳಿಗೂ ಒಂದಿಷ್ಟು ಸಂಕ್ಷಿಪ್ತ ಉತ್ತರ ಹುಡುಕುತ್ತ, ಭಗವಂತನ ಹತ್ತಿರ ಸಾಗೋಣ.
ಭಾವಚಿತ್ರದಲ್ಲಿ ನೋಡಿರುವಂತೆ ದತ್ತನಿಗೆ ಮೂರು ತಲೆ ಇರಬೇಕು. ನಾಲ್ಕು ನಾಯಿ ಇರಬೇಕು. ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಕಲಿಯುಗದಲ್ಲಿ ದತ್ತನ ಅವತಾರ ಅವಧೂತರ ರೂಪದಲ್ಲಿ ಸಾಗಿ ಬಂದಿದೆ. ದತ್ತ ತ್ರಿಮೂರ್ತಿರೂಪ, ಬ್ರಹ್ಮ ವಿಷ್ಣು ಶಿವನ ಅಂಶಗಳನ್ನು ಒಂದಾಗಿಸಿಕೊಂಡು ಭುವಿಗಿಳಿದ ಅಮೂರ್ತರೂಪ.
ದತ್ತನ ಜನನದ ಆಗಿದ್ದೇ ಒಂದು ವಿಶೇಷ ಪ್ರಸಂಗ. ಅತ್ರಿ ಅನುಸೂಯಾ ಜಗತ್ತಿನ ಅತಿ ಪುರಾತನ ದಂಪತಿಗಳು. ಭಗವಂತನನ್ನು ಕುರಿತು ಅತ್ರಿ ತಪಸ್ಸು ಮಾಡಿದರು. ಈ ಜಗತ್ತಿಗೆ ಸೃಷ್ಠಿ ಸ್ಥಿತಿ ಸಂಹಾರಕ್ಕೆ ಕಾರಣನಾದ ಭಗವಂತನೆ ತನ್ನ ಪುತ್ರನಾಗಿ ಜನಿಸಿ ಬರಬೇಕು ಎಂಬುದಾಗಿ ತಪಸ್ಸು ನಡೆಯಿತು. ಅದರ ಜೊತೆಗೆ ಅನುಸೂಯಾ ಮಾತೆಯೂ ಪತಿಯ ತಪಸ್ಸಿನಲ್ಲಿ ಸೇರಿಕೊಂಡಳು. ದಾಂಪತ್ಯ ನಿಷ್ಠೆ ಪಾತಿವ್ರತ್ಯಕ್ಕೆ ಮೆಚ್ಚಿದ ದೇವತೆಗಳು ಏನು ಬೇಕು ಕೇಳು ಕೊಡುತ್ತೇವೆ ಎಂದರಂತೆ! ಅದಕ್ಕೆ ಬ್ರಹ್ಮ ವಿಷ್ಣು ಶಿವ ಮೂರುಜನ ತನ್ನ ಮಕ್ಕಳಾಗಿ ಹುಟ್ಟಬೇಕು ಎಂದು ಕೇಳಿದಳಂತೆ. ಚತುರ್ಮುಖ ಚಂದ್ರನಾಗಿ ಮೊದಲು ಹುಟ್ಟಿದನಂತೆ, ವಿಷ್ಣು ದತ್ತನಾಗಿ ಅತ್ರಿಯ ಮಗನಾಗಿ ಬಂದ ಕಾರಣ ಆತ್ರೇಯ ಎಂದು ಹೆಸರಾಯಿತು. ದೂರ್ವಾಸ ಎಂದರೆ ಮನೆಯಲ್ಲಿ ಕೂಡಿಸಿ ಆತಿಥ್ಯ ಮಾಡಿ ಕಳಿಸುವುದು ಕಷ್ಟವಂತೆ. ಆತೆ ಸದಾ ಕೋಪಿಷ್ಠ. ಆತ ಅನುಸೂಯಾ ಗರ್ಭ ಪ್ರವೇಶ ಮಾಡಿದ ನಂತರ ಅಲ್ಲಿ ತುಂಬಾ ಸಮಯ ಇರುವುದು ಆತನಿಗೆ ಸಿಟ್ಟುಬಂತಂತೆ. ಅವಧಿ ಮುಗಿಯುವ ಮುಂಚೆ ಹೊರಗೆ ಬಂದು ಬಿಟ್ಟ ಕಾರಣಕ್ಕಾಗಿ ಆತನಿಗೆ ದೂರ್ವಾಸ ಎಂದು ಹೆಸರು. ಶಂಕರನ ರೂಪನಾಗಿ ದೂರ್ವಾಸ ಜನಿಸಿದನಂತೆ.
ಜ್ಞಾನದ ಶಿಖರವೇ ಆಗಿದ್ದ ದತ್ತಾತ್ರೇಯನಿಗೆ ಜನರೆಲ್ಲ ಮುತ್ತಿಗೆ ಹಾಕಿದರು ಏಕೆಂದರೆ ಆತ ದೊಡ್ಡ ಜ್ಞಾನಿ, ಅವನಿಂದ ನಾವು ಜ್ಞಾನವನ್ನು ಪಡೆಯಬೇಕು ಎಂಬುದು ಅವರ ಇಚ್ಚೆಯಾಗಿತ್ತು. ನಿಜವಾದ ಜ್ಞಾನಿಗಳು ಏಕಾಂತ ವಾಸವನ್ನು ಇಷ್ಟಪಡುತ್ತಾರಂತೆ. ದತ್ತನಿಗೆ ಎಲ್ಲಿ ಹೋದರು ಜನ ಮುತ್ತಿಗೆ ಹಾಕಲು ಶುರು ಮಾಡಿದ ಕಾರಣ. ಜನರಿಂದ ದೂರ ಹೋಗಲಿಕ್ಕಾಗಿ ಮದ್ಯಪಾನ ಮತ್ತು ಸ್ತ್ರೀಯರ ಸಂಗ ಮಾಡಿದವರಂತೆ ಅವರಿಗೆ ಕಾಣಿಸಿಕೊಂಡು ಅವರಿಂದ ತಪ್ಪಿಸಿಕೊಂಡನಂತೆ.
ದತ್ತಾತ್ರೇಯನಿಗೆ ಇಬ್ಬರು ಶಿಷ್ಯರು ಬಹಳ ಪ್ರಸಿದ್ದರು. ಒಬ್ಬ ಯದುವಂಶದ ಕಾರ್ತವಿರ್ಯಾರ್ಜುನ. ಕಾರ್ತವಿರ್ಯಾರ್ಜುನ ದತ್ತಾತ್ರೆಯ ನಿಂದ ಉಪದೇಶ ಪಡೆದು ಬಹಳ ದೊಡ್ಡ ರಾಜನಾದ. ಮತ್ತೊಬ್ಬ ಅಲರ್ಕ ಎಂಬ ಇಬ್ಬರು ರಾಜರು. ಕೃತವಿರ್ಯನ ಮಗ ಕಾರ್ತವಿರ್ಯಾರ್ಜುನ ರಾಜ್ಯ ಬೇಡ, ರಾಜನ ಪದವಿ ಬೇಡ ಇದೆಲ್ಲ ರಗಳೆ. ಅಧಿಕಾರ ಬಂದಾಕ್ಷಣ ಸಾವಿರ ತಲೆ ನೋವು. ಗೊತ್ತಿಲ್ಲದಂತೆ ನಿರಪರಾದಿಗಳಿಗೆ ಶಿಕ್ಷೆ ಆಗುತ್ತೆ. ಅಪರಾಧಿಗಳಿಗೆ ಬಿಡುಗಡೆ ಆಗುತ್ತೆ. ಪ್ರಜೆಗಳ ರಕ್ಷಣೆ ಮಾಡುವಲ್ಲಿ ತೊಂದರೆ ಆದರೆ ಆದೊಂದು ಮಹಾ ಪಾತಕ. ಅಧಿಕಾರವೇ ಬೇಡ ಎಂದು ನಿಂತಿದ್ದ ಕಾರ್ತವೀರ್ಯಾರ್ಜುನನಿಗೆ ಎಲ್ಲರೂ ಹೇಳುತ್ತಾರೆ ನೀನು ದತ್ತಾತ್ರೇಯನ ಹತ್ತಿರ ಹೋಗಿ ಜ್ಞಾನ ಸಂಪಾದನೆಯನ್ನು ಮಾಡಿ, ದತ್ತನ ಆದೇಶದಂತೆ ಮುಂದಿನ ರಾಜ್ಯಭಾರ ಮಾಡಬಹುದು.
ದತ್ತಾತ್ರೇಯನ ಬಳಿ ಬಂದ ಕಾರ್ತವೀರ್ಯಾರ್ಜುನನಿಗೆ ದತ್ತಾತ್ರೆಯರು ನಾನು ಸುರಾಪಾನ ಮಾಡುತ್ತೇನೆ. ಸ್ತ್ರೀಸಂಗ ಮಾಡುತ್ತೇನೆ ಯಾರು ನನ್ನ ಬಳಿ ಬರುವುದಿಲ್ಲ ನೀನ್ಯಾಕೆ ಬಂದಿ ಎಂದು ಕೇಳುತ್ತಾರೆ. ನನಗೆ ಗೊತ್ತು ನೀವ್ಯಾರು ಎಂದು ನೀವು ಸುರಾಪಾನ ಮಾಡಿದರು ಅಡ್ಡಿಯಿಲ್ಲ, ಸ್ತ್ರಿಸಂಗ ಮಾಡಿದರು ಅಡ್ಡಿಯಿಲ್ಲ ನನಗೆ ಉಪದೇಶ ಮಾಡಿ ಎಂದು ಕೇಳಿಕೊಂಡನಂತೆ ಅದರಂತೆ ದತ್ತಾತ್ರೇಯರು ಆತನಿಗೆ ಉಪದೇಶ ಮಾಡುತ್ತಾರೆ. ಅಲ್ಲಿಂದ ದೂಡ್ಡ ರಾಜನಾಗಿ ಬೆಳೆಯುತ್ತಾನಂತೆ.
ಮತ್ತೊಬ್ಬ ರಾಜ ದತ್ತಾತ್ರೇಯರ ಪ್ರಸಿದ್ದ ಶಿಷ್ಯ ಅಲರ್ಕ. ಒಬ್ಬ ರಾಜಕುಮಾರ. ರಾಜನಿಗೆ 4 ಜನ ಮಕ್ಕಳು, ಮೊದಲನೆಯವ ವಿಕ್ರಾಂತ, ತಾಯಿ ಮದಾಲಸ ಹೆಸರನ್ನು ಕೇಳಿ ಅಪಹಾಸ್ಯದಂತೆ ನಗಾಡಿದಳು, ಎರಡನೆಯವನು ಸುಭಾಹು, ಎರಡನೆಯನ ಹೆಸರು ಕೇಳಿ ಮತ್ತೊಮ್ಮೆ ನಕ್ಕಳಂತೆ. ಮೂರನೆಯವನು ಅರಿಮರ್ಧನ, ಅದನ್ನು ಕೇಳಿ ಮತ್ತೊಮ್ಮೆ ಅಪಹಾಸ್ಯದಲ್ಲಿಯೇ ನಕ್ಕಳಂತೆ. ಅದಕ್ಕೆ ರಾಜ ತನ್ನ ರಾಣಿಯ ನಗುವನ್ನು ಯಾಕೆ ಎಂದು ಕೇಳಿಬಿಟ್ಟ. ಒಳ್ಳೆಯ ಹೆಸರುಗಳನ್ನು ಇಟ್ಟರೂ ನಕ್ಕದ್ದೇಕೆ? ವಿಕ್ರಾಂತ ಅಂದರೆ ಹೆಜ್ಜೆ ಇಟ್ಟು ಮುಂದೆ ಸಾಗುವುದು. ಈ ಜೀವ ಎಲ್ಲ ಕಡೆ ಸರ್ವವ್ಯಾಪಿ ಅದು ಹೇಗೆ ನಡೆದುಕೊಂಡು ಹೋಗುತ್ತದೆ ಅದಕ್ಕಾಗಿ ಅದೊಂದು ಮೂರ್ಖತನದ ಹೆಸರು. ಎರಡನೆಯವನು ಸುಭಾಹು ಅಲ್ಲವೇ, ಈ ಆತ್ಮ ನಿರಾಕಾರನಾದ ಆತ್ಮನಿಗೆ ಭಾಹುಗಳೆಲ್ಲಿಯದು? ಇನ್ನು ಅರಿಮರ್ಧನ ಎಲ್ಲಕಡೆಯೂ ಇರುವುದು ಒಂದೇ ಆತ್ಮ ಇರುವಾಗ ಯಾರು ಶತ್ರು? ಯಾರು ಮಿತ್ರ? ಆದಕ್ಕಾಗಿ ಈ ಎಲ್ಲ ಹೆಸರುಗಳು ಅರ್ಥವಿಲ್ಲದ್ದು ಎಂದಳು.
ಇದನ್ನು ಕೇಳಿದ ಮೇಲೆ ರಾಜನಿಗೆ ಹೌದು ಎಂದು ಕಂಡಿತು. ಕೊನೆ ಮಗುವಿಗೆ ಹೆಂಡತಿಗೆ ಹೆಸರು ಇಡು ಎಂದು ಹೇಳಿದನು ಅದಕ್ಕೆ ಆಕೆ ನಾನು ಹೆಸರು ಇಡುವುದಿಲ್ಲ ಎಂದಳು. ಪುರೋಹಿತರು ಬಂದರು ಅವರು ರಾಜರಾಣಿಗೆ ಕೇಳಿದರು. ರಾಜರಾಣಿ ಒಬ್ಬರ ಮುಖ ಒಬ್ಬರು ನೋಡಿಕೊಂಡರು ನಂತರ ರಾಣಿ ಅಲರ್ಕ ಎಂದು ಹೆಸರಿಡಿ ಎಂದುಬಿಟ್ಟಳು. ವಿಚಿತ್ರ ಬಹಳ ವಿಚಿತ್ರ. ಅಲರ್ಕ ಎಂದರೆ ಸಂಸ್ಕೃತದಲ್ಲಿ ಹುಚ್ಚುನಾಯಿ ಎಂದು ಅರ್ಥ ಬರುತ್ತದೆ. ಎಲ್ಲರೂ ತಬ್ಬಿಬ್ಬಾದರು. ರಾಜನಿಗೆ ಗಾಬರಿಯಾಯಿತು.
ಏಕೆಂದರೆ ಈ ಜೀವ ಸಂಸಾರದಲ್ಲಿ ಅಲೆದಾಡುವ ಹುಚ್ಚುನಾಯಿಯೆ ಇದು. ಆದ್ದರಿಂದ ಅನ್ವರ್ಥವಾದ ಹೆಸರೇ ಇದು. ದೇವರಿಗೂ ಆ ಹೆಸರಿದೆ. ಬಹಳ ಹಿಂದೆ ಮಂಡೂಕ, ಶುನಕ ಎಂಬ ಋಷಿ ಇದ್ದರು ಶುನಕ ಎಂದರೆ ನಾಯಿ. ಮಂಡೂಕ ಕಪ್ಪೆ ಹೆಸರು ಮಾತ್ರವಲ್ಲ ಭಗವಂತನ ಹೆಸರು. ಮಂಡನ (ಮಡಿಭೂಷಾಯಂ) ಅಲಂಕಾರ(ಜ್ಞಾನವೇ ಮನುಷ್ಯನಿಗೆ ಅಲಂಕಾರ). ಊಕ ಎಂದರೆ ಅವರಕ್ಷಣೆ, ಜ್ಞಾನದಿಂದ ರಕ್ಷಿತನಾದವ ದೊಡ್ಡ ಜ್ಞಾನಿ ಎಂದು ಮಂಡೂಕ ಶಬ್ದಕ್ಕೆ ಅರ್ಥ.
ಶುನಕ ಎಂದರೆ ಜ್ಞಾನಾನಂದ ಸ್ವರೂಪ ಅಂತ. ಹಾಗೇಯೇ ಅಲರ್ಕ ಎಂದರೆ ಹುಚ್ಚುನಾಯಿಗೆ ಮಾತ್ರವೆ ಹೆಸರಲ್ಲ. (ಪರಿಪೂರ್ಣವಾದ ಆನಂದ ಮತ್ತು ಕ್ರೀಡೆ ಯಾರ ಸ್ವರೂಪವೋ ಅವನು ಅಲರ್ಕ) ಪೂರ್ಣಜ್ಞಾನಾನಂದ ಸ್ವರೂಪ ಎಂದು ಅರ್ಥ ಬರುತ್ತದೆ.
ಮದಾಲಸ ಎಲ್ಲಾ ಮಕ್ಕಳಿಗೂ ಆಧ್ಯಾತ್ಮದ ಅನುಷ್ಟಾನ, ನಿತ್ಯ ನೈಮಿತ್ತಿಕ ಕರ್ಮಗಳು, ಸತ್ಯ ಅಸತ್ಯ ಯಾವುದು ಎಂದು ಎಲ್ಲರಿಗೂ ಭೋದನೆ ಮಾಡುತ್ತಾಳೆ. ಅದನ್ನು ಅಲರ್ಕ ಮಾತ್ರ ಹೆಚ್ಚು ಶ್ರದ್ದೆಯಿಂದ ಪರಿಪಾಲಿಸುತ್ತಾನೆ. ಉಳಿದವರೆಲ್ಲ ರಾಜ್ಯದ ಅಧಿಕಾರದ ಆಸೆಯಿಂದ ಅದನ್ನು ಅಷ್ಟೊಂದು ಹಚ್ಚಿಕೊಳ್ಳುವುದಿಲ್ಲ. ಕೊನೆಗೊಮ್ಮೆ ಅಲರ್ಕನಿಗೆ ಒಂದು ಉಂಗುರ ಬಹುಮಾನ ಕೊಡುತ್ತಾಳೆ. ಅಗತ್ಯ ಬಿದ್ದಾಗ ಅದನ್ನು ಬಳಸಿಕೊ ಎಂದು ಹೇಳುತ್ತಾಳೆ. ಅದರಲ್ಲಿ ಎರಡು ಶ್ಲೋಕ ಇರುತ್ತದೆ.
1. ಯಾರ ಸಹವಾಸವು ಮಾಡಬೇಡ (ನೀನು ನಿನ್ನಷ್ಟಕ್ಕಿರು). ಯಾರನ್ನು ಹಚ್ಚಿಕೊಳ್ಳಬಾರದು. ಸಾಧ್ಯವಾದರೆ ಒಬ್ಬನೆ ಒಬ್ಬಂಟಿಯಾಗಿ ವಾಸಮಾಡು. ಒಬ್ಬಂಟಿಯಾಗಿ ಇರಲು ಸಾಧ್ಯವಾಗದಿದ್ದರೆ ಒಳ್ಳೆಯವರ ಸಹವಾಸ ಮಾಡು.
2. ಬಯಕೆಗಳನ್ನು ಪೂರ್ತಿ ಬಿಟ್ಟು ಬಿಡು. ನಾನು ಈ ಸಂಸಾರದಿಂದ ಪಾರಾಗಿ ಭಗವಂತನನ್ನು ಸೇರುವ ಬಯಕೆಯನ್ನು ಬೆಳೆಸಿಕೊ.
ಯಾರ ಸಹವಾಸವು ಬೇಡ ಎಂದು ಯಾವುದೇ ಬಯಕೆಗಳಿಲ್ಲದೆ ನಿಸ್ಪೃಹತೆಯಿಂದ ರಾಜ್ಯಭಾರ ಮಾಡಿದ. ಇವನೊಂದಿಗಿನ ಅಧಿಕಾರಿಗಳು ನಿಸ್ಪೃಹತೆ(ಯಾವುದೇ ಆಸೆಗಳಿಲ್ಲದೆ) ಬದುಕಲು ಸಾಧ್ಯವೆ? ಪಕ್ಕದ ದೇಶದ ರಾಜ ಇವನ ಮೇಲೆ ದಾಳಿ ಮಾಡಿದ. ಇವನ ರಾಜ್ಯ ಸೋಲುವ ಪ್ರಸಂಗ ಬಂತು. ಎಲ್ಲವನ್ನು ಬಿಟ್ಟು ದತ್ತಾತ್ರೆಯನ ಬಳಿ ಬಂದು ವಿದ್ಯಾರ್ಥಿಯಾಗಿ ಸೇರಿಕೊಂಡ ಅಲರ್ಕ.
ದತ್ತಾತ್ರೇಯ ಸಮಗ್ರ ಜ್ಞಾನೋಪದೇಶ ಮಾಡಿದ. ಅದರಿಂದ ಅಲರ್ಕನ ಮನಸ್ಸಿನಲ್ಲಿ ಆದ ಪರಿವರ್ತನೆ ಏನೆಂದರೆ ತಾನು ರಾಜ್ಯವನ್ನು ಸೋತದ್ದು ತನ್ನ ಭಾಗ್ಯ ಎಂದ. ಏಕೆ? ಸೋತದ್ದರಿಂದ ನಿಮ್ಮ ಬಳಿ ಪಾಠ ಕೇಳಲು ಬಂದೆ. ಇಲ್ಲದಿದ್ದರೆ ಅರಮನೆಯಲ್ಲೆ ಅಧಿಕಾರ. ಅದರಲ್ಲೇ ಆರಮಾವಾಗಿ ಇರುತ್ತಿದ್ದೆ. ಎದುರಾಳಿ ದಾಳಿಗೆ ಬಂದ. ಅವನು ದಾಳಿ ಮಾಡಿದ್ದು ಅಪಕಾರ ಮಾಡಿದ್ದಲ್ಲ ಉಪಕಾರ ಮಾಡಿದ್ದು. ದಾಳಿ ಮಾಡಿದಾಗ ದುರ್ಬಲನಾಗಿ ಸೋತೆ ನಿಮ್ಮ ಬಳಿ ಬಂದೆ.
ಪಕ್ಕದ ರಾಜನಿಗೆ ದಾಳಿ ಮಾಡಲು ಹೇಳಿದ್ದು ಅಲರ್ಕನ ಅಣ್ಣನೇ, ಆದ್ದರಿಂದ ಅಣ್ಣನು ಕೂಡ ನನಗೆ ಒಳ್ಳೆಯದನ್ನೆ ಮಾಡಿದ. ನಾನು ಯುದ್ದದಲ್ಲಿ ಸೋತದ್ದು ನನ್ನ ಜೀವನದ ಪರಮ ಭಾಗ್ಯ. ಸೋತದ್ದರಿಂದ ನಿಮ್ಮ ಶಿಷ್ಯನಾಗಲು ಸಾಧ್ಯವಾಯಿತು. ನಿಮ್ಮಿಂದ ಅಪರೂಪವಾದ ಜ್ಞಾನವನ್ನು ಪಡೆಯಲು ಸಾಧ್ಯವಾಯಿತು. ನನ್ನ ಜೀವನದಲ್ಲಿ ನಡೆದ ಪ್ರತಿಯೊಂದು ಘಟನೆಯೂ ನಡೆದಾಗ ನೋವು ಎಂದು ಕೊಂಡಿದ್ದೆನೋ ಅದೆಲ್ಲವೂ ನನ್ನ ಆನಂದ, ವಿಜಯದ ಸಂಕೇತ. ನನ್ನನ್ನು ಸೋಲಿಸಿ ಗೆಲ್ಲಿಸಿದಿರಿ.
ಮರಳಿ ಬಂದು ಹೋರಾಡಿ, ರಾಜ್ಯವನ್ನು ಗೆದ್ದು ಅಣ್ಣನಿಗೆ ರಾಜ್ಯವನ್ನು ಕೊಡಲು ಸಿದ್ದನಾಗುತ್ತಾನೆ. ತನ್ನ ಅಣ್ಣನು ಮನಸ್ಸು ಪರಿವರ್ತನೆಯಾಗಿ ಆತನು ಕೂಡ ರಾಜ್ಯ ನನಗೂ ಬೇಡ ಎನ್ನುತ್ತಾನೆ. ಆಗ ಅಲರ್ಕನು ನೀವು ರಾಜ್ಯಭಾರ ಮಾಡಿ ಜನರನ್ನು ಸುಖ ಸಂತೋಷದಿಂದ ನೋಡಿಕೊಳ್ಳಿ ಎಂದು ಹೇಳಿ, ಪರಮ ವಿರಕ್ತನಾಗಿ, ಬಹಳ ದೊಡ್ಡ ಜ್ಞಾನಿಯಾಗಿ, ಜ್ಞಾನ ಭಕ್ತಿ ವೈರಾಗ್ಯದ ಖನಿಯಾಗಿ ತಪಸ್ಸಿಗೆ ಹೊರಟು ಹೋದನಂತೆ. ಅಷ್ಟು ಪರಿವರ್ತನೆಯಾಗುವ ಜ್ಞಾನ ಪರಂಪರೆಯನ್ನು ದತ್ತಾತ್ರೆಯನ ಯೋಗ ಅವನಿಗೆ ಭಗವಂತ ತಿಳಿಸಿದ.
ಅವಧೂತ ಪರಂಪರೆಯಲ್ಲಿ ಶ್ರೀಸತ್‌ಉಪಾಸಿ ಎಂಬ ಗುರುಗಳು ಚಿತ್ರದುರ್ಗದ ದೊಡ್ಡೇರಿಯವರು. ಶ್ರೀಸತ್‌ಉಪಾಸಿಯವರ ಹೆಸರು ಪೂರ್ವನಾಮ ಮಲ್ಲಯ್ಯನೆಂದು. ಮಲ್ಲಣ್ಣನವರು ಮುಗ್ದ ಸ್ವಭಾವದವರು. ದೊಡ್ಡೇರಿ ಗ್ರಾಮದ ಅಜ್ಜನವರಾದ ಹನುಮಂತಜ್ಜ ಎಂಬ ಸದಾ ಬ್ರಹ್ಮಭಾವದಲ್ಲಿರುತ್ತಿದ್ದ ಮಹಾಜ್ಞಾನಿಗಳ ಶಿಷ್ಯರು. ಇವರಿಂದ ಮಲ್ಲಣ್ಣನವರು ಆಧ್ಯಾತ್ಮದ ವಿದ್ಯೆಯನ್ನು ಕಲಿತು ದೀಕ್ಷೆಯನ್ನು ಪಡೆದರು. ಮಲ್ಲಣ್ಣನವರಿಗೆ ದೊಡ್ಡೇರಿಯಲ್ಲಿದ್ದ ಕನ್ನೇಶ(ಶಿವ)ನ ದೇಗುಲದಲ್ಲಿದ್ದ ಶಿವನ ಕಂಡರೆ ಅತೀವ ಪ್ರೇಮ. ಈ ಮುಗ್ದ ಪ್ರೇಮವನ್ನು ಕಂಡ ಹನುಮಂತಜ್ಜನವರು, ಮಲ್ಲಣ್ಣನವರನ್ನು ಮತ್ತು ಸಂಗಡಿಗರನ್ನು ಸತ್ಸಂಗದ ಹಾದಿಯಲ್ಲಿ ಕೊಂಡೊಯ್ದು ಕನ್ನೇಶನ ಪ್ರೇಮವನ್ನು ಪಡೆಯುವ ಮಾರ್ಗವನ್ನು ಹಾಕಿಕೊಟ್ಟರು. ಹನುಮಂತಜ್ಜನವರೇ ಪ್ರೀತಿಯಿಂದ ಮಲ್ಲಣ್ಣನವರನ್ನು ಕರೆದು ಶ್ರೀಸತ್‌ಉಪಾಸಿ ಎಂಬ ನಾಮಕರಣ ಮಾಡಿದರು.
ಅಂದಿನಿಂದ ಕನ್ನೇಶ(ಶಿವ)ನ ಕರುಣೆ ಮುಗ್ದಭಕ್ತನ ಮೇಲೆ ಬಿದ್ದು ಅನೇಕ ಭಾರಿ ಭಕ್ತನ ರಕ್ಷಣೆ ಗೈದ ಅಪರೂಪದ ಕಥನಗಳನ್ನು ಮಲ್ಲಣ್ಣನವರ ಬದುಕಿನಲ್ಲಿ ನಾವು ಕಾಣಬಹುದು, ಅವುಗಳನ್ನು ಅಪ್ಪನವರೇ(ಮಲ್ಲಣ್ಣ) ಮಹದಾಶ್ಚರ್ಯ ಕೃತಿಯಲ್ಲಿ ಬರೆದು ಪ್ರಕಟಿಸಿದ್ದಾರೆ. ಅಪ್ಪಾಜಿ ಎಂದು ಭಕ್ತರು ಮಲ್ಲಣ್ಣನವರನ್ನು ಪ್ರೀತಿಯಿಂದ ಕರೆಯುತ್ತಾರೆ. ಒಮ್ಮೆ ಸಿದ್ದಪುರುಷರಾದ ಪ್ರಭಾಕರ ಸ್ವಾಮಿಗಳು ಅಪ್ಪನವರಿಗೆ ದರ್ಶನಕೊಟ್ಟು, ಆಶೀರ್ವದಿಸಿ ಭಕ್ತರನ್ನು ಹರಸುವುದಕ್ಕಾಗಿ ಗುರುವಾಗಿ ಇರಬೇಕೆಂದು ನೇಮಿಸಿ ಹೊರಟರಂತೆ. ಅಂದಿನಿಂದ ಭಕ್ತರನ್ನು ಭವಬಂಧನಗಳನ್ನು ಬಿಡಿಸಿ ಸದಾ ಆನಂದವನ್ನು ಕರುಣಿಸುವ ಗುರುವಾಗಿದ್ದಾರೆ.
ಶಿವಮೊಗ್ಗದ ವಿದ್ಯಾನಗರದ ಸಹ್ಯಾದ್ರಿ ಹಾಸ್ಟೆಲ್ ಹಿಂಬಾಗದಲ್ಲಿರುವ (ಶ್ರೀಪಾದವಲ್ಲಭ ಕ್ಷೇತ್ರ) ದತ್ತಾತ್ರೇಯ ಆಶ್ರಮದಲ್ಲಿ ಡಿಸೆಂಬರ್ 12, 13 ಗುರುವಾರ ಮತ್ತು ಶುಕ್ರವಾರಗಳಂದು ಶ್ರೀದತ್ತಜಯಂತಿ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಪೂಜ್ಯರಾದ ಪರಮಹಂಸ ಸದ್ಗುರು ಶ್ರೀಸತ್‌ಉಪಾಸಿಯವರ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಪ್ಪನವರ ಬರುವಿಕೆಯನ್ನು ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಸದ್ಗುರು ದೊಡ್ಡೇರಿಯಿಂದ ಬರುತ್ತಾರೆ ಎಂಬ ಸಂತಸ ಎಲ್ಲರಲ್ಲೂ ಮನೆಮಾಡಿರುತ್ತದೆ. ಹಾಡಿ ಕುಣಿದು ಭಕ್ತಿಯಿಂದ ಗುರುವನ್ನು ಸ್ವಾಗತಿಸುವ ಅಪರೂಪದ ವರ್ಣನೆಯನ್ನು ನೋಡಿಯೇ ಆನಂದಿಸಬೇಕು. ಗುರುವಿನ ಕರುಣೆಗೆ ಪಾತ್ರರಾಗಲು ಯೋಗಾಯೋಗವಿರಬೇಕಂತೆ, ಅಂತಹ ಶುಭಯೋಗವನ್ನು ನಾವ್ಯಾರು ಕಳೆದುಕೊಳ್ಳದೆ, ದರ್ಶನ ಪಡೆದು ಧನ್ಯರಾಗೋಣ ಬನ್ನಿ.
ಈಗಾಗಲೇ ಆಯ್ದ ಬೀದಿಗಳಲ್ಲಿ ದತ್ತಭಿಕ್ಷೆಯ ಸಂಭ್ರಮವು ಜರುಗುತ್ತಿದೆ. ಹಬ್ಬದ ರೀತಿಯಲ್ಲಿ ಭಕ್ತರು ದೇಹಭಾವವನ್ನು ಮರೆತು ಭಜನೆಗಳನ್ನು ಹಾಡುತ್ತಾ ಕುಣಿಯುತ್ತ ಸಾಗುವ ಮಧುಕರಿ ಭಿಕ್ಷಾಪರಿಕ್ರಮ ದತ್ತನಿಗೆ ಬಹಳ ಇಷ್ಟವಂತೆ. ಅದೇ ರೀತಿ ಶಿವಮೊಗ್ಗದ ದತ್ತಭಕ್ತರು ಮತ್ತೂರು ಸೇರಿದಂತೆ ಆನೇಕ ಬೀದಿಗಳಲ್ಲಿ ಭಿಕ್ಷೆ ಪಡೆದು ದತ್ತಜಯಂತಿಯ ಸಂಭ್ರಮವನ್ನು ಕಳೆಗಟ್ಟುವಂತೆ ಮಾಡುತ್ತಾರೆ. ಭಿಕ್ಷೆಯಿಂದ ಅಹಂಕಾರ ಅರಿವಿಲ್ಲದಂತೆ ಅಳಿಯುವುದಂತೆ. ದತ್ತನಿಗೆ ಭಿಕ್ಷೆ ಎನ್ನುವುದೊಂದು ನೆಪಮಾತ್ರ, ಆತ ಭಿಕ್ಷೆಯ ಬೇಡಿ ತಮ್ಮ ಅಹಂಕಾರವನ್ನು ದಹಿಸಿಕೊಳ್ಳುವ ಭಕ್ತರಿಗೆ ಪಾಪಕರ್ಮಗಳನ್ನು ತೊಳೆದು ಮುಕ್ತಿಯ ಹಾದಿಯ ಸುಗಮಗೊಳಿಸುತ್ತಾರೆಂಬ ನಂಬಿಕೆ ಹಿಂದು ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿದೆ.
ದತ್ತನಾಲಯದಲ್ಲಿ ದತ್ತ ಜಯಂತಿಯಂದು ಮುಂಜಾನೆಯಿಂದಲೇ ಕ್ಷೀರ, ಬೆಣ್ಣೆ, ತುಪ್ಪ ಅಭಿಷೇಕಗಳಿಂದ ಮಜ್ಜನಗೊಳ್ಳುವ ಶ್ರೀದತ್ತಾತ್ರೇಯ ಮತ್ತು ಶ್ರೀಪಾದವಲ್ಲಭರು ಹೂವಿನ ಅಲಂಕಾರದಲ್ಲಿ ಶೃಂಗಾರಗೊಂಡು ಬಾಲಕೃಷ್ಣನಂತೆ ಮುದ್ದಾಗಿ ಕಾಣುತ್ತಾರೆ. ಅಪ್ಪಾಜಿಯವರನ್ನು ಆಶ್ರಮಕ್ಕೆ ಬರಮಾಡಿಕೊಳ್ಳುವ ಸಂಭ್ರಮ ಡಿಸೆಂಬರ್ 12 ರ ಗುರುವಾರ ಸಂಜೆ ನಡೆಯುತ್ತದೆ. ಡೋಲು, ತಮಟೆ ಮುಂತಾದ ವಾದ್ಯಗಳ ನಿನಾದಕ್ಕೆ ಮೈಮರೆತು ಕುಣಿದು ಕುಪ್ಪಳಿಸಿ ಸದ್ಗುರುಗಳನ್ನು ಸ್ವಾಗತ ಮಾಡುವುದು ನೋಡಲು ಕಣ್ಣಿಗೆ ಹಬ್ಬವೇ ಸರಿ. ಅಂದು ಸಂಜೆ ಶ್ರೀದತ್ತಾತ್ರೇಯನನ್ನು ತೊಟ್ಟಿಲಲ್ಲಿಟ್ಟು ತೂಗಿ ಸಂಭ್ರಮ ಪಡುತ್ತಾರೆ. ನಂತರ ಹೋಮ, ಮಹಾಪ್ರಸಾದಗಳು ನಡೆಯುತ್ತವೆ. ರಾತ್ರಿ ಭಕ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹೆಸರಾಂತ ಹರಿಕಥೆಯ ಕಲಾವಿದರಿಂದ ಹರಿಕಥಾ ಕಾರ್ಯಕ್ರಮವೂ ಇದೆ. ಮುಂಜಾನೆಯವರೆಗೆ ಭಕ್ತರಿಂದ ಅಖಂಡ ಭಜನೆಯು ನಡೆಯುತ್ತದೆ.
ಡಿ 13 ರ ಶುಕ್ರವಾರ ಮುಂಜಾನೆ ಮೊಟ್ಟಮೊದಲ ಭಾರಿಗೆ 21 ಅಡಿ ಎತ್ತರದ ಮನಮೋಹಕವಾದ ರಥದಲ್ಲಿ ಅದ್ದೂರಿ ರಥೋತ್ಸವ ನಡೆಯುತ್ತದೆ. ಅದರಲ್ಲಿ ದತ್ತಾತ್ರೇಯನ ನೋಡುವುದೇ ಚಿತ್ತಾಕರ್ಷಕ. ದತ್ತನನ್ನು ಹಾಡಿಹೊಗಳುವ ಭಜನೆಗಳೊಂದಿಗೆ, ಹಾಗೂ ನಾನಾ ಕಲಾತಂಡಗಳ ಬೇರಿ ಮೃದಂಗಗಳ ನೃತ್ಯ ಸಂಗಮವು ಜರುಗಲಿದೆ. ಸಂತರು ಭಕ್ತರಿಂದ ಸತ್ಸಂಗ ಸಮಾರಂಭದಲ್ಲಿ ದತ್ತನ ಕೃಪೆಯ ಅನುಭವಗಳನ್ನು ಭಕ್ತರಿಗೆ ತಲುಪಿಸಿ ಭಕ್ತಿಮಾರ್ಗದೆಡೆಗೆ ಸೆಳೆಯುವ ಕಾರ್ಯಕ್ರಮವು ಇದಾಗಿದೆ. ನಾವೆಲ್ಲ ನಮ್ಮ ಬಂಧು ವರ್ಗದೊಂದಿಗೆ ಈ ಅಗಣಿತ ಆನಂದವನ್ನು ಸವಿಯಲಿಕ್ಕೆ ಪಾಲುದಾರರಾಗೋಣ ಬನ್ನಿ.
ಲೇಖನ: ಅಂತರ್ಯಾಮಿ, ಶಿವಮೊಗ್ಗ
Get in Touch With Us info@kalpa.news Whatsapp: 9481252093
Discussion about this post