ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ
ಶ್ರೀ ಸೀತಾ ಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತ
ಶ್ರೀ ರಾಮಚಂದ್ರ ಪರಬ್ರಹ್ಮಣೇ ನಮಃ ॥
ಶ್ರೀ ರಾಮ ಜಯಂತಿ ಅಥವಾ ರಾಮನವಮಿ. ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸ ಶುಕ್ಲ ಪಕ್ಷ ನವಮಿಯ ಗುರುವಾರದ ಇಂದು ಅಂದರೆ ಶ್ರೀ ರಾಮ ನವಮಿ.
ಕೊರೋನಾ ವೈರಸ್ ಲಾಕ್’ಡೌನ್ ಹಿನ್ನೆಲೆಯಲ್ಲಿ ಇಂದು ದೇಶದಾದ್ಯಂತ ಅತ್ಯಂತ ಸರಳಾತಿಸರಳವಾಗಿ ರಾಮನವಮಿ ಆಚರಿಸಲಾಗುತ್ತಿದೆ. ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿಯೇ ಹಿಂದು ಹೃದಯ ಸಾಮ್ರಾಟನ ಹಬ್ಬ ಆಚರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ರಾಮ ಫಲ, ಲಕ್ಷ್ಮಣ ಫಲ, ಸೀತಾ ಫಲ ಹಾಗೂ ಹನುಮ ಫಲಗಳ ಕುರಿತು ಕುತೂಹಲಕಾರಿ ಮಾಹಿತಿ ಹಂಚಿಕೊಳ್ಳುವ ಇರಾದೆ ನನ್ನದು.
ಸೀತಾಫಲದ ಹೆಸರು ಕೇಳಿದವರು ಬಹಳಷ್ಟು ಮಂದಿ ರಾಮಫಲ ಕೇಳಿರುತ್ತೀರಿ. ಆದರೆ, ಲಕ್ಷ್ಮಣ ಫಲ, ಹನುಮ ಫಲ ಹೆಸರು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು.
ಇದ್ಯಾವುದಪ್ಪಾ ಎಂಬ ಕುತೂಹಲವೂ ನನ್ನನ್ನು ಕಾಡಿದ್ದುಂಟು. ಇತ್ತೀಚೆಗೆ ನಾವು ಜಯನಗರಕ್ಕೆ ಹೋದಾಗ ಬೀದಿ ಬದಿ ನಿಂತಿದ್ದ ತಳ್ಳುವ ಗಾಡಿಯಲ್ಲಿದ್ದ ಸೀತಾಫಲ ಹಣ್ಣು ಖರೀದಿಸಲು ಹೋಗಿದ್ದು, ಫಲಗಳ ಬಗ್ಗೆ ವಿಚಾರಿಸಿದೆ.
ಮೂರ್ತಿ ಎಂಬ ಹಣ್ಣಿನ ವ್ಯಾಪಾರಿ ಮೂಲತಃ ತಮಿಳುನಾಡಿನವರು. ಇವರ ಸ್ಪಷ್ಟ ಕನ್ನಡ ನನಗೆ ಸಂತಸ ತಂದಿತ್ತು. ನಗರದ ಹೃದಯ ಭಾಗವಾದ ಜಯನಗರದ ಬೆಂಗಳೂರು ಮೆಟ್ರೋ ರೈಲು ನಿಲ್ದಾಣದ ಬಳಿ ರಾಮ, ಸೀತಾ, ಲಕ್ಷ್ಮಣ ಫಲ ಹಣ್ಣು ವ್ಯಾಪಾರ ವಹಿವಾಟು ಪ್ರತಿ ನಿತ್ಯ ನಡೆಯುತ್ತದೆ ಎಂದು ತಿಳಿದು ಸಂತಸವಾಯ್ತು.
ಆ ವ್ಯಕ್ತಿಯ ಬಳಿ ರಾಮ, ಸೀತಾ, ಲಕ್ಷ್ಮಣ ಫಲವಿತ್ತು. ಆದರೆ, ಹನುಮನ ಫಲವಿರಲಿಲ್ಲ ಎಂಬುದು ನನಗೆ ಕೊಂಚ ಬೇಸರ ಮೂಡಿಸಿದ್ದಂತೂ ಸತ್ಯವೇ. ಇರಲಿ… ಈಗ ಈ ನಾಲ್ಕು ಫಲಗಳ ಕುರಿತಾಗಿ ತಿಳಿಯೋಣ.
ಸೀತಾಫಲ
ಬಹುತೇಕ ಎಲ್ಲರೂ ಈ ಹಣ್ಣನ್ನು ನೋಡಿರುವುದು ಮಾತ್ರವಲ್ಲ ರುಚಿಯನ್ನೂ ಸಹ ಸವಿದಿರುತ್ತೀರಿ. ಬಹಳ ಮೃದುವಾದ ಈ ಹಣ್ಣು ಹಲ್ಲು ಮತ್ತು ದವಡೆ ನೋವು ನಿವಾರಣೆ ಮಾತ್ರವಲ್ಲ ಬಾಯಿಯ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣಿನ ತಿರುಳು ಹಲ್ಲು ಮತ್ತು ದವಡೆ ನೋವಿನ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ ಎನ್ನುತ್ತಾರೆ ಮೂರ್ತಿ.
ಸೀತಾಫಲ ಎಂಬುದು ಸಂಸ್ಕೃತ ಪದವಾಗಿದ್ದು ಶೀತ ಎಂದರೆ ತಂಪು ಹಾಗೂ ಫಲ ಎಂದರೆ ಹಣ್ಣು ಎಂಬ ಎರಡು ಪದಗಳ ಸಂಯೋಜನೆಯಾಗಿದೆ.
ಈ ಹಣ್ಣನ್ನು ತಿಂದಾಗ ತಂಪಾದ ಅನುಭವವಾಗಿರುದರಿಂದ ಈ ಹೆಸರು ಬಂದಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
ರಾಮ ಮತ್ತು ಸೀತೆಯ ಪ್ರೀತಿಯ ಫಲವೇ ಸೀತಾಫಲ. ತನ್ನ ತಂದೆಯ ಆಜ್ಞೆಯನ್ನು ಪಾಲಿಸುವುದಕ್ಕಾಗಿ ರಾಮನು ಸೀತೆ ಮತ್ತು ಲಕ್ಷ್ಮಣರ ಜೊತೆ ವನವಾಸಕ್ಕೆ ತೆರಳುತ್ತಾನೆ. ಒಮ್ಮೆ ಕಾಡಿನಲ್ಲಿ ರಾಮನು ಬೇಟೆಯಾಡುವ ಸಲುವಾಗಿ ಸೀತೆಯನ್ನು ಒಂದು ಸ್ಥಳದಲ್ಲಿ ಕುಳ್ಳಿರಿಸಿ ಬೇಟೆಗೆ ಹೊರಡುತ್ತಾನೆ. ಹಾಗೆಯೇ ಲಕ್ಷ್ಮಣನೂ ಸಹ ಸೌದೆ ತರಲೆಂದು ಹೊರಟು ಹೋಗುತ್ತಾನೆ.
ಹೀಗೆ ಒಬ್ಬಂಟಿಯಾದ ಸೀತೆಗೆ ರಾಮನ ಅಗಲಿಕೆಯಿಂದಾಗಿ ಒಂದು ಕ್ಷಣವು ಒಂದು ವರ್ಷದಂತೆ ಭಾಸವಾಗುತ್ತದೆ. ವಿರಹವನ್ನು ತಾಳಲಾಗದೇ ಸೀತೆಯು ಆ ದಟ್ಟ ಕಾಡಿನಲ್ಲಿ ರಾಮನನ್ನು ಹುಡುಕುತ್ತಾ ಹೊರಟು ನಿಲ್ಲುತ್ತಾಳೆ. ಆಗ ಆಕೆಯ ಕಣ್ಣಿನಿಂದ ಹರಿದ ಕಣ್ಣೀರು ನೆಲದ ಮೇಲೆ ಬೀಳುತ್ತವೆ. ಕೊನೆಗೆ ಸೀತೆಯ ಧ್ವನಿಯನ್ನು ಕೇಳಿಸಿಕೊಂಡ ರಾಮನು ಗಾಬರಿಯಿಂದ ಸೀತೆಯ ಹತ್ತಿರ ಬರುತ್ತಾನೆ. ರಾಮನನ್ನು ಕಂಡ ತಕ್ಷಣವೇ ಸೀತೆಯು ಅಳುತ್ತಾ ರಾಮನನ್ನು ತಬ್ಬಿಕೊಳ್ಳುತ್ತಾಳೆ.
ಅದೇ ಸಮಯದಲ್ಲಿ ತನ್ನ ಪತ್ನಿಯ ದುಗುಡದಿಂದ ಭಯಗೊಂಡಿದ್ದ ರಾಮನ ಬೆವರಹನಿಗಳು ನೆಲದ ಮೇಲೆ ಬೀಳುತ್ತವೆ. ಈ ಘಟನೆಯು ರಾಮ ಮತ್ತು ಸೀತೆ ಅದೆಷ್ಟು ಪರಸ್ಪರ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರೆಂಬುದನ್ನು ತಿಳಿಯುತ್ತದೆ.
ಇದಾದ ಸ್ವಲ್ಪ ದಿನಗಳ ನಂತರ ಸೀತೆಯ ಕಣ್ಣೀರು ಹಾಗೂ ರಾಮನ ಬೆವರ ಹನಿಗಳು ಬಿದ್ದ ಸ್ಥಳಗಳಲ್ಲಿ ಮರಗಳು ಬೆಳೆದು ನಿಂತಿರುತ್ತವೆ. ಆ ಮರಗಳಲ್ಲಿ ಬೆಳೆದಿದ್ದ ಹಚ್ಚಹಸಿರಿನ ಹಣ್ಣುಗಳನ್ನು ತಿಂದ ಸೀತೆಯು, ’ಪ್ರಿಯನೇ, ಈ ಹಣ್ಣುಗಳು ಬಹಳ ರುಚಿಯಾಗಿವೆ’ ಎಂದು ಹೇಳಿದಾಗ ರಾಮನು ’ನನ್ನ ಮನದನ್ನೆಗೆ ಇಷ್ಷವಾದ ಈ ಹಣ್ಣು ಇನ್ನು ಮುಂದೆ ಸೀತಾಫಲ ಎಂದು ಪ್ರಸಿದ್ಧಿಯಾಗಲಿ’ ಎಂದು ಹರಸುತ್ತಾನೆ.
ಆಂಗ್ಲ ಭಾಷೆಯಲ್ಲಿ ಶುಗರ್ ಆಪಲ್ ಎಂದು ಕರೆಯಲ್ಪಡುವ ಸೀತಾಫಲದ ವೈಜ್ಞಾನಿಕ ಹೆಸರು ಅನ್ನೋನಾ ಸ್ಕ್ವಾಮೋಸಾ. ಈ ಹಣ್ಣು ದೇಹಕ್ಕೆ ಶಕ್ತಿ ನೀಡುವ ಗುಣ ಹೊಂದಿದ್ದು, ವಿಟಮಿನ್ ಸಿ, ಥಯಾಮಿನ್ ಮತ್ತು ವಿಟಮಿನ್ ಬಿ 6 ನ ಉತ್ತಮ ಮೂಲ, ಮತ್ತು ವಿಟಮಿನ್ ಬಿ 2, ಬಿ 3 ಬಿ 5, ಬಿ 9, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ.
ರಾಮಫಲ
ಸೀತಾ ಫಲದ ಕಥೆಯಂತೆಯೇ ಮುಂದುವರೆದ ಭಾಗವಾಗಿ ನೋಡುವುದಾದರೆ ಬೇರೆಮರಗಳಲ್ಲಿ ಬೆಳೆದಿದ್ದ ಕೆಂಪುಬಣ್ಣದ ಹಣ್ಣನ್ನು ತಿಂದ ಸೀತೆಯು ಅದರ ರುಚಿಯನ್ನು ಹೊಗಳುತ್ತಾ, ’ಈ ಹಣ್ಣು ರಾಮಫಲ ಎಂದು ಪ್ರಸಿದ್ಧಿಯಾಗಲಿ’ ಎಂದು ಹರಸುವಳು.
ಇನ್ನು ರಾಮಫಲನ್ನು ಆಂಗ್ಲ ಭಾಷೆಯಲ್ಲಿ ವೈಲ್ಡ್ ಸ್ವೀಟ್ಸಾಪ್ ಎಂದು ಕರೆದರೆ ವೈಜ್ಞಾನಿಕ ಭಾಷೆಯಲ್ಲಿ ಅನ್ನೋನಾ ರೆಟಿಕ್ಯುಲಾಟಾ ಎಂದು ಕರೆಯುತ್ತಾರೆ.
ಈ ಹಣ್ಣು 100 ಗ್ರಾಂ ಉಲ್ಲೇಖದ ಮೊತ್ತದಲ್ಲಿ, ಕಸ್ಟರ್ಡ್ ಸೇಬು 101 ಕ್ಯಾಲೋರಿಗಳನ್ನು, ಶೇ.23ರಷ್ಟು ವಿಟಮಿನ್ ಸಿ (ಡಿವಿ) ವಿಟಮಿನ್ ಸಿ ಮತ್ತು ಶೇ.17ರಷ್ಟು ಡಿವಿ ವಿಟಮಿನ್ ಬಿ 6 ಪೂರೈಸುತ್ತದೆ. ಅಲ್ಲದೇ ಶೇ.72ರಷ್ಟು ನೀರಿನ ಅಂಶ, ಶೇ.25ರಷ್ಟು ಕಾರ್ಬೋಹೈಡ್ರೇಟ್, ಶೇ.2ರಷ್ಟು ಪ್ರೋಟೀನ್ ಮತ್ತು ಶೇ.1ರಷ್ಟು ಕೊಬ್ಬಿನ ಅಂಶ ಹೊಂದಿದೆ.
ಪ್ರೀತಿಯ ಸಂಕೇತ
ಸೀತಾಫಲ ಮತ್ತು ರಾಮಫಲ ಹಣ್ಣುಗಳು ಪ್ರೀತಿಯ ಸಂಕೇತಗಳಾಗಿವೆ.
ಲಕ್ಷ್ಮಣ ಫಲ
ಕಾಡಿನಲ್ಲಿ ಲಕ್ಷ್ಮಣನಿಗೆ ಇಷ್ಟವಾಗಿದ್ದ ಹಣ್ಣು ಲಕ್ಷ್ಮಣಫಲ ಎಂದು ಹೆಸರು ಪಡೆದುಕೊಳ್ಳುತ್ತದೆ. ನೋಡುವುದಕ್ಕೆ ಸೀತಾಫಲದಂತೆಯೇ ಕಾಣುವ ಈ ಹಣ್ಣು, ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಆಪಲ್ ಎಂದು ಕರೆಯಲ್ಪಡುವ ಇದು ಅನೋನ ಸ್ಕ್ವಾಮೋಸ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಫಲ. ಇದರ ಹೊರಮೈ ಒರಟಾಗಿರುವುದರಿಂದ ಇದ್ದನ್ನು ಕಸ್ಟರ್ಡ್ ಆಪಲ್ ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಸಾಮಾನ್ಯವಾಗಿ ಹುಳಿ ಅಥವಾ ಲಕ್ಷ್ಮಣ ಫಲ ಎಂದು ಕರೆಯಲ್ಪಡುವ ಈ ಹಣ್ಣು ಈಗಿನ ಬ್ರೆಜಿಲ್ ಮೂಲದ್ದು ಎಂದು ಹೇಳಲಾಗುತ್ತದೆ. ಮಾನವೀಯತೆಗೆ ದೇವರ ಕೊಡುಗೆ ಎಂದು ತಿಳಿದಿರುವ ಇದು ಕ್ಯಾನ್ಸರ್ ರೋಗಿಗಳಿಗೆ ಪವಾಡದ ಆಹಾರವಾಗಿದೆ. ಇದು ಅತಿ ಹೆಚ್ಚಿನ ಉತ್ಕರ್ಷಣ ನಿರೋಧಕ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಪ್ರಾಯೋಗಿಕವಾಗಿ, ಇದು ಟಿಬಿ, ಕ್ಯಾನ್ಸರ್, ಏಡ್ಸ್ ಇತ್ಯಾದಿ ರೋಗಿಗಳ ಆರೋಗ್ಯಕ್ಕೆ ಸಹಕಾರಿ ಎಂದು ಸಂಶೋಧನೆಗಳು ಹೇಳಿವೆ.
ಹನುಮ ಫಲ
ಲಕ್ಷ್ಮಣ ಫಲ ಕಣ್ಣಿಗೆ ಬಿದ್ದು ಇದು ಯಾವ ಹಣ್ಣು ಎಂದು ಕೇಳಿದಾಗ ಇದರ ಜೊತೆ ಹನುಮ ಫಲವು ಇದೆ. ಆದರೆ ನನ್ನ ಬಳಿ ಇಲ್ಲ ಅದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುತ್ತಾರೆ ಮೂರ್ತಿ.
ಅದರ ಬಗ್ಗೆ ಅಧ್ಯಯನ ನಡೆಸಿದಾಗ ಕ್ಯಾನ್ಸರ್ ಪೀಡಿತರಿಗೆ ರಾಮಬಾಣ ಹನುಮಫಲ ಎಂದು ತಿಳಿದುಬಂತು. ಆದರೆ ಇಂದಿಗೂ ನನಗೆ ಹನುಮ ಫಲದ ದರ್ಶನವಾಗಿಲ್ಲ!!
ಇಂತಿಪ್ಪ ಪುಣ್ಯ ಫಲಗಳ ಕುರಿತಾಗಿ ಒಂದಷ್ಟು ತಿಳಿಸಿಕೊಡುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ದೇಶದಲ್ಲಿ ಕೊರೋನಾ ವೈರಸ್ ಹಾವಳಿಯಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ನಮ್ಮ ಮನೆಗಳಲ್ಲಿಯೇ ಸರಳವಾಗಿ ರಾಮ ನವಮಿ ಆಚರಿಸೋಣ. ವಿಶ್ವಕ್ಕೆ ಅಂಟಿರುವ ಮಹಾ ಮಾರಿಯನ್ನು ಹೋಗಲಾಡಿಸು ಎಂದು ಪ್ರಭು ಶ್ರೀ ರಾಮನಲ್ಲಿ ಪ್ರಾರ್ಥಿಸೋಣ.
Get in Touch With Us info@kalpa.news Whatsapp: 9481252093
Discussion about this post