ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಳಗಾವಿ: ಅಕ್ರಮ ಬಿಪಿಎಲ್ ಕಾರ್ಡ್‌ಗಳ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ಮನೆಯಲ್ಲಿ ಟಿವಿ, ಬೈಕ್, ಫ್ರಿಡ್ಜ್ ಇದ್ದರೆ ಅವರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದೆ.
ಈ ಕುರಿತಂತೆ ಮಾತನಾಡಿರುವ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ, ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು, ಮನೆಯಲ್ಲಿ ಬೈಕ್, ಟೆಲಿವಿಷನ್, ಫ್ರಿಡ್ಜ್ ಹೊಂದಿದವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು. ಇಂತಹ ಬಿಪಿಎಲ್ ಕಾರ್ಡುದಾರರು ತಮ್ಮ ಕಾರ್ಡ್‌ಗಳನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೂ ಸಮಯ ನೀಡಲಾಗುತ್ತದೆ ಎಂದಿದ್ದಾರೆ.

ಇದಲ್ಲದೇ, ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಮತ್ತು ವರ್ಷಕ್ಕೆ 1.20 ಲಕ್ಷ ರೂ.ಗಿಂತ ಅಧಿಕ ವರಮಾನ ಹೊಂದಿರುವವರು ಸಹ ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಅವುಗಳನ್ನು ಮಾರ್ಚ್ 31ರ ಒಳಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಸಮೀಕ್ಷೆ ನಡೆಸಿ ಕಾರ್ಡುಗಳನ್ನು ಹಿಂಪಡೆಯುತ್ತದೆ ಎಂದು ಹೇಳಿದ್ದಾರೆ.
ಏಪ್ರಿಲ್ ಬಳಿಕ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡುದಾರರ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಈ ಎಲ್ಲ್ಲಾ ಸೌಲಭ್ಯಗಳು ಇದ್ದರೂ ಬಿಪಿಎಲ್ ಕಾರ್ಡು ಹೊಂದಿದ್ದರೆ, ಅಂತಹವರಿಗೆ ದಂಡದ ಜತೆಗೆ ಶಿಕ್ಷೆ ಸಹ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಆಹಾರ ಧಾನ್ಯಗಳನ್ನು ಒದಗಿಸಲು ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಆದರೆ ಆರ್ಥಿಕವಾಗಿ ಸದೃಢರಾಗಿರುವ ಕುಟುಂಬದವರು ಕೂಡ ಸುಳ್ಳು ಮಾಹಿತಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಂತಹವರಿಗೆ ಕಾರ್ಡ್ ವಾಪಸ್ ನೀಡಲು ಅವಕಾಶ ಕೊಡಲಾಗಿತ್ತು. ಶೇ 55-60ರಷ್ಟು ಮಂದಿ ಮಾತ್ರ ಕಾರ್ಡ್ ಹಿಂದಿರುಗಿಸಿದ್ದಾರೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















