ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆಯನ್ನು ತೀವ್ರವಾಗಿ ವಿರೋಧಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷ ನಿರ್ಧರಿಸಿದೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇಲ್ಲಿಯ ಸುವರ್ಣ ವಿಧಾನಸೌಧದಲ್ಲಿ ಇಂದು ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಆರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಇದು ಭಾವನಾತ್ಮಕ ವಿಷಯ. ಒಂದು ಜಾತಿ ಹಾಗೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ಕಾಯಿದೆ ಜಾರಿಗೆ ತರಲು ಮುಂದಾಗಿದೆ. ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ. ರಾಜಕೀಯ ಕಾರಣಕ್ಕಾಗಿ ಸರ್ಕಾರ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಲು ಹೊರಟಿದೆ ಎಂದರು.
ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಇದೂ ಸಹ ಆ ಪಕ್ಷದ ರಹಸ್ಯ ಕಾರ್ಯಸೂಚಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಯಿದೆಯನ್ನು ವಿರೋಧಿಸಬೇಕಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದಾಗ ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.
ರಾಜ್ಯದಲ್ಲಿ ಮೂರು ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಇದರಿಂದ ತೀವ್ರ ಹಾನಿ ಆಯಿತು. ಜೊತೆಗೆ 23 ಜಿಲ್ಲೆಗಳಲ್ಲಿ ರೈತರ ಬೆಳೆ ಹಾನಿಗೊಳಗಾಗಿದೆ. ಲಕ್ಷಾಂತರ ಮನೆಗಳು ಮಳೆಯಿಂದಾಗಿ ಕುಸಿದಿವೆ. ಆದರೆ, ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ನಾಲ್ಕು ಬಾರಿ ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಈ ವರೆಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ಈ ಬಗ್ಗೆಯೂ ಮುಂದಿನ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಬೇಕಿದೆ ಎಂದರು.
18 ಸಾವಿರ ಕೋಟಿ ರೂ.ಗಳಷ್ಟು ಹಾನಿಯಾಗಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಹಾ ಮೋಸ ಮಾಡಿದೆ. ಆದರೂ ರಾಜ್ಯ ಸರ್ಕಾರ ಪರಿಹಾರ ನೀಡುವ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಸತ್ಯಾಂಶವನ್ನು ಜನರ ಮುಂದಿಡುವ ಕೆಲಸವನ್ನು ನಮ್ಮ ಶಾಸಕರು ಮಾಡಬೇಕಿದೆ ಎಂದು ಹೇಳಿದರು.
ಜೊತೆಗೆ ಎಪಿಎಂಸಿ, ಭೂ ಸುಧಾರಣೆ ಮತ್ತು ಜಾನುವಾರು ನಿಷೇಧ ಹತ್ಯೆಗೆ ಸಂಬಂಧಿಸಿದ ಕಾಯಿದೆಗಳನ್ನು ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲು ಸಭೆ ತೀರ್ಮಾನಿಸಿತು. ಈ ಕುರಿತು ನಿಲುವಳಿ ಸೂಚನೆ ಮಂಡಿಸುವುದಾಗಿ ಸಿದ್ದರಾಮಯ್ಯು ಅವರು ಸಭೆಗೆ ತಿಳಿಸಿದರು.
ವಿಧಾನ ಮಂಡಲದ ಕಲಾಪಗಳಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಿದ್ದರಾಮಯ್ಯ ಅವರು ಇದೇ ವೇಳೆ ಮನವಿ ಮಾಡಿದರು.
ಮೇಕೆದಾಟು ಯೋಜನೆ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಪಾದಯಾತ್ರೆಯ ರೂಪುರೇಷೆ ವಿವರಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು, ಶೀಘ್ರದಲ್ಲಿಯೇ ಪಾದಯಾತ್ರೆಯ ದಿನಾಂಕ ಘೋಷಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪಕ್ಷದ ಅಭ್ಯರ್ಥಿಗಳಿಗೆ ಸಭೆ ಇದೇ ವೇಳೆ ಅಭಿನಂದನೆ ಸಲ್ಲಿಸಿತು. ಸಭೆಯಲ್ಲಿ ಹಾಜರಿದ್ದ ನೂತನ ಸದಸ್ಯರಾದ ಸಲೀಂ ಅಹಮದ್ ಮತ್ತು ಚನ್ನರಾಜ್ ಅವರನ್ನು ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರು ಅಭಿನಂದಿಸಿ ಶುಭ ಹಾರೈಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಹಿರಿಯ ಮುಖಂಡರಾದ ರಮೇಶ್ ಕುಮಾರ್, ಡಾ. ಈ. ಪರಮೇಶ್ವರ, ಎಚ್.ಕೆ. ಪಾಟೀಲ್, ಸಿ.ಎಂ. ಇಬ್ರಾಹಿಂ, ಬಿ.ಕೆ. ಹರಿಪ್ರಸಾದ್ ಮತ್ತಿತರರು ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post