ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಮುಂದಿನ ವಾರ ಸುವರ್ಣ ಸೌಧದ ಎದುರು ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚನ್ನಮ್ಮ ಪ್ರತಿಮೆ ಸ್ಥಾಪನೆಗೆ ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಎಂದು ತಿಳಿಸಿದರು.
ಅವರು ಇಂದು ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸುವರ್ಣಸೌಧದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧಿಜೀಯವರ ಮೂರ್ತಿಗಳನ್ನೂ ಸ್ಥಾಪನೆ ಮಾಡಲಾಗುವುದು. ಚೆನ್ನಮ್ಮ ವಿವಿ ಮುಂದೆ ರಾಣಿ ಚೆನ್ನಮ್ಮ ಮೂರ್ತಿ ಸ್ಥಾಪನೆ ಮಾಡಲು ಅನುದಾನ ನೀಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಕುಲಪತಿಗಳು ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದರು.
ಸಂಗೊಳ್ಳಿಯಲ್ಲಿ ಸೈನಿಕ ಶಾಲೆಯನ್ನು ನಿರ್ಮಾಣ :
ಸಂಗೊಳ್ಳಿಯಲ್ಲಿ 221 ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆಯನ್ನು ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. ನಂದಗಡದ ವೀರಭೂಮಿಯಲ್ಲಿ 75 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ತಾರ್ಕಿಕ ಚಿಂತನೆ ಅಗತ್ಯ:
ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಜೀವನ. ಈ ಜೀವನ ಮತ್ತೆ ಸಿಗುವುದಿಲ್ಲ. ಗೆಳೆಯರೊಂದಿಗೆ ಸಂತೋಷದಿಂದ ಕಾಲ ಕಳೆಯಲು ಹೆಚ್ಚು ಅನುಕೂಲದ ಸಮಯ. ಯಶಸ್ಸಿಗೆ ಅಡ್ಡ ಮಾರ್ಗವಿಲ್ಲ. ನಿರಂತರ ಪರಿಶ್ರಮ ಮುಖ್ಯ. ನೀವು ಯಾವ ರೀತಿ ಶ್ರಮ ಪಡುತ್ತಿರೊ ಅದು ನಿಮ್ಮ ಯಶಸ್ಸು ನಿರ್ಧರಿಸುತ್ತದೆ.ವಿದ್ಯಾರ್ಥಿಗಳು ತರ್ಕಬದ್ಧವಾಗಿ ಯೋಚಿಸಬೇಕು. ಯಾಕೆ, ಏನು, ಎಲ್ಲಿ ಎನ್ನುವ ಆಲೋಚನೆ ಮಾಡಬೇಕು. ತರ್ಕಬದ್ಧ ಆಲೋಚನೆ ಬಂದಾಗ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಬಾಯಿಪಾಠ ಮಾಡಿದರೆ ಪರೀಕ್ಷೆ ಬರೆಯಲು ಕಷ್ಟ ಎಂದು ಅವರು ಅಭಿಪ್ರಾಯ ಪಟ್ಟರು.
ಜೀವನದಲ್ಲಿ ಮೊದಲು ಪರೀಕ್ಷೆ ನಂತರ ಪಾಠ :
ಒಮ್ಮೆ ವಿದ್ಯಾರ್ಥಿಗಳಾದರೆ ಜೀವನ ಪರ್ಯಂತ ವಿದ್ಯಾರ್ಥಿಗಳಾಗಿರುತ್ತಾರೆ. ನಾವು ದಿನ ನಿತ್ಯ ಏನಾದರೂ ಕಲಿಯುತ್ತಿರುತ್ತೇವೆ. ದೊಡ್ಡ ಕನಸು ಕಾಣಲು ಹೆದರದೇ, ಅಸಾಧ್ಯವನ್ನು ಸಾಧ್ಯ ಮಾಡುವ ಆಲೋಚನೆ ಮಾಡಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಶಿಕ್ಷಣದಲ್ಲಿ ಮೊದಲು ಪಾಠ ನಂತರ ಪರೀಕ್ಷೆ , ಆದರೆ ನಿಜಜೀವನದಲ್ಲಿ ಮೊದಲು ಪರೀಕ್ಷೆ ನಂತರ ಪಾಠ ದೊರೆಯುತ್ತದೆ.ಏಕಾಗ್ರತೆಯಿಂದ ಸಾಧನೆ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದರು. ನೀವು ಮುಂದೆ ಏನಾಗುತ್ತೀರಿ ಎನ್ನುದನ್ನು ಈಗಲೇ ನಿರ್ಧರಿಸಿ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
Also read: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೆಚ್ ಆರ್ ಕೇಶವಮೂರ್ತಿಯವರ ನಿಧನಕ್ಕೆ ತೀವ್ರ ಸಂತಾಪ
ಸಾಧನೆ ದೊಡ್ಡದು :
ಯಶಸ್ಸು ಬಹಳ ಸಣ್ಣದು, ಸಾಧನೆ ಅನ್ನುವುದು ದೊಡ್ಡದು. ಯಶಸ್ಸು ವೈಯಕ್ತಿಕವಾಗಿದ್ದು, ಸಾಧನೆಯಿಂದ ಸಮಾಜಕ್ಕೆ ಅನುಕೂಲವಾಗುತ್ತದೆ. ಸ್ವಾಮಿ ವಿವೇಕಾನಂದರು ಸಾಧಕನಿಗೆ ಸಾವು ಅಂತ್ಯವಲ್ಲ. ಸತ್ತ ನಂತರವೂ ಸಾಧನೆ ಉಳಿಯುತ್ತದೆ ಎಂದು ಹೇಳಿರುವುದನ್ನು ಮುಖ್ಯಮಂತ್ರಿಗಳು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ ನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅನಿಲ್ ಬೆನಕೆ, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಹನುಮಂತ ನಿರಾಣಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post