Read - 2 minutes
ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಇಂದು ಮತಾಂತರ ನಿಷೇಧ ಕಾಯ್ದೆ ಮಂಡನೆಯಾಗಿದ್ದು, ವಿಧೇಯಕದಲ್ಲಿರುವ ಮಾಹಿತಿಯ ವಿವರ ಹೀಗಿದೆ.
- ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಹಾಗೂ ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ.
- ವ್ಯಕ್ತಿಯು ಆತನ ನಿಕಟ ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ. ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳಿಗೂ ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ.
- ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ ವಸೂಲಾತಿಗೆ ಅವಕಾಶವಿದೆ.
- ಅಪ್ರಾಪ್ತರು, ಬುದ್ದಿಮಾಂದ್ಯ ವ್ಯಕ್ತಿಗಳು ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ದಂಡ ವಸೂಲಿಗೂ ಅವಕಾಶವಿದೆ.
- ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.
- ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೂ ಅವಕಾಶವಿದೆ.
- ಮತಾಂತರದ ಉದ್ದೇಶದ ಆದ ಮದುವೆಯನ್ನು ಅಸಿಂಧುವೆಂದು ಘೋಷಿಸಲು ನ್ಯಾಯಾಲಯಕ್ಕೆ ಅವಕಾಶ ನೀಡಲಾಗಿದೆ.
ಮತಾಂತರ ಆಗಬೇಕಾದಲ್ಲಿ ಪಾಲಿಸಬೇಕಿದೆ ನಿಯಮಾವಳಿಗಳು:
- ಮತಾಂತರವಾಗಲು ಮುಂದಾಗಿರುವ ವ್ಯಕ್ತಿ ಕನಿಷ್ಠ ಮೂವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು. ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು.
- ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.
- ವಿಚಾರಣೆಯ ಸಂದರ್ಭದಲ್ಲಿ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.
- ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post