ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಯಾಣಿಕರೊಬ್ಬರು ರೈಲಿನಲ್ಲಿ ಮರೆತು ಹೋಗಿದ್ದ 7.53 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ನಗದಿದ್ದ ಬ್ಯಾಗನ್ನು ರೈಲ್ವೆ ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹಿಂತಿರುಗಿಸಿರುವ ಘಟನೆ ನಡೆದಿದೆ.
ಪ್ರಯಾಣಿಕರೊಬ್ಬರು ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಸುಮಾರು 7.53 ಲಕ್ಷ ರೂಪಾಯಿ ಮೌಲ್ಯದ ಆಭರಣ ಮತ್ತು ನಗದನ್ನು ಒಳಗೊಂಡಿದ್ದ ಕೈಚೀಲವನ್ನು ಮರೆತು ಹೋಗಿದ್ದರು.
ಮಾರ್ಚ್ 31ರಂದು ಬೆಳಿಗ್ಗೆ ಸುಮಾರು 04:50 ಗಂಟೆಗೆ, ರೈಲು ಸಂಖ್ಯೆ 11301 ಉದ್ಯಾನ್ ಎಕ್ಸ್’ಪ್ರೆಸ್ ನಿಂದ ಯಲಹಂಕ ರೈಲು ನಿಲ್ದಾಣದಲ್ಲಿ Yalahanka Railway Station ಇಳಿಯುವಾಗ ಪ್ರಯಾಣಿಕರೊಬ್ಬರು ಬಿ -1 ಕೋಚ್’ನಲ್ಲಿ ತಮ್ಮ ಕೈಚೀಲವನ್ನು ಮರೆತು ಬಿಟ್ಟು ಹೋಗಿರುವ ಬಗ್ಗೆ ರೈಲ್ ಮದದ್ Railmadad ಮೂಲಕ ದೂರು ಬಂದಿತು.
ಕೂಡಲೇ ಬೆಂಗಳೂರಿನ ವಿಭಾಗೀಯ ಭದ್ರತಾ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಕಾನ್ಸೆö್ಟಬಲ್ ಹರಿಶಂಕರ್ ಅವರು ತಕ್ಷಣವೇ ಆ ರೈಲಿನ ಬೆಂಗಾವಲು ಕರ್ತವ್ಯದಲ್ಲಿದ್ದ ಬೆಂಗಳೂರು ಕಂಟೋನ್ಮೆಂಟ್ ಹೆಡ್ ಕಾನ್‌ಸ್ಟೇಬಲ್ ಎನ್. ಸುಕುಮಾರ್ ಅವರಿಗೆ ಮಾಹಿತಿ ನೀಡಿದರು. ತಕ್ಷಣವೇ ಬಿಟ್ಟು ಹೋದ ಚೀಲವನ್ನು ಪತ್ತೆಹಚ್ಚಿ ಸುರಕ್ಷಿತವಾಗಿಸಲು ಸೂಚಿಸಿದರು.
ಎನ್. ಸುಕುಮಾರ್ ತಕ್ಷಣ ಬಿ-1 ಕೋಚ್’ಗೆ ಹೋಗಿ, ಆ ಬ್ಯಾಗ್ ಅನ್ನು ಪತ್ತೆಹಚ್ಚಿ, ಮುಂದಿನ ಕ್ರಮಕ್ಕಾಗಿ ಆರ್’ಪಿಎಫ್ ಪೋಸ್ಟ್/ಬೆಂಗಳೂರು ಕಂಟೋನ್ಮೆಂಟ್’ನಲ್ಲಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೇಬಲ್ ಪ್ರೇಮಕುಮಾರಿ ಅವರಿಗೆ ಹಸ್ತಾಂತರಿಸಿದರು.
ದೂರುದಾರರಿಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದ ಆರ್’ಪಿಎಫ್ ಪೋಸ್ಟ್ ಅನ್ನು ಸಂಪರ್ಕಿಸಲು ಸೂಚಿಸಲಾಯಿತು. ನಂತರ ಅದೇ ದಿನ, ದೂರುದಾರರು ಬ್ಯಾಗ್ ಅನ್ನು ಪಡೆಯಲು ಪೋಸ್ಟ್’ಗೆ ಭೇಟಿ ನೀಡಿದರು.
ಆರ್.ಪಿಎಫ್’ನ ಸಹಾಯಕ ಸಬ್-ಇನ್‌ಸ್ಟೆಕ್ಟರ್ ವಿ. ಮೋರಿಸ್ ಅವರು ವಿವರವಾದ ವಿಚಾರಣೆ ನಡೆಸಿ, ಬ್ಯಾಗ್’ನಲ್ಲಿ 7,50,000/- ಮೌಲ್ಯದ ಸುಮಾರು 50 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 3,500/- ಮೊತ್ತದ ನಗದು ಸೇರಿ ಒಟ್ಟು 7,53,500/- ಮೌಲ್ಯದ ವಸ್ತು ಇರುವುದನ್ನು ಖಚಿತಪಡಿಸಿಕೊಂಡರು.
ಬಳಿಕ ಆ ಬ್ಯಾಗ್ ಅನ್ನು ದೂರುದಾರರಿಗೆ ನೀಡಿ, ಅವರು ಅದನ್ನು ತಮ್ಮದೇ ಎಂದು ಗುರುತಿಸಿದರು. ಅದನ್ನು ತೆರೆದು ಎಲ್ಲಾ ವಸ್ತುಗಳು ಸರಿಯಾಗಿ ಇರುವುದನ್ನು ಖಚಿತಪಡಿಸಿಕೊಂಡು, ದೂರುದಾರರಿಗೆ ಹಸ್ತಾಂತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















