ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಅಭಿವೃದ್ಧಿ ಶೂನ್ಯವಾಗಿದ್ದು, ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಕರ್ನಾಟಕದ ಭವಿಷ್ಯವನ್ನು ಸಾಲದ ಸುಳಿಗೆ ತಳ್ಳಲಾಗಿದೆ, ಸಾಲ ಮಾಡಿಯಾದರು ತುಪ್ಪ ತಿನ್ನುವ ಸಂಸ್ಕೃತಿಯನ್ನು ಸಿದ್ದರಾಮಯ್ಯನವರು #CM Siddaramaiah ರಾಜ್ಯದ ಮೇಲೆ ಹೇರುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ #MLC Dr. Dhananjaya Sarji ಹೇಳಿದರು.
ರಾಜ್ಯದ ಒಟ್ಟು ಸಾಲವು ₹8.14 ಲಕ್ಷ ಕೋಟಿಗೆ ಏರಿದ್ದು, ಸಾಲ-ಜಿಎಸ್‌ಡಿಪಿ ಅನುಪಾತವು ನಿಗಧಿತ 25% ಮಿತಿಯನ್ನು ಮೀರಿ 26.5% ತಲುಪಿದೆ. ಇದು ರಾಜ್ಯದ ಹಣಕಾಸು ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾಂಗ್ರೆಸ್ ಸರ್ಕಾರವು ಸಾಲದ ಮೇಲೆ ಸಾಲ ಮಾಡುತ್ತಿದ್ದು, 2024-25ರಿಂದ 2026-27ರ ಅವಧಿಗೆ ಅಂದಾಜು ₹3.5 ಲಕ್ಷ ಕೋಟಿಗೂ ಅಧಿಕ ಸಾಲ ಪಡೆಯುವ ಮೂಲಕ ರಾಜ್ಯವನ್ನು ದಿವಾಳಿಯತ್ತ ಒಯ್ಯುತ್ತಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ #Basavaraja Bommai ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಲ ಪಡೆಯುವ ಅವಕಾಶವಿದ್ದರೂ, ಮಿತವ್ಯಯ ಮತ್ತು ಜವಾಬ್ದಾರಿಯುತ ಬಜೆಟ್ ಮಂಡಿಸುವ ಮೂಲಕ ಹಣಕಾಸು ಶಿಸ್ತು ಕಾಪಾಡಲಾಗಿತ್ತು, 2026–27ರ ಬಜೆಟ್‌ನಲ್ಲಿ ₹22,957 ಕೋಟಿ ಆದಾಯ ಕೊರತೆ ಇದೆ. ದಿನನಿತ್ಯದ ಖರ್ಚಿಗೂ ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇದು ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯವನ್ನು ತೋರಿಸುತ್ತದೆ ಎಂದರು
ಪಂಚ ಗ್ಯಾರಂಟಿ ಯೋಜನೆಗಳಿಗಾಗಿಯೇ ₹51,034 ಕೋಟಿ ಮೀಸಲಿಡಲಾಗಿದ್ದು, ರಾಜ್ಯದ ಒಟ್ಟು ಕಂದಾಯ ಸ್ವೀಕೃತಿಯ 17% ಹಣ ಕೇವಲ ಈ ಯೋಜನೆಗಳಿಗೆ ವ್ಯಯವಾಗುತ್ತಿದೆ. ಇದರಿಂದ ಮೂಲಸೌಕರ್ಯ ಅಭಿವೃದ್ಧಿಗೆ ಹಣದ ಕೊರತೆ ಎದುರಾಗಿದೆ. ₹4.09 ಲಕ್ಷ ಕೋಟಿಗಳ ಬೃಹತ್ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕಾಗಿ ಮೀಸಲಿಟ್ಟಿರುವುದು ಕೇವಲ ₹71,336 ಕೋಟಿ ಮಾತ್ರ. ಇದು ಸರ್ಕಾರದ ಅಭಿವೃದ್ಧಿ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ.
ರಾಜ್ಯದ ಒಟ್ಟು ಆದಾಯದ ಸುಮಾರು 58% ಭಾಗ ಕೇವಲ ಬಡ್ಡಿ ಪಾವತಿ (₹45,600 ಕೋಟಿ) ಹಾಗೂ ಸಂಬಳ-ಪೆನ್ಷನ್ (₹1.36 ಲಕ್ಷ ಕೋಟಿ) ಪಾವತಿಗೆ ಬಳಕೆಯಾಗುತ್ತಿರುವುದು ಆತಂಕಕಾರಿ. ರಾಷ್ಟ್ರೀಯ ಆರೋಗ್ಯ ನೀತಿಯಡಿ ಆರೋಗ್ಯ ಕ್ಷೇತ್ರಕ್ಕೆ 8% ಅನುದಾನ ನೀಡಬೇಕಿದ್ದರೂ ಸರ್ಕಾರ ಕೇವಲ 5% ನೀಡಿದೆ. ಅದೇ ರೀತಿ ಶಿಕ್ಷಣದ ಹಂಚಿಕೆಯನ್ನು 12% ರಿಂದ 11% ಕ್ಕೆ ಇಳಿಸಲಾಗಿದೆ. 50,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಕೇವಲ 15,000 ಭರ್ತಿಗೆ ಮುಂದಾಗಿರುವುದು ಶಿಕ್ಷಣ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಗಲಿದೆ. “ಈ ಬಜೆಟ್ ಅಭಿವೃದ್ಧಿಗೆ ಪೂರಕವಾಗಿಲ್ಲ, ಬದಲಾಗಿ ಚುನಾವಣಾ ತಂತ್ರಗಾರಿಕೆಯ ಭಾಗವಾಗಿದೆ. ರಾಜ್ಯದ ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳುವ ಈ ನಡೆ ದೀರ್ಘಕಾಲದಲ್ಲಿ ಕರ್ನಾಟಕದ ಜನತೆಗೆ ಮಾರಕವಾಗಲಿದೆ,” ಎಂದು ಡಾ. ಧನಂಜಯ ಸರ್ಜಿ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















