ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು South Western Railway Bengaluru division 2025-26 ನೇ ಸಾಲಿನಲ್ಲಿ ಟಿಕೆಟ್ ತಪಾಸಣೆಯಿಂದ 39.68 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದ್ದು, ಒಟ್ಟಾರೆಯಾಗಿ 2025-26ರಲ್ಲಿ 2420.55 ಕೋಟಿ ರೂ. ಆದಾಯ ಗಳಿಸಿದೆ ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕರಾದ ಅಶುತೋಷ್ ಕುಮಾರ್ ಸಿಂಗ್ Ashutosh Kumar Singh ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಾರ್ಸೆಲ್ ಆದಾಯವು 140.31 ಕೋಟಿ ರೂಪಾಯಿಗಳಾಗಿದ್ದು ಇದು ಈ ವರೆಗಿನ ಅತ್ಯಧಿಕ ಪಾರ್ಸೆಲ್ ಆದಾಯವಾಗಿದೆ. ಸರಕು ಸಾಗಣೆ ಆದಾಯವು 351.07 ಕೋಟಿ ರೂಪಾಯಿಗಳಾಗಿದ್ದು 2024-25 ರಲ್ಲಿ ಇದು 327.74 ಕೋಟಿ ರೂಪಾಯಿಗಳಾಗಿತ್ತು. ಪ್ರಯಾಣಿಕ ಆದಾಯವು ಸಹಾ ಏರಿಕೆಯನ್ನು ದಾಖಲಿಸಿದ್ದು 2025-26 ರಲ್ಲಿ 2420.55 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ತಿಳಿಸಿದ್ದಾರೆ.
2025-26ರಲ್ಲಿ ಬೆಂಗಳೂರು ವಿಭಾಗವು 2.13 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು ಇದು 2024-25ರಲ್ಲಿ 2.07 ಮಿಲಿಯನ್ ಟನ್ ಆಗಿತ್ತು. 2,681 ರೇಕ್ಗಳ ಲೋಡಿಂಗ್ ಮಾಡಲಾಗಿದ್ದು ಇದು 2024-25ನೇ ಆರ್ಥಿಕ ವರ್ಷಕ್ಕಿಂತ 20.22% ರಷ್ಟು ಹೆಚ್ಚಾಗಿದೆ ಎಂದಿದ್ದಾರೆ.
ಬೆಳಂದೂರು ರೋಡ್- ಕಾರ್ಮೆಲರಾಂ(3.522 ಕಿ.ಮೀ.) ಜೋಡಿಮಾರ್ಗ ಮತ್ತು ವಿದ್ಯುದೀಕರಣ ಹಾಗೂ ಮಕ್ಕಾಜಿಪಲ್ಲಿ – ನಾಗಸಮುದ್ರಂ – ಧರ್ಮಾವರಂ (28.600 ಕಿಮೀ.) ಜೋಡಿಮಾರ್ಗ ಮತ್ತು ವಿದ್ಯುದೀಕರಣವನ್ನು ಕಾರ್ಯಗತಗೊಳಿಸಲಾಗಿದೆ.
ತುಮಕೂರು – ಊರುಕೆರೆ – ತಿಮ್ಮರಾಜನಹಳ್ಳಿ 24 ಕಿಮೀ ನಡುವೆ ಹೊಸ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ. ಬೆಂಗಳೂರು ಕಂಟೋನ್ಮೆಂಟ್ – ಬೈಯ್ಯಪ್ಪನಹಳ್ಳಿ ಪಶ್ಚಿಮ ಕ್ಯಾಬಿನ್ ನಡುವೆ 4.92 ಕಿಮೀ 3 ಮತ್ತು 4 ನೇ ಮಾರ್ಗವನ್ನು ಕಾರ್ಯನಿಯೋಜನೆಗೊಳಿಸಲಾಗಿದೆ ಎಂದರು.
ಯಲಹಂಕ – ಧರ್ಮಾವರಂ (161 ಕಿ.ಮೀ.) ಭಾಗದಲ್ಲಿ ಸೆಕ್ಷನಲ್ ವೇಗವನ್ನು ಗಂಟೆಗೆ 130 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಚಿಕ್ಕಬಳ್ಳಾಪುರ – ಚಿಂತಾಮಣಿ ಮತ್ತು ಬೈಯ್ಯಪ್ಪನಹಳ್ಳಿಯಿಂದ ಓಮಲೂರು ನಿಲ್ದಾಣದವರೆಗಿನ (131 ಕಿ.ಮೀ.) ಭಾಗದಲ್ಲಿ ವೇಗವನ್ನು ಗಂಟೆಗೆ 110 ಕಿ.ಮೀ.ಗೆ ಹೆಚ್ಚಿಸಲಾಗಿದೆ. 106 ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ. 8 ಲೆವೆಲ್ ಕ್ರಾಸಿಂಗ್ ಗೇಟ್’ಗಳನ್ನು ತೆಗೆದುಹಾಕಲಾಗಿದೆ. 4 ರಸ್ತೆ ಮೇಲ್ಸೇತುವೆ ಮತ್ತು 10 ರಸ್ತೆ ಕೆಳ ಸೇತುವೆಗಳನ್ನು ನಿರ್ಮಿಸಲಾಗಿದೆ. ಬಂಗಾರಪೇಟೆ ನಿಲ್ದಾಣದಲ್ಲಿ ಎಲ್ಲಾ ಪ್ಲಾಟ್’ಫಾರಂಗಳನ್ನು ಸಂಪರ್ಕಿಸುವ 6 ಮೀರ್ಟ ಅಗಲದ ಪಾದಚಾರಿ ಮೇಲ್ಸೇತುವೆ (ಫುಟ್ ಓವರ್ ಬ್ರಿಡ್ಜ್) ಯೊಂದಿಗೆ ನಿಲ್ದಾಣದ 2 ನೇ ಪ್ರವೇಶ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.
ಬೆಂಗಳೂರಿನಿಂದ ಬೆಳಗಾವಿ ಮತ್ತು ಎರ್ನಾಕುಲಂಗೆ ವಂದೇ ಭಾರತ್ ರೈಲುಸೇವೆ, ಎಸ್’ಎಂವಿಟಿ ಬೆಂಗಳೂರು- ಅಲಿಪುರದ್ವಾರ ಅಮೃತ ಭಾರತ್ ರೈಲು ಸೇವೆ, ಎಸ್’ಎಂವಿಟಿ ಬೆಂಗಳೂರಿನಿAದ ಗ್ವಾಲಿಯರ್, ಬಾಲುರ್ಘಾಟ್ ಮತ್ತು ರಾಧಿಕಾಪುರ ಕಡೆಗೆ ರೈಲು ಸೇವೆಗಳನ್ನು ಪ್ರಾರಂಭಿಸಲಾಗಿದೆ.
2025ರ ಅಕ್ಟೋಬರ್ 30ರಂದು ಕೆಎಸ್’ಆರ್ ಬೆಂಗಳೂರು ನಿಲ್ದಾಣದಲ್ಲಿ ಮೊಬೈಲ್ ಯುಟಿಎಸ್ ಸಹಾಯಕ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಭಾರತೀಯ ರೈಲ್ವೆಯಲ್ಲಿ ಮೊಬೈಲ್ ಯುಟಿಎಸ್ ಸಹಾಯಕ್ ಟಿಕೆಟಿಂಗ್ ಅನ್ನು ಪ್ರಾರಂಭಿಸಿದ ಮೊದಲ ವಿಭಾಗವೆಂಬ ಹೆಗ್ಗಳಿಕೆಯನ್ನು ಬೆಂಗಳೂರು ವಿಭಾಗವು ಪಡೆಯಿತು. ಈ ಉಪಕ್ರಮವು ಪ್ರಯಾಣಿಕರಿಗೆ ಕಾಯ್ದಿರಿಸದ ಟಿಕೆಟ್’ಗಳನ್ನು ಕೊಳ್ಳಲು ಹೆಚ್ಚುವರಿ ಆಯ್ಕೆಯನ್ನು ನೀಡುವುದರ ಮೂಲಕ ಕೌಂಟರ್’ಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ಪ್ರಯಾಣದ ಅನುಕೂಲತೆಯನ್ನು ಹೆಚ್ಚಿಸುತ್ತದೆ ಎಂದರು.
ಕೆಎಸ್’ಆರ್ ಬೆಂಗಳೂರು ನಿಲ್ದಾಣದಲ್ಲಿ ವಿಭಾಗದ ಮೂರನೇ ರೈಲು ಕೋಚ್ ರೆಸ್ಟೋರೆಂಟ್ ಅನ್ನು ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ. ನಿಲ್ದಾಣದ ಸೌಲಭ್ಯಗಳ ಮಾಹಿತಿ ಮತ್ತು ಸುಗಮ ಪ್ರವೇಶವನ್ನು ಸಾಧ್ಯವಾಗಿಸಲು ವಿಭಾಗದ ಎಲ್ಲಾ 14 ಪ್ರಮುಖ ನಿಲ್ದಾಣಗಳಲ್ಲಿ ನಮ್ಮನಕ್ಷೆ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು.
ಹಬ್ಬ ಮತ್ತು ರಜಾದಿನಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ಜನದಟ್ಟಣೆಯನ್ನು ಪೂರೈಸುವ ಸಲುವಾಗಿ, 2024-25 ರಲ್ಲಿ ಸಂಚರಿಸಲಾದ 4210 ಟ್ರಿಪ್’ಗಳಿಗೆ ಹೋಲಿಸಿದರೆ 2025-26 ರಲ್ಲಿ 4706 ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲಾಯಿತು ಮತ್ತು 5220 ಹೆಚ್ಚುವರಿ ಬೋಗಿಗಳನ್ನು ವಿವಿಧ ರೈಲುಗಳಿಗೆ ಅಳವಡಿಸಲಾಯಿತು ಎಂದರು.
ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ನಿಟ್ಟೂರು, ನೆಲಮಂಗಲ, ಹಿಂದೂಪುರ, ಸತ್ಯ ಸಾಯಿ ಪ್ರಶಾಂತಿ ನಿಲಯಂ, ನಾಯಂಡಹಳ್ಳಿ ಮತ್ತು ದೇವನಗೊಂತಿ ನಿಲ್ದಾಣಗಳಲ್ಲಿ ಎಕ್ಸ್’ಪ್ರೆಸ್ ರೈಲುಗಳಿಗೆ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
2025-26ರಲ್ಲಿ ಟಿಕೆಟ್ ದಲ್ಲಾಳಿಗಳ ವಿರುದ್ಧ 144 ಪ್ರಕರಣಗಳು ದಾಖಲಾಗಿದ್ದು 4,08,752/- ರೂಪಾಯಿ ಮೌಲ್ಯದ 277 ಪ್ರಯಾಣದ ಟಿಕೆಟ್ ಗಳನ್ನು ಮುಟ್ಟುಗೋಲು ಹಾಕಲಾಯಿತು. ಆಪರೇಷನ್ ನನ್ಹೆ ಫರಿಷ್ತೆಯಡಿ 311 ಬಾಲಕರು ಮತ್ತು 96 ಬಾಲಕಿಯರನ್ನು ರಕ್ಷಿಸಲಾಗಿದೆ ಎಂದು ಹೇಳಿದರು.
ಡೀಸೆಲ್ ಇಂಜಿನ್ ನಿಂದ ಚಲಿಸುತ್ತಿದ್ದ 14 ರೈಲುಗಳನ್ನು ವಿದ್ಯುತ್ ಇಂಜಿನ್ ಗೆ ಪರಿವರ್ತಿಸುವ ಮೂಲಕ ವಾರ್ಷಿಕ 43.73 ಕೋಟಿ ರೂಪಾಯಿಗಳ ಉಳಿತಾಯವಾಗುತ್ತಿದೆ. ಬೆಂಗಳೂರು ವಿಭಾಗದ 20 ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಬೆಂಗಳೂರು ವಿಭಾಗಕ್ಕೆ ಹೆಮ್ಮೆಯನ್ನು ತಂದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ಪರೀಕ್ಷಿತ್ ಮೋಹನ್ಪೂರಿಯ, ಪ್ರವೀಣ್ ಕಾತರಕಿ; ಮುಖ್ಯ ಯೋಜನಾ ವ್ಯವಸ್ಥಾಪಕರಾದ ಗುಲ್ ಅಶ್ಫಾಕ್ ಮೊಹಮ್ಮದ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಕೃಷ್ಣ ಚೈತನ್ಯ, ಹಿರಿಯ ವಿಭಾಗೀಯ ಪರಿಚಾಲನಾ ವ್ಯವಸ್ಥಾಪಕಿ ಪ್ರಿಯಾ, ಹಿರಿಯ ವಿಭಾಗೀಯ ಇಂಜಿನಿಯರ್ ಹರ್ಷಿತ್ ಗುಪ್ತಾ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















