ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಬೆಂಗಳೂರು (Bengaluru) ಗಿರಿನಗರದ ಶಾಖಾಮಠದಲ್ಲಿ ಇಂದಿನಿಂದ 11 ದಿನಗಳ ಕಾಲ ‘ನವರಾತ್ರ ನಮಸ್ಯಾ’ ಧಾರ್ಮಿಕ (Navaratri) ಕಾರ್ಯಕ್ರಮ ನಡೆಯಲಿದೆ. ನವರಾತ್ರಿ ಅಂಗವಾಗಿ ರಾಜರಾಜೇಶ್ವರಿ ದೇವಿಯ ಆರಾಧನೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಕಲ ಸಿದ್ಧತೆಗಳು ನಡೆದಿವೆ.
ಮಹಾನಗರದಲ್ಲಿ ದೇವಿಯ ಮಹಾರಾಧನೆಯನ್ನು ವೈಭವದಿಂದ ಆಚರಿಸುವ ಉದ್ದೇಶದಿಂದ ಮಠದ ಆವರಣದಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ನವರಾತ್ರಿಯ ಪರ್ವಕಾಲದಲ್ಲಿ ಭಕ್ತಿಭಾವದಿಂದ ರಾಜರಾಜೇಶ್ವರಿಯ ಉಪಾಸನೆ ನಡೆಯಲಿದ್ದು, ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಪ್ರವಚನಗಳು ಭಕ್ತರನ್ನು ಆಧ್ಯಾತ್ಮಿಕ ಅನುಭೂತಿಯತ್ತ ಕೊಂಡೊಯ್ಯಲಿವೆ.
ರಾಜರಾಜೇಶ್ವರಿಗೆ ವಿಶೇಷ ಪೂಜೆ
ಒಂಬತ್ತು ದಿನಗಳ ಕಾಲ ಉಪವಾಸ ವ್ರತ ಆಚರಿಸಲಿರುವ ರಾಘವೇಶ್ವರ ಶ್ರೀಗಳು ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆಗಳನ್ನು ಸಮರ್ಪಿಸಲಿದ್ದಾರೆ. ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಶ್ರೀಗಳಿಂದ ‘ಲಲಿತೋಪಾಖ್ಯಾನ’ ಪ್ರವಚನ ನಡೆಯಲಿದೆ. ಶ್ರೀದುರ್ಗಾ ಮಂಟಪದಲ್ಲಿ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಅಲ್ಲಿ ಶ್ರೀರಾಜರಾಜೇಶ್ವರಿಯ ಮಹಾಪೂಜೆಯನ್ನು ನೆರವೇರಿಸಲಾಗುತ್ತದೆ.
1108 ಸಪ್ತಶತೀ ಪಾರಾಯಣ, ಒಂಬತ್ತು ವಿಶೇಷ ಹವನ
‘ನವರಾತ್ರ ನಮಸ್ಯಾ’ದ ಪ್ರಮುಖ ಆಕರ್ಷಣೆಗಳಲ್ಲಿ 1108 ಸಪ್ತಶತೀ ಪಾರಾಯಣವೂ ಒಂದಾಗಿದೆ. ಒಂಬತ್ತು ದಿನಗಳ ಕಾಲ ಒಂಬತ್ತು ವಿಶೇಷ ಹವನಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ನೂರಾರು ಮಾತೆಯರಿಂದ ಕುಂಕುಮಾರ್ಚನೆ ನಡೆಯಲಿದ್ದು, ವಿಜಯದಶಮಿಯಂದು ಶತಚಂಡಿಕಾ ಮಹಾಯಾಗ ಸಂಪನ್ನವಾಗಲಿದೆ.
Bengaluru: 50 ಸಾವಿರ ಜನರಿಗೆ ಅನ್ನಸಂತರ್ಪಣೆ
11 ದಿನಗಳ ಕಾರ್ಯಕ್ರಮದ ಅವಧಿಯಲ್ಲಿ ಸುಮಾರು 50 ಸಾವಿರ ಜನರಿಗೆ ಅನ್ನಸಂತರ್ಪಣೆ ನಡೆಸಲು ಯೋಜಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ 500 ಋತ್ವಿಜರು ಭಾಗವಹಿಸಲಿದ್ದಾರೆ. ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಯಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ.
ಕಲೋಪಾಸನೆಗೆ 50ಕ್ಕೂ ಅಧಿಕ ಕಲಾವಿದರು
ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗಿದೆ. 50ಕ್ಕೂ ಅಧಿಕ ಖ್ಯಾತ ಕಲಾವಿದರು ಕಲೋಪಾಸನೆ ನಡೆಸಲಿದ್ದು, 50 ಭಜನಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಕಾರ್ಯಕ್ರಮದ ಆರಂಭದ ಅಂಗವಾಗಿ 108 ಮಾತೆಯರಿಂದ ರಾಘವೇಶ್ವರ ಶ್ರೀಗಳಿಗೆ ವಿಶೇಷ ಪೂರ್ಣಕುಂಭ ಸ್ವಾಗತ ನೀಡಲಾಗುತ್ತದೆ.
Also Read>> ಯತ್ನಾಳ್ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ತಿರುಗೇಟು; ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ಗುರಿ
ಸಿದ್ಧತೆ ಸಮರೋಪಾದಿಯಲ್ಲಿ
11 ದಿನಗಳ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು 500ಕ್ಕೂ ಅಧಿಕ ಕಾರ್ಯಕರ್ತರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಕ್ತರ ಪಾಲ್ಗೊಳ್ಳುವಿಕೆಗೆ ಅನುಕೂಲವಾಗುವಂತೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ನವರಾತ್ರಿಯ ಪರ್ವಕಾಲದಲ್ಲಿ ವಿವಿಧ ಆಯಾಮಗಳಲ್ಲಿ ರಾಜರಾಜೇಶ್ವರಿ ದೇವಿಯ ಉಪಾಸನೆ ನಡೆಯಲಿದ್ದು, ಆಸ್ತಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ‘ನವರಾತ್ರ ನಮಸ್ಯಾ’ ಸಮಿತಿಯು ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













