ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದಸಂಸ್ಕೃತಿ ಸಂಸ್ಥೆಯ ವತಿಯಿಂದ ಸೆ. 3 ಶನಿವಾರ ಸಂಜೆ 6.30ಕ್ಕೆ ‘ವೇದ ಸೌರಭ’ 2022- ಶ್ರೀ ಟಿ. ವಿ. ಕಪಾಲಿಶಾಸ್ತ್ರಿ 136ನೇ ಜನ್ಮ ದಿನೋತ್ಸವದ ಅಂಗವಾಗಿ ‘ಟಿ.ವಿ. ಕಪಾಲಿಶಾಸ್ತ್ರಿ ಪ್ರಶಸ್ತಿ ಪ್ರದಾನ’ವನ್ನು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿರುವ ಡಾ. ಎಚ್.ಎನ್. ಮಲ್ಟಿಮಿಡಿಯಾ ಸಭಾಂಗಣದಲ್ಲಿ ಆಯೋಜಿಸಿದೆ.
ಬೇಲಿಮಠ ಮಹಾಸಂಸ್ಥಾನದ ಪೂಜ್ಯ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಪದ್ಮಶ್ರೀ ಪುರಸ್ಕೃತ ಡಾ.ಆರ್.ಎಲ್. ಕಶ್ಯಪ ಘನ ಉಪಸ್ಥಿತಿಯಲ್ಲಿ, ಕವಯತ್ರಿ, ಚಿಂತಕಿ ಡಾ. ಉಷಾರಾಣಿ ರಾವ್ ಹಾಗೂ ಅಂಕಣಕಾರ, ಲೇಖಕ ಡಾ. ಪೋಶೆಟ್ಟಿಹಳ್ಳಿ ಗುರುರಾಜರವರಿಗೆ ‘ಟಿ.ವಿ. ಕಪಾಲಿಶಾಸ್ತ್ರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದಸಂಸ್ಕೃತಿ ಸಂಸ್ಥೆ ಒಂದು ಆಧ್ಯಾತ್ಮಿಕ ಆಂದೋಲನ. 1997ರಲ್ಲಿ ಪ್ರಾರಂಭಗೊAಡ ಈ ಸಂಸ್ಥೆ ವೇದಗಳ ಹಾಗು ಶ್ರೀ ಅರೋಬಿಂದೊ ಅವರ ವಿಚಾರಧಾರೆಯನ್ನು ಸಾರುತ್ತ ವೇದ ಪರಂಪರೆ ಘನತೆಯನ್ನು ಎತ್ತಿ ಹಿಡಿದ ವಿದ್ವಾಂಸರನ್ನು ಗೌರವಿಸುವುದರ ಮೂಲಕ ಈ ಪರಂಪರೆಗೆ ಪೋಷಣೆ ನೀಡುವುದು ಈ ಸನ್ಮಾನದ ಹಿಂದಿನ ಉದ್ದೇಶವಾಗಿದೆ.
ಕಾರ್ಯಕ್ರಮ ಪ್ರಾರಂಭದಲ್ಲಿ ಸಿರಿ ಕಲಾ ಮೇಳದ ಸುರೇಶ ಹೆಗಡೆ ಕಡತೋಕರವರ ಬಿಲ್ಲ ಹಬ್ಬ ಯಕ್ಷಗಾನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರತಿಭಾ ಪುಂಜಃ ಶ್ರೀ ಟಿ.ವಿ. ಕಪಾಲಿಶಾಸ್ತ್ರಿ
ಶ್ರೀ ಟಿ.ವಿ. ಕಪಾಲಿಶಾಸ್ತ್ರಿ (1886-1953)ಯವರು ಶ್ರೀ ಅರೋಬಿಂದೊ ಅವರ ನೇರ ಶಿಷ್ಯರು. ಬಾಲ್ಯದಿಂದಲೇ ಶ್ರೀವಿದ್ಯಾ ಉಪಾಸಕರಾಗಿದ್ದ ಇವರು ವೇದ, ಉಪನಿಷತ್ತು, ತಂತ್ರ ಶಾಸ್ತ್ರಗಳಲ್ಲಿ ಪಾರಂಗತರು. ಸಾಂಪ್ರದಾಯಿಕ ವಿದ್ಯಾಭ್ಯಾಸದೊಂದಿಗೆ ಇಂಗ್ಲಿಷ್ ಶಿಕ್ಷಣ ಪಡೆದ ಕಪಾಲಿಶಾಸ್ತ್ರಿಗಳು ಇಪ್ಪತ್ತನೆಯ ಶತಮಾನದಲ್ಲಿ ವೇದವಾಙ್ಯಮದ ಮೇಲೆ ಆಧ್ಯಾತ್ಮಿಕ ಭಾಷ್ಯ ಬರೆದ ಪ್ರಮುಖರಲ್ಲಿ ಅಗ್ರಗಣ್ಯರು. ಮೊದಲು ಕಾವ್ಯಕಂಠ ವಾಸಿಷ್ಠ ಗಣಪತಿಮುನಿ, ನಂತರ ರಮಣಮಹರ್ಷಿಯವರಲ್ಲಿ ಇವರು ಅಧ್ಯಾತ್ಮಿಕ ಸಾಧನೆ, ಜ್ಞಾನಾರ್ಜನೆ ಮಾಡಿದರು. ಮೊದಲೇ ಶ್ರೀ ಅರೋಬಿಂದೊ ಅವರ ವೇದ ಚಿಂತನೆ ಮತ್ತು ಅವರ ಪೂರ್ಣಯೋಗ ಸಿದ್ಧಾಂತಗಳನ್ನು ಮೆಚ್ಚಿಕೊಂಡಿದ್ದ ಶಾಸ್ತ್ರಿಯವರಿಗೆ 1917ರಲ್ಲಿ ಪಾಂಡಿಚೇರಿಯ ಶ್ರೀ ಅರೋಬಿಂದೊರವರ ದರ್ಶನವಾಯಿತು. ಅವರು 1930ರಿಂದ ಶ್ರೀ ಅರೋಬಿಂದೊ ಆಶ್ರಮದ ನಿವಾಸಿಗಳಾದರು. ಜೀವನ ಪೂರ್ತಿ ಶ್ರೀ ಅರೋಬಿಂದೊ ಮತ್ತು ರಮಣಮಹರ್ಷಿಯವರ ತತ್ವಗಳನ್ನು ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ವ್ಯಾಖ್ಯಾನಿಸುವುದೇ ಶಾಸ್ತ್ರಿಗಳ ನಿತ್ಯಕಾಯಕವಾಗಿತ್ತು. ಆಶ್ರಮದಲ್ಲಿ ಸಂಸ್ಕೃತ ಅಧ್ಯಾಪನ ಮಾಡುತ್ತಿದ್ದ ಶಾಸ್ತ್ರಿಗಳ ಪಾಂಡಿತ್ಯ, ಚಿಂತನ, ಮನನಗಳ ವ್ಯಾಪ್ತಿ ಅಪಾರ. ಅನುವಾದ, ಭಾಷ್ಯ ವಿವರಣೆ, ಲೇಖನ ಸರಣಿ ಮತ್ತು ಸಂಸ್ಕೃತ ಕವಿತ್ವ ಇದು ಕಪಾಲಿಶಾಸ್ತ್ರಿಯವರ ವ್ಯಕ್ತಿತ್ವದ ಪ್ರಮುಖ ಅಭಿವ್ಯಕ್ತಿಗಳು.
ಶ್ರೀ ಟಿ.ವಿ. ಕಪಾಲಿಶಾಸ್ತ್ರಿಯವರದು ಋಷಿಸದೃಶ ವ್ಯಕ್ತಿತ್ವ. ಮೂವರು ಮಹಾಗುರುಗಳಲ್ಲಿ ಕಲಿತ ಅವರು ವಿನಯದ ಸಾಕಾರ ಮೂರ್ತಿಯಾಗಿದ್ದರು. ಶಾಸ್ತ್ರಿಯವರು ರಮಣಮಹರ್ಷಿಗಳ ತಮಿಳು ಕೃತಿಯನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ವಾಸಿಷ್ಠಗಣಪತಿ ಮುನಿಗಳನ್ನು ಕುರಿತು ‘ವಾಸಿಷ್ಠ ವೈಭವ’ ಎಂಬ ಜೀವನ ಚರಿತ್ರೆಯನ್ನು ರಚಿಸಿದ್ದಾರೆ.
ಮೂಲತಃ ತಾಂತ್ರಿಕರಾಗಿದ್ದ ಕಪಾಲಿಶಾಸ್ತ್ರಿಯವರು ವೇದ ಮತ್ತು ತಂತ್ರಗಳ ನಡುವಿನ ಅಂತಃಸ್ಸಂಬಂಧವನ್ನು ಗುರುತಿಸಿ, ತಾಂತ್ರಿಕ ದೇವತೆಗಳು ವೈದಿಕ ದೇವತಾಮೂಲಕ್ಕೆ ಸೇರಿದವು ಎಂದು ತೋರಿಸಿಕೊಟ್ಟರು.
ಶ್ರೀ ಕಪಾಲಿಶಾಸ್ತ್ರಿಯವರು ಶ್ರೀ ಅರೋಬಿಂದೊ ಅವರ ವೇದಚಿಂತನೆಗೂ ತಮ್ಮ ಆಲೋಚನೆಗೂ ಸಾಮೀಪ್ಯವಿರುವುದನ್ನು ಗುರುತಿಸಿ, ಅವರಿಗೆ ನಿಕಟವಾದವರು. ವೇದಗಳಿಗೆ ಬಾಹ್ಯಯಜ್ಞ ಮತ್ತು ಕಾಮ್ಯ ಪ್ರಾರ್ಥನೆಯ ಅರ್ಥಗಳನ್ನು ಹೇಳುವ ಸಾಂಪ್ರದಾಯಿಕ ಭಾಷ್ಯ ವಿವರಣೆಗಳಿಗಿಂತ ಮುಂದೆ ಹೋಗಿ, ವೇದದ ನಿಜವಾದ ಅರ್ಥವೆಂದರೆ ಅದರ ಅಂತರಾರ್ಥ ಅಂದರೆ ಆಧ್ಯಾತ್ಮಿಕ ಅರ್ಥ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಋಗ್ವೇದದ ಮೊದಲ ಅಷ್ಟಕದಲ್ಲಿರುವ 121 ಸೂಕ್ತಗಳಿಗೆ ಸಂಬಂಧಿಸಿದ ‘ಸಿದ್ಧಾಂಜನ’ ಎಂಬ ಇವರ ಭಾಷ್ಯಕ್ಕೆ ಶ್ರೀ ಅರೋಬಿಂದೊ ಅವರು ವೇದಕ್ಕೆ ನೀಡಿರುವ ಅಂತಃಸ್ಫೂರ್ತಿ ಮೂಲದ ವಿವರಣೆಯೇ ಆಧಾರ. ಕಪಾಲಿಶಾಸ್ತ್ರಿಯವರು ಇಂಗ್ಲಿಷ್, ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲಿ 30ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.
ಸಾಕ್ಷಿ ಸಂಸ್ಥೆಯ ‘ದೀಪ್ತ ಜೀವಿ’ ಪುಸ್ತಕದಲ್ಲಿ ಶ್ರೀ ಕಪಾಲಿಶಾಸ್ತ್ರಿಗಳ ಜೀವನ ಹಾಗೂ ಕೃತಿಗಳ ವಿಸ್ತೃತ ಪರಿಚಯ ಇದೆ.
ಟಿ.ವಿ. ಕಪಾಲಿಶಾಸ್ತ್ರಿ ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ
ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಪಿ. ಆರ್ ಸುಬ್ಬರಾವ್ (ದಿವಂಗತ) ಮತ್ತು ಕೆ.ವಿ.ಲತಾ ಅವರ ಸುಪುತ್ರರಾಗಿ 16.2.1980 ರಲ್ಲಿ ಜನನ. ಇಷ್ಟು ಯುವ ವಯಸ್ಸಿನಲ್ಲಿಯೇ ಆಸಕ್ತಿಯಿಂದ ತೊಡಗಿಸಿಕೊಂಡ ಕ್ಷೇತ್ರಗಳ ವಿಸ್ತಾರವೇ ಸಮೃದ್ಧ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಬೆಳೆದು ಬಂದವರೆಂಬುದನ್ನು ನಿದರ್ಶಿಸುತ್ತದೆ. ಕನ್ನಡದಲ್ಲಿ ಎಂ. ಎ. ಮತ್ತು ಪತ್ರಿಕೋದ್ಯಮ ಪದವಿಯನ್ನು ಪಡೆದಿದ್ದಾರೆ. ಭಕ್ತಿಮಾರ್ಗದಲ್ಲಿ ಆಧ್ಯಾತ್ಮಿಕ ಒಲವು ಬೆಳೆಸಿಕೊಂಡು, ಭಾರತಶಾಸ್ತ್ರಲ್ಲಿಯೂ ವಿಶೇಷ ಅಧ್ಯಯನಕ್ಕೆ ರಾಜಮಾತಾ ಪ್ರಮೋದಾದೇವಿ ಒಡೆಯರ್‌ರಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಶ್ರೀಯುತರ ಅಭಿರುಚಿ, ಪರಿಣತಿ, ಮತ್ತು ಪರಿಶ್ರಮಗಳು ಸಾತ್ವಿಕ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು, ಪತ್ರಿಕೋದ್ಯಮ, ಮಾಧ್ಯಮ, ವಿದ್ಯಾಕ್ಷೇತ್ರ, ವಿಶೇಷವಾಗಿ ದಾಸಸಾಹಿತ್ಯ ಪ್ರಸಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ, ವೈಚಾರಿಕ ಅಂಕಣ ಬರಹ, ಪುಸ್ತಕ ಸಂಪಾದನೆ – ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಇವರಿಗೆ ಗಣ್ಯ ಸ್ಥಾನ ದೊರಕಿಸಿಕೊಟ್ಟಿವೆ.
ಇವರ ಪ್ರಕಟಿತ ಪುಸ್ತಕಗಳಾದ ‘ಕನ್ನಡದ ಕಂಪಿನಲಿ ಕರಿವದನ’, ‘ಭಕ್ತಿಪಾರಿಜಾತ’ ‘ಕಲಾಕಸ್ತೂರಿ-ವರ್ಣಯಾನ’, ಅಡ್ವೆಸರ್ ಯೋಗ ವಿಶೇಷಾಂಕ, ‘ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ 70ರ ಅಭಿನಂದನಾ ಗ್ರಂಥ’, ‘ಕೃಷ್ಣಂ ವಂದೇ ಜಗದ್ಗುರುಂ’, ‘ಪಾಂಚಜನ್ಯ’, ‘ಕಾಕೋಳು ಕ್ಷೇತ್ರ ಪರಿಚಯ’ ಇವುಗಳಲ್ಲದೆ ‘ಸತ್ಸಂಗ ಸಂಪದ’, ಅಂಕಣಗಳ ಗ್ರಂಥರೂಪ, ‘ವಂದೇ ಗುರು ಪರಂಪರಾ ’-‘ದಾಸ ಪಂಥ’ ಮುಂತಾದ ಕೃತಿಗಳಲ್ಲಿ ಇವರ ಸಾಹಿತ್ಯ ಕೃಷಿ ಎದ್ದು ಕಾಣುವಂತಿದೆ.
ಹತ್ತಾರು ಸ್ಮರಣಗ್ರಂಥಗಳ ಸಂಪಾದನೆ, ಅಂಕಣಮಾಲೆ, ನುಡಿಮಂಟಪ, ‘ಅಮರ ಬಾಪು ಜೀವನ’ ಪತ್ರಿಕೆಯ ನಿರ್ವಹಣೆ. ಶಿಬಿರಗಳು, ಉಪನ್ಯಾಸ, ವಿಚಾರ ಸಂಕಿರಣಗಳು, ನಾಡಿನ ವಿವಿಧ ಪತ್ರಿಕೆಗಳಲ್ಲಿ ನೂರಾರು ಲೇಖನಗಳು, ‘ಪ್ರಣವ ಮೀಡಿಯಾ ಹೌಸ್ ಪ್ರಕಾಶನ’ ಇತ್ಯಾದಿಗಳಿಂದ ತಮ್ಮ ವೈವಿಧ್ಯಮಯ ಕ್ರಿಯಾಶೀಲತೆಯ ಅಚ್ಚು ಮೂಡಿಸಿದ್ದಾರೆ.
ಸರ್ವೋದಯ ಮಂಡಲ (ಬೆಂಗಳೂರು ನಗರ ಜಿಲ್ಲೆ) ಅಧ್ಯಕ್ಷರಾಗಿ, ಕಾಕೋಳು ವೇಣುಗೋಪಾಲಸ್ವಾಮಿ ದೇವಸ್ಥಾನದ ಟ್ರಸ್ಟಿಯಾಗಿ, ಅಖಿಲ ಕರ್ನಾಟಕ ಸತ್ಸಂಗ ಭಜನಾ ಮಹಾಮಂಡಳಿಯ ಸಹಕಾರ್ಯದರ್ಶಿಯಾಗಿ, ಸಲ್ಲಿಸುತ್ತಿರುವ ಸೇವೆ ಸ್ಮರಣೀಯವಾದುದು.
ಇವರ ಸಂದ ಗಣ್ಯ ಪ್ರಶಸ್ತಿಗಳು 35ಕ್ಕೂ ಮಿಕ್ಕಿವೆ. ‘ಸದ್ಗುರು ಸಾಹಿತ್ಯರತ್ನ ಪ್ರಶಸ್ತಿ’, ‘ಡಾ. ಕೆ. ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ, ‘ಸುವರ್ಣ ಶ್ರೀ’ ರಾಜ್ಯ ಪ್ರಶಸ್ತಿ. ‘ಆಚಾರ್ಯ ವಿದ್ಯಾರಣ್ಯ ಪ್ರಶಸ್ತಿ’, ‘ಕನ್ನಡ ಸೇವಾ ರತ್ನ’, ‘ಅಧ್ಯಾತ್ಮ ಸಾಹಿತ್ಯ ಭಾಸ್ಕರ’, ‘ಧನ್ವಂತರಿ ಪುರಸ್ಕಾರ’, ‘ಶ್ರೀ ಮಧ್ವ ವಿಜಯ ಪ್ರಶಸ್ತಿ’, ‘ಮಹಾತ್ಮಾ ಗಾಂಧಿ ಸದ್ಭಾವನಾ ಪ್ರಶಸ್ತಿ’ – ಇವು ಅವುಗಳಲ್ಲಿ ಕೆಲವು ಮಾತ್ರ.
ಇವರ ಸಾಹಿತ್ಯ ಪ್ರತಿಭೆ. ಭಕ್ತಿ ಪಂಥದ ಪ್ರಸಾರ, ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಕೆಲಸಗಳು, ಸಮಾಜ ಸೇವೆ, ವೈಚಾರಿಕ ಜಾಗೃತಿಯ ಕಾರ್ಯಗಳು ಇವುಗಳನ್ನು ಗುರುತಿಸಿ ದಿ. 03.09.22ರಂದು ಶನಿವಾರ, ಶ್ರೀ ಟಿ. ವಿ. ಕಪಾಲಿಶಾಸ್ತ್ರಿ ಅವರ 136ನೇ ಜನ್ಮದಂದು ಜರಗುವ ‘ವೇದ ಸೌರಭ’ ಸಮಾರಂಭದಲ್ಲಿ, ವಿದ್ವಜ್ಜನರ ಸಂಮುಖದಲ್ಲಿ ಶ್ರೀ ಟಿ. ವಿ. ಕಪಾಲಿಶಾಸ್ತ್ರಿ ಪ್ರಶಸ್ತಿಯೊಂದಿಗೆ ಪುರಸ್ಕಾರ ಸಲ್ಲಿಸುತ್ತಿರುವುದು ನಮಗೆ ಸಂತಸದ ಮತ್ತು ಹೆಮ್ಮೆಯ ಸಂಗತಿ.
ಚಿಂತಕಿ ಡಾ. ಉಷಾರಾಣಿ ರಾವ್
15 ಡಿಸೆಂಬರ್ 1971ರಲ್ಲಿ ಬೆಂಗಳೂರಿನಲ್ಲಿ ಜನನ. ತಮ್ಮ ಪ್ರತಿಭಾಪೂರ್ಣ ಯಶಸ್ವಿ ವಿದ್ಯಾರ್ಥಿ ಜೀವನದಲ್ಲಿ ಮಾತೃಭಾಷೆ ಕನ್ನಡವನ್ನಷ್ಟೇ ಅಲ್ಲದೆ, ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಣತಿ ಹೊಂದಿ, ಹಿಂದಿಯಲ್ಲಿ ಎಂ.ಎ. ಬಿ.ಎಡ್. ಮತ್ತು ಪಿ.ಎಚ್‌ಡಿ ಪದವಿಗಳನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿ. ವಿ. ಗಳಲ್ಲಿ ಸಂಪಾದಿಸಿದ್ದಾರೆ. ತಮ್ಮ ವೃತ್ತಿಕ್ಷೇತ್ರವು ಶಿಕ್ಷಣವಾದರೂ, ಅಭಿಜಾತ ಸಾಹಿತ್ಯ ಪ್ರೇಮ, ಬಹುಭಾಷಾ ಪ್ರಭುತ್ವ, ಇವರಿಗೆ ಸಹಜವಾಗಿಯೇ ಬಂದ ಕಾವ್ಯಶಕ್ತಿಗಳು ಇವರನ್ನು ಸಾಹಿತ್ಯ ಮತ್ತು ಭಾಷಾಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಹಿರಿಮೆ ತಂದಿವೆ.
ಇವರ ಸಾಹಿತ್ಯ ಸೇವೆಯು ಬಹುಮುಖಿಯಾದುದು. ಕನ್ನಡದಿಂದ ಹಿಂದಿಗೆ, ಹಿಂದಿಯಿಂದ ಕನ್ನಡಕ್ಕೆ, ಇಂಗ್ಲಿಷ್‌ನಿಂದ ಹಿಂದಿಗೆ ಅನೇಕ ಕಾವ್ಯ, ಗದ್ಯಾನುವಾದವಲ್ಲದೆ, ನಾಟಕ, ವಿಚಾರ ಸಾಹಿತ್ಯ, ವ್ಯಾಕರಣ, ಬಾಲಸಾಹಿತ್ಯಗಳ ವ್ಯಾಪ್ತಿ ಹಬ್ಬಿದೆ. ಕನಕದಾಸರ ಪ್ರೇರಣೆಯಿಂದ ಒಂದು ಪ್ರಬಂಧ ಕಾವ್ಯ, ಡಾ. ಚಂದ್ರಶೇಖರ ಕಂಬಾರರ ನಾಟಕ ‘ಮಹಮೂದ ಗವಾನ’ ಹಿಂದಿ ಅನುವಾದ, ಡಾ. ಸಿದ್ದಲಿಂಗಯ್ಯನವರ ಕನ್ನಡ ಕವಿತೆಗಳ ಹಿಂದಿ ಅನುವಾದ ಇತ್ಯಾದಿಗಳಿಂದ ಭಾಷೆ-ಭಾಷೆಗಳ ಮಧ್ಯೆ ಸಾಹಿತ್ಯದ ಕಂಪು ಪಸರಿಸುವಂತೆ ಮಾಡಿದ್ದಾರೆ.
ಸಾಹಿತ್ಯದಷ್ಟೆ, ಸಮಾಜ ಮತ್ತು ಪರಿಸರಗಳ ಬಗ್ಗೆ ಸಂವೇದನಾಶೀಲರು. ಸರ್ವಾಂಗೀಣ ವಿಕಾಸದ ದೃಷ್ಟಿಯುಳ್ಳ ಸಾಹಿತ್ಯ ಕೃಷಿ ಈ ನಿಟ್ಟುಗಳಲ್ಲಿಯೂ ಹಬ್ಬಿದೆ, ‘ನದಿ ಕಳೆದು ಹೋಗಿದೆ’ ತಾವು ಸಂಪಾದನೆ ಮಾಡಿದ ಪ್ರಸಿದ್ಧ ಪರಿಸರ ಪ್ರೇಮೀ ಕಥಾಸಂಕಲನ.
ಇಂದಿನ ಕಾಲದಲ್ಲಿ ಭಾಷೆ-ಭಾಷೆಗಳ ನಡುವಿನ ಸಂವಹನ, ಸಂವಾದವೂ ಬಹಳ ಮಹತ್ವದ್ದಾಗಿದೆ. ಅದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಮಾಡಿದ್ದಾರೆ. ಕೋರಿಯಾ, ಇಟಲಿ, ಇರಾನ್, ಯು.ಕೆ., ಬಂಗ್ಲಾದೇಶ, ಲೆಬೆನಾನ್ ಮುಂತಾದ ದೇಶಗಳ ಪ್ರಸಿದ್ಧ ಕವಿತೆಗಳನ್ನು ಅನುವಾದ ಮಾಡಿದ್ದಲ್ಲದೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ‘ಹಿಂದೀ ಸಾಹಿತ್ಯದಲ್ಲಿ ಸಾಮಾಜಿಕ ಸವಾಲುಗಳು’, ಮಹತ್ವಪೂರ್ಣ ಸಂಪಾದಿತ ಕೃತಿ. ಕರ್ನಾಟಕದ ಅನೇಕ ಹಿಂದೀ ಲೇಖಕರ ವ್ಯಕ್ತಿತ್ವ, ಕೃತಿಗಳನ್ನು ಮೌಲ್ಯಾಂಕನ ಮಾಡಿ ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ್ದಾರೆ. ‘ಭಾರತ ನೇಪಾಳ ಸ್ನೇಹ ಸೇತು’ಗೆ ತಾವು ಸಹಲೇಖಕರು. ಹಿಂದೀ ಪ್ರಸಿದ್ಧ ಕವಿ ‘ನಿರಾಲಾ’ (ಸೂರ್ಯಕಾಂತ ತ್ರಿಪಾಠಿ) ಅವರ ಸಾಹಿತ್ಯ ವಿಮರ್ಶೆ ‘ಅಭೀ ನ ಹೋಗಾ ಮೇರಾ ಅಂತ’ ತಮ್ಮ ಮಹತ್ವಪೂರ್ಣ ವಿಮರ್ಶೆಗಳಲ್ಲಿ ಒಂದು. ಹೀಗೆ ಒಟ್ಟನಲ್ಲಿ ಸುಮಾರು ಹತ್ತು ಕವನ ಸಂಕಲನಗಳು, ‘ಅನುಭೂತಿಯಿಂದ ಅಭಿವ್ಯಕ್ತಿಯವರೆಗೆ’ ಸಾಹಿತ್ಯ ಕುರಿತ ಅಂಕಣ ಬರಹಗಳು, ಪತ್ರಿಕಾ ಸಂಪಾದನೆ ಹತ್ತಕ್ಕೂ ಮಿಕ್ಕಿ ಅನುವಾದ ಗ್ರಂಥಗಳು, ಸಹಲೇಖಕರಾಗಿ ಎರಡು ಕವನ ಸಂಕಲನಗಳು, ‘ಅನುವಾದ ಕಾ ನಯಾ ವಿಮರ್ಶ’ ಮತ್ತು ‘ಅಗ್ನಿಲೀಕ’ ಇವು ಪುಸ್ತಕಾವಲೋಕನ ಸಹಿತ ವಿಮರ್ಶೆಯ ಪ್ರಕಾಶಿತ ಕೃತಿಗಳು. ಇವರ ಕೃತಿ ವೈವಿಧ್ಯದ ವ್ಯಾಪ್ತಿಯನ್ನು ಸಂಗ್ರಹವಾಗಿ ಹಿಡಿದಿಡುವುದು ನಿಜಕ್ಕೂ ಕಷ್ಟಸಾಧ್ಯ.
ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ತಮ್ಮನ್ನು ಅರಿಸಿಕೊಂಡು ಬಂದಿವೆ. ಅಂತಾರಾಷ್ಟ್ರೀಯ ಹಿಂದೀ ಪರಿಷತ್ತು ‘ನಾರೀಶಕ್ತಿ ಸಮ್ಮಾನ’ದಿಂದ ಗೌರವಿಸಿದುದು, ‘ಅಂತಾರಾಷ್ಟ್ರೀಯ ಬದಲಾವ್ ಮಂಚ್, ದಕ್ಷಿಣಭಾರತ’, ‘ಪ್ರಗತಿಶೀಲ ಸಾಹಿತ್ಯ ಸಮ್ಮಾನ’ ನೀಡಿದುದು ಉಲ್ಲೇಖನೀಯ. ಇನ್ನು, ಮುಂಬಯಿ, ಶಿಲಾಂಗ್, ಹೈದರಾಬಾದ್, ಬಿಹಾರ ಮುಂತಾಗಿ ಅನೇಕ ಕಡೆಗಳಿಂದ ಇವರ ಹಿಂದೀ ಸಾಹಿತ್ಯ ಸಂಬAಧಿತ ಪ್ರಶಸ್ತಿಗಳು ಸಂದಿವೆ. ಅದಲ್ಲದೆ, ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೆಬಿನಾರ್, ಗೋಷ್ಠಿಗಳಲ್ಲಿ ಪಾಲುಗೊಂಡು, ಅನೇಕ ಅಕಾಡೆಮಿಗಳ ನಿರ್ವಾಹಕ, ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಈ ನಿರಂತರ ಸಾಹಿತ್ಯ, ಸಮಾಜ, ಸಂಸ್ಕೃತಿ, ಭಾಷಾಬಾಂಧವ್ಯಗಳ ತಮ್ಮ ಸೇವೆಯನ್ನು ಗುರುತಿಸಿ, ಅತ್ಯಂತ ಅಭಿಮಾನಪೂರ್ವಕವಾಗಿ, ದಿ. 03.09.22ರಂದು ಶನಿವಾರ, ಶ್ರೀ ಕಪಾಲಿಶಾಸ್ತ್ರಿಗಳ 136ನೇ ಜನ್ಮದಿನದಂದು ‘ವೇದ ಸೌರಭ’ ಸಮಾರಂಭದಲ್ಲಿ ‘ಸಾಕ್ಷಿ’ವತಿಯಿಂದ ಶ್ರೀ ಟಿ. ವಿ. ಕಪಾಲಿಶಾಸ್ತ್ರಿ ಪ್ರಶಸ್ತಿಯೊಂದಿಗೆ ಪುರಸ್ಕಾರ ಸಲ್ಲಿಸಲು ನಮಗೆ ಹೆಮ್ಮೆ ಅನಿಸುತ್ತದೆ.
ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆ
ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆ ಒಂದು ಆಧ್ಯಾತ್ಮಿಕ ಸಂಸ್ಥೆ. 1997ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಸುಂದರ, ಸಾಮರಸ್ಯಪೂರ್ಣ, ಸೃಜನಾತ್ಮಕ ಹಾಗೂ ಸಂತಸಮಯ ಜೀವನ ನಡೆಸಲು ಅನುವಾಗುವಂತಹ ಜಾಗೃತಿಯನ್ನು ಸಮಾಜದಲ್ಲಿ ಮೂಡಿಸುವ ಉದ್ದೇಶ ಹೊಂದಿದೆ. ಈ ಉದ್ದೇಶಕ್ಕೆ ಸಂಪೂರ್ಣ ಸಹಾಯಕವಾಗಿರುವ ವೇದಗಳ ಹಾಗೂ ಶ್ರೀ ಅರೋಬಿಂದೊ ಅವರ ವಿಚಾರ ಧಾರೆಯನ್ನು ಸಾರುವುದೇ ಸಂಸ್ಥೆಯ ಗುರಿ.
ವೇದ ಜ್ಞಾನ ಸಂರಕ್ಷಣೆ, ಸಂಶೋಧನೆ ಹಾಗೂ ಪ್ರಸಾರ ಕಾರ್ಯದಲ್ಲಿ ನಡೆಸಿದ ಚಟುವಟಿಕೆಗಳ ಪಕ್ಷಿನೋಟ.
ವೇದದ ಅಂತರಾರ್ಥದ ವಿವರಣೆ
ವೇದಗಳು ಜಗತ್ತಿನಲ್ಲಿ ಇದುವರೆಗೂ ದೊರಕಿರುವ ಅತ್ಯಂತ ಪ್ರಾಚೀನ ವಾಙ್ಮಯ ಸಮೂಹ. ವೇದಗಳಿಗೆ ಸಂಬಂಧಿಸಿದಂತೆ ಅನೇಕ ಪಾಶ್ಚಾತ್ಯ ಮತ್ತು ಭಾರತೀಯ ವಿದ್ವಾಂಸರು ವಿವರಣೆಗಳನ್ನು ಬರೆದಿದ್ದಾರೆ. ಆದರೆ ಈ ವಿವರಣೆ ಮತ್ತು ಭಾಷ್ಯಗಳಲ್ಲಿ ವೇದದ ಪ್ರತಿಯೊಂದು ಭಾಗವನ್ನು ಅವಿನಾಭಾವವಾಗಿ ಬೆಸೆಯುವ ಸಿದ್ಧಸೂತ್ರ ಯಾವುದು ಎಂಬುದಕ್ಕೆ ಉತ್ತರವಿಲ್ಲ. ವೇದದ ದೇವತೆಗಳು, ಯಜ್ಞ, ಪಶುವಧೆ ಮೊದಲಾದ ವಿಷಯಗಳ ಬಗ್ಗೆ ಸಾಕಷ್ಟು ಗೊಂದಲಗಳಿವೆ. ವೇದದ ಆಧ್ಯಾತ್ಮಿಕ ಲೋಕವನ್ನು ಸಂಪೂರ್ಣ ನಿರ್ಲಕ್ಷಿಸಿರುವ ಸಾಯಣಾಚಾರ್ಯ, ಮ್ಯಾಕ್ಸ್ಮುಲ್ಲರ್ ಮೊದಲಾದವರ ವೇದ ಭಾಷ್ಯಗಳೇ ಅಂತಿಮ ಎಂಬ ಭಾವನೆ ವಿದ್ವಾಂಸರ ನಡುವೆಯೆ ಇನ್ನೂ ಪ್ರಚಲಿತವಿರುವುದಂತೂ ದುರ್ದೈವ. ಆಚಾರ್ಯ ಆನಂದತೀರ್ಥ, ಸ್ವಾಮಿ ರಾಘವೇಂದ್ರ, ಸ್ವಾಮಿ ದಯಾನಂದ ಸರಸ್ವತಿ ಮೊದಲಾದವರು ವೇದಕ್ಕೆ ಆಧ್ಯಾತ್ಮಿಕ ಭಾಷ್ಯ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇವರ ಪ್ರಯತ್ನಗಳು ವೇದದ ನಿಜಾರ್ಥವನ್ನು ಮರೆಮಾಚುವ ವ್ಯಾಖ್ಯಾನ ಪರಂಪರೆಯನ್ನು ತಡೆಯುವುದರಲ್ಲಿ ಸಂಪೂರ್ಣಯಶಸ್ವಿ ಆಗಲಿಲ್ಲ ಎಂಬುದೇನೊ ನಿಜ. ಆದರೆ ಕಪಾಲಿಶಾಸ್ತ್ರಿಗಳು ಹೇಳಿರುವಂತೆ – ಈ ವ್ಯಾಖ್ಯಾನಗಳು ವೇದದ ಆಧ್ಯಾತ್ಮಿಕ ಮಹತ್ವದ ಜ್ಯೋತಿಯನ್ನು ಜೀವಂತವಾಗಿ ಇರಿಸಿಕೊಂಡೇ ಬಂದವು.
ಶ್ರೀ ಅರೋಬಿಂದೊ ಅವರು ಪಾಂಡಿತ್ಯಕ್ಕಿಿಂತ ಹೆಚ್ಚಾಗಿ ವೇದದ ಹೃದಯವನ್ನು ತಮ್ಮ ಯೋಗ, ಆಧ್ಯಾತ್ಮಿಕ ಸಾಧನೆಯಿಂದ ಪ್ರವೇಶಿಸಿ ವೇದಕ್ಕೆ ವಿವರಣೆ ಬರೆದಿದ್ದಾರೆ. ಅವರ ‘Hymns to the Mystic Fire’, ‘The Secret of the Veda’ ಮೊದಲಾದ ಗ್ರಂಥಗಳಲ್ಲಿ – ವೇದದ ಋಷಿಗಳಿಗಿದ್ದ ಎರಡು ಉದ್ದೇಶಗಳನ್ನು ವಿವರಿಸಿದ್ದಾರೆ. ವೇದ ಋಷಿಗಳು ಮಂತ್ರಗಳ ಮನೋವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಸಂದೇಶವನ್ನು ಸಂರಕ್ಷಣೆ ಮಾಡಲು ಬಯಸಿದ್ದರು. ಇದರ ಜೊತೆಗೆ ವೇದದಲ್ಲಿ ಆಸಕ್ತಿಯಿರುವ ವಿಶಾಲ ಜನಸ್ತೋಮ ಅದನ್ನು ಪಠಿಸಲು ಮತ್ತು ಶ್ರವಣ ಮಾಡಲು ಅನುವು ಮಾಡಿಕೊಟ್ಟಿದ್ದರು. ಸಾಮಾನ್ಯ ಜನರ ಕೈಗೆ ಸಿಕ್ಕರೆ ವೇದದ ಅಂತರಾರ್ಥ ವಿರೂಪವಾದೀತು ಎಂದು ಋಷಿಗಳು ವೇದ ಮಂತ್ರಗಳನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದ್ದಾರೆ.
ಬಾಹ್ಯಯಜ್ಞದಲ್ಲಿ ಮತ್ತು ಬಹಿರಂಗ ಉಪಾಸನೆಯಲ್ಲಿ ಆಸಕ್ತಿ ಇರುವವರು ಅದಕ್ಕೆ ಬಹಿರಂಗದ ಅರ್ಥವನ್ನು ನೀಡುತ್ತಾ ಬಂದರು. ಮುಂದೆ ಮೀಮಾಂಸಕರು ವೇದಕ್ಕೆ ಸಂಪೂರ್ಣ ಕರ್ಮಕಾಂಡನಿಷ್ಠ ವ್ಯಾಖ್ಯಾನ ಮಾಡಲು ಇದರಿಂದ ವೇದಿಕೆ ನಿರ್ಮಾಣವಾಯಿತು. ಯಾಸ್ಕ, ಮಧ್ವಾಚಾರ್ಯ, ರಾಘವೇಂದ್ರ ಸ್ವಾಮಿ ಮತ್ತು ಸ್ವಲ್ಪ ಮಟ್ಟಿಗೆ ಭಟ್ಟ ಭಾಸ್ಕರ ಇವರು ವೇದದ ನಿಜವಾದ ಅರ್ಥವೆಂದರೆ ಆಧ್ಯಾತ್ಮಿಕ ಅರ್ಥ, ವೇದದಲ್ಲಿ ಬರುವ ¾ಯಜ್ಞ¿ವೆಂದರೆ ಅಂತರ್ಯಜ್ಞ ಎಂಬುದನ್ನು ತಮ್ಮ ಭಾಷ್ಯಗಳಲ್ಲಿ ವಿವರಿಸಿದ್ದಾರೆ. ಆದರೆ ಪಾಶ್ಚಾತ್ಯರು ವೇದಗಳ ಬಗ್ಗೆ ಅಧ್ಯಯನ ಮಾಡಿದರೂ ಅವರಿಗೆ ಕರ್ಮಕಲಾಪಗಳನ್ನು ಒಳಗೊಂಡ ಅರ್ವಾಚೀನರಾದ ಸಾಯಣರ ಭಾಷ್ಯವೇ ಆಧಾರ; ಅವರು ವೇದದಲ್ಲಿ ಗೂಢಾರ್ಥ ಇದೆ ಎಂಬುದಾಗಿ ತಿಳಿಸಿಲ್ಲ.
ವೇದಾರ್ಥದ ಈ ಹಿನ್ನೆಲೆಯನ್ನು ಗಮನಿಸಿದರೆ ಶ್ರೀ ಅರೋಬಿಂದೊ ಅವರು ಈ ವೇದಗಳಿಗೆ ನೀಡಿದ ವ್ಯಾಖ್ಯಾನದ ಮಹತ್ವ ಅಪಾರವಾದದ್ದು. ಕಪಾಲಿಶಾಸ್ತ್ರಿಯವರು ಶ್ರೀ ಅರೋಬಿಂದೊ ಅವರ ಚಿಂತನೆಯ ಸುಳಿವುಗಳನ್ನು ಗ್ರಹಿಸಿ, ಅಂತರಾರ್ಥವೇ, ಗೂಢಾರ್ಥವೇ ವೇದದಲ್ಲಿ ಪ್ರಧಾನ, ಬಾಹ್ಯ ಉಪಾಸನೆ ಅಂತರಂಗ ಉಪಾಸನೆಯಲ್ಲಿ ಪರ್ಯವಸಾನವಾಗಬೇಕು ಎಂಬುದನ್ನು ತಮ್ಮ ‘ಸಿದ್ಧಾಂಜನ’ ಭಾಷ್ಯದಲ್ಲಿ ಮತ್ತು ಅದರ ವಿಸ್ತಾರವಾದ ಭೂಮಿಕೆಯಲ್ಲಿ ತೋರಿಸಿಕೊಟ್ಟಿದ್ದಾರೆ.
ಪ್ರೊ. ಆರ್.ಎಲ್. ಕಶ್ಯಪ ಅವರು ಶ್ರೀ ಅರೋಬಿಂದೊ ಮತ್ತು ಶ್ರೀ ಕಪಾಲಿಶಾಸ್ತ್ರಿಯವರ ಈ ಪರಂಪರೆಯನ್ನು ಮುಂದುವರೆಸುವ ಕೆಲಸ ಮಾಡುತ್ತಿದ್ದಾರೆ. ನಾಲ್ಕೂ ವೇದಗಳಲ್ಲಿನ ಎಲ್ಲ ಮಂತ್ರಗಳಿಗೂ ಆಧ್ಯಾತ್ಮಿಕ ಅರ್ಥ ಬರೆಯುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ನಾಲ್ಕೂ ವೇದಗಳಿಗೆ ಭಾಷ್ಯವನ್ನು ಇಂಗ್ಲಿಷ್‌ನಲ್ಲಿ ಬರೆಯುವ ಕಾರ್ಯ ಪೂರೈಸಿದ್ದಾರೆ.
ವೇದಸಾಹಿತ್ಯ ಪ್ರಕಟಣೆ
ಸಾಕ್ಷಾತ್ಕಾರಕ್ಕೆ ಸಂನ್ಯಾಸ ಅನಿವಾರ್ಯ ಎಂಬುದನ್ನು ವೇದಗಳು ಎಂದೂ ಬೋಧಿಸಿಲ್ಲ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಎಲ್ಲರೂ ಪರಿಪೂರ್ಣತೆಯನ್ನು ಸಾಧಿಸಬೇಕು. ಲೌಕಿಕ ಮತ್ತು ಆಧ್ಯಾತ್ಮಿಕ ಜೀವನದ ನಡುವೆ ಕಂದಕವಿರದೆ, ಸಂಪೂರ್ಣ ತಾಳಮೇಳ ಇರಬೇಕು ಎಂಬುದೇ ವೇದಗಳ ನಿತ್ಯ ಸಂದೇಶ. ಹಿಂದೂ ಧರ್ಮದಲ್ಲಿ ವೇದಗಳ ನಂತರ ಹಲವು ಧಾರ್ಮಿಕ ಗ್ರಂಥಗಳು ಬಂದಿದ್ದರೂ, ವೇದದ ಆಧ್ಯಾತ್ಮಿಕ ಸಂದೇಶ ಇಂದಿನ ಮತ್ತು ಭವಿಷ್ಯದ ಮಾನವತೆಗೆ ಅನಿವಾರ್ಯ ಎಂಬುದು ನಮ್ಮ ದೃಢ ವಿಶ್ವಾಸ, ಶ್ರದ್ಧೆ.
ನಮ್ಮ ಸಂಸ್ಥೆ ಶ್ರೀ ಅರೋಬಿಂದೊ ಮತ್ತು ಶ್ರೀ ಟಿ.ವಿ. ಕಪಾಲಿಶಾಸ್ತ್ರಿಯವರ ವೇದ ಚಿಂತನೆಯನ್ನು ಆಧರಿಸಿದೆ. ವೇದವೇ ಹೇಳುವ ಅದರ ಅಂತರಾರ್ಥಕ್ಕೆ ಮಹತ್ವ ನೀಡಿ ವೇದ ಸಾಹಿತ್ಯದ ಪ್ರಕಟಣೆ ಮತ್ತು ಪ್ರಸಾರ ನಡೆಸಲಾಗುತ್ತಿದೆ.
ಋಗ್ವೇದ
ಋಗ್ವೇದದ ಹತ್ತೂ ಮಂಡಲಗಳಲ್ಲಿನ ಎಲ್ಲ ಸೂಕ್ತಗಳನ್ನು ಹೊಂದಿದ ¾ಋಗ್ವೇದ ಮಂತ್ರ ಸಂಹಿತಾ ನಮ್ಮ ಮೊದಲ ಪ್ರಕಟಣೆ ಆಗಿದೆ. ಡಾ. ಆರ್.ಎಲ್. ಕಶ್ಯಪ ಅವರು ಸಂಪಾದಿಸಿದ್ದಾರೆ. ದೇವನಾಗರಿ ಲಿಪಿಯಲ್ಲಿದೆ. ಸಂಪೂರ್ಣವಾಗಿ ದೋಷಮುಕ್ತ ಆಗಿಸಲು ವಿಶೇಷ ಪ್ರಯತ್ನ ಮಾಡಲಾಗಿದೆ. ಇದು ಖಿಲ ಸೂಕ್ತವನ್ನೂ ಒಳಗೊಂಡಿದೆ. ವಿಶೇಷ ಉದ್ದೇಶಗಳಿಗಾಗಿ ಬಳಸಲಾಗುವ ಮಂತ್ರಗಳ ಪಟ್ಟಿಯನ್ನು ಆರಂಭದಲ್ಲಿ ನೀಡಲಾಗಿದೆ. ಅನುಬಂಧದಲ್ಲಿ 108 ಮಂತ್ರಗಳಿಗೆ ಆಧ್ಯಾತ್ಮಿಕ ಅರ್ಥ ನೀಡಲಾಗಿದೆ. ಸಾವಿರಾರು ವರ್ಷಗಳ ಹಿಂದಿನ ಋಷಿಗಳ ದರ್ಶನ ಇಂದಿನ ಜೀವನಕ್ಕೆ ಹೇಗೆ ಅನ್ವಯವಾಗುತ್ತದೆ ಎಂಬುದರ ಕಡೆಗೆ ವಿಶೇಷ ಒತ್ತು ನೀಡಿ ವಿವರಣೆ ಬರೆಯಲಾಗಿದೆ. ಈ ಭಾಗ ಇದೀಗ ಕನ್ನಡದಲ್ಲೂ ಅನುವಾದಗೊಂಡು, ‘ಮಂತ್ರಮಣಿ’ ಶೀರ್ಷಿಕೆಯಡಿ ಪ್ರಕಟವಾಗಿದೆ.
ಡಾ. ಕಶ್ಯಪ ಅವರು ಕಪಾಲಿಶಾಸ್ತ್ರಿಗಳು ಸಂಸ್ಕೃತದಲ್ಲಿ ರಚಿಸಿರುವ ¾ಸಿದ್ಧಾಂಜನ ಭಾಷ್ಯ ಆಧರಿಸಿ ಋಗ್ವೇದ ಸಂಹಿತೆಯ 121 ಸೂಕ್ತಗಳಿಗೆ ಆಧ್ಯಾತ್ಮಿಕ ವ್ಯಾಖ್ಯಾನವನ್ನು ಇಂಗ್ಲಿಷ್‌ನಲ್ಲಿ ರಚಿಸಿದ್ದಾರೆ. ಮೊದಲನೆಯ ಸಂಪುಟ ಅಗ್ನಿಗೆ ಸಮರ್ಪಿಸಲಾದ ಎಲ್ಲ ಸೂಕ್ತಗಳ ಅನುವಾದ ಹೊಂದಿತ್ತು; ಎರಡನೆಯ ಸಂಪುಟ ಇಂದ್ರನಿಗೆ ಸಮರ್ಪಿಸಲಾದ ಸೂಕ್ತಗಳ ಅನುವಾದ ಹೊಂದಿತ್ತು.
ಮೇ 2001ರಲ್ಲಿ ಉಳಿದ ಎಲ್ಲ ಸೂಕ್ತಗಳ (ಮೊದಲ 121 ಸೂಕ್ತಗಳ ಪೈಕಿ) ಅನುವಾದವನ್ನು ಪ್ರಕಟಿಸಲಾಯಿತು. ಓದುಗರ ಪ್ರತಿಕ್ರಿಯೆ ತೃಪ್ತಿಕರವಾಗಿತ್ತು; ಪ್ರಕಟಣೆಯ ಎರಡು ವರ್ಷಗಳಲ್ಲೆ ಒಂದು ಸಾವಿರ ಪ್ರತಿಗಳು ಮಾರಾಟವಾದವು. ಈ ಪ್ರತಿಗಳು ಮುಗಿದ ನಂತರ ಇದೀಗ ‘Secrets of Rig Veda’ ಶೀರ್ಷಿಕೆಯಡಿ ಒಂದೇ ಸಂಪುಟದಲ್ಲಿ ಪುಸ್ತಕವನ್ನು ಲಭ್ಯಗೊಳಿಸಲಾಗಿದೆ.
ಸಂತೋಷದ ಸುದ್ದಿ ಏನೆಂದರೆ, 10552 ಮಂತ್ರಗಳುಳ್ಳ ಎಲ್ಲ 10 ಮಂಡಲಗಳ ಇಂಗ್ಲಿಷ್ ಅನುವಾದ ಕಾರ್ಯ ಈಗ ಪೂರ್ಣಗೊಂಡಿದೆ (ಏಪ್ರಿಲ್ 2009). ಋಗ್ವೇದ ಸಂಹಿತೆಯ ಪ್ರತಿಯೊಂದು ಮಂಡಲವನ್ನೂ ಒಂದು ಪ್ರತ್ಯೇಕ ಸಂಪುಟವಾಗಿ ಪ್ರಕಟಿಸಲಾಗಿದೆ. 1ನೇ ಮಂಡಲ 3 ಸಂಪುಟಗಳಲ್ಲಿದೆ. ಒಟ್ಟು ಸಂಪುಟಗಳ ಸಂಖ್ಯೆ 12. ಹನ್ನೆರಡೂ ಸಂಪುಟಗಳ ಕನ್ನಡ ಅನುವಾದ ಪ್ರಕಟಗೊಂಡಿವೆ. ಈ ಎಲ್ಲ 12 ಸಂಪುಟಗಳ callh ಅವೃತ್ತಿಯನ್ನು 2018ರಲ್ಲಿ ಸಿದ್ಧಪಡಿಸಿದ್ದೇವೆ.
ಅನುವಾದದ ಭಾಷೆಗಳ ಬಗ್ಗೆ ಹೇಳುವುದಾದರೆ, ಇಂಗ್ಲಿಷ್ ಭಾಷೆಯನ್ನು ಮೊದಲು ಆಯ್ಕೆ ಮಾಡಿಕೊಳ್ಳಲಾಯಿತು; ಏಕೆಂದರೆ ಇಂಗ್ಲಿಷ್‌ನಿಂದ ಕನ್ನಡ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸುವುದು ಸುಲಭ. ಅನುವಾದಿಸಿದ ಪುಸ್ತಕವನ್ನು ನಾನಾ ವರ್ಗದ ಓದುಗರಿಗೆ – ಸಂಸ್ಕೃತ ಭಾಷೆಯ ಪರಿಚಯವಿಲ್ಲದವರಿಂದ ಮೊದಲ್ಗೊಂಡು, ಮಂತ್ರಗಳಲ್ಲಿರುವ ಸಂಸ್ಕೃತ ಪದಗಳ ಅರ್ಥಗಳನ್ನು ಅರಿಯಲು ಬಯಸುವವರಿಗೆ – ಉಪಯುಕ್ತವಾಗುವಂತೆ ರೂಪುಗೊಳಿಸಲಾಯಿತು.
2000ನೆ ಇಸ್ವಿಯಲ್ಲಿ ಡಾ. ಕಶ್ಯಪ ಅವರು ಬರೆದ ‘Why Read Rig Veda’ (ಋಗ್ವೇದವನ್ನು ಯಾಕೆ ಓದಬೇಕು) ಇಂದು ಅಪಾರ ಗಮನ ಸೆಳೆದಿದೆ. ಈ ಪುಸ್ತಕವು ಕನ್ನಡ, ತೆಲುಗು, ಮರಾಠಿ ಹಾಗೂ ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಒಟ್ಟಾಗಿ 15,000ಕ್ಕೂ ಹೆಚ್ಚು ಪ್ರತಿಗಳು ಪ್ರಸಾರ ಆಗಿವೆ.
ಜೀವನದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಲು ಋಷಿಗಳು ತೋರಿದ ದಿವ್ಯ ಮಾರ್ಗದ ಪರಿಚಯ ಈ ಪುಸ್ತಕದಲ್ಲಿದೆ. ಅಂತೆಯೇ ಕಾಲಾಂತರದಲ್ಲಿ ವೇದ ಜ್ಞಾನಕ್ಕೆ ಸಂಬಂಧಿಸಿದಂತೆ ನುಸುಳಿದ ಆಭಾಸಗಳು ಮತ್ತು ಅವುಗಳಿಗೆ ಸಮಾಧಾನ ಕುರಿತೂ ಪುಸ್ತಕ ಚರ್ಚಿಸುತ್ತದೆ. ಡಾ. ಕಶ್ಯಪ ಅವರು ರಚಿಸಿದ ‘Semantics of Rig Veda’, ‘Hymns on Creation and Death’ ಶ್ರೀ ಕಪಾಲೀಶಾಸ್ತ್ರಿಯವರ ‘New Light on Veda’ ಮುಂತಾದ ಮಧ್ಯಮ ಗಾತ್ರದ ಪುಸ್ತಕಗಳು ವೇದಾಧ್ಯಯನಕ್ಕೆ ದಿಕ್ಸೂಚಿಯಂತಿವೆ. ವೇದದ ಅಂತರಾರ್ಥ ತಿಳಿದುಕೊಳ್ಳಲು ಬಯಸುವ ಎಲ್ಲರ ಅಗತ್ಯಗಳನ್ನು ಪೂರೈಸುತ್ತಲಿವೆ.
ಯಜುರ್‌ವೇದ
ಋಗ್‌ವೇದ, ಯಜುರ್‌ವೇದ ವಿಭಿನ್ನ. ಅವುಗಳ ಪ್ರಯೋಜನ, ಅನ್ವಯ ವಿಭಿನ್ನ ಎಂಬ ಭಾವನೆ ವ್ಯಾಪಕವಾಗಿ ಮೂಡಿದೆ. ಯಜ್ಞ ಎಂದರೆ ಅಂತರ್‌ಯಜ್ಞ. ಬಾಹ್ಯ ಯಜ್ಞ ಕೇವಲ ಸಾಂಕೇತಿಕ. ಇದನ್ನು ಯಜುರ್‌ವೇದವೂ ಸಾರುತ್ತದೆ. ಯಜುರ್‌ವೇದದಲ್ಲಿ ಅಪಾರ ಋಕ್‌ಗಳಿವೆ. ಅನೇಕವು ಋಗ್ವೇದದಿಂದ ಪುನರಾವರ್ತನಗೊಂಡಿವೆ. ಹೀಗಾಗಿ ಇವೆರಡೂ ಒಂದಕ್ಕೊದು ಪೂರಕ ಆಗಿವೆಯೇ ಹೊರತು ವಿಭಿನ್ನತೆ, ವೈರುಧ್ಯತೆ ಹೊಂದಿಲ್ಲ ಎಂಬುದನ್ನು ಡಾ. ಕಶ್ಯಪ ಅವರು ಯಜುರ್‌ವೇದದ ಎಲ್ಲ ಏಳೂ ಕಾಂಡಗಳಲ್ಲಿನ ಮಂತ್ರಗಳಿಗೆ ವ್ಯಾಖ್ಯಾನ ಬರೆಯುವ ಮೂಲಕ ತೋರಿಸಿಕೊಟ್ಟಿದ್ದಾರೆ.
ಕೃಷ್ಣ ಯಜುರ್‌ವೇದದ ಇಡೀ ಪಾಠವನ್ನು ದೇವನಾಗರಿ ಹಾಗೂ ರೋಮನ್ ಲಿಪಿಯಲ್ಲಿ ನೀಡಿರುವುದು, ಅದರ ಪ್ರತಿಯೊಂದು ಪದಸಮೂಹದ ಅರ್ಥವನ್ನು ವಿವರಿಸಿರುವುದು, ಅಗತ್ಯ ಇದ್ದೆಡೆ ಟಿಪ್ಪಣಿ ನೀಡಿರುವುದು ಪುಸ್ತಕದ ವಿಶೇಷತೆ ಆಗಿದೆ. ಮಾನವನ ಅಂತಃಸತ್ವವನ್ನು ಜಾಗೃತಗೊಳಿಸಲು, ವರ್ಧನಗೊಳಿಸಲು ಒಂದೊಂದು ಮಂತ್ರವೂ ಹೇಗೆ ಸಹಕಾರಿ ಎಂಬುದನ್ನು ತೋರಿಸಿರುವುದು ವೇದ ಭಾಷ್ಯದ ಇತಿಹಾಸದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ಈ ಕೃತಿಯು ಮೂರು ಸಂಪುಟಗಳಲ್ಲಿ (2002-2004) ಪ್ರಕಟವಾಗಿತ್ತು. ಇದೀಗ ಪರಿಷ್ಕೃತ ಆವೃತ್ತಿ ನಾಲ್ಕು ಸಂಪುಟಗಳಲ್ಲಿ ಲಭ್ಯ ಇದೆ.
ಈ ಕೃತಿಯ ಮಹತ್ವದ ಬಗ್ಗೆ ತಿಳಿಸುವುದಕ್ಕಾಗಿ, ಮಹಾನ್ ವೇದ ವಿದ್ವಾಂಸರಾದ ಪ್ರೊ. ಸಾ.ಕೃ. ರಾಮಚಂದ್ರರಾವ್ ಅವರ ಮುನ್ನುಡಿಯಿಂದ ಆಯ್ದ ಒಂದು ಸಣ್ಣ ಭಾಗವನ್ನು ಇಲ್ಲಿ ನೀಡುವೆವು.
ಕೃಷ್ಣ ಯಜುರ್‌ವೇದಕ್ಕೆ ಸೇರಿದ ತೈತ್ತಿರೀಯ ಸಂಹಿತೆಯ ಒಂದು ಆಧ್ಯಾತ್ಮಿಕ ಮತ್ತು ನಿಗೂಢ ಅರ್ಥವಿವರಣೆಯನ್ನು ಡಾ. ಕಶ್ಯಪ ಅವರು ಇಂಗ್ಲಿಷ್‌ನಲ್ಲಿ ಪ್ರಕಟಿಸಿದ್ದಾರೆ. ಇದೊಂದು ವಸ್ತುನಿಷ್ಠವಾದ, ಪ್ರವರ್ತಕವಾದ ಮತ್ತು ಮಹತ್ವಪೂರ್ಣವಾದ ಕಾರ್ಯ. ಸಾಂಪ್ರದಾಯಿಕ ಕಟ್ಟಳೆಗಳಿಗೆ ನಿಗೂಢ ಅರ್ಥಗಳನ್ನು ಕೊಡುವುದು ಬಹಳ ಕಷ್ಟಕರ. ಡಾ. ಕಶ್ಯಪ ಅವರು ಈ ಕಠಿಣ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ನಮಗೆ ಸಂತಸವೆನಿಸಿದೆ. ಯಜ್ಞದ ಬಾಹ್ಯ ಕ್ರಿಯಾಚರಣೆಗಳ ಬಗ್ಗೆ ವಿವರಿಸಿದ ನಂತರ ಅವರು ಅಂತರ್ ಯಜ್ಞದ ಬಗ್ಗೆ ಸಂಹಿತೆಗಳು ನಿಜವಾಗಿಯೂ ಏನನ್ನು ಧ್ವನಿಸುತ್ತವೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಸಾಹಸಮಯವಾದ ಅವರ ಪ್ರಯತ್ನ ನಾವೀನ್ಯತೆಯಿಂದಲೂ ಕೂಡಿದೆ ಎಂದು ಹೇಳಬಹುದು.
ಈ ರೀತಿಯಲ್ಲಿ 2009ರಲ್ಲಿ, ಹತ್ತು ಮಂಡಲಗಳನ್ನು ಒಳಗೊಂಡ ಇಡೀ ಋಗ್ವೇದ ಸಂಹಿತೆ; ಮತ್ತು ಏಳು ಕಾಂಡಗಳನ್ನು ಹೊಂದಿದ ಇಡೀ ಯಜುರ್‌ವೇದ ತೈತ್ತಿರೀಯ ಸಂಹಿತೆ ಇಂಗ್ಲಿಷಿಗೆ ಅನುವಾದಗೊಂಡಿವೆ. ಯಜುರ್‌ವೇದದ ಇಡೀ ಮೊದಲ ಕಾಂಡವನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಈ ಕೃತಿಗೆ ಉತ್ತಮ ವಿಮರ್ಶೆ ವ್ಯಕ್ತವಾಗಿದೆ. ಅಂತೆಯೇ ಪ್ರಸಿದ್ಧವಾದ ರುದ್ರ ಪ್ರಾರ್ಥನಮಾಲೆಯನ್ನೊಳಗೊಂಡ ಯಜುರ್‌ವೇದದ 4ನೇ ಕಾಂಡದ ಕನ್ನಡ ಅನುವಾದವೂ ಪ್ರಕಟಗೊಂಡಿದೆ. ಕೇವಲ ‘ರುದ್ರ ಪ್ರಾರ್ಥನ ಮಾಲೆ’ಯನ್ನು ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ ಭಾಷೆಗೆ ಸಹ ಅನುವಾದ ಮಾಡಲಾಗಿದೆ.
ನಿತ್ಯಜೀವನದಲ್ಲಿ ಉಪಯುಕ್ತವಾಗುವ, ಋಗ್ವೇದದಲ್ಲಿ ಅಡಗಿರುವ ಜ್ಞಾನ ಮತ್ತು ಅದರ ಉಪಯುಕ್ತತೆಯನ್ನು ವಿವರಿಸುವ ಸಣ್ಣ ಪುಸ್ತಕಗಳನ್ನು ಪ್ರಕಟಿಸುವ ಕಾರ್ಯವನ್ನು ನಾವು ಮುಂದುವರಿಸುತ್ತೇವೆ. ನಾವು ಈಗಾಗಲೇ ಸುಮಾರು 50 ಪುಸ್ತಕಗಳನ್ನು ಇಂಗ್ಲೀಷ್‌ನಲ್ಲಿ ಪ್ರಕಟಿಸಿದ್ದೇವೆ; ಅದರ ಪೈಕಿ 40 ಪುಸ್ತಕಗಳು ಕನ್ನಡಕ್ಕೆ ಅನುವಾದಗೊಂಡಿವ; ಸುಮಾರು ಹತ್ತು ಪುಸ್ತಕಗಳು ಹಿಂದಿ, ಮರಾಠಿ, ತೆಲುಗು, ತಮಿಳು ಇತ್ಯಾದಿ ಭಾಷೆಗಳಿಗೆ ಅನುವಾದಗೊಂಡಿವೆ. ನಾಲ್ಕು ಪುಸ್ತಕಗಳ ಶ್ರೇಣಿ – ಋಗ್ವೇದದ ಅಂತರಂಗ, ಸಾಮವೇದದ ಅಂತರಂಗ, ಯಜುರ್‌ವೇದದ ಅಂತರಂಗ ಮತ್ತು ಅಥರ್ವವೇದದ ಅಂತರಂಗ ಇಂಗ್ಲಿಷ್, ಕನ್ನಡ, ತೆಲುಗು, ತಮಿಳು, ಮಲಯಾಳ ಭಾಷೆಗಳಲ್ಲೂ ಲಭ್ಯ ಇವೆ.
ಸಾಮ ವೇದ
‘ಸಾಮವೇದ ಸಂಹಿತೆ’ಯಲ್ಲಿ ಬಹಳಷ್ಟು ಮಟ್ಟಿಗೆ ಋಗ್ವೇದ ಸಂಹಿತೆಯಿಂದ ಆಯ್ದ ಋಕ್ ಮಂತ್ರಗಳ ಪಾಠಾಂತರಗಳಿವೆ. ಸಾಮವೇದವು ಪೂರ್ವಾರ್ಚಿಕ, ಉತ್ತರಾರ್ಚಿಕ ಎಂಬ ಎರಡು ಪ್ರಮುಖ ಭಾಗಗಳಲ್ಲಿದೆ. ಸಾಮವೇದದ ಎಲ್ಲ ಮಂತ್ರಗಳಿಗೂ ಭಾಷ್ಯವನ್ನು ಡಾ. ಕಶ್ಯಪ ಅವರು ಬರೆದಿದ್ದು 650 ಮಂತ್ರಗಳ ಪೂರ್ವಾರ್ಚಿಕ 2007ರಲ್ಲಿ ಪ್ರಕಟಗೊಂಡಿದೆ. 1250 ಮಂತ್ರಗಳಿರುವ ಉತ್ತರಾರ್ಚಿಕವು 2011ರಲ್ಲಿ ಪ್ರಕಟಗೊಂಡಿದೆ. ಸಾಮವೇದದ ವಿಶೇಷತೆ ಇತ್ಯಾದಿ ಕುರಿತಂತೆ ಪುಸ್ತಕದಲ್ಲಿರುವ ಪ್ರಬಂಧಗಳು ಅನೇಕರ ಆಸಕ್ತಿಯನ್ನು ತಣಿಸಿವೆ.
ಅಥರ್ವ ವೇದ
ಬಹಳಷ್ಟು ಋಕ್ ಮಂತ್ರಗಳಿರುವ, ಸುಮಾರು 5000 ಮಂತ್ರಗಳುಳ್ಳ ಅಥರ್ವ ವೇದವನ್ನು ನಾವು ಮರೆತಿಲ್ಲ. ಅಥರ್ವ ವೇದವು ಭೂ ಸೂಕ್ತವನ್ನೊಳಗೊಂಡಿದೆ ಎಂಬುದನ್ನು ನೀವು ಸ್ಮರಿಸಿಕೊಳ್ಳಬಹುದು. ಭೂ ಸೂಕ್ತವು ಪರಿಸರವಿಜ್ಞಾನದ ಬಗ್ಗೆ ಮಾನವನಿಗಿರುವ ಆಸಕ್ತಿಯ ಬಗ್ಗೆ ಅದ್ಯ ದಾಖಲೆ ಆಗಿದೆ. 56 ಮಂತ್ರಗಳಿರುವ ಈ ಸೂಕ್ತವನ್ನು ಇಂಗ್ಲಿಷ್ ಮತ್ತು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಲಾಗಿದೆ. ಅಥರ್ವ ವೇದದಲ್ಲಿ 20 ಕಾಂಡಗಳಿವೆ. ಇವುಗಳನ್ನು ಅರು ಸಂಪುಟಗಳಲ್ಲಿ ಪ್ರಕಟಿಸಿದ್ದೇವೆ. ಇಂಗ್ಲಿಷ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಲಬಿಸುತ್ತವೆ.
ಗ್ರಂಥಾಲಯ
ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದಸಂಸ್ಕೃತಿ ಸಂಸ್ಥೆ ಸ್ವತಂತ್ರವಾದ ಗ್ರಂಥಾಲಯವನ್ನು ಹೊಂದಿದೆ. ಇಲ್ಲಿ ಮುಖ್ಯವಾಗಿ ವೇದಕ್ಕೆ ಸಂಬಂಧಿಸಿದ ವ್ಯಾಖ್ಯಾನ, ವಿವರಣೆ ಇರುವ ಗ್ರಂಥಸಂಗ್ರಹವಿದೆ. ಶ್ರೀ ಅರೋಬಿಂದೊ, ಶ್ರೀಮಾತೆ, ವಾಸಿಷ್ಠಗಣಪತಿ ಮುನಿ, ರಮಣಮಹರ್ಷಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಟಿ.ವಿ. ಕಪಾಲಿಶಾಸ್ತ್ರಿ, ಎಂ.ಪಿ. ಪಂಡಿತ್ ಮೊದಲಾದವರ ಕೃತಿಗಳಿವೆ. ಶ್ರೀ ಅರೋಬಿಂದೊ ವಿಚಾರಧಾರೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಅನುವಾಗುವ ಸಂಶೋಧನಾ ಪತ್ರಿಕೆಗಳಿವೆ. ಅಧ್ಯಾತ್ಮದಲ್ಲಿ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ ಇರುವವರು ಸ್ಥಳದಲ್ಲೇ ಈ ಕೃತಿಗಳನ್ನು ಬಳಸಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ.
ವೇದ ಜ್ಞಾನ ಕಾರ್ಯಾಗಾರಗಳು
ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ಸಮಾಜದ ವಿವಿಧ ವೃತ್ತಿಗಳಲ್ಲಿ ಇರುವವರಿಗೆ ವೇದ ಜ್ಞಾನ ಪಡೆದು ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಪರಿಪೂರ್ಣಗೊಳಿಸಿಕೊಳ್ಳಲು ಬಯಸುವ ಎಲ್ಲರಿಗೂ ವೇದಜ್ಞಾನ ಅನ್ವಯವನ್ನು ತಿಳಿಸಿಕೊಡುವುದಕ್ಕಾಗಿ ನಮ್ಮ ಸಂಸ್ಥೆಯು ವೇದ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ. ವಿವಿಧ ಸಂಘ-ಸಂಸ್ಥೆಗಳ ಆಮಂತ್ರಣದ ಮೇರೆಗೆ ಒಂದು ದಿನ, ಅರ್ಧ ದಿನ ಅಥವಾ ಎರಡು ದಿನಗಳ ಕಾರ್ಯಾಗಾರ ರೂಪಿಸಲಾಗಿದೆ.
ಆರಂಭದಲ್ಲಿ ವೇದಗಳು ಹಾಗೂ ಆಧುನಿಕ ಕಾಲ ಕುರಿತು ಒಂದು ಮೇಲ್ನೋಟ ನೀಡುತ್ತೇವೆ. ತದನಂತರ ನಿತ್ಯಜೀವನಕ್ಕೆ ಅನ್ವಯವಾಗುವಂಥ ವೇದ ಜ್ಞಾನವನ್ನು ಮುಂದಿಡುತ್ತೇವೆ.
ವೇದ ವಾಹಿನಿ
ವೇದ ಶಿಕ್ಷಣ ಹಾಗೂ ಪ್ರಸಾರದ ಸಂಚಾರೀ ಘಟಕ. ಈ ವಾಹನವು ರಾಜ್ಯದ ವಿವಿಧ ಸ್ಥಾನಗಳಲ್ಲಿ ಸಂಚಾರ ಮಾಡುತ್ತ ವೇದ ಜ್ಞಾನ ಕುರಿತು ಜಾಗೃತಿ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ. ಸಂಘ-ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಆಮಂತ್ರಿಸಿದರೆ ಅಂಥಲ್ಲಿ ವಾಹನ ಕಳಿಸಿಕೊಡಲಾಗುವುದು.
2009ರಲ್ಲಿ ವೇದ ಪ್ರಸಾರಕ್ಕಾಗಿ ಇನ್ನೊಂದು ವಾಹನ ಜೋಡಿಸಲಾಗಿದೆ. ವೇದ ಜ್ಞಾನ ಕುರಿತ ಪ್ರಕಟಣೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯದೆಡೆ ಈ ವಾಹನ ವಿಶೇಷ ಗಮನ ನೀಡುತ್ತದೆ. ಪುಸ್ತಕಗಳನ್ನು ತರಿಸಿಕೊಳ್ಳಲು ಬಯಸುವವರು 9008833886ಗೆ ದೂರವಾಣಿ ಮಾಡಬಹುದು.
ವೇದ ಬಾಗಿನ
ಇದೊಂದು ವೇದ ಜ್ಞಾನ ಪ್ರಸಾರದ ವಿನೂತನ ಯೋಜನೆ. ಶುಭ ಸಮಾರಂಭಗಳಲ್ಲಿ, ಹಬ್ಬ-ಹರಿದಿನಗಳಲ್ಲಿ ಬಾಗಿನ ನೀಡುವುದು ನಮ್ಮ ಸಂಪ್ರದಾಯ. ಹಳ್ಳಿಗಳಲ್ಲಿ ಇದು ಇಂದಿಗೂ ವ್ಯಾಪಕವಾಗಿ ರೂಢಿಯಲ್ಲಿದೆ. ಇದನ್ನೇ ನಗರ ಪ್ರದೇಶಗಳಲ್ಲಿ ¾ಉಡುಗೊರೆ ಇತ್ಯಾದಿಯಾಗಿ ಕರೆಯುವರು.
ಬಾಗಿನ ಕೊಡುವುದರ ಹಿನ್ನೆಲೆಯಲ್ಲಿ ಮಾನವ-ಮಾನವರ ನಡುವಿನ ಸೌಹಾರ್ದತೆ, ಪ್ರೀತಿ, ವಿಶ್ವಾಸ, ಕಾಳಜಿ ಹಾಗೂ ಸಮಾಜದೊಳಗಿನ ಸಾಮರಸ್ಯ ಅಡಗಿವೆ. ನಮ್ಮ ಬಂಧು-ಬಾಂಧವರನ್ನು ಆದರಿಸುವ, ಸತ್ಕರಿಸುವ, ಗೌರವಿಸುವ ಅಂಶವೂ ಅಡಗಿದೆ.
ಈ ಎಲ್ಲ ಸಂಗತಿಗಳನ್ನೂ ಒಳಗೊಂಡದ್ದು ‘ವೇದ ಬಾಗಿನ’. ಇದೀಗ ಸಾಕ್ಷಿ ಈ ಯೋಜನೆ ಹಮ್ಮಿಕೊಂಡಿದೆ. ಸುಂದರವಾದ, ಆಕರ್ಷಕ ಕಟ್ಟಿನಲ್ಲಿ ನಾಲ್ಕು ವೇದಗಳ ಅಂತರಂಗ ವಿವರಿಸುವ ಹಾಗೂ ವ್ಯಾಪಕವಾಗಿ ಬಳಕೆಯಲ್ಲಿರುವ ವೇದಮಂತ್ರಗಳನ್ನು ಹೊಂದಿದ ಒಟ್ಟು ಐದು ಪುಸ್ತಕಗಳನ್ನು ಪ್ರಸ್ತುತಪಡಿಸಲಾಗಿದೆ. ಅಡಿಕೆ ಹಾಳೆಯಿಂದ ರೂಪಿಸಿದ ಎರಡು ತಟ್ಟೆಗಳ ನಡುವೆ ಪುಸ್ತಕ ಇರುತ್ತದೆ.ತಮ್ಮ ಹಾಗೂ ತಮ್ಮ ಮಕ್ಕಳ ಹುಟ್ಟುಹಬ್ಬ, ವಿವಾಹ ದಿನ ಹಾಗೂ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಹಬ್ಬದ ದಿನಗಳಂದು ಬಾಗಿನವಾಗಿ ನೀಡಲು ಇದನ್ನು ನಮ್ಮಿಂದ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಈ ಯೋಜನೆಯ ಪ್ರಯೋಜನವನ್ನು ಅನೇಕರು ಪಡೆದು ವೇದ ಪ್ರಸಾರದ ಕಾರ್ಯಕ್ಕೆ ನೆರವಾಗುತ್ತಿದ್ದಾರೆ.
ಅರೋ ವೇದ
ಮಾನವ ಹಾಗೂ ಪ್ರಕೃತಿ ನಡುವಿನ ಸಾಮರಸ್ಯ ಕುರಿತು ಅಧ್ಯಯನ, ಪ್ರಯೋಗ ನಡೆಸುತ್ತಿರುವ ಕೇಂದ್ರ. ಬೆಂಗಳೂರು-ಕನಕಪುರ ಹೆದ್ದಾರಿಯಲ್ಲಿರುವ ಏಡಮಡು ಗ್ರಾಮದಲ್ಲಿದೆ. ಈ ಕೇಂದ್ರದ ವ್ಯಾಪಿತಿ ಹತ್ತು ಎಕರೆ ಇದೆ. ಎರಡು ಎಕರೆಗಳಷ್ಟು ಪ್ರದೇಶದಲ್ಲಿ ಬೃಹತ್ ಪಂಚವಟಿ ಇದೆ. ಆಲ, ಅರಳಿ, ನೆಲ್ಲಿ, ಬಿಲ್ವಪತ್ರೆ, ಸೀತೆ-ಅಶೋಕ ಮರಗಳನ್ನು ಶಾಸ್ತ್ರಿಯ ರೀತಿಯಲ್ಲಿ ನಡಲಾಗಿದೆ. ಈ ಎಲ್ಲ ಮರಗಳನ್ನು ನಿರ್ದಿಷ್ಟ ರೀತಿಯಲ್ಲಿ ಸುತ್ತು ಹಾಕಿದರೆ ಶರೀರ ಹಾಗೂ ಮನಸ್ಸುಗಳು ಸಚೇತನಗೊಳ್ಳುವವು.
ಸಹಜ ಹಾಗೂ ಕಡಿಮೆ ಬಂಡವಾಳದ ನೈಸರ್ಗಿಕ ಕೃಷಿ, ಮಳೆ ನೀರು ಕೊಯ್ಲು, ದೇಶೀ ಹಸುಗಳ ಪಾಲನೆ, ಅಭಿವೃದ್ಧಿ, ಸೌರಶಕ್ತಿ ಬಳಕೆ ಮುಂತಾದ ಚಟುವಟಿಕೆಗಳು ಈಗಾಗಲೇ ಇಲ್ಲಿ ನಡೆಯುತ್ತಿವೆ.
2003ರಲ್ಲಿ ನಾವು ಚಟುವಟಿಕೆ ಆರಂಭಿಸಿದಾಗ ಈ ಪ್ರದೇಶದಲ್ಲಿ ಒಂದು ಹುಲ್ಲು ಕಡ್ಡಿಯೂ ಇರಲಿಲ್ಲ. ಇದೀಗ ನೂರಾರು ಬಗೆಯ ಸಾವಿರಾರು ಗಿಡ, ಮರ, ಬಳ್ಳಿಗಳು ಬೆಳೆದು ಇಡೀ ವಾತಾವರಣವನ್ನು ಹಸಿರುಮಯಗೊಳಿಸಿವೆ. ಗ್ರಾಮದ ದನ-ಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಗ್ರಾಮದಲ್ಲಿನ ಸರ್ಕಾರೀ ಶಾಲೆಯ ಮಕ್ಕಳಿಗೆ ಅನುಕೂಲ ಆಗುವಂತೆ ಕೊಠಡಿಯೊಂದನ್ನು ಕಟ್ಟಿಸಿಕೊಟ್ಟಿದ್ದು, ಪ್ರತಿವರ್ಷ ಅವರಿಗೆಲ್ಲ ಅಗತ್ಯವಾದ ಲೇಖನ, ಆಟದ ಸಾಮಗ್ರಿ ಒದಗಿಸುತ್ತಿದ್ದೇವೆ. ಕುಳಿತುಕೊಳ್ಳಲು ಡೆಸ್ಕ್ ಕೂಡ ಮಾಡಿಸಿಕೊಟ್ಟಿದ್ದೇವೆ.ಇಲ್ಲಿ ಸಭಾಂಗಣ, ಪಾಕಶಾಲೆ, ಭೋಜನ ಶಾಲೆ, ಬಯಲು ತರಗತಿ, ವಸತಿ ವ್ಯವಸ್ಥೆ ಇತ್ಯಾದಿಗಳನ್ನು ನಿರ್ಮಿಸಲಅಗಿದೆ. ವೇದ ಕಾರ್ಯಾಗಾರಗಳು ಅಗಾಗ ನಡೆಯುತ್ತ ಇರುತ್ತದೆ.
ವ್ಯಕ್ತಿತ್ವದ ಯಾವುದೇ ಅಂಶವಿರಲಿ (ದೈಹಿಕ, ಮಾನಸಿಕ, ಆಧ್ಯಾತ್ಮಿಕ…) ಅದು ನಗಣ್ಯವಲ್ಲ. ಎಲ್ಲವನ್ನೂ ಸೃಜನಶೀಲವಾಗಿ ಬಳಸಿಕೊಂಡು, ಬೆಳೆಸಿಕೊಂಡು ಅನಂದಮಯವಾದ ಮತ್ತು ಅರ್ಥಪೂರ್ಣವಾದ ಬದುಕನ್ನು ಎಲ್ಲರೂ ಬದುಕಬೇಕು ಎಂಬುದೇ ನಮ್ಮ ಮುಖ್ಯ ಗುರಿ. ವೇದದ ಮತ್ತು ಶ್ರೀ ಅರೋಬಿಂದೊ ಅವರ ತತ್ವವೂ ಸಹ ಇದೇ ಆಗಿದೆ.
ವೇದದ ಅಪಾರ ವಾಙ್ಮಯ ರಾಶಿಯತ್ತ ಗಮನಹರಿಸುವುದು ಇಂದಿನ ಅಗತ್ಯವಾಗಿದೆ. ವೇದದ ನಿಜವಾದ ಅರ್ಥವು ಹೆಚ್ಚು ಬೆಳಕಿಗೆ ಬಂದಂತೆಲ್ಲಾ ಭಾರತೀಯ ಸಂಸ್ಕೃತಿಯ ನಿಜವಾದ ಪ್ರತಿಭೆ ಪ್ರಕಾಶಮಾನವಾಗುತ್ತದೆ. ಅದರಿಂದ ಕೇವಲ ಮನುಕುಲಕ್ಕೆ ಮಾತ್ರವಲ್ಲ ಇಡೀ ಪರಿಸರಕ್ಕೆ, ಸಚರಾಚರ ಜೀವಿಗಳಿಗೆ ಒಳಿತಾಗುತ್ತದೆ ಎಂಬುದು ನಮ್ಮ ದೃಢಶ್ರದ್ಧೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post