ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ್ ಪರಿಕಲ್ಪನೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸಿನಂತೆ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಗ್ರಾಮೀಣ ಭಾಗಗಳಲ್ಲಿ ಯುವಕರಿಗೆ ಉದ್ಯೋಗ ನೀಡುವುದೇ ನಮ್ಮ ಮುಂದಿನ ಗುರಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ನೂತನ ಉಪಾಧ್ಯಕ್ಷ ಎಸ್. ದತ್ತಾತ್ರಿ ಹೇಳಿದ್ದಾರೆ.
ನಿಗಮದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಗ್ರಾಮೀಣ ಭಾಗಗಳಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಅರ್ಹತೆ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ವಿಶೇಷ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.
ಕಳೆದ ಆರು ತಿಂಗಳಿನಿಂದ ಕೋವಿಡ್ ಬಂದ ಹಿನ್ನೆಲೆ ನಿಗಮದಲ್ಲಿ ಹೆಚ್ಚು ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿಲ್ಲ. ಇದೀಗ ಪುನಃ ಆರ್ಥಿಕ ಚಟುವಟಿಕೆಗಳು ಉತ್ತೇಜನಗೊಂಡಿರುವುದರಿಂದ ಕೆಲವೇ ದಿನಗಳಲ್ಲಿ ನಿಗಮವು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಗ್ರಾಮಗಳ ಅಭಿವೃದ್ದಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿದರೆ ಅಭಿವೃದ್ಧಿಯಾಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಇದಕ್ಕಾಗಿಯೇ ಆತ್ಮ ನಿರ್ಭರ್ ಯೋಜನೆಯಲ್ಲಿ ಈ ಕ್ಷೇತ್ರಕ್ಕೆ ವಿಶೇಷ ಒತ್ತು ಕೊಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲಿದ್ದೇವೆ ಎಂದರು.
ಜಾಗತಿಕ ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸದೆ ಸ್ಥಳೀಯವಾಗಿ ಲಭ್ಯವಾಗಿರುವ ಸಂಪನ್ಮೂಲಗಳನ್ನೇ ಬಳಸಿಕೊಳ್ಳುವ ಮೂಲಕ ಆತ್ಮ ನಿರ್ಭರ್‌ಗೆ ವಿಶೇಷ ಆದ್ಯತೆ ನೀಡಲಾಗುವುದು. ಮೇಕ್ ಇನ್ ಇಂಡಿಯಾ ಮೊದಲ ಆದ್ಯತೆ ಎಂದರು.
ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ನಿಗಮವು ಎರಡು ಕೋಟಿ ಜಾಮೀನು ರಹಿತ ಸಾಲವನ್ನು ನೀಡುತ್ತದೆ. ಅದೇ ರೀತಿ ಹೆಣ್ಣು ಮಕ್ಕಳಿಗೆ ನಾಲ್ಕು ಕೋಟಿ ಸಾಲ ನೀಡುವ ಮೂಲಕ ಅವರನ್ನ ಸಬಲೀಕರಣ ಮಾಡುತ್ತಿದ್ದೇವೆ. ವಿದ್ಯಾವಂತ ಯುವಕರು, ಯುವತಿಯರ ಉದ್ಯೋಗಕ್ಕೂ ಹೆಚ್ಚು ಹೆಚ್ಚು ಸಾಲಸೌಲಭ್ಯಗಳನ್ನು ನೀಡಲಾಗುವುದು. ಗ್ರಾಮೀಣ ಭಾಗಗಳಲ್ಲಿ ಯಾವೊಬ್ಬ ವ್ಯಕ್ತಿಯು ಕೆಲಸವಿಲ್ಲದೆ ಕೂರಬಾರದು. ಇದು ನಮ್ಮ ಮುಂದಿನ ಗುರಿ ಎಂದು ತಿಳಿಸಿದರು.
ನಿಗಮ ಇದುವರೆಗೆ ಹಲವಾರು ರಾಜ್ಯದಾದ್ಯಂತ ಹಲವಾರು ಕೈಗಾರಿಕಾ ವಸಾಹತುಗಳನ್ನು (ಇಂಡಸ್ಟ್ರಿಯಲ್ ಎಸ್ಟೇಟ್ಸ್) ಗಳನ್ನು ಸ್ಥಾಪಿಸಿ, ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ. ಕೈಗಾರಿಕಾ ವಸಾಹಾತುಗಳು ಅಗತ್ಯ ಮೂಲಸೌಕರ್ಯಗಳ ಜತೆಗೆ, ಕೈಗಾರಿಕಾ ಮಳಿಗೆಗಳು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸ ಬಯಸುವ ಉದ್ಯಮಿಗಳಿಗೆ ಕೈಗಾರಿಕಾ ನಿವೇಶನಗಳ ಹಂಚಿಕೆ ಮಾಡಿದೆ. ಆ ಮೂಲಕ ಸ್ವಯಂ ಉದ್ಯಮಿಗಳಾಗುವವರಿಗೆ ಅವಕಾಶ ಒದಗಿಸಿ ರಾಜ್ಯದಲ್ಲಿ ಉದ್ಯಮಶೀಲತೆ ಬೆಳೆಸುತ್ತಿದೆ ಎಂದು ವಿವರಿಸಿದರು.
ಕೈಗಾರಿಕೆಗಳ ಪ್ರೋತ್ಸಾಹಕ್ಕಾಗಿ ಇನ್ನೂ ಹೆಚ್ಚಿನ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ನಿಗಮದಿಂದಲೇ ಭೂಮಿ ಸಾಧೀನ ಪಡಿಸಿಕೊಳ್ಳಲು ಅವಕಾಶ ನೀಡುವಂತೆ ಸರಕಾರಕ್ಕೆ ಮನವಿ ಮಾಡುವ ಮೂಲಕ ದಿಟ್ಟ ಹೆಜ್ಜೆಯನ್ನೂ ಇಟ್ಟಿದೆ ಎಂದರು.
ದೊಡ್ಡ ಕೈಗಾರಿಕೆಗಳಿಗೆ ಪೂರಕವಾದ ವಸ್ತುಗಳ ತಯಾರಿಕೆಗೆ, ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಬೇಕಾದರೆ ಸಣ್ಣ ಕೈಗಾರಿಕೆಗಳು ಅವಶ್ಯಕ. ಕೈಗಾರಿಕೆಗಳ ಅಭಿವೃದ್ಧಿಗೆ ಸೂಕ್ತ ನೀತಿಗಳನ್ನು ಜಣರಿ ಮಾಡುವುದರ ಜತೆಗೆ ಅದರ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳುತ್ತಿದೆ. ಇದರಿಂದ ಸಣ್ಣ ಕೈಗಾರಿಕೆಗಳು ಉತ್ತಮ ಗುಣಮಟ್ಟದ ಉತ್ಪಾದನೆ ಮತ್ತು ಸೇವೆಯನ್ನು ವಿಸ್ತರಿಸಿಕೊಳ್ಳುತ್ತಿವೆ. ಕೈಗಾರಿಕಾ ವಸಾಹತುಗಳನ್ನು ನಿರ್ಮಿಸಿ ಅಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದೆ. ತನ್ನ ಇತಿಮಿತಿಯಲ್ಲಿ, ಭೂಮಿಯ ಲಭ್ಯತೆಯಲ್ಲಿ ಕಾರ್ಯನಿರ್ವಹಿಸಬೇಕಿದೆ. ಕೇವಲ ಸಂಖ್ಯೆ ಗಳಿಂದ ಸಾಧನೆ ವಿವರಿಸಲು ಸಾಧ್ಯವಿಲ್ಲ. ಆದ್ದರಿಂದ ಸಣ್ಣ ಕೈಗಾರಿಕೆಗಳಿಗೆ ಒಬ್ಬ ಸ್ನೇಹಿತನಾಗಿ, ತತ್ವಜಣ್ಞನಿಯಾಗಿ ಮತ್ತು ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ತಮ್ಮನ್ನು ನಿಗಮದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post