ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾಂಗ್ರೆಸ್ ಪಕ್ಷ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೋ ಅಲ್ಲೆಲ್ಲಾ ಗುಂಪುಗಾರಿಕೆ ಮತ್ತು ಆಂತರಿಕ ಜಗಳ ಸಾಮಾನ್ಯವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲಾ ಗುಂಪುಗಾರಿಕೆ ಮತ್ತು ಆಂತರಿಕ ಜಗಳ ಸಾಮಾನ್ಯವಾಗಿರುತ್ತದೆ. ಈ ಹಿಂದೆ ರಾಜಸ್ಥಾನದಲ್ಲಿ ನಡೆದ ಅಧಿಕಾರಕ್ಕಾಗಿನ ಕಚ್ಚಾಟವನ್ನು ನೆನಪಿಸಿದ ಅವರು, ಕರ್ನಾಟಕದಲ್ಲೂ ಈಗ ಅದೇ ಹಾದಿ ಮುಂದುವರೆಯುತ್ತಿದೆ ಎಂದು ಎಚ್ಚರಿಸಿದರು.
Also Read>> ಭಾಷೆ, ಆಹಾರ, ವಿಹಾರ ಸನಾತನ ಸಂಸ್ಕೃತಿಗಳ ಪ್ರತೀಕವಾಗಿರಬೇಕು | ಜುಕ್ತಿ ಹಿರೇಮಠ ಸ್ವಾಮೀಜಿ
ರಾಜ್ಯದಲ್ಲಿ ಸರ್ಕಾರದ ನಾಯಕರು ಕುರ್ಚಿ ಉಳಿಸಿಕೊಳ್ಳುವ ಮತ್ತು ಇನ್ನೊಬ್ಬರನ್ನು ಕೆಳಗಿಳಿಸುವ ಕದನದಲ್ಲಿ ಮುಳುಗಿದ್ದಾರೆ. ಈ ನಡುವೆ ರಾಜ್ಯದ ಖಜಾನೆ ಲೂಟಿಯಾಗುತ್ತಿದೆ, ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಚರ್ಚೆಯನ್ನು ಉಲ್ಲೇಖಿಸಿದ ಮೋದಿ, ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ತಮ್ಮ ಕುರ್ಚಿಯಲ್ಲಿ ಎಷ್ಟು ದಿನ ಇರುತ್ತಾರೋ ಯಾರಿಗೂ ಗೊತ್ತಿಲ್ಲ. ಅಧಿಕಾರ ಹಂಚಿಕೆಯ ಈ ಕಿತ್ತಾಟದಿಂದಾಗಿ ಜನಸಾಮಾನ್ಯರ ಸಮಸ್ಯೆಗಳು ಮೂಲೆಗುಂಪಾಗಿವೆ ಎಂದು ಕುಟುಕಿದರು.
Also Read>> ಬೆಂಗಳೂರು | ಪ್ರಧಾನಿ ಮೋದಿ ತೆರಳುವ ಮಾರ್ಗ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆ | ಶಂಕಿತ ವಶಕ್ಕೆ
ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತಷ್ಟು ಕಿಡಿಕಾರಿದ ಪ್ರಧಾನಿ, ಜನರಿಗೆ ದ್ರೋಹ ಮಾಡುವುದೇ ಕಾಂಗ್ರೆಸ್ ಕೆಲಸ. ಅವರೂ ಸುಳ್ಳು, ಅವರ ಗ್ಯಾರಂಟಿಗಳೂ ಸುಳ್ಳು. ಕಾಂಗ್ರೆಸ್ ಅಧಿಕಾರದ ಪುಸ್ತಕದಲ್ಲಿ ಆಡಳಿತ ಎಂಬ ಅಧ್ಯಾಯವೇ ಇಲ್ಲ ಎಂದು ಟೀಕೆ ಮಾಡಿದರು.
ಇತ್ತೀಚಿನ ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿದ ಮಾತನಾಡಿ, ದೇಶದ ಜನರು ಈಗ ವೇಗದ ಅಭಿವೃದ್ಧಿ ಮತ್ತು ಪರಿಹಾರ ಬಯಸುತ್ತಿದ್ದಾರೆ. ಜನರಿಗೆ ಈಗ ಭ್ರಷ್ಟಾಚಾರ ಬೇಡ, ವೇಗ ಬೇಕಿದೆ. ಜನರಿಗೆ ಸಮಸ್ಯೆಗಳ ಪರಿಹಾರ ಬೇಕು. ರಾಷ್ಟ್ರದ ಹಿತಾಸಕ್ತಿಯ ಆಧಾರದ ಮೇಲೆ ರಾಜಕೀಯ ಬೇಕು ಎಂದು ಜನರು ಹೇಳುತ್ತಿದ್ದಾರೆ ಎಂದರು.
ಪುದುಚೇರಿ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿದ ಪ್ರಧಾನಿ, ಬಿಜೆಪಿ ಮತ್ತು ಎನ್’ಡಿಎ ಮೈತ್ರಿಯ ಆಡಳಿತ ಮಾದರಿಯ ಮೇಲಿನ ಜನರ ವಿಶ್ವಾಸ ಹೆಚ್ಚುತ್ತಿದೆ. ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಬಿಜೆಪಿ ಉತ್ತಮ ಸಾಧನೆ ಮಾಡಿರುವುದನ್ನು ಅವರು ಪ್ರಸ್ತಾಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















