ಶಿವಮೊಗ್ಗ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಮುಂದುವರಿದಿದೆ. ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಲು ಇನ್ನೂ ಕೆಲವೇ ಅಡಿ ನೀರು ಬೇಕಾಗಿದೆ. ಇದೇ ಪ್ರಮಾಣದ ಒಳಹರಿವು ಮುಂದುವರಿದರೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ, ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ.
ಭಾನುವಾರದ ಮಾಹಿತಿಯಂತೆ ಭದ್ರಾ ಡ್ಯಾಂನ ನೀರಿನ ಮಟ್ಟ 180.10 (ಗರಿಷ್ಠ ಮಟ್ಟ : 186) ಅಡಿಯಿದೆ. 23,332 ಕ್ಯೂಸೆಕ್ ಒಳಹರಿವಿದೆ. 2661 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ಭರ್ತಿಯಾಗಲು 6 ಅಡಿ ನೀರು ಮಾತ್ರ ಬೇಕಾಗಿರುವುದರಿಂದ, ಈಗಾಗಲೇ ಭದ್ರಾ ಡ್ಯಾಂ ಅಧಿಕಾರಿಗಳು ನದಿಪಾತ್ರದ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಯಾವಾಗ ಬೇಕಾದರು ಡ್ಯಾಂನಿಂದ ನೀರು ಹೊರ ಬಿಡುವ ಸಾಧ್ಯತೆಯಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಭದ್ರಾ ಡ್ಯಾಂ ಸುಮಾರು 71.52 ಟಿಎಂಸಿ ನೀರು ಸಂಗ್ರಹಣೆಯ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 64 ಟಿಎಂಸಿ ನೀರು ಸಂಗ್ರಹವಾಗಿದೆ.ಡ್ಯಾಂನಿಂದ ಸರಿಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಹಾಗೆಯೇ ಹಲವು ನಗರ ಪಟ್ಟಣಗಳ ಕುಡಿಯುವ ನೀರಿನ ಮೂಲವೂ ಆಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 136.9 ಅಡಿಯಿತ್ತು. ಪ್ರಸ್ತುತ ವರ್ಷ ಮುಂಗಾರು ಮಳೆಯ ಅವಧಿಯಲ್ಲಿ ಜಲಾನಯನ ವ್ಯಾಪ್ತಿಯಲ್ಲಿ ಬಿದ್ದ ಉತ್ತಮ ಮಳೆಯಿಂದ ಸೀಮಿತಾವಧಿಯಲ್ಲಿಯೇ ಡ್ಯಾಂನಲ್ಲಿ ದಾಖಲೆ ಪ್ರಮಾಣದ ನೀರು ಸಂಗ್ರಹವಾಗಿದೆ.
ಉಳಿದಂತೆ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1801.35 (ಗರಿಷ್ಠ ಮಟ್ಟ : 1819) ಅಡಿಯಿದೆ. 36,830 ಕ್ಯೂಸೆಕ್ ಒಳಹರಿವಿದ್ದು, 1141.97 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1775.45 ಅಡಿ ನೀರು ಸಂಗ್ರಹವಾಗಿತ್ತು. ತುಂಗಾ ಡ್ಯಾಂ ಕಳೆದ ಜೂನ್ ತಿಂಗಳಲ್ಲಿ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. ಪ್ರಸ್ತುತ ಡ್ಯಾಂನ ಒಳಹರಿವು 37,196 ಕ್ಯೂಸೆಕ್ ಇದ್ದು, ಅಷ್ಟೆ ಪ್ರಮಾಣದ ನೀರನ್ನು ಹೊಸಪೇಟೆಯ ಟಿ.ಬಿ. ಡ್ಯಾಂಗೆ ಬಿಡಲಾಗುತ್ತಿದೆ.
-ವರದಿ: ಬಿ. ರೇಣುಕೇಶ್
Discussion about this post