ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಕೀಲ ವೃತ್ತಿ ನಿರತರು ನ್ಯಾಯಾಲಯಕ್ಕೆ ಸತ್ಯಾಂಶಗಳನ್ನು ಮನವರಿಕೆ ಮಾಡಿಕೊಟ್ಟರೆ ನ್ಯಾಯದಾನ ಸಮರ್ಪಕವಾಗಿ ಮೂಡಿಬರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ. ಮುಸ್ತಫಾಹುಸೇನ್ ಹೇಳಿದರು.
ರಾಜ್ಯವಕೀಲರ ಪರಿಷತ್ ಸಹಯೋಗದೊಂದಿಗೆ ಭದ್ರಾವತಿ ವಕೀಲರಸಂಘ, ನ್ಯಾಯಾಲಯದ ಆವರಣದಲ್ಲಿ ಕಳೆದ ಮೂರು ದಿನಗಳಿಂದ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಕೀಲರಿಗೆ ಕಕ್ಷೀದಾರರ ಹಿತಕಾಯುವುದರ ಜೊತೆಗೆ ನ್ಯಾಯಾಲಯಕ್ಕೆ ಸತ್ಯಾಂಶಗಳನ್ನು ತಿಳಿಸುವ ಗುರುತರ ಜವಾಬ್ದಾರಿ ಇದೆ ಎಂಬುದನ್ನು ಮರೆಯಬಾರದು. ವಕೀಲಿ ವೃತಿ ನಿರತರು ಬದಲಾಗುತ್ತಿರುವ ಹಾಗೂ ಹೊಸದಾಗಿ ಬಂದ ಕಾನೂನುಗಳನ್ನು ಸಮರ್ಪಕವಾಗಿ ಅರಿತಾಗ ಮಾತ್ರ ಕಕ್ಷಿದಾರರಿಗೆ ನ್ಯಾಯಾಲಯದಿಂದ ನ್ಯಾಯ ಕೊಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಿರಿಯ ವಕೀಲರು ಕಿರಿಯರಿಗೆ ನ್ಯಾಯಾಲಯದಲ್ಲಿ ಪ್ರಕರಣ ನಡೆಸಲು ಮಾರ್ಗದರ್ಶನ ಮಾಡುವುದರಿಂದ ಯುವ ವಕೀಲರು ಭವಿಷ್ಯದಲ್ಲಿ ಉತ್ತಮ ವಕೀಲರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕಾನೂನುಗಳು ಇರುವುದು ನೊಂದವರಿಗೆ ನ್ಯಾಯ ಕೊಡಿಸಲು. ಆದರೆ, ಅನೇಕರು ಕಾನೂನುಗಳ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆಸಿ, ಅಮಾಯಕರನ್ನು ಶೋಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗುತ್ತಾರೆ. ಅಂತಹವರಿಗೆ ವಕೀಲರು ಎಂದಿಗೂ ಸಹಕಾರ ನೀಡಬಾರದು ಎಂದು ಸಲಹೆ ನೀಡಿದರು.
ವಕೀಲರು ಕಾನೂನು ಕಾರ್ಯಾಗಾರಗಳನ್ನು ನಡೆಸುವುದರಿಂದ ಕಾನೂನು ತಿಳುವಳಿಕೆ ಹೆಚ್ಚಾಗಿ ವಕೀಲಿ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುವುದರ ಜೊತೆಗೆ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಅನುಗುಣವಾಗಿ ಮಂಡಿಸಿ ನ್ಯಾಯಾಧೀಶರಿಗೆ ಪ್ರಕರಣದ ವಸ್ತುಸ್ಥಿತಿಗೆ ಪೂರಕವಾಗಿ ಕಾನೂನಿನ ವಿಮರ್ಶಾತ್ಮಕ ಅಂಶಗಳನ್ನು ಮನವರಿಕೆ ಮಾಡಿಕೊಡಲು ಸಾಧ್ಯವಾಗುತ್ತದೆ. ಅದೇರೀತಿ ಕಿರಿಯವಕೀಲರು ಓದುವ ಆಸಕ್ತಿಯನ್ನು ನಿರಂತರವಾಗಿ ಉಳಿಸಿಕೊಂಡು ಈ ರೀತಿ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಕಾನೂನಿನ ಜ್ಞಾನರ್ಜನೆ ಮೂಲಕ ಪ್ರಾಯೋಗಿಕವಾಗಿ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ನಡೆಸಲು ಸಹಕಾರಿಯಾಗುತ್ತದೆ ಎಂದರು.
ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಶಿಧರ್ ಮಾತನಾಡಿ, ಕಾನೂನು ಕಾರ್ಯಗಾರದಲ್ಲಿ ಕಲಿತ ಅಂಶಗಳನ್ನು ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀರ ಸಂಘದ ಅಧ್ಯಕ್ಷ ಕೆ.ಎನ್. ಶ್ರೀಹರ್ಷ ಮೂರು ದಿನಗಳ ಕಾನೂನು ಕಾರ್ಯಾಗಾರದ ಯಶಸ್ಸಿಗೆ ಸಹಕರಿಸಿದ ಜಿಲ್ಲಾ ನ್ಯಾಯಾಧೀಶರು ಹಾಗೂ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಸಿಬ್ಬಂದಿಗಳು ಹಾಗೂ ವಕೀಲರಿಗೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸಹಕಾರ್ಯದರ್ಶಿ ಮಂಜಪ್ಪ, ಖಜಾಂಚಿ ವಿಮಲ, ವಿವಿಧ ಶ್ರೇಣಿಯ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ಧಣ್ಣನವರ್, ಮಿಲನ, ಮೋಹನ್ ಗೌಡ, ಪುರುಷೋತ್ತಮ, ಚಂದ್ರಶೇಖರ ಬಣಕಾರ್, ಸ್ನೆಹ ಅವರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post