ಭದ್ರಾವತಿ: ಸಾಧನೆ ಎಂಬುದು ಎಲ್ಲರಿಗೂ ಒಲಿಯದು. ಸಾಧಿಸುವ ಛಲ ಹೊಂದಿರುವವರಿಗೆ ನೂರಾರು ವಿಘ್ನಗಳೆದುರಾದರೂ ಹಿಂಜೆರಿಯದೆ ಮುಂದಿನ ಹೆಜ್ಜೆ ಇಡುವವನೆ ನಿಜವಾದ ಛಲಗಾರ.
ಗುರುಗಳ ಸಹಾಯವಿಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸ್ಸುಗಳಿಸಬಹುದು ಎಂಬುದನ್ನು ತೋರಿರುವ ಹಳೇನಗರದ ಎನ್’ಎಸ್’ಟಿ ರಸ್ತೆಯ ನಿವಾಸಿಯಾಗಿರುವ ಎಸ್. ವರುಣ್‌ಕುಮಾರ್.
ನ್ಯೂಟೌನ್ ಸರಕಾರಿ ಸರ್.ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ ಪಡೆದು ಬಳಿಕ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ರಜಾ ದಿನಗಳಂದು ಕುಸುರಿ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ಕುಸುರಿ ಕೆಲಸವನ್ನು ತನ್ನ ಉಸಿರಾಗಿಸಿಕೊಂಡು ಮೇಲ್ಮಟ್ಟಕ್ಕೇರಿ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ನೀಡುತ್ತಾ ಎಲ್ಲರೊಂದಿಗೆ ಒಂದಾಗಿ ಲವಲವಿಕೆಯಿಂದ ಓಡಾಡುವ ಹದಿಹರೆಯದ ಯುವಕ ಎಸ್. ವರುಣ್ ಕುಮಾರ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ 25 ರ ಯುವಕ.
ಛಲ ಸಾಧಿಸಲು ಯಾರದ್ದಾರೂ ಪ್ರೇರಣೆ ಬೇಕೆಬೇಕು. ಇದಕ್ಕೆ ಸಾಕ್ಷೀಕರಿಸಿದ್ದು ಕನ್ನಡ ಖಾಸಗಿ ಟಿವಿ ಚಾನಲ್ ಒಂದರಲ್ಲಿ ಚಲನ ಚಿತ್ರನಟ ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿದ್ದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಕುಸುರಿ ಕಲೆಯನ್ನು ಬೇರೊಬ್ಬರು ಪ್ರದರ್ಶಿಸಿದ್ದನ್ನು ಕಂಡ ವರುಣ್ ತಾನೇಕೆ ಮಾಡಬಾರದೆಂದು ಚಿಂತಿಸಿದರು. ಇದರ ಸತತ ಪ್ರಯತ್ನದಿಂದ ಸುಮಾರು 300 ಕ್ಕೂ ಅಧಿಕ ಬಗೆಯ ಕಲೆಯ ವೈವಿಧ್ಯತೆ ತೋರುವ ಮೂಲಕ ಪೆನ್ಸಿಲ್, ಸೀಮೆಸುಣ್ಣ, ಅಕ್ಕಿಕಾಳು, ಗೋಧಿಕಡ್ಡಿ, ಬೆಂಕಿಕಡ್ಡಿ, ಶೇಂಗಾ ಬೀಜ, ವೆಡ್ಡಿಂಗ್ ಕಾರ್ಡ್‌ಗಳ ಮೇಲೆ ಕುಸುರಿ ಕಲೆಯನ್ನು ಮೂಡಿಸಿದ್ದಾರೆ.
ಶೇಂಗಾಬೀಜದ ಮೇಲೆ ಕನ್ನಡ ವರ್ಣಮಾಲೆ, ಸೀಮೆಸುಣ್ಣದಿಂದ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಚಿತ್ರನಟಿ ಶ್ರೀದೇವಿ ಅವರ ಚಿತ್ರ ಬಿಡಿಸಿದ್ದಲ್ಲದೆ ಪೆನ್ಸಿಲ್ ಮದ್ದಿನಲ್ಲಿ ವರಮಹಾಲಕ್ಷ್ಮೀ ಹಾಗೂ ಆಂಗ್ಲ ಭಾಷೆಯ ‘ಎ’ ಯಿಂದ ‘ಜಡ್’ವರೆಗೆ ಅಕ್ಷರ ಮಾಲೆ, ಸೂಜಿಯಿಂದ ಕೊರೆದು ಗಣಪತಿ, ಮೆಕ್ಕಾ ಮದೀನಾ, ವಿವಾಹ ಆಮಂತ್ರಣ ಪತ್ರಗಳಂತಹ ನಾನಾ ರೂಪಕಗಳನ್ನು ಮಾಡಿ ಕೈಚಳಕ ತೋರಿದ್ದಾರೆ. ಇಂದು ಕಸದ ಬುಟ್ಟಿಗೆ ಸೇರಬೇಕಾದ ವಸ್ತುಗಳು ಈ ಸಾಧಕೆನ ಕೈ ಸೇರಿ ಶೋಕೇಸಿನಲ್ಲಿಡುವಂತಾಗಿವೆ.
ಒಂದೇ ಬೆಂಕಿ ಕಡ್ಡಿಯಲ್ಲಿ ಲಂಡನ್ ಬ್ರಿಡ್ಜ್
ಒಂದೇ ಒಂದು ಬೆಂಕಿ ಕಡ್ಡಿಯಲ್ಲಿ ಕೇವಲ ಒಂದೇ ದಿನದಲ್ಲಿ ಅತ್ಯಂತ ಸಣ್ಣ ಪ್ರಮಾಣದ ಲಂಡನ್ ಬ್ರಿಡ್ಜ್ ತಯಾರಿಸುವ ಈ ಸಾಧಕನಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಮೂಡಿರುವುದು ವಿಶೇಷ. ಸ್ಮಾಲೆಸ್ಟ್ ಲಂಡನ್ ಬ್ರಿಡ್ಜ್ ಎಂಬುದನ್ನು ಪರಿಗಣಿಸಿ ನೀಡಿರುವ ಈ ಪ್ರಶಸ್ತಿ ನಮ್ಮ ತಂದೆ ಹಾಗೂ ತಾಯಿಯವರಿಗೆ ಗೌರವ ಸಲ್ಲತಕ್ಕದ್ದು. ಈ ಹಿಂದೆ ಬೆಂಕಿಕಡ್ಡಿಯಲ್ಲಿ ಟೈಟಾನಿಕ್ ಹಡಗು, ಅಮೆರಿಕಾದ ವೈಟ್ ಹೌಸ್ ಮುಂತಾದವುಗಳನ್ನು ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.
ಕಾರ್ಪೆಂಟರ್ ವೃತ್ತಿಯ ತಂದೆ ಸಿದ್ದರಾಜು ಹಾಗೂ ತಾಯಿ ಗಾಯಿತ್ರಿ ಮಗನ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಪ್ರೋತ್ಸಾಹಿಸಿರುವುದನ್ನು ಮೆಲುಕು ಹಾಕಿರುವ ವರುಣ್ ಮತ್ತಷ್ಟು ಸಾಧನೆ ಮಾಡುವ ಗುರಿ ಹೊಂದಲಾಗಿ ಸದ್ಯದಲ್ಲೇ ಮತ್ತೊಂದು ಗರಿ ಮೂಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರ ಸಾಧನೆಗೆ ಕೇವಲ ಜಿಲ್ಲೆ ಮಾತ್ರವಲ್ಲದೆ ರಾಜ್ಯವೇ ಮೆಚ್ಚುವಂತಾಗಬೇಕು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post