ಭದ್ರಾವತಿ: ಬೀದಿ ಬದಿ ವ್ಯಾಪಾರಿಗಳು ನಗರದಲ್ಲಿ ಸಾವಿರ ಸಂಖ್ಯೆಯಲ್ಲಿದ್ದರೂ ನಗರಸಭೆಯಲ್ಲಿ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆದಿರುವವರು ಕೇವಲ ಅತ್ಯಲ್ಪ ಸಂಖ್ಯೆಯಲ್ಲಿ ನಮೂದಾಗಿರುತ್ತದೆ. ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ಇದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ಜನ್ನಾಪುರ ಭಂಟರ ಸಮುದಾಯ ಭವನದಲ್ಲಿ ನಗರಸಭಾ ಕಾರ್ಯಾಲಯ, ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಆಯೋಜಿಸಿದ್ದ ನಗರದ ಬೀದಿಬದಿ ವ್ಯಾಪಾರಸ್ಥರಿಗೆ ಸಂರಕ್ಷಣೆ, ಜೀವನೋಪಾಯ ಮತ್ತು ನಿಯಂತ್ರಣ ನಿಯಮ 2019 ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬೀದಿ ಬದಿಯ ವ್ಯಾಪಾರಿಗಳು ನಗರಸಭೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆದುಕೊಳ್ಳುವ ಮೂಲಕ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಶಿವಮೊಗ್ಗ ಮಾದರಿಯಲ್ಲಿ ನಗರದ ಕೆಲವೆಡೆ ಫುಡ್‍ಕೋರ್ಟ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸದ್ಯದಲ್ಲಿಯೆ ಕಾರ್ಯಾರಂಭ ಮಾಡಲಾಗುವುದು.
ವ್ಯಾಪಾರಸ್ಥರು ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು. ವ್ಯಾಪಾರಸ್ತರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದೆರೆ ನೀಡದಂತಿರಲಿ. ಪೋಲಿಸರು ವ್ಯಾಪಾರಕ್ಕೆ ಯಾವುದೆ ಅಡ್ಡಿಪಡಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ತ್ಮದಾಗಿದೆ. ನಗರದಲ್ಲಿ ಕಡು ಬಡವರಿಗಾಗಿ 4 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಆ: 31 ರಿಂದ ಆನ್‍ಲೈನ್ ಮೂಲಕ ಅರ್ಜಿ ಹಾಕುವ ವ್ಯವಸ್ಥೆ ಕಲ್ಪಿಸಲಾಗುವುದು. ಈ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಲು ಮುಂದಾಗುವಂತೆ ಕರೆ ನೀಡಿದರು.
ನಗರಸಭಾ ಪೌರಾಯುಕ್ತ ಮನೋಹರ್ ಮಾತನಾಡಿ ಬೀದಿಬದಿ ವ್ಯಾಪಾರಸ್ತರಿಗಾಗಿ ಸರಕಾರ ಹಲವು ಕಾನೂನು ಜಾರಿ ಮಾಡಿದೆ. ಕಾನೂನು ಉಲ್ಲಂಘನೆಯಾಗದಂತೆ ವ್ಯಾಪಾರ ನಡೆಸಬೇಕು, ವ್ಯಾಪಾರದಿಂದ ಸಾರ್ವಜನಿಕರಿಗಾಗಲಿ, ಸಂಚಾರಕ್ಕಾಗಲಿ ತೊಂದರೆಯಾಗದಂತೆ ಸ್ವಚ್ಚತೆ ಕಾಪಾಡಿಕೊಳ್ಳುವ ಮೂಲಕ ವ್ಯಾಪಾರ ವಹಿವಾಟು ನಡೆಸಬೇಕು. ನಿಗದಿ ಪಡಿಸಿರುವ ಸ್ಥಳ ಹೊರತುಪಡಿಸಿ ಎಲ್ಲೆಂದರಲ್ಲಿ ವ್ಯಾಪಾರ ಮಾಡುವಂತಿಲ್ಲ. ಸಾದಕ ಬಾದಕಗಳ ಅರಿವು ಮೂಡಿಸುವ ಸಲುವಾಗಿ ಕಾರ್ಯಾಗಾರ ಏರ್ಪಡಿಸಿದ್ದು, ಇದರ ಪ್ರಯೋಜನ ಪಡೆದುಕೊಂಡು “ನೀವೂ ವ್ಯಾಪಾರ ಮಾಡಿ ನಗರದ ಸೌಂದರ್ಯವನ್ನೂ ಕಾಪಾಡಿ” ಎಂದರು.
ಸರಕಾರ ಆದೇಶದನ್ವಯ ನಗರಸಭೆ ವತಿಯಿಂದ ವ್ಯಾಪಾರಿಗಳಿಗಾಗಿ “ನಗರ ಬೀದಿಬದಿ ವ್ಯಾಪಾರಿಗಳ ಸಮಿತಿ” ರಚನೆಯಾಗಲಿದ್ದು ಸಮಿತಿಯ ಪದಾಧಿಕಾರಿಗಳ ಆಯ್ಕೆ ಚುನಾವಣೆ ಮೂಲಕ ಮಾಡಲಾಗುವುದು. ಅದ್ದರಿಂದ ಬೀದಿಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಮೂಕಪ್ಪ ಎಂ.ಕರಬೀಮಣ್ಣನವರ್ ಮಾತನಾಡಿ ಬೀದಿಬದಿ ವ್ಯಾಪಾರಸ್ಥರನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವುದು ಕಾರ್ಯಾಗಾರದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿ ಮೋಹನ್ ವ್ಯಾಪಾರಸ್ಥರಿಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಗಣಪತಿ ನಾಯಕ್, ಸಾರ್ವಜನಿಕ ಆಸ್ಪತ್ರೆಯ ನೀಲೇಶ್‍ರಾಜ್, ಮಧುಮತಿ, ಶಕುಂತಲಾ, ಸೋಮಶೇಖರ್, ಮೆಹಬೂಬ್, ರಾಜ್‍ಕುಮಾರ್, ದೇವೇಂದ್ರನಾಯ್ಕ್, ಸುಹಾಸಿನಿ, ಧನಲಕ್ಷ್ಮಿ ಸೇರಿದಂತೆ ಹಲವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post