ಶಿವಮೊಗ್ಗ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ರಿಂಗ್ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ರೈಲ್ವೆ ಇಲಾಖೆಗೆ ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಅವರ ಸತತ ಪ್ರಯತ್ನಕ್ಕೆ ಫಲ ದೊರೆತಂತಾಗಿದೆ.
ವಿನೋಬನಗರ, ಬ್ಲಡ್ ಬ್ಯಾಂಕ್ ಮೂಲಕ ಕೆ.ಇ.ಬಿ. ವೃತ್ತ ಸಂಪರ್ಕಿಸುವ ರಿಂಗ್ ರಸ್ತೆ ಅಭಿವೃದ್ಧಿ ಸೇರಿದಂತೆ ಈ ಭಾಗದ ಹಲವು ಕಾಮಗಾರಿಗಳಿಗೆ ರೈಲ್ವೆ ಅಧಿಕಾರಿಗಳು ಇಂದು ಒಪ್ಪಿಗೆ ನೀಡಿದ್ದಾರೆ.
ಸಂಸದ ಬಿ.ವೈ. ರಾಘವೇಂದ್ರ ಅವರ ಮನವಿಯ ಮೇರೆಗೆ ಇಂದು ನೈರುತ್ಯ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ಡಿಆರ್ ಎಂ ಎ.ಕೆ. ಸಿಂಗ್, ಮೈಸೂರು ವಿಭಾಗದ ಅಪರ್ಣ ಗರಗ್, ರಾಜೀವ್ ಅಗರ್ ವಾಲ್ ಮೊದಲಾದವರನ್ನ ಒಳಗೊಂಡ ತಂಡದ ನಿಯೋಗ ಇಂದು ಶಿವಮೊಗ್ಗದ ಇತರೆಡೆಗೆ ಭೇಟಿ ನೀಡಿ ಸ್ಥಳಗಳನ್ನು ಪರಿಶೀಲಿಸಿ ರಿಂಗ್ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ.
ರೈಲ್ವೆ ನಿಲ್ದಾಣದ ಬಳಿ ಅಪೂರ್ಣಗೊಂಡ ರಿಂಗ್ ರಸ್ತೆ ಅಭಿವೃದ್ಧಿ ವಿಚಾರ ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ, ತಾವು ಹಿಂದೆ ಶಿಕಾರಿಪುರ ಶಾಸಕರಾಗಿದ್ದಾಗಲೂ ಸಹ ಸತತ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದ ಬಿ.ವೈ. ರಾಘವೇಂದ್ರ ಈ ಬಾರಿ ಸಂಸದರಾಗಿ ಆಯ್ಕೆಯಾದ ನಂತರ ತಮ್ಮ ಪ್ರಯತ್ನವನ್ನು ಚುರುಕುಗೊಳಿಸಿದ್ದರು. ಸಂಸದರ ಸತತ ಪ್ರಯತ್ನಕ್ಕೆ ರೈಲ್ವೆ ಇಲಾಖೆ ಮಣಿದಿದ್ದು, ರಿಂಗ್ ರಸ್ತೆಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ರಿಂಗ್ ರಸ್ತೆಗೆ ಬದಲಾಗಿ ರೈಲ್ವೆಗೆ ಇತರೆಡೆ ಭೂಮಿ ನೀಡಲಾಗುವುದು ಹಾಗೂ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ನಿರ್ಮಾಣ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಲು ರೈಲ್ವೆ ಅಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ ಎಂದರು.
ಶಿವಮೊಗ್ಗ ಮತ್ತು ಹೊಳೆಹೊನ್ನೂರು ರಸ್ತೆಗೆ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ, ಕೋಟೆ ಗಂಗೂರಿನಲ್ಲಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ನಿಲ್ದಾಣ ಬದಲು ತಾಳಗುಪ್ಪದಲ್ಲಿ ನಿಲ್ದಾಣ ಕೈಗೆತ್ತಿಕೊಳ್ಳಲು ಹಾಗೂ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗದ ನಿರ್ಮಾಣಕ್ಕೆ ತಂಡ ಸ್ಥಳ ಭೇಟಿ ನೀಡಿ ಪರಿಶೀಲಿಸಿದೆ. ಅದರಂತೆ ಮುಂದಿನ ದಿನಗಳಲ್ಲಿ ಈ ಮಾರ್ಗದ ಕಾಮಗಾರಿಗಳು ಆರಂಭಗೊಳ್ಳಲಿದೆ. ಚೆನ್ನೈ ತಿರುಪತಿಗೆ ರೈಲ್ವೆ ಸಂಚಾರ ಆರಂಭಿಸಲು, ಸವಳಂಗ ರಸ್ತೆಗೆ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣದ ಬಗ್ಗೆ ಬೇಡಿಕೆಗಳು ಬಂದಿವೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಿವಮೊಗ್ಗ-ಬೀರೂರು-ಚಿತ್ರದುರ್ಗದ ಮೂಲಕ ಬಳ್ಳಾರಿಗೆ ತಲುಪುವ ಹೊಸ ಮಾರ್ಗದಲ್ಲಿ ರೈಲು ಚಲಿಸುವ ಕುರಿತು ಅಧಿಕಾರಿಗೆ ತಿಳಿಸಲಾಗಿದೆ. ಅದರಂತೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಜನಶತಾಬ್ದಿ ರೈಲು ಯಶವಂತಪುರ ವರೆಗೆ ಮಾತ್ರ ಇದನ್ನು ಮೆಜೆಸ್ಟಿಕ್ ವರೆಗೆ ವಿಸ್ತರಿಸಲು ಮತ್ತು ಬೆಂಗಳೂರಿಗೆ ರೈಲು ಬೇಗ ತಲುಪುವಂತೆ ಸಮಯ ನಿಗದಿ ಮಾಡಲು, ಅಧಿಕಾರಿಗಳ ಗಮನ ತರಲಾಯಿತು.
ವಿದ್ಯಾನಗರದ ನಿವಾಸಿ ತಿಮ್ಮಪ್ಪನವರು ರಾತ್ರಿ ತಾಳಗುಪ್ಪ ಮತ್ತು ಬೆಂಗಳೂರಿಗೆ ಚಲಿಸುವ ರೈಲಿಗೆ ಹೆಚ್ಚಿನ ಬೋಗಿ ಅಳವಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಅದರಂತೆ ಅಧಿಕಾರಿಗಳು ಮೂರು ಹೆಚ್ಚುವರಿ ಬೋಗಿಯನ್ನು ಅಳವಡಿಸಲು ಸಮ್ಮತಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಶಿವಮೊಗ್ಗ ರೈಲ್ವೆ ಸಲಹಾ ಸಮಿತಿ ಸದಸ್ಯ ಮಾಲತೇಶ್ ಹಾಜರಿದ್ದರು.
(ವರದಿ: ಡಾ.ಸುಧೀಂದ್ರ)
Discussion about this post