ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಅಲ್ಲಿ ಬೇಸಿಗೆ ಕಾಲದ ಸೆಖೆ ಕಾರಣ ಒಂದಷ್ಟು ಹೆಣ್ಣು ಮಕ್ಕಳು ರಾತ್ರಿ 11ರವರೆಗೂ ವಾಕಿಂಗ್ ಮಾಡುತ್ತಿರುತ್ತಾರೆ. ಆಗ ಏಕಾಏಕಿ ಬೀದಿ ದೀಪಗಳ ಕರೆಂಟ್ ಹೋಗುತ್ತದೆ. ಕತ್ತಲಲ್ಲಿ ಯಾರೋ ಬಂದು ವಾಕಿಂಗ್ ಮಾಡುತ್ತಿರುವ ಹೆಣ್ಣು ಮಕ್ಕಳ ಮೈ ಮುಟ್ಟಿ ಹೋಗುತ್ತಾರೆ! ಇದು ನಗರದ ಹಲವು ಭಾಗಗಳಲ್ಲಿನ ದುಸ್ಥಿತಿ.
ಹೌದು… ಭದ್ರಾವತಿಯ ಹಲವು ಭಾಗಗಳಲ್ಲಿ ಕಿಡಿಗೇಡಿಗಳು, ಬೀದಿ ಕಾಮಣ್ಣರು ಇಂತಹ ಕೃತ್ಯವನ್ನು ಮಾಡುತ್ತಿದ್ದು, ಇದು ನಗರಸಭೆಯ ನಿರ್ಲಕ್ಷ್ಯದ ಪರಿಣಾಮವೇ ಆಗಿದೆ ಎನ್ನುವುದು ಸ್ಥಳೀಯ ನಗರಸಭಾ ಮಾಜಿ ಸದಸ್ಯ ಜಿ. ಆನಂದ್ ಕುಮಾರ್ ಆರೋಪವಾಗಿದೆ.
ಬೀದಿ ದೀಪಗಳನ್ನು ಪ್ರತಿದಿನ ಆನ್ ಮಾಡುವುದು ಹಾಗೂ ಆಫ್ ಮಾಡುವ ಸಲುವಾಗಿ ಕೆಲವೊಂದು ಪಾಯಿಂಟ್’ಗಳನ್ನು ಬಿಡಲಾಗಿರುತ್ತದೆ. ಪ್ರತಿದಿನ ನಿಗದಿತ ಸಿಬ್ಬಂದಿಯೊಬ್ಬರು ಅದನ್ನು ಹಾಕುವ ಹಾಗೂ ಆರಿಸುವ ಕೆಲಸ ಮಾಡುತ್ತಾರೆ.
ಆದರೆ, ನಗರದ ಹಲವು ಭಾಗಗಳಲ್ಲಿ ಇಂತಹ ಪಾಯಿಂಟ್’ಗಲ್ಲಿ ಸ್ವಿಚ್ ವ್ಯವಸ್ಥೆ ಇಲ್ಲದೇ ದೈನಂದಿನ ಅನುಕೂಲಕ್ಕಾಗಿ ತಂತಿ ಸಿಕ್ಕಿಸುವ ವ್ಯವಸ್ಥೆಯೊಂದನ್ನು ಮಾಡಿಕೊಳ್ಳಲಾಗಿದೆ. ಆ ತಂತಿ ಇರುವ ಬಾಕ್ಸ್’ಗಳಿಗೆ ಯಾವುದೇ ರೀತಿಯ ಬಾಗಿಲಿನ ವ್ಯವಸ್ಥೆಯಿಲ್ಲದೇ, ಯಾರು ಬೇಕಾದರೂ ಅದನ್ನು ನಿಯಂತ್ರಿಸುವಂತಹ ಪರಿಸ್ಥಿತಿ ಇದೆ ಎಂದು ಆರೋಪ ಮಾಡಿದ್ದಾರೆ.
ಇದನ್ನು ದುರುಪಯೋಗಪಡಿಸಿಕೊಂಡ ಕೆಲವು ಬೀದಿ ಕಾಮಣ್ಣರು ಹಾಗೂ ಪೋಲಿ ಪೋಕರಿಗಳು, ರಾತ್ರಿ ವೇಳೆ ಹೆಣ್ಣು ಮಕ್ಕಳು ವಾಕಿಂಗ್ ಮಾಡುವಾಗ ವಿದ್ಯುತ್ ಕಡಿತಗೊಳಿಸಿ, ಕತ್ತಲು ಮಾಡಿ, ಹೆಣ್ಣು ಮಕ್ಕಳ ಮೈ ಮುಟ್ಟಿ ಹೋಗುವಂತಹ ನೀಚ ಕೃತ್ಯ ಮಾಡುತ್ತಿದ್ದಾರೆ.
ಹೊಸಮನೆ ಭಾಗದಲ್ಲಿ ಇಂತಹ ಕೃತ್ಯಗಳು ಹಲವು ದಿನಗಳಿಂದ ನಡೆಯುತ್ತಿದೆ. ಈ ಬೀದಿ ದೀಪಗಳನ್ನು ನಿರ್ವಹಿಸುವ ನಗರಸಭೆಯ ವಿಭಾಗಕ್ಕೆ ಎಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಹೊಸಮನೆಯ ಮಾರಿಯಮ್ಮ ದೇವಾಲಯ, ಹೊಸ ಸೇತುವೆ ರಸ್ತೆ, ವಿಐಎಸ್’ಎಲ್ ಕ್ರೀಡಾಂಗಣದ ಪ್ರದೇಶ ಸೇರಿದಂತೆ ಹಲವು ಕಡೆ ಇಂತಹ ಕೃತ್ಯ ನಡೆಯುತ್ತಿದೆ. ಇದನ್ನು ನಗರಸಭೆ ಗಂಭೀರವಾಗಿ ಪರಿಗಣಿಸಿ, ಇಂತಹ ಪಾಯಿಂಟ್’ಗಳಲ್ಲಿ ಬಾಕ್ಸ್’ಗೆ ಬಾಗಿಲು ಹಾಗೂ ಬೀಗ ಹಾಕುವ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಇದನ್ನು ನಿರ್ಲಕ್ಷಿಸಿದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ಅಲ್ಲದೇ, ಇಂತಹ ತೊಂದರೆಯಿರುವ ಬಡಾವಣೆಗಳಲ್ಲಿ ರಾತ್ರಿ ವೇಳೆ ಪೊಲೀಸ್ ಬೀಟ್ ಹೆಚ್ಚಿಸಬೇಕು ಎಂದು ಪೊಲೀಸ್ ಇಲಾಖೆಯಲ್ಲಿ ಅವರು ಮನವಿ ಮಾಡಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post