ಭದ್ರಾವತಿ: ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಗರ ಉದ್ದಾರಕ್ಕಾಗಿ ಕಟ್ಟಿದ ಕೆರೆಕಟ್ಟೆಗಳಿಂದು ಲೇಔಟ್‍ಗಳಾಗಿ ಪರಿವರ್ತನೆಗೊಂಡು ಅಲ್ಲಿನ ಜನರು ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿರುವುದು ವಿಷಾಧನೀಯ ಎಂದು ಎಸ್‍ಎವಿ ಕಾಲೇಜು ಪ್ರಾಂಶುಪಾಲರಾದ ಡಾ.ಹರಿಣಾಕ್ಷಿ ವಿಷಾದ ವ್ಯಕ್ತಪಡಿಸಿದರು.
ಅವರು ಗುರುವಾರ ಮಿನಿ ವಿಧಾನಸೌಧ ಮುಂಭಾಗ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾದರು.
ಹೆಚ್ಚಿನ ಸೌಲಭ್ಯಗಳಿಲ್ಲದ ಬೆಂದಕಾಳೂರನ್ನು ಬೆಂಗಳೂರನ್ನಾಗಿ ಪರಿವರ್ತಿಸಿದ ಕೆಂಪೇಗೌಡರು ಜನರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಲು ಬೆಂಗಳೂರನ್ನೆ ತಮ್ಮ ಆಡಳಿತ ಕೇಂದ್ರವನ್ನಾಗಿಸಿಕೊಂಡು ಹತ್ತು ಹಲವಾರು ಯೋಜನೆಗಳ ಮೂಲಕ ಪೇಟೆ ಬೀದಿಗಳು, ಕೆರೆಕಟ್ಟೆ ಹಾಗು ಕೋಟೆ ಕೊತ್ತಲುಗಳನ್ನು ನಿರ್ಮಿಸಿ ಮಾದರಿ ನಗರವನ್ನಾಗಿಸಿದ್ದರು. ಅಂದು ನಿರ್ಮಾಣಗೊಂಡ ಹಲವಾರು ಕೆರೆಗಳು ಇಂದು ಕಣ್ಮರೆಯಾಗಿವೆ. ಅಲ್ಲಿನ ಜನರು ಮಿತಿ ಮೀರಿದ ದಾಹದಿಂದಾಗಿ ಕೆರೆಗಳ ಮೇಲೆ ಕಟ್ಟಡಗಳನ್ನು ಕಟ್ಟಿ ಕುಡಿಯುವ ನೀರಿಗೆ ಕೃತಕವಾಗಿ ಸಮಸ್ಯೆ ತಂದುಕೊಂಡು ನೀರಿಗಾಗಿ ಶಿವಮೊಗ್ಗ ಜಿಲ್ಲೆಯ ಶರಾವತಿ ನೀರನ್ನು ಬಯಸುವಂತಾಗಿದೆ.
ಕೆಂಪೇಗೌಡರ ಅನೇಕ ಯೋಜನೆಗಳು ದೇಶಕ್ಕೆ ಮಾದರಿಯಾಗಬೇಕಿದ್ದ ಸಂದರ್ಭದಲ್ಲಿ ಕಣ್ಮರೆಯಾಗಿವೆ. ಅಂದು ಎಲ್ಲಾ ಜಾತಿ ಧರ್ಮಿಯರಿಗೂ ಅವರವರ ವೃತ್ತಿಗೆ ಅನುಸಾರವಾಗಿ ಮಾರುಕಟ್ಟೆ ನಿರ್ಮಿಸಿ ಜೀವನೋಪಯಕ್ಕೆ ಸುಗಮ ಹಾದಿಗಳನ್ನು ಮಾಡಿಕೊಟ್ಟಿದ್ದರು. ಇಂತಹ ಆದರ್ಶ ನಾಯಕರಾದ ಕೆಂಪೇಗೌಡರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಆದರ್ಶಪ್ರಾಯವಾಗಿ ಬದುಕು ನಡೆಸಬೇಕಿದೆ ಎಂದರು.
ಜಿಪಂ ಸದಸ್ಯ ಜೆ.ಪಿ. ಯೋಗೇಶ್ ಮಾತನಾಡಿ ಸುಂದರ ನಗರ ಬೆಳೆಯಬೇಕಾದಲ್ಲಿ ಅದರ ಹಿಂದೆ ಒಂದು ಚಿಂತನೆ ಇರುತ್ತದೆ. ಆ ಚಿಂತನೆಗಳ ಮಾರ್ಗದಲ್ಲಿ ನಡೆದಾಗ ಮಾತ್ರ ಸುಂದರ ನಗರ, ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಹೇಳಿದ ಅವರು ಮಹಾಪುರುಷರ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿರುವ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗೌರವ ತೋರಿಸುವಂತಾಗಬೇಕು ಎಂದರು.
ತಾಪಂ ಅಧ್ಯಕ್ಷೆ ಆಶಾ ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ನಗರಸಭಾ ಮಾಜಿ ಸದಸ್ಯರಾದ ಎಚ್.ಬಿ. ರವಿಕುಮಾರ್, ಬದರಿನಾರಾಯಣ, ತಾಪಂ ಸದಸ್ಯ ಧರ್ಮೇಗೌಡ ಮಾತನಾಡಿದರು. ವೇದಿಕೆಯಲ್ಲಿ ತಹಸೀಲ್ದಾರ್ ಸೋಮಶೇಖರ್, ಇಓ ತಮ್ಮಣ್ಣಗೌಡ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ, ನಗರ ವೃತ್ತ ನಿರೀಕ್ಷಕ ಉಮಾಪತಿ, ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ರಮೇಶ್, ಗ್ರೇಡ್-2 ತಹಸೀಲ್ದಾರ್ ಮಂಜಾನಾಯ್ಕ, ಕಂದಾಯಾಧಿಕಾರಿ ಪ್ರಶಾಂತ್, ಮುಖಂಡರಾದ ಬಿ.ಎಚ್. ಪ್ರಶಾಂತ್, ಮುಂತಾದವರಿದ್ದರು. ಸುಮತಿ ಕಾರಂತ್ ಮತ್ತು ತಂಡದಿಂದ ನಾಡಗೀತೆ ಹಾಗು ರೈತಗೀತೆ ಹಾಡಿದರೆ, ಅನ್ನಪೂರ್ಣ ಸತೀಶ್ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post