ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ರಾಜ್ಯ ಸರ್ಕಾರ ಶನಿವಾರ ಮತ್ತು ಭಾನುವಾರ ವೀಕ್ ಎಂಡ್ ಲಾಕ್‌ಡೌನ್ ಘೋಷಿಸಿದ್ದರೂ, ನಗರಸಭೆ ಚುನಾವಣೆ ಹಿನ್ನೆಲೆ ನಗರದ 35 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತರಳಿ ಮತಯಾಚನೆ ನಡೆಸಿದರು.
ಬಹುತೇಕ ಗ್ರಾಮೀಣ ಪರಿಸರ ಹೊಂದಿರುವ ಭಂಡಾರಹಳ್ಳಿ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.35ರಲ್ಲಿ ಒಟ್ಟು 3032ಮತದಾರರಿದ್ದು, 5 ಜನ ಕಣದಲ್ಲಿದ್ದಾರೆ. ಬಹುತೇಕ ಒಕ್ಕಲಿಗ ಸಮುದಾಯದವರು ಹೆಚ್ಚಾಗಿರುವ ಈ ವಾರ್ಡ್‌ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಗಂಗಾಧರ್‌ರವರು ತಮ್ಮ ಸೊಸೆ ಶೃತಿ ವಸಂತ್‌ಕುಮಾರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಜೆಡಿಎಸ್‌ನಿಂದ ಹಿರಿಯ ಮಹಿಳೆ ನಿಂಗಮ್ಮ ಸ್ಪರ್ಧಿಸುತ್ತಿದ್ದ, ಬಿಜೆಪಿಯ ಲಕ್ಷ್ಮಮ್ಮ ನರಸಿಂಹಗೌಡ ಚುನಾವಣಾ ಕಣದಲಿದ್ದಾರೆ. ಈ ಇಬ್ಬರಿಗೂ ಇದು ಮೊದಲ ಚುನಾವಣೆಯಾಗಿದ್ದು, ಸ್ನೇಹಜೀವಿ ಬಳಗದ ಸದಸ್ಯೆ ಸುಧಾ ಶಿವಪ್ಪ ಸೇರಿದಂಥೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ವಾರ್ಡ್ ನಂ. 34 ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹಗಳನ್ನು ಹೊಂದಿದ್ದು, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಅಪ್ಪರ್ ಹುತ್ತಾ ವ್ಯಾಪ್ತಿಯನ್ನು ಒಳಗೊಂಡಿದೆ. ಒಟ್ಟು 3032 ಮತದಾರರಿದ್ದು, 4 ಜನ ಚುನಾವಣಾ ಕಣದಲ್ಲಿದ್ದಾರೆ.
ಭಾಗ್ಯಮ್ಮ ಮಂಜುನಾಥ್‌ರನ್ನು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದು, ಹಿಂದೂಪರ ಹಾಗೂ ವಿವಿಧ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಲತಾ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದಿಂದ, ಶ್ಯಾಮಲ ಸತ್ಯಣ್ಣ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಒಬ್ಬರು ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದಾರೆ. ಕಳೆದ 2 ಬಾರಿ ಜೆಡಿಎಸ್ ಪಕ್ಷದ ಎಚ್.ಬಿ ರವಿಕುಮಾರ್ ಆಯ್ಕೆಯಾಗಿದ್ದರು. 3 ಪಕ್ಷಗಳ ಅಭ್ಯರ್ಥಿಗಳ ನಡೆವೆ ಪ್ರಬಲ ಪೈಪೋಟಿ ಇದ್ದು, ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹಗಳನ್ನು ಹೊಂದಿರುವ ಹಾಗೂ ಹುತ್ತಾಕಾಲೋನಿ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್ ನಂ.33ರಲ್ಲಿ ಒಕ್ಕಲಿಗ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಟ್ಟು 4,320 ಮತದಾರರಿದ್ದು, 6 ಜನ ಕಣದಲ್ಲಿದ್ದಾರೆ.
ಜೆಡಿಎಸ್‌ನಿಂದ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಸಮಾಜ ಸೇವಕ ಬಿ.ವಿ ಕೃಷ್ಣರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹಾಲಿ ನಗರಸಭಾ ಸದಸ್ಯ ಎಚ್.ಬಿ ರವಿಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಶ್ರೀಧರ ಗೌಡ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಸ್ನೇಹ ಜೀವಿ ಬಳಗದ ಸದಸ್ಯೆ ಶಶಿಕಲಾ ಸೇರಿದಂತೆ 3 ಮಂದಿ ಕಣದಲ್ಲಿದ್ದಾರೆ.
ಭಗೀರಥ ಗುರುಪೀಠದ ಶ್ರೀಗಳಿಂದ ಆಶೀರ್ವಾದ:
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ 4ನೆಯ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮಾ ಚನ್ನೇಶ್ ಹೊಸದುರ್ಗದ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಉಪ್ಪಾರ ಸಮಾಜ ಅಧಿಕೃತವಾಗಿ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಕೆ ಗಿರೀಶ್ ಉಪ್ಪಾರ ಅವರ ನೇತೃತ್ವದಲ್ಲಿ ಹೊಸದುರ್ಗಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post