ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರಸಭೆಯ ಸರ್‌ಎಂವಿ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್ ಅವರು 2026-27ನೇ ಸಾಲಿಗೆ 1.46 ಕೋಟಿಯ ಉಳಿತಾಯ ಬಜೆಟ್ #Bhadravathi Municipal Budget ಅನ್ನು ಮಂಡಿಸಿದರು.
ಸಾಮಾನ್ಯ ಸಭೆಯಲ್ಲಿ ಆಯವ್ಯಯ ಮಂಡಿಸಿದ ಅವರು, 2026-27ನೇ ಸಾಲಿನಲ್ಲಿ ನಗರಸಭೆಗೆ 148.08 ಕೋಟಿ ಆದಾಯ ನಿರೀಕ್ಷಿಸಿದ್ದು, 146.62 ಕೋಟಿ ವೆಚ್ಚ ಆಗಲಿದೆ, ಎಂದು ಮಾಹಿತಿ ನೀಡಿದರು.
ನಗರಸಭೆಗೆ ರಾಜಸ್ವ ಅನುದಾನದಿಂದ 54.76 ಕೋಟಿ ಹಾಗು ಸ್ವಂತ ಮೂಲದಿಂದ 33.51 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ರಾಜಸ್ವ ಅನುದಾನದಲ್ಲಿ ವಿದ್ಯುತ್ ಅನುದಾನ 16.50 ಕೋಟಿ ಹಾಗು ಎಸ್‌ಎಫ್ ಸಿ ವೇತನ ಅನುದಾನ 11.81 ಕೋಟಿ ಸೇರಿದೆ. ಆಸ್ತಿ ತೆರಿಗೆ ರೂಪದಲ್ಲಿ 8.70 ಕೋಟಿ, ಆಸ್ತಿ ತೆರಿಗೆಗೆ ಸಂಬಂಧಿಸಿದ ದಂಡ ಮತ್ತು ಜುಲ್ಮಾನೆಯಾಗಿ 1.51 ಕೋಟಿ, ನೀರು ಮತ್ತು ಒಳಚರಂಡಿ ಶುಲ್ಕವಾಗಿ 4.80 ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕವಾಗಿ 1.05 ಕೋಟಿ ಹಣ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
2026-27ನೇ ಸಾಲಿನ ಬಜೆಟ್ ಹೈಲೈಟ್ಸ್
- ನಿರೀಕ್ಷಿತ ಆದಾಯ 148.08 ಕೋಟಿ
- ನಿರೀಕ್ಷಿತ ವೆಚ್ಚ 146.62 ಕೋಟಿ
- ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಎಸ್
- ಬೊಮ್ಮನಕಟ್ಟೆ ಕೆರೆ ಪುನಶ್ಚೇತನಕ್ಕೆ 1.60 ಕೋಟಿ
- ನೀರು ಶುದ್ಧೀಕರಣ ಘಟಕಗಳ ಮೇಲೆ ಸೌರ ಶಕ್ತಿ ಪ್ಯಾನೆಲ್
ಉಪಾಧ್ಯಕ್ಷ ಮಹಮ್ಮದ್ ಬಷೀರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿ ನಾರಾಯಣ್ ಹಾಗೂ ಪೌರಾಯುಕ್ತ ಕೆ.ಎನ್.ಹೇಮಂತ್, ಹಿರಿಯ ಸಿಬ್ಬಂದಿ ನರಸಿಂಹಮೂರ್ತಿ ಸ್ವಾಗತಿಸಿದರು.
ಸಭೆಯ ಆರಂಭದಲ್ಲಿ ನಾಡಗೀತೆ ಮೊಳಗಿತು. ಇತ್ತೀಚೆಗೆ ಮಡಿದ ಮಾಜಿ ನಗರಸಭಾ ಸದಸ್ಯ ಹಾಗೂ ಕಾರ್ಮಿಕ ಮುಖಂಡ ಕೆ.ಎನ್.ಭೈರಪ್ಪಗೌಡ, ಕಾರ್ಮಿಕ ಮುಖಂಡ ಡಿ.ಸಿ.ಮಾಯಣ್ಣ, ನಗರಸಭೆ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಮಂಜುನಾಥ್, ಹನುಮಂತಪ್ಪ, ಕಪಿಲ್ ನಿಧನಕ್ಕೆ ಮೌನಾಚರಣೆ ಸಲ್ಲಿಸಲಾಯಿತು. ನೂತನ ನಾಮನಿರ್ದೇಶನ ಐವರು ಸದಸ್ಯರನ್ನು ಸ್ವಾಗತಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















