ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಏ.30ರ ನಾಳೆ ಹಳೇನಗರದ ಸಂಚಿಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಶಾಲೆಯಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರಕಾಶ್ ಹೇಳಿದರು.
ಸುದ್ಧಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಟ್ಟು 5 ಕೊಠಡಿಗಳಲ್ಲಿ 21 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ, ಮತ ಎಣಿಕೆ ಸ್ಥಳಕ್ಕೆ ಅಭ್ಯರ್ಥಿ ಅಥವಾ ಅವರ ಬೆಂಬಲಿಗ ಪ್ರತಿನಿಧಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು, ಎರಡು ಸುತ್ತಿನಲ್ಲಿ ಎಣಿಕೆ ನಡೆಯಲಿದೆ. ಮೊದಲ ಸುತ್ತಿನಲ್ಲಿ 21 ವಾರ್ಡ್‌ಗಳ ಹಾಗೂ ಎರಡನೆಯ ಸುತ್ತಿನಲ್ಲಿ 13 ವಾರ್ಡ್‌ಗಳ ಎಣಿಕೆ ಕಾರ್ಯ ನಡೆಯಲಿದ್ದು, 10 ಗಂಟೆಗೆಲ್ಲಾ ಪೂರ್ಣ ಪ್ರಮಾಣದ ಫಲಿತಾಂಶ ದೊರೆಯುತ್ತದೆ ಎಂದು ಹೇಳಿದರು.
ಕೊರೋನಾ ನಿಯಂತ್ರಣಕ್ಕಾಗಿ ಜನತಾಕರ್ಫ್ಯೂ ಜಾರಿಯಿರುವುದರಿಂದ ನಾಗರೀಕರು ಮತ ಎಣಿಕೆ ಕೆಂದ್ರದ ಸುತ್ತಮುತ್ತ ಸೇರುವಂತಿಲ್ಲ. ಮತ ಎಣಿಕೆ ಕೆಂದ್ರದ ಬಳಿಯಾಗಲಿ ಅಥವಾ ಅವರ ವಾರ್ಡ್‌ಗಳಲ್ಲಾಗಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುವಂತಿಲ್ಲ. ಸಾರ್ವಜನಿಕರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಡಿವೈಎಸ್ಪಿ ಕೃಷ್ಣಮೂರ್ತಿ ಮಾತನಾಡಿ, ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದು, ಮತ ಎಣಿಕೆ ಕೇಂದ್ರದ ಬಳಿ ಗುಂಪು ಸೇರುವಂತಿಲ್ಲ. ನಗರದಲ್ಲಿ ಎಲ್ಲಿಯೂ ಪಟಾಕಿಸಿಡಿಸಿ ವಿಜಯೋತ್ಸವ ಆಚರಿಸುವಂತಿಲ್ಲ, ಆ ರೀತಿ ಏನಾದರು ಕಂಡುಬಂದಲ್ಲಿ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂದರು.
ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಂಡಕಿ ಮಾತನಾಡಿ, ಮತ ಎಣಿಕೆ ಕೆಂದ್ರ ಹಾಗೂ ಸುತ್ತಮುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಒಬ್ಬರು ಡಿವೈಎಸ್ಪಿ, 10ಜನ ಪಿಎಸ್‌ಐ, 3 ಸಿಪಿಐ, 1 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ೨೫೦ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಆಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್, ತಾಪಂ ಕಾಯ ನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರ್ ಉಪಸ್ಥಿತರಿದ್ದರು. ಸಭೆಯಲ್ಲಿ ಮತ ಎಣಿಕೆ ಕಾರ್ಯಕ್ಕೆ ನಿಯೋಜಿತರಾದ ಸಿಬ್ಭಂದಿಗಳು ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post