ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ತಾಲ್ಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಭೂಮಿಯ ಸ್ವಾಧೀನಾನುಭವ ಹೊಂದಿರದವರಿಗೆ ಭೂ ಮಂಜೂರಾತಿ ಮಾಡುವುದು, ಮಂಜೂರಾತಿಯ ದಾಖಲೆಗಳೇ ಇಲ್ಲದಿದ್ದರೂ ಅಕ್ರಮವಾಗಿ ಪೋಡು ಮಾಡಿ, ಖಾತೆ ಮಾಡಿ ಕೊಟ್ಟಿರುತ್ತಾರೆ ಎಂದು ನ್ಯಾಯವಾದಿ ಹಾಗೂ ನೈರುತ್ಯ ಪದವೀಧರರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಜಿ.ಆರ್. ಷಡಾಕ್ಷರಪ್ಪ ಆರೋಪಿಸಿದರು.
ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಇಂತಹ ಹಲವು ಪ್ರಕರಣಗಳಿವೆ. ಹೊಳೆಹೊನ್ನೂರು ಹೋಬಳಿಯ ಜಂಬರಗಟ್ಟ ಗ್ರಾಮದ ಸರ್ವೆ ನಂ.76/1ರಲ್ಲಿ ಹಿಂದಿನಿಂದಲೂ ಗ್ರಾಮಸ್ಥರು ಶವಸಂಸ್ಕಾರ ಮಾಡುತ್ತಾ ಬರುತ್ತಿದ್ದಾರೆ. ಸದರಿ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡುವಂತೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದರೆ, ಈ ಜಾಗವನ್ನು ಬಗರ್‍ಹುಕುಂ ಮಂಜೂರಾತಿ ಮಾಡಲಾಗಿದೆ ಎಂದು ಹಿಂಬರಹ ನೀಡಿರುತ್ತಾರೆ. ಸಾರ್ವಜನಿಕ ಉದ್ದೇಶಕ್ಕೆ ಬಳಸುತ್ತಿದ್ದ ಜಾಗವನ್ನು ಅನಧಿಕೃತವಾಗಿ 2003-04ರಲ್ಲಿ ಜಿಯಾಉಲ್ಲಾಖಾನ್ ಬಿನ್ ಹಮೀದ್ ಖಾನ್ ಎಂಬುವವರಿಗೆ 3 ಎಕರೆ 39 ಗುಂಟೆ ಮಾಡಲಾಗಿದ್ದು, 2022-23ರಲ್ಲಿ ಜಿಯಾಉಲ್ಲಾಖಾನ್ ನಾಗರಾಜ ಜಿ.ಎಲ್. ಬಿನ್ ಲಿಂಗರಾಜಪ್ಪ ಇವರಿಗೆ 1 ಎಕರೆ 20 ಗುಂಟೆ ಜಾಗವನ್ನು ಪೋಡು ಮಾಡಿ ಕ್ರಯ ಮಾಡಲಾಗಿದೆ. ನಂತರ ಇವರಿಗೆ ಖಾತೆ ಮಾಡಲಾಗಿದೆ. ಆದರೆ, ತಾಲ್ಲೂಕು ಕಚೇರಿಯಲ್ಲಿ ಸದರಿ ಜಮೀನು ಮಂಜೂರಾತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯ ಇರುವುದಿಲ್ಲ. ಸದರಿ ಜಾಗವನ್ನು ಗ್ರಾಮಸ್ಥರು ನೂರಾರು ವರ್ಷಗಳಿಂದ ಸ್ಮಶಾನವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಸದರಿ ಜಾಗದಲ್ಲಿ ಜಿಯಾಉಲ್ಲಾ ಖಾನ್ ಆಗಲೀ ನಾಗರಾಜ ಜಿ.ಎಲ್. ಅವರಾಗಲೀ ಕೃಷಿ ಚಟುವಟಿಕೆಯನ್ನು ನಡೆಸುತ್ತಿಲ್ಲ, ಅಥವಾ ಸ್ವಾಧೀನಾನುಭವದಲ್ಲೂ ಇಲ್ಲ. ಆದರೆ, ತಾಲ್ಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಮನಬಂದಂತೆ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಜಾಗಗಳನ್ನು ಕಬಳಿಸುವ ವ್ಯಕ್ತಿಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.
Also read: ಬೆಂಗಳೂರು | ಗುರುಪುಷ್ಯ ಯೋಗ | ಜಯನಗರ ರಾಯರ ಮಠದಲ್ಲಿ ದೀಪೋತ್ಸವ
ಭದ್ರಾವತಿ ತಾಲ್ಲೂಕಿನ ಕಸಬಾ 1ನೇ ಹೋಬಳಿ ಮಜ್ಜಿಗೇನಹಳ್ಳಿಯ ಸರ್ವೆ ನಂಬರ್ 22ರಲ್ಲಿ 54 ಎಕರೆ 25 ಗುಂಟೆ 10 ಸೆಂಟ್ ಜಮೀನಿದ್ದು, ಇದರಲ್ಲಿ ದನಗಳ ಮುಫತ್ತು 9 ಎಕರೆ 18 ಗುಂಟೆ ಇತ್ತು. ಸರ್ವೆ ನಂಬರ್ 22ನ್ನು 2022ರಲ್ಲಿ ಪೋಡಿ ಮಾಡಿ ಒಟ್ಟುಗೂಡಿಸುವ ಸಂದರ್ಭದಲ್ಲಿ ದನಗಳ ಮುಫತ್ತು ಜಾಗವನ್ನು ಈ ಹಿಂದಿನ ತಹಶೀಲ್ದಾರ್ ಪ್ರದೀಪ್ ನಿಕ್ಕಮ್ ಖಾಸಗಿ ವ್ಯಕ್ತಿಗಳಿಗೆ ಕಾನೂನು ಬಾಹಿರವಾಗಿ ಖಾತೆ-ಪಹಣಿ ಮಾಡಿ ಕೊಟ್ಟಿದ್ದಾರೆ. ಪೋಡಿ ಮಾಡುವ ಸಂದರ್ಭದಲ್ಲೇ ನಾನು ಜಿಲ್ಲಾಡಳಿತ ಮತ್ತು ತಹಶೀಲ್ದಾರ್‍ಗೆ ದನಗಳ ಮುಫತ್ತು ಜಾಗವನ್ನು ಉಳಿಸುವಂತೆ ಮನವಿ ಮಾಡಿದ್ದೆ. ಆದರೂ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಖಾತೆ-ಪಹಣಿ ಮಾಡಿಕೊಟ್ಟು ಅಕ್ರಮವೆಸಗಿದ್ದಾರೆ ಎಂದು ದೂರಿದರು.
ಗುಡುಮಘಟ್ಟೆ ಸರ್ವೆ ನಂಬರ್ 43ರಲ್ಲಿ ಮಂಜೋಜಿರಾವ್ ಬಿನ್ ರಂಗೋಜಿರಾವ್ ಇವರ ಹೆಸರಿಗೆ 4 ಎಕರೆ 20 ಗುಂಟೆ ಜಮೀನನ್ನು ದಿನಾಂಕ: 09-02-2023ರಂದು ಬಗರ್ ಹುಕುಂ ಮಂಜೂರಾತಿ ಮಾಡಿರುತ್ತಾರೆ. ಈ ಕುಟುಂಬಕ್ಕೆ ಈಗಾಗಲೇ ಸಾಕಷ್ಟು ಜಮೀನು ಇರುವುದರಿಂದ ಬಗರ್ ಹುಕುಂ ಸಮಿತಿ ಮಂಜೂರಾತಿ ನೀಡದಂತೆ ತೀರ್ಮಾನ ಮಾಡಿರುತ್ತದೆ. ಹಾಗೆಯೇ ಆರ್.ಐ., ವಿ.ಎ. ಎಲ್ಲರೂ ಮಂಜೂರಾತಿ ನೀಡದಂತೆ ವರದಿ ನೀಡಿರುತ್ತಾರೆ. ಆದರೆ, ಇದೆಲ್ಲವನ್ನೂ ಬದಿಗಿಟ್ಟು ಪ್ರದೀಪ್ ನಿಕ್ಕಮ್‍ರವರು ಮಂಜೂರಾತಿ ನೀಡಿರುತ್ತಾರೆ. ತಮ್ಮ ತಪ್ಪು ಗೊತ್ತಾಗಬಾರದೆಂದು ದಿನಾಂಕ: 17-02-2023ರಂದು ಮಂಜೂರಾತಿ ವಜಾ ಮಾಡುವಂತೆ ಉಪವಿಭಾಗಾಧಿಕಾರಿಗೆ ಪತ್ರ ಬರೆದಿರುವುದಲ್ಲದೇ ಈ ಪ್ರಕರಣದ ಯಾವುದೇ ದಾಖಲಾತಿಗಳನ್ನು ಕಚೇರಿಯ ದಾಖಲೆಗಳ ವಿಭಾಗಕ್ಕೆ ಕಳುಹಿಸದೇ ಬಚ್ಚಿಟ್ಟಿರುತ್ತಾರೆ.
ಭದ್ರಾವತಿ ತಾಲ್ಲೂಕು ಬಿಳಿಕಿ ಗ್ರಾಮದ ಸರ್ವೆ ನಂ.62ರಲ್ಲಿ 28 ಎಕರೆ 1 ಗುಂಟೆ ಕೆರೆ ಇದ್ದು, ಈ ಕೆರೆಯ ಸುಮಾರು 1 ಎಕರೆ ಜಾಗವನ್ನು ಒತ್ತುವರಿ ಮಾಡಿ ಖಾಸಗಿ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲು ಅವಕಾಶ ಕೊಡಲಾಗಿದೆ. ಈ ಬಗ್ಗೆ ಹಲವಾರು ಬಾರಿ ಸಾರ್ವಜನಿಕರು, ಗ್ರಾಮಸ್ಥರು ದೂರು ನೀಡಿದರೂ ಒತ್ತುವರಿ ತೆರವುಗೊಳಿಸಿಲ್ಲ. ಸರ್ವೆ ಮಾಡಿದ ಸರ್ವೇಯರುಗಳು ಒತ್ತುವರಿಯಾಗಿಲ್ಲ ಎಂದು ಸುಳ್ಳು ವರದಿ ನೀಡಿದ್ದಾರೆ. ಇತ್ತೀಚೆಗೆ ಪುನರ್ ಸರ್ವೆ ಮಾಡಿಸಿದಾಗ ಒತ್ತುವರಿಯಾಗಿರುವುದು ಕಂಡುಬಂದಿರುತ್ತದೆ.
ಈ ರೀತಿ ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಕಬಳಿಕೆಗೆ ಪ್ರತ್ಯಕ್ಷವಾಗಿ ಬೆಂಬಲವಾಗಿ ನಿಂತಿದ್ದ ಹಿಂದಿನ ತಹಶೀಲ್ದಾರ್ ಪ್ರದೀಪ್ ನಿಕ್ಕಮ್ ಮತ್ತು ತಾಲ್ಲೂಕು ಕಚೇರಿಯ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಭೂ ಮಂಜೂರಾತಿ, ಖಾತೆ-ಪಹಣಿ ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಬೇಕಾಬಿಟ್ಟಿ ವರದಿ ನೀಡುವ ಅರಣ್ಯ ಇಲಾಖೆ ಅಧಿಕಾರಿಗಳು:
ಮಂಜೋಜಿರಾವ್ ಬಿನ್ ರಂಗೋಜಿರಾವ್ ಇವರಿಗೆ ಜಮೀನು ಮಂಜೂರಾತಿ ಸಂಬಂಧ ಶಾಂತಿಸಾಗರ ವಲಯ ಅರಣ್ಯಾಧಿಕಾರಿಗಳು ಸರ್ವೆ ನಂ.43ರ ಸದರಿ ಜಾಗ ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ವರದಿ ನೀಡುತ್ತಾರೆ. ಆದರೆ, ಇತ್ತೀಚೆಗೆ ಅದೇ ಸವೇ ನಂ.43 ಅರಣ್ಯ ಇಲಾಖೆಗೆ ಸೇರಿದ್ದು ಎಂದು ಒತ್ತುವರಿ ತೆರವುಗೊಳಿಸುತ್ತಾರೆ. ಅದೇ ರೀತಿ ಚಿತ್ರಪ್ಪ ಯರಬಾಳ ಅವರ ಸ್ವಂತ ಖಾತೆ ಜಮೀನನ್ನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅವರ ಮೇಲೆ ಸುಳ್ಳು ಕೇಸು ದಾಖಲಿಸುತ್ತಾರೆ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸಿ, ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಜಿಪಿಎಸ್ ಫೋಟೋಗಳ ಸಹಿತ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳ ಈ ವರ್ತನೆ ಖಂಡನೀಯ. ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿರುವ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕು. ಕರ್ತವ್ಯಲೋಪವೆಸಗುತ್ತಿರುವ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿ.ಎನ್.ರಾಜು, ಚಿತ್ರಪ್ಪ ಯರಬಾಳ, ಎಂ.ಅಣ್ಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post