ಭದ್ರಾವತಿ: ಜನಪದ ಕಲೆಗಳು ಅಗಾಧ ಸಮುದ್ರವಿದ್ದಂತೆ. ನಶಿಸುತ್ತಿರುವ ಜನಪದ ಕಲೆಗಳ ಪ್ರತಿಯೊಬ್ಬರು ಕಲಿಕೆಗೆ ಆಸಕ್ತಿ ತೋರುವಂತಾಗಬೇಕೆಂದು ಕರ್ನಾಟಕ ಜಾನಪದ ಪರಿಷತ್ ಹಾಗು ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಜಿಲ್ಲಾಧ್ಯಕ್ಷ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಅವರು ಗುರುವಾರ ನ್ಯೂಟೌನ್ ಸರ್.ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆ, ಸರ್.ಎಂ.ವಿ.ಕಲಾ ಮತ್ತು ವಾಣಿಜ್ಯ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲೆಗಳ ಕಲಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜನಪದ ಕಲಿಕೆಗಳಲ್ಲಿ ಸ್ಥಿರವ್ಯವಸ್ಥೆ ಇಲ್ಲದೆ ನಶಿಸುವಂತಾಗಿದೆ. ಕಲೆಯ ಮೂಲ ಸೃಜನಾತ್ಮಕ ಶೀಲವಾಗಿದೆ. ಕಲೆಗಳಿಗೆ ಜಾತಿ, ಧರ್ಮಗಳು ಸೀಮಿತವಾಗಿಲ್ಲ. ಕಲೆಗಳನ್ನು ಅಳವಡಿಸಿಕೊಂಡವೆರಲ್ಲರು ಸಮಾನರೆ ಎಂಬುದನ್ನು ತಿಳಿಸುತ್ತದೆ. ಅಂದು ಬ್ರಿಟೀಷರು ಭಾರತ ದೇಶಕ್ಕೆ ಆಗಮಿಸದಿದ್ದಲ್ಲಿ ಮಾತನಾಡುವ ಭಾಷೆಗಳ ಮೇಲೆ ಹಿಡಿತವಿರುತ್ತಿರಲಿಲ್ಲ. ಇದರಿಂದ ಅಪಸ್ವರ ಕೇಳಿಬರುತ್ತಿತ್ತು. 1902 ರಲ್ಲಿ ಅನೇಕ ಭಾಷೆಗಳನ್ನಾಡುವ ಜನಾಂಗದವರಿದ್ದರು. ಆದರೂ ಕನ್ನಡ ಭಾಷೆಯು ಕವಿಮಾರ್ಗದ ಮೂಲಕ ಕನ್ನಡ ಭಾಷೆ ಉಗಮವಾಗಿದೆ. ಆಂಗ್ಲ ಮತ್ತು ಹಿಂದಿ ಭಾಷೆಗಳ ಅಸ್ಥಿತ್ವದಲ್ಲಿರದ ಸಂದರ್ಭದಲ್ಲಿ ಕನ್ನಡ ಭಾಷೆಯು ಅಸ್ಥಿತ್ವ ಉಳಿಸಿಕೊಂಡಿದೆ. ಈಗ ಅನ್ಯ ಭಾಷೆಗಳ ಆಗಮನದಿಂದ ಕನ್ನಡ ಕಣ್ಮರೆಯಾಗುತ್ತಿದೆ. ಇದನ್ನು ಉಳಿಸುವ ಯತ್ನ ಪ್ರತಿಯೊಬ್ಬ ಕನ್ನಡಿಗರಲ್ಲಿ ಮೂಡಿ ಬರಬೇಕಿದೆ. ಕರ್ಸಾಲ ಮೇಳ, ಕೋಲಾಟ, ಸುಗ್ಗಿಕುಣಿತ, ಜನಪದ ಹಾಡುಗಳನ್ನು ಕರಗತ ಮಾಡಿಕೊಂಡಿರುವವರು ಮತ್ತೊಬ್ಬರ ಕಲಿಕೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಕಲೆಗಳು ಅವರಿಂದಲೇ ಅವಸಾನದತ್ತ ಸಾಗಲಿವೆ. ದೀಪಾವಳಿ ಸಂದರ್ಭದಲ್ಲಿ ಆಗಮಿಸುವ ಅಂಟಿಕೆ-ಪಿಂಟಿಕೆ ಕಲೆಯು ಒಂದು ಹಬ್ಬಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಇನ್ನುಳಿದ ಜಾನಪದ ಕಲೆಗಳು ನಿರಂತರವಾಗಿರುವುದ ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಟಿ.ಮಂಜುನಾಥ್ ಮಾತನಾಡಿ ಕಲೆಗಳು ಮನುಷ್ಯನ ಬದುಕಿನ ಆರಂಭದಿಂದಲೂ ಆಗಮಿಸಿವೆ. ಈ ಹಿಂದೆ ಕಲೆಗಳು ಮನುಷ್ಯನ ಅವಿಬಾಜ್ಯ ಅಂಗವಾಗಿದೆ. ಜಾನಪದ ಬದುಕು ದುಡಿಮೆಯಾಗಿರುವುದರಿಂದ ಅದನ್ನು ಕಳೆದುಕೊಳ್ಳಬಾರದು. ಇಂದು ಕೃಷಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಾವಿದರು ಹಿಂದಿನಿಂದಲೂ ಕರಗತ ಕಲೆಗಳು ಸಹ ಇಂದು ಅದೇ ಸ್ಥಿತಿ ನಿರ್ಮಾಣವಾಗಿದೆ. ಜನಪದ ಕಲೆಗಳು ಉಳಿದುಕೊಂಡಲ್ಲಿ ಆತ್ಮಸ್ಥೈರ್ಯ ಉಳಿಯುತ್ತದೆ. ಮನುಷ್ಯನು ಖಿನ್ನತೆಯಿಂದ ಆತ್ಮಹತ್ಯೆಯ ಮಾರ್ಗಕಂಡುಕೊಂಡಿರುವುದು ವಿಷಾಧನೀಯ ಎಂದರು.
ಕಾಲೇಜಿನ ಸಾಂಸ್ಕøತಿಕ ವೇದಿಕೆಯ ಸಂಚಾಲಕ ಡಾ.ಡಿ.ಶಿವಲಿಂಗೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿ ಜಾನಪದ ಕಲೆಗಳು ಜನರಂಜನೆಯ ಮಾಧ್ಯಮವಾಗಿದೆ. ಇಂದು ಜಾನಪದ ಕಲೆಗಳು ನಶಿಸುತ್ತಿದ್ದು ಕಣ್ಮರೆಯಾಗುತ್ತಿರುವ ಕಲೆಗಳನ್ನು ಉಳಿಸಿಕೊಳ್ಳಲು ಯುವಪೀಳಿಗೆ ಮುಂದಾಗಿ ಎಲ್ಲವನ್ನು ಹಾಳು ಮಾಡಿಕೊಳ್ಳದೆ ಸಾಹಿತ್ಯದ ಮೂಲಕ ಆಧುನಿಕ ಬದುಕುಕಟ್ಟಿಕೊಳ್ಳಬೇಕಿದೆ ಎಂದರು.
ಜನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಟಿ.ಚಂದ್ರಪ್ಪ, ಗೌರವಾಧ್ಯಕ್ಷ ವೆಂಕಟರಮಣಶೇಟ್ ಮಾತನಾಡಿದರು. ಉಪನ್ಯಾಸಕರಾದ ಚಂದ್ರಪ್ಪ, ನಜೀರ್, ಸುಮಾ, ವೇದಿಕೆಯ ಎಲ್.ದೇವರಾಜ್, ಕೆ.ಎಸ್.ಮೌನೇಶ್ವರಚಾರ್, ಸಿ.ಎಚ್.ಚನ್ನಬಸಪ್ಪ, ಕೋಡ್ಲು ಯಜ್ಞಯ್ಯ ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ ರೇವಣಪ್ಪ ಮತ್ತು ತಂಡದವರು ಸ್ವಚ್ಛ ಭಾರತ ಅಭಿಯಾನದ ಕುರಿತ ಗೀಗೀಪದ ಪಠಿಸಿದರು. ಚಕ್ರಸಾಲಿ ತಂಡದವರಿಂದ ಕೋಲಾಟ, ಹರ್ಷಾ ಮತ್ತು ತಂಡದವರಿಂದ ಜನಪದ ಹಾಡುಗಳು ಹಾಗು ಪ್ರಭಯ್ಯ ತಂಡದವರಿಂದ ಕರ್ಪಾಳ ಮೇಳ ಕಾರ್ಯಕ್ರಮಗಳು ನಡೆದು ಎಲ್ಲರ ಮನಸೂರೆಗೊಂಡಿತು. ವಿದ್ಯಾರ್ಥಿನಿ ನಿರ್ಮಲಾ ಜಾನಪದ ಹಾಡಿನ ಮೂಲಕ ಪ್ರಾರ್ಥಿಸಿದರೆ, ಸ್ನಾತಕೋತ್ತರ ವಿದ್ಯಾರ್ಥಿ ಮಂಜಾನಾಯ್ಕ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post