ಭದ್ರಾವತಿ: ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ಹಾಗೂ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಟಾಪಿಸಲಾಗಿರುವ 47 ನೇ ವರ್ಷದ ಗಣೇಶ ವಿಸರ್ಜನಾ ಕಾರ್ಯಕ್ರಮಕ್ಕೆ ಮಂಗಳವಾರ ಬೆಳಿಗ್ಗೆ ಶಾಸಕ ಬಿ.ಕೆ. ಸಂಗಮೇಶ್ವರ್, ತಹಸೀಲ್ದಾರ್ ಸೋಮಶೇಖರ್ ವಿಶೇಷ ಪೂಜಾ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ಭಕ್ತರ ಘೋಷಣೆಗಳೊಂದಿಗೆ ಶ್ರೀ ವಿನಾಯಕ ಮೂರ್ತಿಯ ವಿಸರ್ಜನೆ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ನೆರವೇರಿತು.
ಶ್ರೀ ಮೂರ್ತಿಯನ್ನು ಹೊಸಮನೆ ಶಿವಾಜಿ ವೃತ್ತದಿಂದ ಮೆರವಣಿಗೆ ಮೂಲಕ ಸಾಗುತ್ತಿದ್ದ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ನೆರೆದಿದ್ದ ಜನಸ್ತೋಮದ ನಡುವೆ ಸಾಗಿದರು.
ಹೆಚ್ಚಿನ ಪೊಲೀಸ್ ಬಂದೋಬಸ್ತಿನ ನಡುವೆ ಪ್ರಮುಖ ರಸ್ತೆಗಳಲ್ಲಿ ಸಾಗಿದ ಉತ್ಸವ ಮೂರ್ತಿ ಗಣಪತಿಯನ್ನು ರಸ್ತೆಯುದ್ದಕ್ಕೂ ಭಕ್ತಾದಿಗಳು ಪೂಜೆ ಸಲ್ಲಿಸಿದರು.
ಮಂದಗತಿಯಲ್ಲಿ ಸಾಗುತ್ತ ಸಂಜೆ 4 ಗಂಟೆಗೆ ರಂಗಪ್ಪ ವೃತ್ತ ತಲುಪಿದಾಗ ಯುವಕರ ಪಡೆ ಜೈ ಶ್ರೀರಾಮ್, ಹಿಂದೂ ನಾವೆಲ್ಲ ಒಂದು ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ನಡುವೆ ಬೈಕ್ ರ್ಯಾಲಿ ನಿಷೇಧಿಸಿದ್ದರು ಸಹ ಕೆಲವು ಯುವಕರು ಬೈಕ್‍ಗಳ ಕರ್ಕಶ ಶಬ್ದ ಮಾಡುತ್ತಾ ಕೇಸರಿ ಧ್ವಜಗಳನ್ನು ಹಿಡಿದು ರಸ್ತೆಗಳಲ್ಲಿ ಸಾಗಿದರು. ರಸ್ತೆ ಉದ್ದಕ್ಕೂ ಯುವಕ-ಯುವತಿಯರು ಹುಚ್ಚೆದ್ದು ಕುಣಿಯುತ್ತಾ ಸಂತಸ ವ್ಯಕ್ತಪಡಿಸಿದರು.
ಕೆಲವು ಸಂಘ ಸಂಸ್ಥೆಗಳ ಮುಖಂಡರು ಬೃಹತ್ ಹೂವಿನ ಹಾರಗಳನ್ನು ವಿನಾಯಕನಿಗೆ ಸಮರ್ಪಿಸಿ ಭಕ್ತಿಯ ಪರಾಕಾಷ್ಟೆ ಮೆರೆದರು. ನಗರದೆಲ್ಲೆಡೆ ಕೇಸರಿ ಮಯವಾಗಿ ಗೋಚರಿಸುತ್ತಿತ್ತು.
ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡು ನಗರ ಸಂಚಾರ ಬಸ್‍ಗಳನ್ನು ಸ್ಥಗಿತಗೊಳಿಸಲಾಗಿತ್ತು. ಎಂದಿನಂತೆ ಮಂಗಳವಾರ ನಗರದಲ್ಲಿ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದ ಕಾರಣ ಅಘೋಷಿತ ಬಂದ್ ನಂತೆ ಕಾಣುತ್ತಿತ್ತು.
ವಿನಾಯಕ ವಿಸರ್ಜನೆ ಸಂದರ್ಭದಲ್ಲಿ ನಗರದ ನಾನಾ ಭಾಗಗಳಲ್ಲಿ ಉದ್ದಕ್ಕೂ ಚಿತ್ರನ್ನ, ಮೊಸರನ್ನ, ಕೋಸಂಬರಿ, ಕುಡಿಯಲು ನೀರು ವ್ಯವಸ್ಥೆ ಕಲ್ಪಿಸಲಾಗಿತ್ತು. ಮೆರವಣಿಗೆಯು ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಡಾ.ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಹುತ್ತಾ ಕಾಲೋನಿಯಿಂದ ಪುನಃ ಹಿಂದಿರುಗಿ ಅದೇ ಮಾರ್ಗವಾಗಿ ಸಾಗಿದೆ. ರಾತ್ರಿ ನಗರಸಭೆ ಮುಂಭಾಗದ ಭದ್ರಾ ನದಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ವಿನಾಯಕ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.
ಸಮಿತಿ ಅಧ್ಯಕ್ಷ ವಿ.ಕದಿರೇಶ್ ಹಾಗು ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮಹಾಪೌರ ಚನ್ನಬಸಪ್ಪ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಜಿ.ಆನಂದಕುಮಾರ್, ಪ್ರವೀಣ್ ಪಟೇಲ್, ಬಿ.ಎಸ್.ಗಣೇಶ್, ರಾಮಣ್ಣ, ಧರ್ಮಪ್ರಸಾದ್, ಎನ್. ವಿಶ್ವನಾಥರಾವ್, ಕೆ. ಮಂಜುನಾಥ್, ಸುದೀಪ್, ಹೇಮಾವತಿ, ಫೋಕಸ್ ಮಂಜುನಾಥ್, ಐತಾಳ್, ಕೂಡ್ಲಿಗೆರೆ ಹಾಲೇಶ್ ಸೇರಿದಂತೆ ಹಿಂದೂ ಸಂಘಟನೆಗಳಾದ ಕೇಸರಿಪಡೆ, ಹಿಂದೂಪಡೆ, ಶ್ರೀರಾಮಸೇನೆ, ಭಜರಂಗದಳ, ಎಬಿವಿಪಿ ಮುಂತಾದ ಹಿಂದೂಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜ್ ಸೇರಿದಂತೆ ಒಟ್ಟು ಇಬ್ಬರು ವರಿಷ್ಟಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಠಕ್ಕಣ್ಣನವರ್, 8 ಡಿವೈಎಸ್‍ಪಿಗಳು, 17 ಸಿಪಿಐ, 23 ಸಬ್‍ಇನ್ಸ್‍ಪೆಕ್ಟರ್‍ಗಳು, 79 ಎಎಸ್‍ಐ, 796 ಪೇದೆ ಮತ್ತು ಮುಖ್ಯಪೇದೆಗಳು, 350 ಗೃಹ ರಕ್ಷಕದಳ, ಕೆಎಸ್‍ಆರ್‍ಪಿ 400, ಡಿಎಆರ್ 8 ತುಕಡಿಗಳು, ಆರ್‍ಎಎಫ್‍ನ 50 ಜನರ ತಂಡ, ಕ್ಯಾಮರಮನ್ ಒಟ್ಟು 75 ಮಂದಿ, ಎಎನ್‍ಎಸ್‍ನ 30 ಜನರ ತಂಡಗಳೊಂದಿಗೆ ಒಟ್ಟು 1600 ಮಂದಿ ರಕ್ಷಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದರು.
ಮೆರವಣಿಗೆಯ ಇನ್ನಷ್ಟು ಚಿತ್ರಗಳನ್ನು ನೋಡಿ
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post