ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಅವರಿಗೆ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ನಗರಸಭಾ ಸದಸ್ಯ ಬಿ.ಕೆ. ಮೋಹನ್ ಹೇಳಿದರು.
ಅವರು ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಗರಸಭೆ ವತಿಯಿಂದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಡೇ ನಲ್ಮ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಮತ್ತು ಪಟ್ಟಣ ವ್ಯಾಪಾರಿಗಳ ಸಮಿತಿ ಸದಸ್ಯರುಗಳಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೀದಿಬದಿ ವ್ಯಾಪಾರಿಗಳು ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ಪ್ರಸ್ತುತ ಅವರಿಗೆ ಇನ್ನೂ ಹೆಚ್ಚಿನ ಅರಿವು ಅಗತ್ಯವಾಗಿದೆ. ಅವರೊಂದಿಗೆ ನೇರವಾಗಿ ಚರ್ಚಿಸುವ ಮೂಲಕ ಅವರ ಸಮಸ್ಯೆಗಳಿಗೆ ಕಾರಣಗಳನ್ನು ಕಂಡುಕೊಳ್ಳುವ ಜೊತೆಗೆ ಯಾವುದೇ ಅಡೆತಡೆ ಇಲ್ಲದೆ ವ್ಯಾಪಾರ-ವಹಿವಾಟು ನಡೆಸಿಕೊಂಡು ಹೋಗುವ ವಾತಾವರಣ ನಿರ್ಮಿಸಿಕೊಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚನ್ನಪ್ಪ, ಪೌರಯುಕ್ತ ಕೆ. ಪರಮೇಶ್ ಸೇರಿದಂತೆ ಇನ್ನಿತರರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು.
ಸದಸ್ಯರಾದ ವಿಜಯಮ್ಮ, ಸರ್ವಮಂಗಳ, ಬಸವರಾಜ ಬಿ. ಆನೇಕೊಪ್ಪ, ಉದಯಕುಮಾರ್, ಅನುಪಮ, ಅನಿತಾ, ಶಶಿಕಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post