ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಳೆದ ತ್ರೈವಾರ್ಷಿಕ ವರ್ಷದಲ್ಲಿ ವಿಐಎಸ್’ಎಲ್ ಆರ್ಥಿಕವಾಗಿ ಲಾಭದತ್ತ ಸಾಗುತ್ತಿದ್ದು, ಪ್ರಾಧಿಕಾರದ ಕೇಂದ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಬಂಡವಾಳ ತೊಡಗಿಸುವಂತೆ ಕಾರ್ಖಾನೆಯ ಕಾರ್ಮಿಕ ಸಂಘದ ವತಿಯಿಂದ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಗಿದೆ.
ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಪದಾಧಿಕಾರಿಗಳ ನಿಯೋಗ ಸಂಸದರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಚರ್ಚೆ ನಡೆಸಲಾಯಿತು.ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 280 ಕಾಯಂ ಹಾಗು 1340 ಗುತ್ತಿಗೆ ಕಾರ್ಮಿಕರು ಹೆಚ್ಚಿನ ಶ್ರಮ ವಹಿಸಿ ಕಡಿಮೆ ಬಂಡವಾಳದಲ್ಲಿ, ಕಡಿಮೆ ಉತ್ಪಾದನೆಯಲ್ಲಿ ಲಾಭಾಂಶ ಕಂಡುಕೊಳ್ಳುತ್ತಿದೆ. ವಹಿವಾಟು ಸುಮಾರು ರೂ. 400 ಕೋಟಿಗಳಿಗೆ ಹೆಚ್ಚಿಸಲಾಗಿದ್ದು, ಸದ್ಯ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ರೈಲ್ವೆ ಆಕ್ಸೆಲ್’ಗಳಿಗೆ ಪ್ರಾಧಿಕಾರದ ಕೇಂದ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದೆ. ಈ ಬೆಳವಣಿಗೆ ಹಂತದಲ್ಲಿ ಉತ್ಪಾದನೆ ಹೆಚ್ಚಿಸಲು ಪ್ರಸ್ತುತ ಕನಿಷ್ಠ 300 ಕೋಟಿ ರೂಪಾಯಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.
Also Read: ಕಾರಿನಲ್ಲಿ ಸುಟ್ಟು ಕರಕಲಾದ ಪ್ರೇಮಿಗಳು: ಉಡುಪಿಯಲ್ಲೊಂದು ಭೀಕರ ಘಟನೆ
ಉಕ್ಕು ಪ್ರಾಧಿಕಾರ 2020-21ನೆಯ ಮೊದಲ ತ್ರೈವಾರ್ಷಿಕ ಹಣಕಾಸು ವರ್ಷದಲ್ಲಿ 9,597 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಲಾಭಾಂಶ ಸಾಧಿಸಿದ್ದು, ಈ ನಡುವೆ ತನ್ನ ಅಧೀನದಲ್ಲಿರುವ ಪ್ರಮುಖ ಕಾರ್ಖಾನೆಗಳಿಗೆ ಒಟ್ಟು 1.5 ಲಕ್ಷ ಕೋಟಿ ರೂ. ಬಂಡವಾಳ ತೊಡಗಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಪ್ರಾಧಿಕಾರದ ಅಧೀನದಲ್ಲಿಯೇ ಮುಂದುವರೆಸಿ ಅಗತ್ಯವಿರುವ ಬಂಡವಾಳ ಪಡೆಯಲು ಹೆಚ್ಚಿನ ಸಹಕಾರ ನೀಡಬೇಕು. ಲಾಭದತ್ತ ಸಾಗುತ್ತಿರುವ ಕಾರ್ಖಾನೆಗೆ ಬಂಡವಾಳ ತೊಡಗಿಸುವ ಅಗತ್ಯವಿದೆ ಎಂದು ಮನವಿ ಮಾಡಲಾಯಿತು.
ಅಲ್ಲದೇ, ಕಾರ್ಖಾನೆಗೆ ಸೇರಿದ ಸಾಕಷ್ಟು ಖಾಲಿ ಜಾಗದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳುವಂತೆ ರಾಜ್ಯ-ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಮನವಿ ಮಾಡಲಾಗಿದೆ.
ಕಾರ್ಖಾನೆಯ ಹಿನ್ನೆಲೆ ವಿವರ ಉಲ್ಲೇಖ
ಮೈಸೂರು ಸಂಸ್ಥಾನ 1918ರಲ್ಲಿ ಆರಂಭಿಸಿದ ಮೈಸೂರು ವುಡ್ ಡಿಸ್ಟಿಲರಿ ವರ್ಕರ್ಸ್ ಲಿಮಿಟೆಡ್ ಕಾರ್ಖಾನೆಯನ್ನು ನಂತರದ ದಿನಗಳಲ್ಲಿ ಕರ್ನಾಟಕ ಸರ್ಕಾರ ತನ್ನ ಅಧೀನಕ್ಕೆ ಸೇರ್ಪಡೆ ಮಾಡಿಕೊಂಡು ಮೈಸೂರು ಐರನ್ ಸ್ಟೀಲ್ ಲಿಮಿಟೆಡ್(ಎಂಐಎಸ್’ಎಲ್) ಎಂಬ ಹೆಸರನ್ನು ನಾಮಕರಣಗೊಳಿಸಿತು. ನಂತರ 1989ರಲ್ಲಿ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರದ ಅಂಗಸಂಸ್ಥೆಯಾಗಿ ಸೇರ್ಪಡೆಗೊಳಿಸಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಎಂಬ ಹೆಸರನ್ನು ನಾಮಕರಣಗೊಳಿಸಲಾಯಿತು.
Also Read: ಅಬಕಾರಿ ಸುಂಕ ಇಳಿಕೆ: ಶಿವಮೊಗ್ಗದಲ್ಲಿ ಇಂದು ಎಷ್ಟಿದೆ ಪೆಟ್ರೋಲ್, ಡೀಸೆಲ್ ದರ? ಇಲ್ಲಿದೆ ಮಾಹಿತಿ
1998ರಲ್ಲಿ ಪ್ರಾಧಿಕಾರ ಕಾರ್ಖಾನೆಯನ್ನು ಸಂಪೂರ್ಣವಾಗಿ ತನ್ನ ಅಧೀನಕ್ಕೆ ವಹಿಸಿಕೊಂಡು ಘಟಕವನ್ನಾಗಿಸಿಕೊಂಡಿದೆ. 2016ರಲ್ಲಿ ಎನ್‌ಐಟಿಐ ಆಯೋಗ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವ ಪ್ರಕ್ರಿಯೆಗೆ ಒಳಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ ಸರ್ಕಾರ ಬಂಡವಾಳ ಹಿಂಪಡೆಯವ ಪ್ರಕ್ರಿಯೆ ಆರಂಭಿಸಿತು. ಆದರೆ ಕಾರ್ಖಾನೆಯನ್ನು ಕೊಂಡುಕೊಳ್ಳಲು ಯಾರು ಸಹ ಮುಂದೆ ಬರಲಿಲ್ಲ. ಸರ್ಕಾರ ಕೈಗೊಂಡ ಕ್ರಮ ವಿಫಲವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಗೆ ಸಂಸದರ ಸ್ಪಂದನೆ
ಇನ್ನು, ನಿಯೋಗದ ಮನವಿಗೆ ಸ್ಪಂದಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ವಿಐಎಸ್’ಎಲ್ ಕಾರ್ಖಾನೆಗೆ ಸದ್ಯ ಅಗತ್ಯವಿರುವ ಹೆಚ್ಚಿನ ಬಂಡವಾಳ ತೊಡಗಿಸಲು ಹಾಗೂ ಖಾಲಿ ಇರುವ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತಾಗಿ ಪ್ರಾಧಿಕಾರದೊಂದಿಗೆ ಮಾತನಾಡುತ್ತೇನೆ. ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ, ಒತ್ತಡ ಹೇರುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಎಲ್’ಡಬ್ಲ್ಯೂ ಕುಮಾರ್, ಪ್ರಧಾನ ಕಾರ್ಯದರ್ಶಿ ಯು.ಎ. ಬಸಂತ ಕುಮಾರ್, ಕಾರ್ಯದರ್ಶಿ ಕೆ.ಆರ್. ಮನು, ಎಸ್ ಮೋಹನ್, ಪ್ರಮುಖರಾದ ಎಸ್. ದತ್ತಾತ್ರಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post