ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹುತ್ತಾ ಕಾಲೋನಿಯಲ್ಲಿರುವ ಮೀನು ಮಾರುಕಟ್ಟೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಅಮ್ ಆದ್ಮಿ ಪಕ್ಷದ ಮುಖಂಡರು ನಡೆಸಿದ ಪ್ರತಿಭಟನೆ ಫಲ ನೀಡಿದೆ.
ಶಿವಮೊಗ್ಗದಿಂದ ಭದ್ರಾವತಿ ಪ್ರವೇಶಿಸುವ ಹುತ್ತಾ ಕಾಲೋನಿ ಬಳಿಯ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿರುವ ಮೀನು ಮಾರುಕಟ್ಟೆ ಪ್ರದೇಶದಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲ. ಅಲ್ಲದೇ ಅವ್ಯವಸ್ಥೆಯ ಆಗರವಾಗಿ ಸ್ವಚ್ಛ ನಗರಕ್ಕೆ ತೊಂದರೆಯಾಗಿರುವ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡಬೇಕು ಎಂದು ಕಳೆದ ಎರಡು ವರ್ಷಗಳಿಂದ ಒತ್ತಾಯಿಸಲಾಗಿತ್ತು.
ಆದರೆ, ಯಾವುದೇ ರೀತಿಯ ಫಲ ನೀಡದ ಹಿನ್ನೆಲೆಯಲ್ಲಿ ಇಂದು ಅಮ್ ಅದ್ಮಿ ಪಕ್ಷದ ಪ್ರಮುಖರು ದಿಢೀರ್ ಪ್ರತಿಭಟನೆ ಆರಂಭಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಮನೋಹರ್, ಮನವಿ ಆಲಿಸಿದರು.
ಈ ವೇಳೆ ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ರವಿಕುಮಾರ್, ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವಂತೆ ಕಳೆದ ಎರಡು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಆದರೆ, ಈ ವಿಚಾರದಲ್ಲಿ ನಿರ್ಲಕ್ಷ ಧೋರಣೆ ಅನುಸರಿಸಲಾಗುತ್ತಿದೆ. ಅಲ್ಲದೇ ಕಂಡ ಕಂಡಲ್ಲಿ ಮಲಮೂತ್ರ ವಿಸರ್ಜನೆ ಮಾಡಲಾಗುತ್ತಿದ್ದು ವ್ಯಾಪಾರಸ್ಥರಿಗೆ ಸೂಕ್ತ ಶೌಚಾಲಯವೂ ಕೊರತೆಯಿದೆ. ಹೀಗಾಗಿ, ಇಲ್ಲಿ ಒಂದು ತಾತ್ಕಾಲಿಕ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆಯುಕ್ತ ಮನೋಹರ್, ಈ ವಿಚಾರದಲ್ಲಿ ಈಗಾಗಲೇ ನಗರಸಭೆ ಚಿಂತನೆ ನಡೆಸಿದೆ. ಮುಂದಿನ ಆರು ತಿಂಗಳ ಒಳಗಾಗಿ ಮೀನು ಮಾರುಕಟ್ಟೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಆಯುಕ್ತರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಎಎಪಿ ಮುಖಂಡರು ಪ್ರತಿಭಟನೆ ಹಿಂಪಡೆದರು.
ಪ್ರಮುಖರಾದ ವಿಲ್ಸನ್ ವಿನೋದ್, ಪರಮೇಶ್ವರ್ ಆಚಾರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post