ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಒನ್ ನೇಷನ್, ಒನ್ ರೇಷನ್ ಕಾರ್ಡ್ ಸಬ್ ಟೆಂಡರ್ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂ. ಮುಂಗಡ ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್’ಗೆ ಎಕ್ಸ’ಕ್ಲೂಸಿವ್ ಮಾಹಿತಿಗಳು ದೊರೆತಿದ್ದು, ಭದ್ರಾವತಿ ನಿವಾಸಿ ಬಿ.ಕೆ. ರಮೇಶ್ ಎನ್ನುವವರೇ ವಂಚನೆಗೆ ಒಳಗಾಗಿದ್ದು, ಪ್ರಕರಣ ಸಂಬಂಧ ಪೇಪರ್ ಟೌನ್ ಠಾಣೆಯಲ್ಲಿ ದಾಖಲಾಗಿದ್ದು ದೂರಿನ ಆಧಾರದಲ್ಲಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಆರೋಪಿಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣ ಸಂಬಂಧ ತಲೆ ಮರೆಸಿಕೊಂಡಿರುವ ರವಿಶಂಕರ್, ಚೇತನ್ ಕುಮಾರ್ ಹಾಗೂ ನಜೀಬ್ ಎಂಬ ಮೂವರು ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
ಪ್ರಕರಣದ ಹಿನ್ನೆಲೆಯೇನು?
ಕಾಗದ ನಗರ ನಿವಾಸಿಯಾದ ಎಂಪಿಎಂ ಸ್ವಯಂ ನಿವೃತ್ತ ನೌಕರ ರಮೇಶ್ ಅವರು, ಸದ್ಯ ಶಿವಮೊಗ್ಗದ ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ಮೂಲದ ರವಿಶಂಕರ್ ಎಂಬಾತ ಕೆಲಸದ ನಿಮಿತ್ತ ರಮೇಶ್ ಅವರನ್ನು ಭೇಟಿಯಾಗಿದ್ದು, ಈತನ ಮುಖಾಂತರ ಮೈಸೂರಿನ ನಿವಾಸಿ ಚೇತನ್ ಕುಮಾರ್ ಎಂಬಾತನೂ ಸಹ ಪರಿಚಯವಾಗಿದ್ದ.
ಸರ್ಕಾರದಿಂದ ಜಾರಿಯಾಗುವ ಹೊಸ ಯೋಜನೆಗಳ ಟೆಂಡರ್ ಅಥವಾ ಸಬ್ ಟೆಂಡರ್ ಕೊಡಿಸುವುದಾಗಿ ರಮೇಶ್ ಅವರನ್ನು ನಂಬಿಸಿದ್ದಾರೆ. 2019ರ ನವೆಂಬರ್’ನಲ್ಲಿ ಭದ್ರಾವತಿಗೇ ಆಗಮಿಸಿದ್ದ ಇವರಿಬ್ಬರೂ ಕೇಂದ್ರ ಸರ್ಕಾರ ಒನ್ ನೇಷನ್-ಒನ್ ರೇಷನ್ ಕಾರ್ಡ್ ಟೆಂಡರ್ ಕೊಡಿಸುವುದಾಗಿ, Elkin Exports and traders India Private limited ಕಂಪೆನಿಯ ಜನರಲ್ ಮ್ಯಾನೇಜರ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ತಾವು ನೇಮಕವಾಗಿದ್ದಾಗಿ ನಂಬಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಪಡಿತರದಾರರಿಗೆ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆಯನ್ನು ನಿಮಗೇ ಕೊಡಿಸುವುದಾಗಿ ನಂಬಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 617000 ಕಾರ್ಡ್’ಗಳಿವೆ. ಪ್ರತಿ ಕಾರ್ಡ್‌ಗೆ 6 ರೂ.ನಂತೆ ಮುಂಗಡ ಹಣ ನೀಡಬೇಕು. ಒಟ್ಟು 37,00,000 ರೂ.ಗಳಾಗುತ್ತದೆ. ಇದಕ್ಕೆ ಕಮಿಷನ್ ಹಣವಾಗಿ ಮುಂಗಡವಾಗಿ 5 ಲಕ್ಷ ರೂ.ಗಳನ್ನು ನೀಡಬೇಕು ಎಂದು ಕೇಳಿದ್ದು, ಇದನ್ನು ರಮೇಶ್ ಅವರು ನೀಡಿದ್ದಾರೆ.
ಆನಂತರ Elkin Exports and traders India Private limited ಕಂಪೆನಿ ಕಚೇರಿ ಎಂದು ತೋರಿಸಿರುವ ಕಡೆ ಬೆಂಗಳೂರಿಗೆ ತೆರಳಿದ ರಮೇಶ್ ಅವರು ಅಲ್ಲಿ ಚರ್ಚೆ ನಡೆಸಿ ಬಾಕಿ ಪಾವತಿ ಮಾಡಬೇಕಿದ್ದ ಹಣದ ಲೆಕ್ಕದಲ್ಲಿ ಒಟ್ಟು 31,70,00 ರೂ. ಬ್ಯಾಂಕ್ ಖಾತೆ ಮೂಲಕ ಹಾಗೂ 8,30,000 ರೂ. ನಗದಿನ ರೂಪದಲ್ಲಿ ನೀಡಿದ್ದಾರೆ. ಒಟ್ಟಾರೆಯಾಗಿ 45 ಲಕ್ಷ ರೂ.ಗಳನ್ನು ನೀಡಿದ್ದಾರೆ.
ಆನಂತರ ಯೋಜನೆ ಪಡೆಯಲು ಶಿವಮೊಗ್ಗದಲ್ಲಿ ಕಚೇರಿ ಆರಂಭಿಸಬೇಕು ಎಂದು ತಿಳಿಸಿದ ಕಾರಣ ಕಚೇರಿ ತೆರೆದು, ಸಿಬ್ಬಂದಿಗಳನ್ನೂ ಸಹ ನೇಮಕ ಮಾಡಿಕೊಂಡಿದ್ದಾರೆ ರಮೇಶ್. ಈ ಕಚೇರಿಯ ನಿರ್ವಹಣೆಗಾಗಿಯೇ ಇವರು 12 ಲಕ್ಷ ರೂ. ವೆಚ್ಚ ಮಾಡಿದ್ದಾರೆ.
ಆದರೆ, ಯೋಜನೆ ಆರಂಭದ ಕುರಿತಾಗಿ ಯಾವುದೇ ರೀತಿಯಲ್ಲೂ ಸಹ ಅಧಿಕೃತ ಕಾರ್ಯ ಪ್ರಾರಂಭವಾಗಲಿಲ್ಲ. ಅಲ್ಲದೇ, ಹಣ ತೆಗೆದುಕೊಂಡವರೂ ಸಹ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ. ಹೀಗಾಗಿ, ಅನುಮಾನಗೊಂಡ ರಮೇಶ್ ಅವರು ಪೇಪರ್ ಟೌನ್ ಠಾಣೆಯಲ್ಲಿ ದೂರು ದಾಖಲಿಸಿ, ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಎಪಿ ಆಗ್ರಹ
ಇನ್ನು, ಪ್ರಕರಣ ಅತಿ ದೊಡ್ಡ ವಂಚನೆಯಾಗಿದ್ದು, ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಎಪಿ ಜಿಲ್ಲಾಧ್ಯಕ್ಷ ರವಿಕುಮಾರ್ ಒತ್ತಾಯಿಸಿದ್ದಾರೆ.
ಪ್ರಕರಣ ಕುರಿತಂತೆ ಪೊಲೀಸ್ ಇಲಾಖೆಗೆ ಹಾಗೂ ಮುಖ್ಯಮಂತ್ರಿಗಳ ಕಚೇರಿಗೆ ಮನವಿಪತ್ರ ಬರೆದು ವಿನಂತಿಸಿರುವ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಬಳಸಿಕೊಂಡು ವಂಚನೆ ಮಾಡುವ ಸಲುವಾಗಿ ಕೇಂದ್ರದ ದಾಖಲೆ ಹಾಗೂ ಲಾಂಛನೆವನ್ನು ದುರುಪಯೋಗ ಮಾಡಿಕೊಂಡಿರುವ ದೇಶದ್ರೋಹದ ಕೆಲಸ. ಇಂತಹ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ಪ್ರಕರಣದಲ್ಲಿ 5ನೆಯ ಆರೋಪಿಯಾಗಿರುವ ವ್ಯಕ್ತಿಯೇ ಸಂಸ್ಥೆಯ ಮುಖ್ಯಸ್ಥ ಎಂದು ಹೇಳಿಕೊಂಡಿದ್ದ. ಹೀಗಾಗಿ, ಆತನನ್ನೇ 1ನೆಯ ಆರೋಪಿಯನ್ನಾಗಿ ಮಾಡಬೇಕು. ಅಲ್ಲದೇ, ಜನರನ್ನು ವಂಚಿಸುತ್ತಿರುವ ಇಂತಹ ದುಷ್ಟರ ಜಾಲವನ್ನು ಬೇರು ಸಹಿತ ಕಿತ್ತು ಹಾಕಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post