ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಸೆಕ್ಷನ್ ಜಾರಿ ಮಾಡಿರುವ ಬೆನ್ನಲ್ಲೇ ಕಿಡಿಗೇಡಿಗಳು ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ.
ಶಾಸಕ ಬಿ.ಕೆ. ಸಂಗಮೇಶ್ವರ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ನೂರಾರು ಪೊಲೀಸರ ಪಡೆ ಮನೆಗೆ ನುಗ್ಗಿ ಶಾಸಕರು ಹಾಗೂ ಅವರ ಕುಟುಂಬಸ್ಥರನ್ನು ಬಂಧಿಸಿದ್ದಾರೆ ಎಂದು ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗುತ್ತಿದ್ದು, ಇದು ತೀವ್ರ ವೈರಲ್ ಆಗಿದೆ.
ಆದರೆ, ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್ ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಇದು ಹಲವು ವರ್ಷಗಳ ಹಿಂದೆ ನಡೆದ ಘಟನೆಯ ವೀಡಿಯೋ ಆಗಿದೆ ಎಂಬುದು ಸ್ಪಷ್ಟವಾಗಿದೆ.
2000-11ರ ಇಸವಿಯಲ್ಲಿ ನಡೆದ ಘಟನೆಯೊಂದರ ಹಿನ್ನೆಲೆಯಲ್ಲಿ ಶಾಸಕರನ್ನು ಬಂಧಿಸಲು ನೂರಾರು ಸಂಖ್ಯೆಯ ಪೊಲೀಸರು ಅವರ ನಿವಾಸಕ್ಕೆ ರಾತ್ರೋ ರಾತ್ರಿ ತೆರಳಿದ್ದರು. ಆ ವೇಳೆ ಅಲ್ಲಿ ವಾಗ್ವಾದಗಳು ನಡೆದು, ಲಾಠಿ ಚಾರ್ಜ್ ಸಹ ನಡೆದಿತ್ತು. ಆ ಘಟನೆಯ ವೀಡಿಯೋವನ್ನು ಈಗ ಕಿಡಿಗೇಡಿಗಳು ದುರುಪಯೋಪಡಿಸಿಕೊಂಡು ಶಾಸಕರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ ಎಂಬ ಅರ್ಥದಲ್ಲಿ ಶೇರ್ ಮಾಡುತ್ತಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಗರದಲ್ಲಿ ಒಂದಷ್ಟು ಆತಂಕದ ವಾತಾವರಣ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಅಲ್ಲದೇ, ಘಟನೆ ನಡೆದಿದೆಯೇ ಎಂಬ ಕುರಿತಾಗಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶಾಸಕರ ನಿವಾಸಕ್ಕೆ ಬೆಳಗ್ಗೆಯಿಂದಲೇ ಧಾವಿಸಿ ವಿಚಾರಿಸುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ದೂರವಾಣಿ ಕರೆಗಳೂ ಸಹ ಶಾಸಕರ ಕಚೇರಿಗೆ ಬರುತ್ತಿವೆ.
ಈ ಕುರಿತಂತೆ ಶಾಸಕರ ಆಪ್ತ ವಲಯ ಮಾಹಿತಿ ನೀಡಿದ್ದು, ಇದೊಂದು ಹಳೆಯ ವೀಡಿಯೋ. ಇಂತಹ ಯಾವುದೇ ಘಟನೆ ನಡೆದಿಲ್ಲ. ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡ ಕಿಡಿಗೇಡಿಗಳು ಈ ವೀಡಿಯೋ ವೈರಲ್ ಮಾಡುವ ಮೂಲಕ ನಗರದಲ್ಲಿ ಶಾಂತಿ ಕದಡಲು ಹಾಗೂ ಶಾಸಕರಿಗೆ ಕೆಟ್ಟ ಹೆಸರು ತರಲು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ದೂರಿದ್ದು, ಸಾರ್ವಜನಿಕರ ಇಂತಹ ಗಾಳಿ-ಸುಳ್ಳು ಸುದ್ದಿಗಳಿಗೆ ಗಮನ ಕೊಡಬಾರದು. ಯಾರೂ ಆತಂಕಪಡಬಾರದು ಎಂದು ಮನವಿ ಮಾಡಿದ್ದಾರೆ.
ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಅಹಿತಕರ ಘಟನೆ ನಂತರ ನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಬೃಹತ್ ಪ್ರತಿಭಟನೆಗಳು, ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಹಾಗೂ ಸೆಕ್ಷೆನ್ ಜಾರಿಯಾಗಿರುವುದು ಜನಸಾಮಾನ್ಯರಲ್ಲಿ ಒಂದಷ್ಟು ಆತಂಕಕ್ಕೆ ಕಾರಣವಾಗಿದೆ. ಇವೆಲ್ಲವನ್ನೂ ತಿಳಿಗೊಳಿಸಿ, ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಆದರೆ, ಇಂತಹ ಸಂದರ್ಭದಲ್ಲಿ ಕಿಡಿಗೇಡಿಗಳ ಇಂತಹ ಕೃತ್ಯಗಳು ನಗರದಲ್ಲಿ ಶಾಂತಿ ಕದಡುವ ದುರುದ್ದೇಶ ಹೊಂದಿವೆ ಎಂಬ ಅನುಮಾನಗಳು ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿ, ಇಂತಹ ಕೃತ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಇದಲ್ಲದೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳೂ ಸಹ ಗೊಂದಲ ಸೃಷ್ಠಿಸುವ ರೀತಿಯಲ್ಲಿ ಸುದ್ದಿ ಪ್ರಕಟ ಮಾಡುತ್ತಿವೆ ಎಂದು ಶಾಸಕರ ಆಪ್ತ ವಲಯ ಕಿಡಿ ಕಾರಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿ, ಇಂತಹ ಕೃತ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಸದ್ಯ, ಶಾಸಕರ ನಿವಾಸದ ಬಳಿ ಇಬ್ಬರು ಪೊಲೀಸರನ್ನು ಮಾತ್ರ ನಿಯೋಜನೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post