ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಸ್ವತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಅವಮಾನ ಮಾಡಿರುವ ಘಟನೆ ಅಕ್ಷಮ್ಯ ಅಪರಾಧ ಎಂದು ದಲಿತ ಸಂಘಟನೆಯ ಮುಖಂಡ, ರಾಜ್ಯ ಖಜಾಂಚಿ ಭದ್ರಾವತಿ ಸತ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಭಕ್ತ, ಸ್ವತಂತ್ರ ಹೋರಾಟಗಾರ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆಗೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಸೋಮವಾರ ತಾಲೂಕು ಕುರುಬರ ಸಂಘದ ವತಿಯಿಂದ ನಡೆಸಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಯಾವುದೇ ಮಹಾಪುರುಷರ ಪ್ರತಿಮೆಗೆ ಅವಮಾನ ಮಾಡಿದರೆ ಅದನ್ನು ಎಲ್ಲ ಸಂಘಟನೆಗಳವರು ಸಂಘಟಿತರಾಗಿ ಪ್ರತಿಭಟಿಸಬೇಕು. ಅದಕ್ಕೆ ಪ್ರತಿಯಾಗಿ ಬೇರೆ ಮಹಾಪುರುಷರ ಪ್ರತಿಮೆಗೆ ಅವಮಾನವಾಗುವ ರೀತಿ ಯಾವುದೇ ಕ್ರಮಕ್ಕೆ ಇಳಿಯಬಾರದು. ಸಂಗೊಳ್ಳರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಂಡು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ಮುಖಂಡರು, ರಾಜ್ಯದಲ್ಲಿ ಎಂಇಎಸ್ ಪುಂಡರು ಮನಬಂದಂತೆ ವರ್ತಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಾಡಧ್ವಜ ಸುಟ್ಟು ಹಾಕಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಲ್ಲದೆ ಅಪ್ರತಿಮ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿ ದೇಶ ಭಕ್ತನನ್ನು ಅವಮಾನಗೊಳಿಸಿದ್ದಾರೆ. ಅದರಲ್ಲೂ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಭಯವಿಲ್ಲದೇ ಪುಂಡಾಟಿಕೆ ಮಾಡುತ್ತಿದ್ದಾರೆ. ಪ್ರತಿ ಬಾರಿ ನಾಡು, ನುಡಿ ವಿಷಯದಲ್ಲಿ ಕನ್ನಡಿಗರನ್ನು ಅವಮಾನಿಸಿ ಹಾಗೂ ನಾಡಿನ ಮಹಾನ್ ವ್ಯಕ್ತಿಗಳನ್ನು ಅಡ್ಡ ತಂದು ಅಶಾಂತಿ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ. ಸಂತೋಷ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಭದ್ರಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭಾ ಸದಸ್ಯರಾದ ಕಾಂತರಾಜ್, ಶ್ರೇಯಸ್, ಮಹಿಳಾ ಪ್ರಮುಖರಾದ ಶಾರದಮ್ಮ, ಹೇಮಾವತಿ ಶಿವಾನಂದ್, ಸಂಘದ ಪ್ರಮುಖರಾದ ಕಾರ್ಯದರ್ಶಿ ಬಿ.ಎ ರಾಜೇಶ್, ಸಹ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕರಾದ ಬಿ.ಎಚ್. ರಾಜಪ್ಪ, ಚಂದ್ರಪ್ಪ, ಬಿ.ಎಸ್. ಮಂಜುನಾಥ್, ಎನ್. ಸತೀಶ್, ವಸಂತ್, ಮಾಜಿ ಅಧ್ಯಕ್ಷ ತಿಮ್ಮಣ್ಣ, ಕೆ.ಎನ್. ನಾಗರಾಜ್, ನಾಗಭೂಷಣ್, ಸಣ್ಣಯ್ಯ, ನಗರಸಭೆ ಮಾಜಿ ಸದಸ್ಯ ಸುಬ್ಬಣ್ಣ, ಆಮ್ ಆದ್ಮಿ ಪಾರ್ಟಿಯ ಎಚ್. ರವಿಕುಮಾರ್, ಕೇಸರಿ ಪಡೆ ಅಧ್ಯಕ್ಷ ಕೆ.ಪಿ. ಗಿರೀಶ್, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿನೋದ್ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post