ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾನೇ ಜಗತ್ ಕಿಲಾಡಿ ಎಂದುಕೊಂಡು ಕಾರಿನ ವಿವಿಧ ಭಾಗಗಳಲ್ಲಿ ಅಡಗಿಸಿಕೊಂಡು ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭದ್ರಾವತಿ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.
ಓಮಿನಿ ವಾಹನದಲ್ಲಿ ತರೀಕೆರೆ ಕಡೆಯಿಂದ ಭದ್ರಾವತಿ ಕಡೆಗೆ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು. ಇದರ ಹಿನ್ನೆಲೆಯಲ್ಲಿ ಭದ್ರಾವತಿ ಎಎಸ್’ಪಿ, ಶಿವಮೊಗ್ಗ ಡಿವೈಎಸ್’ಪಿ, ಕುಂಸಿ ಪಿಐ ಹಾಗೂ ಸಿಬ್ಬಂದಿಗಳ ತಂಡ ಪೇಪರ್ ಟೌನ್ ಠಾಣಾ ವ್ಯಾಪ್ತಿಯಲ್ಲಿನ ಕಾರೆಹಳ್ಳಿ ಚೆಕ್’ಪೋಸ್ಟ್’ನಲ್ಲಿ ತಪಾಸಣೆ ನಡೆಸಿದರು.
ಆಗ ಅಲ್ಲಿಗೆ ಬಂದ ಈ ಓಮಿನಿ ವಾಹನವನ್ನು ತಪಾಸಣೆ ನಡೆಸಿದಾಗ ಪೊಲೀಸರೇ ಧಂಗಾಗಿ ಹೋಗುವಂತೆ ಕಾರಿನ ವಿವಿಧ ಭಾಗಗಳಲ್ಲಿ ಆರೋಪಿ ಗಾಂಜಾವನ್ನು ಅಡಗಿಸಿಟ್ಟಿದ್ದ. ತಪಾಸಣೆ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿ ಸಂಕ್ಲೀಪುರದ ಮುರುಗ ಎಂಬಾತನನ್ನು ಬಂಧಿಸಿದ್ದಾರೆ.
ಎಲ್ಲೆಲ್ಲಿ ಸಿಕ್ಕಿತು ಗೊತ್ತಾ?
ತಾನೇ ಕಿಲಾಡಿ ಎಂದುಕೊಂಡಿದ್ದ ಆರೋಪಿ ವಾಹನದ ಫ್ಯೂಯಲ್ ಟ್ಯಾಂಕ್ ನಲ್ಲಿ, ಹಿಂಭಾಗದ ಡಿಕ್ಕಿಯ ಡೋರ್ ನ ಒಳಗಡೆ, ಹಿಂಭಾಗದ ಬಂಪರ್ ನ ಓಳ ಭಾಗದಲ್ಲಿ, ಸ್ಲೈಡಿಂಗ್ ಡೋರ್ ಒಳಗಡೆ ಮತ್ತು ವಾಹನದ ಚಾರ್ಸಿಯಲ್ಲಿ ಗಾಂಜಾವನ್ನು ಅಡಗಿಸಿಟ್ಟಿದ್ದ.
ಎಷ್ಟು ಪ್ರಮಾಣದ್ದು?
ಅಂದಾಜು ಮೌಲ್ಯ 5,83,000/- ರೂ.ಗಳ ಒಟ್ಟು 48 ಕೆಜಿ 656 ಗ್ರಾಂ ತೂಕದ ಒಣ ಗಾಂಜಾ, 01 ಮೊಬೈಲ್ ಫೋನ್, ಅರ್ದ ಕತ್ತರಿಸಿದ ಪೆಟ್ರೋಲ್ ಟ್ಯಾಂಕ್ ಹಾಗೂ ಕೃತ್ಯಕ್ಕೆ ಬಳಸಿದ ಓಮಿನಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯ ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















