ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಠ್ರಸೇನಾ ಸಮಿತಿ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನೆಯು ಪೊಲೀಸರ ಸರ್ಪಗಾವಲಿನಲ್ಲಿ ತರೀಕೆರೆ ರಸ್ತೆಯ ನಗರಸಭೆಯ ಮುಂಭಾಗ ಭದ್ರಾನದಿಯಲ್ಲಿ ಶುಕ್ರವಾರ ಸಂಜೆ ಶಾಂತರೀತಿಯಲ್ಲಿ ವಿಸರ್ಜನೆ ಮಾಡಲಾಯಿತು.
ಶಾಸಕ ಬಿ.ಕೆ.ಸಂಗಮೇಶ್ವರ್ ಮತ್ತು ತಹಸೀಲ್ದಾರ್ ಎಂ.ಆರ್.ನಾಗರಾಜ್ ಹಾಗು ಹಿಂದೂ ಮಹಾಸಭಾ ಅಧ್ಯಕ್ಷ ವಿ.ಕದಿರೇಶ್ ಮುಂತಾದವರು ಶ್ರೀಗಣಪತಿಗೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ಪ್ರತಿಷ್ಟಾಪಿಸಲ್ಪಟ್ಟ ಸ್ಥಳದಿಂದ ಸಾಗಿದ ಮೆರವಣಿಗೆಯು ಹೊಸಮನೆ ಶಿವಾಜಿವೃತ್ತಕ್ಕೆ ತೆರಳಿ ಅದೇ ಮಾರ್ಗದಿಂದ ರಂಗಪ್ಪ ವೃತ್ತಕ್ಕೆ ತಲುಪಿತು. ನಂತರ ಮೆರವಣಿಗೆಯು ಚನ್ನಗಿರಿ ರಸ್ತೆ, ಮಾಧವಚಾರ್‍ವೃತ್ತ, ಬಿ.ಎಚ್.ರಸ್ತೆ, ಹಾಲಪ್ಪವೃತ್ತ, ಡಾ.ರಾಜಕುಮಾರ್ ರಸ್ತೆ, ಅಂಡರ್ ಬ್ರಿಡ್ಜ್, ಲೋಯರ್ ಹುತ್ತಾ ತೆರಳಿ ಬಿ.ಎಚ್.ರಸ್ತೆ ಮಾರ್ಗವಾಗಿ ತರೀಕೆರೆ ರಸ್ತೆ ಮೂಲಕ ಗಾಂಧಿ ವೃತ್ತಕ್ಕೆ ಹೋದ ಮೆರವಣಿಗೆಯು ಹಿಂದಿರುಗಿ ಬಂದು ನಗರಸಭೆ ಮುಂಭಾಗದ ಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡು ದಾರಿಯುದ್ದಕ್ಕೂ ಜೈ ಶ್ರೀರಾಂ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯ ಕಂಡು ಬಂದಿತ್ತು. ರಸ್ತೆಯ ಉದ್ದಕ್ಕೂ ಅಭಿಮಾನಿಗಳು ಓಂ ಎಂಬ ಚಿತ್ತಾರವನ್ನು ಆಕರ್ಷಣಿಯವಾಗಿ ಬಿಡಿಸಿದ್ದರು. ನೂರಾರು ಮಹಿಳೆಯರು ಮತ್ತು ಹೆಣ್ಣುಮಕ್ಕಳು ನೃತ್ಯ ಮಾಡುತ್ತಿದ್ದ ದೃಶ್ಯ ಜನರನ್ನು ಆಕರ್ಷಿಸಿತ್ತು. ರಸ್ತೆಯುದ್ದಕ್ಕು ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಿದ್ದರು. ಹಲವೆಡೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ಹಿಂದೂ ಅಭಿಮಾನಿಗಳು ಡೇರೆಗಳನ್ನು ಹಾಕಿ ನಳಪಾಕದಂತೆ ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದಲ್ಲದೆ ಕುಡಿಯಲು ನೀರು, ಪಾನಕ, ಮಜ್ಜಿಗೆ ಇತ್ಯಾದಿ ತಂಪು ಪಾನಿಯಗಳನ್ನು ವಿತರಿಸುತ್ತಿದ್ದರು.
ಪೊಲೀಸ್ ಇಲಾಖೆಯು ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮದಿಂದಾಗಿ ದ್ವಿಚಕ್ರ ವಾಹನ ರ್ಯಾಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಪ್ರದರ್ಶಿಸುತ್ತಿದ್ದ ಕೇಸರಿ ಬಾವುಟಗಳ ಹಾರಾಟ ನಿಷೇಧಿಸಿದ್ದರು. ಕೆಲವು ವೃತ್ತಗಳಲ್ಲಿ ಯುವಕರು ಕೇಸರಿ ಧ್ವಜಗಳನ್ನು ಹಾರಿಸುತ್ತಿದ್ದ ದೃಶ್ಯ ಕಂಡು ಬಂದಿತ್ತು. ಮತ್ತೊಂದೆಡೆ ರಾಮಸೇನೆ ತಂಡದ ಯುವಕರು ನಗರದ ವಿಐಎಸ್‍ಎಲ್ ಮತ್ತು ಎಂಪಿಎಂ ಉಳಿವಿಗಾಗಿ ಸಹಿಸಂಗ್ರಹಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರವು ಸಂಪೂರ್ಣ ಕೇಸರಿಮಯವಾಗಿತ್ತು. ಬಂಟಿಂಗ್ಸ್, ಬ್ಯಾನರ್, ಫ್ಲೆಕ್ಸ್‍ಗಳು ರಾರಾಜಿಸುತ್ತಿದ್ದವು.
ದಾವಣಗೆರೆ ಡಿಐಜಿ ದಯಾನಂದ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರೆ, ಜಿಲ್ಲಾಧಿಕಾರಿ ದಯಾನಂದ್ ಸ್ಥಳಕ್ಕಾಗಮಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಮೆರವಣಿಗೆ ಉದ್ದಕ್ಕೂ ಯುವಕರೊಂದಿಗೆ ಸ್ಪಂಧಿಸುತ್ತಾ ಸಾಗಿದ್ದರು. ಯುವಕರು ಎಸ್‍ಪಿ ರವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಾ ಸಂತಸ ಪಡುತ್ತಿದ್ದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್, ಡಿವೈಎಸ್‍ಪಿ ಓಂಕಾರನಾಯ್ಕ, ಸರ್ಕಲ್ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಮುಂತಾದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ತರೀಕೆರೆ ರಸ್ತೆಯ ಮಸೀದಿ ಮುಂಭಾಗ ಹಿಂದೆಂದು ಕಂಡರಿಯದಂತಹ ಪೊಲೀಸ್ ಸರ್ಪಗಾವಲು ಮತ್ತು ಬ್ಯಾರಿಕೇಡ್ ಹಾಗು ವಾಹನಗಳನ್ನು ರಕ್ಷಣೆಗಾಗಿ ಬಂದೋಬಸ್ತ್ ಏರ್ಪಡಿಸಿತ್ತು.
ಮೆರವಣಿಗೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ಮಾಜಿ ನಗರಸಭಾಧ್ಯಕ್ಷರಾದ ಬಿ.ಕೆ.ಮೋಹನ್, ಬಿ.ಟಿ.ನಾಗರಾಜ್, ಹಿಂದೂ ಮಹಾಸಭಾಧ್ಯಕ್ಷ ವಿ.ಕದಿರೇಶ್, ಈಶ್ವರರಾವ್, ಚನ್ನಪ್ಪ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಬಿ.ರವಿಕುಮಾರ್, ಸದಸ್ಯರಾದ ಎಂ.ಎಸ್.ಸುಧಾಮಣಿ, ಭಾಗ್ಯಮ್ಮ, ಶಿವರಾಜ್, ಆನಂದ್, ಜಿ.ಆನಂದಕುಮಾರ್, ಮುಖಂಡರಾದ ಎಸ್.ಕುಮಾರ್, ಮಂಗೋಟೆ ರುದ್ರೇಶ್, ಧರ್ಮಪ್ರಸಾದ್, ಕೂಡ್ಲಿಗೆರೆ ಹಾಲೇಶ್, ನವನೀತ್, ರಾಮಮೂರ್ತಿ, ಲೋಕೇಶ್, ಜಿ.ಆರ್.ಪ್ರವೀಣ್ ಪಟೇಲ್, ರಾಮಣ್ಣ, ತಾತೋಜಿರಾವ್, ಭವಾನಿ ಸೇರಿದಂತೆ ನೂರಾರು ಮಂದಿ ಮುಖಂಡರು ಭಾಗವಹಿಸಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post