ಭದ್ರಾವತಿ: ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯ ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ನಗರಸಭೆ ಆರಂಭಿಸಿರುವ ಮನೆ-ಮನೆ ಕಸ ಸಂಗ್ರಹ ಹಾಗೂ ಸಂಕ್ಷರಣೆ ಕಾರ್ಯಕ್ಕೆ ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತಗಳು ನಗರಸಭೆಗೆ ಹಣ ಪಾವತಿಸದಿರುವ ಹಿನ್ನಲೆಯಲ್ಲಿ ಜೂನ್ 1 ರಿಂದ ಕಸ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಾಗಿದ್ದು ನಾಗರಿಕರು ಕಂಗೆಟ್ಟು ಪೇಚಾಟದಲ್ಲಿ ಸಿಲುಕಿದ್ದಾರೆ.
ಸ್ಥಳೀಯ ನಗರಸಭೆಯ ವ್ಯಾಪ್ತಿಗೆ ಸೇರಿದ ವಿಐಎಸ್‌ಎಲ್ 5 ಸಾವಿರ ವಸತಿ ಗೃಹಗಳು ಮತ್ತು ಎಂಪಿಎಂ ವ್ಯಾಪ್ತಿಯ 2 ಸಾವಿರ ವಸತಿ ಗೃಹಗಳು ಒಳಪಡುವುದರಿಂದ ಅಲ್ಲಿನ ನಿವಾಸಿಗಳಿಗೆ ಸ್ವಚ್ಚತೆ ಮತ್ತು ಪರಿಸರ ನೈರ್ಮಲ್ಯ ಕಾಪಾಡಲು ಅನುಕೂಲ ಕಲ್ಪಿಸುವಂತೆ ಕೇಂದ್ರ ಸರಕಾರದ ಸ್ವಚ್ಚ ಭಾರತ ಯೋಜನೆ ಹಾಗು ರಾಜ್ಯ ಸರಕಾರದ ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಸ್ಥಳೀಯ ನಗರಸಭೆ ಆಡಳಿತ ಕ್ರಮ ಕೈಗೊಳ್ಳಲು ಮುಂದಾಗಿತ್ತು.
ಅದರಂತೆ ಅವಳಿ ಕಾರ್ಖಾನೆಗಳ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳು ನಗರ ಪ್ರದೇಶದ ನಿವಾಸಿಗಳಿಗೆ ನೀಡುವ ಸೌಲತ್ತಿನಂತೆ ಎರಡು ಕಾರ್ಖಾನೆಗಳ ವಸತಿ ಗೃಹಗಳಲ್ಲಿ ವಾಸವಾಗಿರುವ ನಾಗರೀಕರಿಗೆ ಅನುಕೂಲ ಕಲ್ಪಿಸಲು ಮನೆ-ಮನೆ ಕಸ ಸಂಗ್ರಹ ಯೋಜನೆ ಜಾರಿಗೆ ಒತ್ತಾಯಿಸಿತ್ತು.
ಈ ಯೋಜನೆಗೆ ತಗಲುವ ವಾಹನಗಳ ಹಾಗೂ ಸಿಬ್ಬಂದಿಗಳ ನಿರ್ವಹಣೆ ವೆಚ್ಚವನ್ನು ಜನರಿಂದಲೇ ಸಂಗ್ರಹಿಸುವ ನಿಂಬಂಧನೆ ಮೇರೆಗೆ ಯೋಜನೆಯನ್ನು ನಗರಸಭೆ ಜಾರಿಗೊಳಿಸಿತ್ತು. ನಗರ ವ್ಯಾಪ್ತಿಯ ಮನೆ, ಕಟ್ಟಡಗಳ ಖಾತೆದಾರರು ಪಾವತಿಸುವ ಕಂದಾಯದಲ್ಲಿ ಕಟ್ಟಡ, ಮನೆ ಅಳತೆಯ ಆಧಾರದಡಿ ನಿಗದಿ ಪಡಿಸಿದಂತೆ 60 ರೂ ಗಳನ್ನು ಜನರಿಂದ ಪಾವತಿ ಮಾಡಲಾಗುತ್ತಿದೆ. ಅದೇರೀತಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ವಸತಿ ಗೃಹಗಳಿಗೆ ಪ್ರತಿಮನೆಗಳಿಂದ ತಿಂಗಳಿಗೆ ಡಿಪಿಆರ್ ಪ್ರಕಾರ ತಲಾ ಮನೆಗೆ 80 ರೂ ಪಾವತಿಸುವಂತೆ ನಗರಸಭೆ ಕೋರಿತ್ತು.
ಆದರೆ ವಿಐಎಸ್‌ಎಲ್ ಅಧಿಕಾರಿಗಳು 60 ರೂ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡಿತ್ತೆಂದು ನಗರಸಭೆ ತಿಳಿಸಿದೆ. ಅದರಂತೆ ಪ್ರತಿನಿತ್ಯ ಬೆಳಿಗ್ಗೆ ವಸತಿಗೃಹಗಳಿಂದ ಪರಿಸರ ಸ್ವಚ್ಚತೆಯ ಧ್ವನಿವರ್ಧಕ ವಾಹನಗಳು ಕಸ ಸಂಗ್ರಹ ಮಾಡಿಕೊಳ್ಳುತ್ತಿದ್ದವು. ಜನರು ಈ ವಾಹನ ಬರುವ ನಿರೀಕ್ಷೆಯಲ್ಲಿ ಇರುತ್ತಿದ್ದರು. ಆದರೆ ವಿಐಎಸ್‌ಎಲ್ ಆಡಳಿತ ನಗರಸಭೆಗೆ ಕಳೆದ 13 ತಿಂಗಳಿಂದ ಅಂದಾಜು 31 ಲಕ್ಷ ರೂ ಬಾಕಿ ಪಾವತಿ ಮಾಡದಿರುವುದರಿಂದ ಹಾಗೂ ಅನೇಕ ಪತ್ರ ವ್ಯವಹಾರ ಮಾಡಿದ್ದರು ಸಹ ಉಪಯೋಗವಾಗದೆ ಇರುವುದರಿಂದ ಹಾಗು ನಿರ್ವಹಣೆಗೆ ಅನಾನುಕೂಲವಾಗಿರುವುದರಿಂದ ಜೂನ್ 1 ರಿಂದ ಕಸ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಆದರೆ ಎಂಪಿಎಂ ನಗರಾಡಳಿತ ಇಲಾಖೆ ತನ್ನ ಸಿಬ್ಬಂದಿಗಳಿಂದ ಕಾರ್ಖಾನೆ ವ್ಯಾಪ್ತಿಯ ಸ್ವಚ್ಚತೆಗೆ ಮುಂದಾಗಿರುವಾಗ ನಗರಸಭೆಯಿಂದ ಕಸ ಸಂಗ್ರಹಣೆ ಮಾಡುವ ಅಗತ್ಯವಿಲ್ಲವೆಂದು ಹೇಳಿತ್ತಾದರೂ ನಗರಸಭೆಯು ಅಧಿಕಾರಿಗಳೊಂದಿಗೆ ಸ್ಪಷ್ಟ ಮಾತುಕತೆ ನಡೆಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಭಾಗದ ನಗರಸಭಾ ಸದಸ್ಯರು ಸ್ವಪ್ರೇರಣೆಯಿಂದ ಉಚಿತವಾಗಿ ಕಸ ಸಂಗ್ರಹಣೆ ಮಾಡಿಸುತ್ತಿದ್ದಾರೆಂದು ಕಾರ್ಖಾನೆಯ ಅಧಿಕಾರಿಗಳು ತಿಳಿದುಕೊಂಡಿದ್ದರು.
ನಗರಸಭೆ ಮಾತ್ರ ಕಸ ಸಂಗ್ರಹಣೆಯ ಸುಮಾರು 5 ಲಕ್ಷ ರೂ.ಗಳಿಗೂ ಅಧಿಕ ಬಾಕಿ ಪಾವತಿಸಬೇಕೆಂದು ಹೇಳಿಕೊಳ್ಳುತ್ತಿದೆ. ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದಾಗಿ ಕಸ ಸಂಗ್ರಹಣಾ ಕಾರ್ಯ ಸ್ಥಗಿತಗೊಳಿಸಲಾಗಿದೆ. ನಗರಸಭೆ ಬಾಕಿ ಪಾವತಿಗಾಗಿ ಆಡಳಿತ ಮಂಡಳಿಯೊಂದಿಗೆ ಪತ್ರ ವ್ಯವಹಾರದಲ್ಲಿ ತೊಡಗಿದೆ.
ಮನೆ-ಮನೆಯ ಕಸ ಸಂಗ್ರಹಣೆ ಸ್ಥಗಿತಗೊಂಡಿರುವುದರಿಂದ ಇದನ್ನೆ ಅವಲಂಬಿಸಿದ್ದ ನಾಗರಿಕರು ನಿರಾಶೆಗೊಂಡು ಪೇಚಾಟದಲ್ಲಿ ತೊಡಗಿದ್ದಾರೆ. ಅಲ್ಲದೆ ಕಸ ಮತ್ತು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾ ಕಸದ ರಾಶಿಗಳು ಕಂಡು ಬರುತ್ತಿದೆ. ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ. ಹಂದಿ, ನಾಯಿಗಳ ಹಾವಳಿಯಿಂದ ಕಸ ಕಡ್ಡಿಯ ತ್ಯಾಜ್ಯಗಳ ದುರ್ನಾತ ಹರಡುತ್ತಿದೆ. ಕೇಂದ್ರ ಸರಕಾರದ ಸ್ವಚ್ಚ ಭಾರತ್ ಅಭಿಯಾನ ಯೋಜನೆಗೆ ನಗರಸಭೆ, ವಿಐಎಸ್‌ಎಲ್, ಎಂಪಿಎಂ ಆಡಳಿತಗಳು ವಿರುದ್ದವಾಗಿ ವರ್ತಿಸುತ್ತಿರುವುದಾಗಿ ನಾಗರೀಕರ ಅಪಾದನೆಯಾಗಿದೆ.
ನಗರಸಭೆ ಅಧಿಕಾರಿಗಳ ಸ್ಪಷ್ಟನೆ
ನಗರಸಭೆ ಆಡಳಿತವು ಕಳೆದ ವರ್ಷದಿಂದ ಮನೆ-ಮನೆ ಕಸ ಸಂಗ್ರಹ ಕಾರ್ಯವನ್ನು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆ ವ್ಯಾಪ್ತಿಯ ವಸತಿ ಗೃಹಗಳಿಗೂ ವಿಸ್ತರಿಸಿದೆ. ಡಿಪಿಆರ್ ಆದೇಶದಂತೆ ತಲಾ ಒಂದು ಮನೆಯಿಂದ 80 ರೂ ಸಂಗ್ರಹ ಮಾಡುವಂತೆ ಕೋರಲಾಗಿದೆ. ಆದರೆ ವಿಐಎಸ್‌ಎಲ್ ಆಡಳಿತ 60 ರೂ ನೀಡುವುದಾಗಿ ಹೇಳಿ 5 ಸಾವಿರ ಮನೆಗಳ 37 ಲಕ್ಷ ರೂ ಬಾಕಿ ಉಳಿಸಿಕೊಂಡಿದೆ. ಪತ್ರ ವ್ಯವಹಾರ ಮಾಡಿದ್ದರು ಸಹ ನಿರ್ಲಕ್ಷಧೋರಣೆ ತಾಳಿದೆ.
ಅದೇರೀತಿ ಎಂಪಿಎಂ ಕಾರ್ಖಾನೆಯ 2 ಸಾವಿರ ವಸತಿ ಗೃಹಗಳ ಸುಮಾರು 6 ಲಕ್ಷ ರೂಗಳಿಗೂ ಅಧಿಕ ಬಾಕಿ ಪಾವತಿಸಿರುವುದಿಲ್ಲ. ಕೇಳಿದರೆ ನಮ್ಮದೆ ನಗರಾಡಳಿತ ಇಲಾಖೆ ಇದೆ. ಸಿಬ್ಬಂದಿಯೂ ಇದ್ದಾರೆ. ಕಾರ್ಖಾನೆ ಮುಚ್ಚಲ್ಪಟ್ಟಿರುವುದರಿಂದ ವಾರ್ಡ್ ನಂ: 19, 28, 32, 33 ಮತ್ತು 34 ರ ನಿವಾಸಿಗಳ ಕಾರ್ಮಿಕ ಕುಟುಂಬಗಳಿಂದ ಹಣ ಪಾವತಿಗೆ ತೊಂದರೆಯಾಗಿ ನಗರಸಭೆಯ ಕಸ ಸಂಗ್ರಹಣಾ ಕಾರ್ಯ ಅಗತ್ಯವಿಲ್ಲವೆಂದು ಹೇಳಿರುವುದರಿಂದ ಜೂ: 1 ರಿಂದ ಅವಳಿ ಕಾರ್ಖಾನೆಗಳ ಮನೆಗಳಿಂದ ಕಸ ಸಂಗ್ರಹಣೆ ಕಾರ್ಯ ಸ್ಥಗಿತಗೊಳಿಸಲಾಗಿದೆ. ಅದೇ ಸಮಯದಲ್ಲಿ ಅವಳಿ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳಲ್ಲಿ ಕಸ ಸಂಗ್ರಹಣೆ ಕಾರ್ಯ ಮುಂದುವರೆಸಲಾಗಿದೆ.
-ಎಚ್.ವಿ. ಹರೀಶ್, ಪೌರಾಯುಕ್ತ ಮತ್ತು ರುದ್ರೇಗೌಡ, ಪರಿಸರ ಇಂಜಿನಿಯರ್
ವಿಐಎಸ್‌ಎಲ್ ನಗರಾಡಳಿತಾಧಿಕಾರಿ ಹೇಳಿಕೆ:
ನಗರಸಭೆಯು ವಿಐಎಸ್‌ಎಲ್ ಕಾರ್ಖಾನೆ ವ್ಯಾಪ್ತಿಯ ವಸತಿ ಗೃಹಗಳಿಂದ ಕಸ ಸಂಗ್ರಹಣೆ ಮಾಡುತ್ತಿದೆ. ಇದಕ್ಕೆ ತಗಲುವ ವೆಚ್ಚದ ಬಾಬ್ತು ನಗರಸಭೆಗೆ ಪಾವತಿಸಬೇಕಾಗಿದೆ. ಪ್ರತಿ ಮನೆಗೆ ನಿಗಧಿ ಪಡಿಸಿರುವ ಹಣದ ವಿಚಾರದಲ್ಲಿ ನಗರಸಭೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೆ ಪೌರಾಯುಕ್ತ ಬಳಿ ಚರ್ಚೆ ನಡೆದು ಬಗೆ ಹರಿಸಲಾಗುತ್ತದೆ.
-ರವಿಚಂದ್ರನ್, ನಗರಾಡಳಿತಾಧಿಕಾರಿ
ಎಂಪಿಎಂ ನಗರಾಡಳಿತಾಧಿಕಾರಿ ವಿವರಣೆ:
ನಗರಸಭೆಯವರನ್ನು ಎಂಪಿಎಂ ಆಡಳಿತವು ಕಸ ಸಂಗ್ರಹಿಸುವಂತೆ ಕೋರಿರುವುದಿಲ್ಲ. ನಮಗೆ ಅದರ ಅವಶ್ಯಕತೆಯು ಇರುವುದಿಲ್ಲ. ನಮ್ಮದೆ ಆದಂತಹ ನಗರಾಡಳಿತ ಇಲಾಖೆ ಸಿಬ್ಬಂದಿಗಳು ಪ್ರತಿನಿತ್ಯ ಸ್ವಚ್ಚತೆಯಲ್ಲಿ ತೊಡಗಿದ್ದಾರೆ. ಕೇವಲ ಕಸ ಸಂಗ್ರಹಣೆಯಿಂದ ಮಾತ್ರ ಸ್ವಚ್ಚತೆಯಾಗುವುದಿಲ್ಲ. ಸಾಕಷ್ಟು ಸಮಸ್ಯೆಗಳಿವೆ. ನಗರಸಭೆ ಮತ್ತು ಎಂಪಿಎಂ ವಿಚಾರಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಕಾರ್ಖಾನೆ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕ ನಿರ್ದೇಶಕರು ಕೈಗೊಳ್ಳುವ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು.
ಜಿ.ಎಸ್.ಸತೀಶ್, ನಗರಾಡಳಿತಾಧಿಕಾರಿ ಹಾಗೂ ಹಿರಿಯ ವ್ಯವಸ್ಥಾಪಕ
ನಗರಸಭಾ ಸದಸ್ಯರ ಹೇಳಿಕೆಗಳು
ವಿಐಎಸ್‌ಎಲ್ ವ್ಯಾಪ್ತಿಯ ನಗರಸಭೆ ಸದಸ್ಯೆ ಎಂ.ಎಸ್.ಸುಧಾಮಣಿ ಹೇಳುವಂತೆ, ಸ್ವಚ್ಚ ಭಾರತ್ ಯೋಜನೆಯು ನಗರಕ್ಕೊಂದು ಕಾರ್ಖಾನೆ ವ್ಯಾಪ್ತಿಗೊಂದು ಬೇರೆ ಬೇರೆ ಇರುವುದಿಲ್ಲ. ಎಲ್ಲರ ಆರೋಗ್ಯದೃಷ್ಟಿಯಿಂದ ನಗರಸಭೆ ಸ್ವಚ್ಚತೆಗೆ ಒತ್ತು ನೀಡಬೇಕು. ನಗರಸಭೆ ವ್ಯಾಪ್ತಿಗೆ ಸೇರಿರುವುದರಿಂದ ಪೌರಾಯುಕ್ತರು ತಾರತಮ್ಯ ತೋರದೆ ಕೊಳಚೆ ಪ್ರದೇಶಗಳಿಗೆ ಸೌಲಭ್ಯ ನೀಡಿದಂತೆ ಯೋಜನೆ ಜನರಿಗೆ ಅರ್ಪಿಸಬೇಕು ಎಂದರು.
ಎಂಪಿಎಂ ವ್ಯಾಪ್ತಿಯ ಸದಸ್ಯ ಮಹೇಶ್ ಮಾತನಾಡಿ, ಎಂಪಿಎಂ ನಗರಾಡಳಿತ ಇಲಾಖೆಯಲ್ಲಿ ನಿವೃತ್ತಿಯಾದ ಅಧಿಕಾರಿ ಸತೀಶ್ ಇಂದಿಗೂ ಕರ್ತವ್ಯದಲ್ಲಿ ಮುಂದುವರೆದಿದ್ದಾರೆ. ನಗರಸಭಾ ಪೌರಾಯುಕ್ತರು ಒಂದು ಮನೆಗೆ 80 ರೂ ಪಾವತಿಸುವಂತೆ ಹೇಳಿರುವುದರಿಂದ ಆಡಳಿತ ನಿರಾಕರಿಸಿದೆ. ಇಲ್ಲಿನ ವಾಸಿಗಳು ಮತದಾರರಾಗಿದ್ದಾರೆ. ಎಲ್ಲರಂತೆ ಸೌಕರ್ಯ ಕಲ್ಪಿಸುವುದು ಇಲಾಖೆಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
(ವಿಶೇಷ ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post