ಭದ್ರಾವತಿ: ಗುತ್ತಿಗೆ ಕಾರ್ಮಿಕರ ಹೋರಾಟಗಳು ಕೇವಲ ಕಾರ್ಖಾನೆ ಗೇಟಿನ ಮುಂಭಾಗಕ್ಕೆ ಮಾತ್ರ ಸೀಮಿತವಾಗಬಾರದು. ಚುನಾವಣೆಯ ಈ ಸಂದರ್ಭದಲ್ಲಿ ಜಿಲ್ಲೆಯ ರಾಜಕಾರಣಿಗಳು ಹಾಗೂ ಎಲ್ಲಾ ಸಾರ್ವಜನಿಕರಿಗೂ ತಲುಪುವಂತಾಗಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕಾ. ಪ್ರಕಾಶ್ ಹೇಳಿದರು.
ವಿಐಎಸ್‌ಎಲ್ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ 4 ನೇ ದಿನವಾದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ನೂರಾರು ಕಾರ್ಮಿಕರನ್ನುದ್ದೆಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲೆ ಮೊಟ್ಟಮೊದಲ ಮೇ ದಿನಾಚರಣೆ ಆಚರಣೆ ಮಾಡಿರುವ ಕಾರ್ಖಾನೆ ಎಂದರೆ ವಿಐಎಸ್‌ಎಲ್ ಕಾರ್ಮಿಕರು, ದಿನಾಚಣೆಗೆ ಅನುಮತಿ ನೀಡದ ಅಂದಿನ ಮೈಸೂರು ಸರಕಾರದ ವಿರುದ್ದ ಕಾರ್ಮಿಕರ ತ್ಯಾಗ ಬಲಿದಾನಗಳು ನಡೆದಿದ್ದವು. ಅಂತಹ ದಿಟ್ಟತನದ ಕಿಚ್ಚಿನ ಹೋರಾಟದ ದಿನಗಳು ಪುನಃ ಮರುಕಳಿಸಬೇಕಿದೆ. ಕೇವಲ ಕಾರ್ಮಿಕರ ಸಹಕಾರದಿಂದ ಹೋರಾಟಕ್ಕೆ ಪರಿಹಾರ ಸಿಗಲು ಸಾಧ್ಯ. 1941 ರಲ್ಲಿ ಕಾರ್ಖಾನೆಯ ಕಾರ್ಮಿಕರೆಲ್ಲರೂ ಶಿವಮೊಗ್ಗದ ನಿಧಿಗೆಯವರೆಗೂ ಪಾದಯಾತ್ರೆಯ ಮೂಲಕ ಹೋರಾಟ ನಡೆಸಿ 1941 ರ ಮೇ 1 ರಂದು ಮೊಟ್ಟಮೊದಲ ಬಾರಿಗೆ ಆಚರಿಸಿದ ಮೇ ದಿನಾಚರಣೆ ಇತಿಹಾಸ ನಿರ್ಮಿಸಿದೆ. ಇಂತಹ ಹೋರಾಟದ ಧೈರ್ಯ ಈ ಕಾರ್ಖಾನೆಯ ಕಾರ್ಮಿಕರಲ್ಲಿದೆ ಎಂದು ಮೆಲುಕು ಹಾಕಿದರು.
ಹೋರಾಟಗಳು ಎಂದಿಗೂ ಕಾರ್ಖಾನೆ ಆಡಳಿತ ವರ್ಗದವರ ವಿರುದ್ದ ಮಾತ್ರವಲ್ಲ ಸರಕಾರದ ನೀತಿಗಳ ವಿರುದ್ದವೂ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಕೇಂದ್ರ ಹಾಗು ರಾಜ್ಯ ಸರಕಾರಗಳು ಜಾರಿಗೆ ತರುವ ನೀತಿಗಳು ಬಂಡವಾಳಶಾಯಿಗಳಿಗೆ ಲಾಭ ಮಾಡಿಕೊಡುತ್ತಿವೆಯೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು ಸರಕಾರಗಳು ದೇಶದುದ್ದಕ್ಕೂ ಕಾರ್ಖಾನೆಗಳನ್ನು ಮುಚ್ಚಿ ಶ್ರಮಿಕ ಕಾರ್ಮಿಕರನ್ನು ಬೀದಿಗೆ ತಳ್ಳುವ ಪಿತೂರಿ ನಡೆಸುವ ಪ್ರಯತ್ನ ಮಾಡುತ್ತಿರುವುದು ಸಲ್ಲದು ಎಂದರು.
ಗಡಿಭಾಗಗಳಲ್ಲಿ ಭಾರತೀಯ ಯೋಧರ ಮೇಲೆ ನಡೆಯುತ್ತಿರುವ ದಾಳಿ, ಹತ್ಯೆಗಳು ದೇಶ ದ್ರೊಹಿ ಕೃತ್ಯ ಎಂದು ಹೇಳುವ ಸರಕಾರಗಳು ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ಮೂಲಕ ಕಾರ್ಮಿರನ್ನು ಬೀದಿ ಪಾಲು ಮಾಡುತ್ತಿರುವುದು ದೇಶ ಪ್ರೆಮಿ ಕೆಲಸವೋ ದೇಶದ್ರೊಹಿ ಕೆಲಸವೋ ಎಂಬುದನ್ನು ಕಾರ್ಮಿಕರು ಕೇಳಬೇಕಾಗಿದೆ. ಕೂಡಲೆ ಸರಕಾರಗಳು ಕಾರ್ಖಾನೆಗೆ ಸಂಬಂಧಿಸಿದ ಗಣಿ ನೀಡಬೇಕು ಹಾಗೂ ಕಾರ್ಖಾನೆಗೆ ಬಂಡವಾಳ ತೊಡಗಿಸಿ ಪುನಶ್ಚೆತನಕ್ಕೆ ಪ್ರಯತಿಸಬೇಕು. 13 ದಿನಗಳ ಬದಲಾಗಿ ತಿಂಗಳ ಪೂರ್ತಿ ಕೆಲಸ ನೀಡಬೇಕು. ಈ ಹಿನ್ನಲೆಯಲ್ಲಿ ನಡೆಯುವ ಕಾರ್ಮಿಕರ ಹೋರಾಟಕ್ಕೆ ಸಿಐಟಿಯು ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಪ್ರತಿಭಟನೆಯಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಗೌರವಾಧ್ಯಕ್ಷ ಚಂದ್ರಹಾಸ್ ಮುಖಂಡರಾದ ನಾರಾಯಣ್, ರಾಕೇಶ್ ಸೇರಿದಂತೆ ನೂರಾರು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post