ಭದ್ರಾವತಿ: ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ರಾಜ್ಯದಲ್ಲಿ ನಂ.1 ರ ಸ್ಥಾನಕ್ಕೆ ಪಡೆಯಬೇಕೆಂಬ ಸದ್ದುದ್ದೇಶದಿಂದ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಸ್ವತಃ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರು ನಾಗರಿಕರ ಮನೆಗಳಿಗೆ ತೆರಳಿ ಅರಿವು ಮೂಡಿಸುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕರಿಗೆ ಕಡ್ಡಾಯ ಮತದಾನದ ಅರಿವು ಮೂಡಿಸಲು ಜಿಪಂ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ತಹಸೀಲ್ದಾರ್ ಸೋಮಶೇಖರ್ ಮತ್ತು ತಂಡ ಹಗಲಿರುಳು ಶ್ರಮಿಸುತ್ತಾ ಜಾಗೃತಿ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡದವರ ಜಾಗೃತಿ ಒಂದೆಡೆಯಾದರೆ ನಗರದ ಕುಂಚ ಕಲಾವಿದನೋರ್ವ ಸುಮಾರು ಐದಾರು ದಿನಗಳಿಂದ ತಾಲೂಕಿನ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಗೋಡೆ ಬರಹಗಳ ಮೂಲಕ ಮತ ಜಾಗೃತಿ ಮೂಡಿಸುವ ಉದ್ದೇಶ ಹೊತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಗದ ನಗರದ ಭದ್ರಾವತಿ ಗುರು ಎಂದೇ ಪ್ರಸಿದ್ದಿಯಾಗಿರುವ ಕುಂಚ ಕಲಾವಿದ ಜಿಲ್ಲಾಧಿಕಾರಿಗಳ ಉತ್ತಮ ಕಾರ್ಯಕ್ಕೆ ಬೆಂಬಲವಾಗಿ ತಾವು ಕೂಡ ಏನನ್ನಾದರೂ ಸಾಧನೆ ಮಾಡಲೇಬೇಕೆಂಬ ಹಂಬಲ ಹೊತ್ತು ಸ್ವಂತ ಖರ್ಚಿನಲ್ಲಿ ಅಗತ್ಯ ಬಣ್ಣ ಮತ್ತಿತರೆ ಸಾಮಾಗ್ರಿಗಳನ್ನು ಖರೀದಿಸಿದ್ದೇನೆ. ಇದಕ್ಕೆ ಕಾಗದ ನಗರದ ಅನೇಕರು ತಮಗೆ ಬೆಂಬಲಕ್ಕೆ ನೀಡಿದ್ದಾರೆ. ಅವರ ಬೆಂಬಲದಿಂದ ತಾಲೂಕಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಿ ಬಸ್ ನಿಲ್ದಾಣಗಳು, ಮಾರ್ಗಸೂಚಿಗಳು, ಮತ್ತಿತರೆ ಕಟ್ಟಡಗಳ ಮೇಲೆ ಮತದಾನದ ಘೋಷಣೆಗಳನ್ನು ಗೋಡೆಬರಹಗಳ ಮತದಾರರಿಗೆ ಮತದಾನದ ಅರಿವು ಮೂಡಿಸುವ ಹಂಬಲಕ್ಕೆ ಕೈಹಾಕಿದ್ದೇನೆ ಎನ್ನುತ್ತಾರೆ.
2006 ರಲ್ಲಿ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಸುಮಾರು 400 ಅಡಿಗಳ ಉದ್ದದ ಬ್ಯಾನರ್‌ನಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ಬರಹ ಚಿತ್ರಗಳನ್ನು ಪ್ರದರ್ಶಿಸಿದ್ದ ಕೀರ್ತಿ ತಮ್ಮದಾಗಿದೆ. ಅಂದು ಅತಿದೊಡ್ಡ ಬ್ಯಾನರ್ ಎಂದು ಖ್ಯಾತಿ ಪಡೆದಿತ್ತು. 2008 ರಲ್ಲಿ ಬ್ಯಾನರ್ ಲಿಮ್ಕಾ ದಾಖಲೆಗೆ ಸೇರ್ಪಡೆಗೊಂಡಿದ್ದು ವಿಶೇಷವಾಗಿತ್ತು. ಅಲ್ಲಿಂದ ಇಲ್ಲಿಯವರೆವಿಗೆ ಬಣ್ಣದ ಬದುಕಿನಲ್ಲಿ ಬದುಕು ಸಾಗಿಸುತ್ತಾ ತಮ್ಮ ಸಹೋದರ ಪ್ರವೀಣ್ ಕುಮಾರ್ ಶಿಲ್ಪ ಕಲಾವಿದ ಮತ್ತೋರ್ವ ಸುರೇಶ್ ಕುಂಚ ಕಲಾವಿದರನ್ನಾಗಿಸಿದ ತೃಪ್ತಿ ತಮಗಿದೆ.
ಕಲೆಯನ್ನು ಆರಾಧಿಸುತ್ತಾ ಮತ್ತೊಮ್ಮೆ ಏನನ್ನಾದರೂ ಸಾಧಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶ ಹೊತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಅರಿವು ಮೂಡಿಸುವ ಸಲುವಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾನದ ಅರಿವು ಮೂಡಿಸಲು ಗೋಡೆಬರಹಗಳ ಮೇಲೆ ಮತದಾನ ಪವಿತ್ರ ಕಾರ್ಯ, ಮತದಾನ ಮಾಡುವವರೇ ಮಹಾಶೂರ, ಮತದಾನ ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ, ಶಿವಮೊಗ್ಗ ಲೋಕಸಭಾ ಚುನಾವಣೆ-2019 ಪ್ರತಿಯೊಬ್ಬರ ಒಂದು ಮತದಾನವು ಒಂದು ದೊಡ್ಡ ಪ್ರಜಾಶಕ್ತಿ, 23-4-2019 ತಪ್ಪದೆ ಮತದಾನ ಮಾಡಿರಿ ಎಂಬಿತ್ಯಾದಿ ಘೋಷಣೆಗಳನ್ನು ಬರೆದು ಅರಿವು ಮೂಡಿಸುತ್ತಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ. ಇವರ ಸಾಧನೆ ಮತ್ತಷ್ಟು ಮೇರು ಪರ್ವತಕ್ಕೆ ಏರಲಿ ಎಂಬುದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಆಶಯವಾಗಿದೆ.
(ವಿಶೇಷ ವರದಿ: ಆರ್.ವಿ. ಕೃಷ್ಣ, ಪ್ರತಿನಿಧಿ, ಭದ್ರಾವತಿ)
Discussion about this post