ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸೌತ್ ಏಷ್ಯನ್ ಒಲಿಂಪಿಕ್ ಗೇಮ್ಸ್’ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಖೊ ಖೋ ಕ್ರೀಡಾಕೂಟದಲ್ಲಿ ತಮ್ಮ ನೇತೃತ್ವದ ಭಾರತೀಯ ತಂಡವನ್ನು ಗೆಲ್ಲಿಸಿಕೊಂಡು ಬರುವಲ್ಲಿ ನಮ್ಮ ಭದ್ರಾವತಿಯ ಹೆಮ್ಮೆಯ ಕ್ರೀಡಾಪಟು ಮುನಿರ್ ಬಾಷಾ ಯಶಸ್ವಿಯಾಗಿದ್ದಾರೆ.
ನೇಪಾಳದ ಕಠ್ಮಂಡುವಿನಲ್ಲಿ ನಿನ್ನೆ ನಡೆದ ಕ್ರೀಡಾಕೂಟದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದ್ದು, ಇದರ ನೇತೃತ್ವವನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮುನಿರ್ ಬಾಷಾ ವಹಿಸಿದ್ದರು ಎಂಬುದು ಮಲೆನಾಡಿಗರ ಹೆಮ್ಮೆಯಾಗಿದೆ.
ಮುನಿರ್ ಬಾಷಾ ಅವರ ಕುರಿತು ಓದಿ:
ಭದ್ರಾವತಿಯ ಭಾಷಾ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂದರೆ ಸುಮಾರು ಅವರ ಎಂಟನೆಯ ವಯಸ್ಸಿನಲ್ಲಿ ನಾಲ್ಕನೇ ತರಗತಿಯಲ್ಲಿ ಓದುವಾಗಲೇ ಖೊಖೋ ಕ್ರೀಡೆಯಲ್ಲಿ ಅತೀವ ಆಸಕ್ತಿಯಿಂದ ಹೊಂದಿದ್ದರು.
ಪ್ರತಿನಿತ್ಯ ಮೈದಾನಕ್ಕೆ ತೆರಳುತ್ತಿದ್ದ ಅವರು ಹಿರಿಯ ಕ್ರೀಡಾಪಟುಗಳಿಗೆ ಮೈದಾನವನ್ನು ಸಜ್ಜು ಮಾಡಿಕೊಡುವ ಜೊತೆಯಲ್ಲಿ ಅವರ ತಯಾರಿಯನ್ನು ನೋಡುತ್ತಾ ಕಲಿಯಲು ಆರಂಭಿಸಿದರು ಬಾಷಾ.
ಭದ್ರಾವತಿಯ ಖ್ಯಾತ ದೈಹಿಕ ಶಿಕ್ಷಕ ಎಚ್.ಟಿ. ತಿಮ್ಮಪ್ಪ ಅವರ ಮಾರ್ಗದರ್ಶನ ಗರಡಿಗೆ ಬಂದ ಇವರು, ಎಸ್’ಸಿಎಫ್’ಐಯಿಂದ ಕರ್ನಾಟಕವನ್ನು ಪ್ರತಿನಿಧಿಸಿ ವಿಜೇತರಾಗಿದ್ದರು. ಕರ್ನಾಟಕ ರಾಜ್ಯ ಸಂಸ್ಥೆಯಿಂದ ಹದಿನಾಲ್ಕನೆಯ ವರ್ಷದ ಸಬ್ ಜೂನಿಯರ್ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದು, ಅದರಲ್ಲಿ ಅವರು ವಿಜೇತರಾಗಿ ಹಾಗೂ ಅತ್ಯುತ್ತಮ ಆಟಗಾರರಾಗಿ ಖೊಖೋ ಫೆಡರೇಷನ್ ಆಫ್ ಇಂಡಿಯಾದಿಂದ ನೀಡುವಂತಹ ಗೌರವಾನ್ವಿತ ಭಾರತ್ ಅವಾರ್ಡ್ ಪಡೆದಿದ್ದಾರೆ.
ಹೈಸ್ಕೂಲ್ ವಿಭಾಗದಲ್ಲಿಯೂ ರಾಜ್ಯವನ್ನು ಪ್ರತಿನಿಧಿಸಿದ್ದ ಬಾಷಾ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಎರಡು ಬಾರಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾಗಿದ್ದರು.
ತಮ್ಮ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಅದನ್ನೆಲ್ಲಾ ಪಕ್ಕಕ್ಕಿಟ್ಟ ಎಂಪಿಎಂಸಿ ಆವರಣದಲ್ಲಿ ಹಮಾಲಿ ಕೆಲಸ ಮಾಡುವ ಬಾಷಾ ಅವರ ತಂದೆ ಅಹ್ಮದ್ ಜಾನ್, ತಾಯಿ ಆರಿಫಾ ಬೇಗಂ ಅವರುಗಳು ಮಗನ ಕ್ರೀಡಾಸಕ್ತಿಗೆ ನೀರೆರೆದು ಪ್ರೋತ್ಸಾಹಿಸುತ್ತಾ ಬಂದರು.
ಬಡತನದ ಕಾರಣದಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಬಾಷಾ ಜೀವನಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಗಾರೆ ಕೆಲಸ ಆರಂಭಿಸುತ್ತಾರೆ. ಮೂರು ವರ್ಷಗಳ ಕಾಲ ಗಾರೆ ಕೆಲಸ ಮಾಡುತ್ತಲೇ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ಬಾಷಾ, ತಮ್ಮ ಕ್ರೀಡಾಸಕ್ತಿಯನ್ನು ಮಾತ್ರ ಬಿಡದೇ ನಿರಂತರ ಅಭ್ಯಾಸ ಮಾಡುತ್ತಿದ್ದರು.
ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾ ಸಂಸ್ಥೆಯವರು ಇವರನ್ನು ಗುರುತಿಸಿ ವಿದ್ಯಾಭ್ಯಾಸ ಮುಂದುವರೆಸಲು ಪ್ರೋತ್ಸಾಹಿಸಿದರು. ಹೀಗಾಗಿ, ಮತ್ತೆ ವಿದ್ಯಾಭ್ಯಾಸ ಆರಂಭಿಸಿದ ಅವರು ಬಿಎ ಪದವಿ ಪಡೆದು ಕುವೆಂಪು ವಿವಿಯನ್ನು ಮೂರು ಬಾರಿ ಖೊಖೊ ತಂಡವನ್ನು ಪ್ರತಿನಿಧಿಸಿ, ರನ್ನರ್ ಅಪ್ ಆಗಿದ್ದರು.
ಕರ್ನಾಟಕ ರಾಜ್ಯ ಖೊಖೊ ಸಂಸ್ಥೆಯ ವತಿಯಿಂದ ತುಮಕೂರಿನಲ್ಲಿ ನಡೆದ ಖೊಖೊ ಫೆಡರೇಶನ್ ಕಪ್’ನಲ್ಲಿ ರಾಜ್ಯವನ್ನು ವಿಜೇತರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರಿಸುಮಾರು ಸೀನಿಯರ್ ನ್ಯಾಷನಲ್ಸ್’ನ್ನು ರಾಜ್ಯದ ಪರವಾಗಿ ನಾಲ್ಕು ಬಾರಿ ಪ್ರತಿನಿಧಿಸಿದ್ದು, ಕೇರಳದಲ್ಲಿ ನಡೆದ ನ್ಯಾಷನಲ್ಸ್ ಗೇಮ್’ನಲ್ಲಿ ರಾಜ್ಯವನ್ನು ಮೂರನೇ ಸ್ಥಾನ ಹಾಗೂ ಸೀನಿಯರ್ ನ್ಯಾಷನಲ್ಸ್’ಗಳಲ್ಲಿ ಎರಡು ಮತ್ತು ಮೂರು ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಜ್ಯ ಮಟ್ಟದಲ್ಲಿ ಹಾಗೂ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಗೊಳಿಸಲು ಅತಿ ಹೆಚ್ಚು ಪಾತ್ರ ವಹಿಸಿದ್ದು ಹಾಗೂ ನಮ್ಮ ಸಂಸ್ಥೆಯಲ್ಲಿ ಎಲ್ಲ ಆಟಗಾರರು ಅವನ ಜೊತೆಗೆ ಸಂಪೂರ್ಣ ಸಹಕಾರದಿಂದ ನಮ್ಮ ಸಂಸ್ಥೆಯ ಹೆಸರನ್ನು ಉನ್ನತ ಮಟ್ಟಕ್ಕೆ ಏರಲು ಪ್ರಮುಖ ಪಾತ್ರರಾಗಿದ್ದಾರೆ.
ಇವರ ಈ ಎಲ್ಲ ಕ್ರೀಡಾ ಸಾಧನೆಯನ್ನು ಗಮನಿಸಿ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು 2017ರಲ್ಲಿ ನೀಡಿ ಗೌರವಿಸಿದೆ.
ಇನ್ನು ಈ ಹಿಂದೆ ನೀಡುತ್ತಿದ್ದಂತಹ ಏಕಲವ್ಯ ಪ್ರಶಸ್ತಿಯನ್ನು ಖೊಖೊ ಕ್ರೀಡೆಗೆ ಪರಿಗಣಿಸಿ ಅವರಿಗೆ ನೀಡಬೇಕೆಂದು ರಾಜ್ಯ ಸರ್ಕಾರದಲ್ಲಿ ಕಳಕಳಿಯ ವಿನಂತಿ ಮಾಡುತ್ತಾರೆ.
ರಾಷ್ಟ್ರವೇ ಮೆಚ್ಚುವಂತಹ ಸಾಧನೆ ಮಾಡಿರುವ ಮುನಿರ್ ಬಾಷಾ ಅವರ ಕ್ರೀಡಾ ಸೇವೆಯನ್ನು ರಾಜ್ಯ ಸರ್ಕಾರ ಪರಿಗಣಿಸಿ, ಇವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಇವರಿಗೊಂದು ಸರ್ಕಾರಿ ಉದ್ಯೋಗ ನೀಡುವ ಮೂಲಕ ಪ್ರೋತ್ಸಾಹಿಸಬೇಕಿದೆ ಎಂಬುದು ಭದ್ರಾವತಿ ನಾಗರಿಕರ ಮನವಿಯಾಗಿದೆ.
(ವರದಿ: ಡಾ.ಸುಧೀಂದ್ರ)
Get in Touch With Us info@kalpa.news Whatsapp: 9481252093
Discussion about this post