ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಿದ್ದರೂ ಸಹ ನಗರದ ಹಲವೆಡೆ ಯುಗಾದಿ ಹಬ್ಬದ ವ್ಯಾಪಾರ ವಹಿವಾಟು ಬಲು ಜೋರಾಗೇ ನಡೆದಿತ್ತು.
ಇಂದು ಬೆಳಗಿನಿಂದಲೇ ನಗರದ ಕೆಲವು ಪ್ರಮುಖ ದಿನಸಿ ಅಂಗಡಿಗಳಲ್ಲಿ ಜನರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

1 ಗಂಟೆ ವೇಳೆ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದ್ದರೂ, ಬಸವೇಶ್ವರ ವೃತ್ತದ ಬಳಿಯ ಮಾರುಕಟ್ಟೆಯಲ್ಲಿ ಜನಜಂಗುಳಿಯೇ ನೆರೆದಿತ್ತು. ನಗರಸಭೆ ಸಿಬ್ಬಂದಿಗಳು ಮೈಕ್ ಮೂಲಕ ಎಚ್ಚರಿಕೆ ನೀಡುತ್ತಿದ್ದರು ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಲೆಕ್ಕಿಸದೇ, ವ್ಯಾಪಾರ ಮಾಡುತ್ತಿದ್ದುದು ಕಂಡು ಬಂದಿತು.
ಆನಂತರ ಸ್ವತಃ ಕಂದಾಯ ಅಧಿಕಾರಿಯವರೇ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಅಂಗಡಿಗಳನ್ನು ಮುಚ್ಚಿಸಬೇಕಾಯಿತು.
ಹಬ್ಬದ ಖರೀದಿ ಮೂಡ್’ನಲ್ಲಿ ಸಾರ್ವಜನಿಕರ ನಿರ್ಲಕ್ಷ್ಯ
ಹಿಂದೂ ಪಂಚಾಗದ ಹೊಸ ವರ್ಷಾಚರಣೆ ಮಾಡಲೇಬೇಕು ಎಂಬ ಚಿಂತನೆಯಲ್ಲಿದ್ದ ಸಾರ್ವಜನಿಕರು ನಿಷೇಧಾಜ್ಞೆ ಉಲ್ಲಂಘನೆ ಮಾಡುವ ಜೊತೆಯಲ್ಲಿ ಆರೋಗ್ಯವನ್ನು ಸಹ ನಿರ್ಲಕ್ಷಿಸುತ್ತಿದ್ದುದು ಕಂಡು ಬಂದಿತು. ಕೊರೋನಾ ವೈರಸ್ ಹರಡುತ್ತಿರುವ ಪರಿಸ್ಥಿತಿಯ ಗಂಭೀರತೆಯನ್ನು ನಿರ್ಲಕ್ಷಿಸುತ್ತಿದ್ದು, ನಗರಸಭೆ ಸಿಬ್ಬಂದಿಗಳು ಇವರನ್ನೆಲ್ಲಾ ಮನೆಗೆ ಕಳುಹಿಸಲು ಹರಸಾಹಸ ಪಟ್ಟರು.
ಇನ್ನು, ನಗರದ ಹಲವು ಭಾಗಗಳಲ್ಲಿ ಯುಗಾದಿ ಹಬ್ಬಕ್ಕೆ ಅಗತ್ಯವಿರುವ ಮಾವಿನ ಸೊಪ್ಪು, ಬೇವಿನ ಸೊಪ್ಪು, ಹೂವು-ಹಣ್ಣು, ತರಕಾರಿಗಳನ್ನು ಜನರು ಆತುರ ಆತುರವಾಗಿಯೇ ಖರೀದಿಸುತ್ತಿದ್ದುರು ಕಂಡು ಬಂದಿತು.

ಇಂದಿನಿಂದ ಲಾಕ್’ಡೌನ್ ಜಾರಿಯನ್ನು ನಿನ್ನೆ ರಾತ್ರಿಯೇ ಘೋಷಣೆ ಮಾಡಲಾಗಿತ್ತು. ಬ್ಯಾಂಕ್’ಗಳಿಗೆ ತುರ್ತು ವ್ಯವಹಾರದ ಅಗತ್ಯವಿರುವ ಗ್ರಾಹಕರು ಮಾತ್ರ ಬರಬೇಕು ಎಂದು ಸೂಚಿಸಲಾಗಿತ್ತು.

ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ವ್ಯಾಪಾರಿಗಳು
ಇನ್ನು, ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್’ಡೌನ್ ಘೋಷಣೆ ಮಾಡಿದ್ದು, ಅಗತ್ಯ ವಸ್ತುಗಳನ್ನು ಕೊಳ್ಳಲು ಸಮಯ ನಿಗದಿ ಮಾಡಿದೆ. ಆದರೆ, ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ಹಲವು ಅಂಗಡಿಗಳು ಹಾಗೂ ತರಕಾರಿ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ಸಾರ್ವಜನಿಕರು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ಈ ಕುರಿತು ತಿಳಿಸಿದ್ದು, ಸಾಮಾನ್ಯ ದರಕ್ಕಿಂತಲೂ ದುಪ್ಪಟ್ಟು ದರ ಪಡೆಯುತ್ತಿದ್ದಾರೆ. ಕೇಳಿದರೆ ಈಗ ಇಷ್ಟೇ ದರ. ಬೇಕಾದರೆ ತೆಗೆದುಕೊಳ್ಳಿ, ಇಲ್ಲವಾದರೆ ಬಿಡಿ ಎಂದು ದಾರ್ಷ್ಟ್ಯದ ಮಾತನ್ನಾಡುತ್ತಾರೆ ಎಂದು ದೂರಿದ್ದಾರೆ.
ಹೆಚ್ಚಿನ ಬೆಲೆಗೆ ಮಾರುವಂತಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಆದರೆ, ನಗರದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ನಗರಸಭೆ ತತಕ್ಷಣ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
Get in Touch With Us info@kalpa.news Whatsapp: 9481252093







Discussion about this post