ಭದ್ರಾವತಿ: ರಾಜ್ಯ ಸರಕಾರವು ಕನ್ನಡ ಶಾಲೆಗಳಲ್ಲಿ ಜಾರಿಗೆ ತಂದಿರುವ ಆಂಗ್ಲ ಮಾಧ್ಯಮ ಆದೇಶ ಕೂಡಲೇ ಹಿಂಪಡೆಬೇಕೆಂದು ಧಾರವಾಡ ಉಚ್ಚನ್ಯಾಯಾಲಯದ ವಕೀಲ ಹಾಗು ಸಾಹಿತಿ ಡಾ.ರೇವಣ್ಣ ಬಳ್ಳಾರಿ ಒತ್ತಾಯಿಸಿದರು.
ಅವರು ಶನಿವಾರ ಸಂಜೆ ಹಳೇನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಾಗು ಮಂಗಳೂರಿನ ಕಥಾಬಿಂಧು ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕವಿಕಾವ್ಯ, ಸಾಂಸ್ಕೃತಿಕ ಕಾರ್ಯಕ್ರಮ-2019 ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸೂರ್ಯ ಚಂದ್ರರಂತೆ ಶಾಶ್ವತವಾಗಿ ಸಮಾಜಕ್ಕೆ ಬೆಳಕು ಚೆಲ್ಲುತ್ತಿರುವ ಮತ್ತು ಪರಭಾಷೆಗಳಿಗಿಂತ ಮೇಲ್ಪಂತಿಯಲ್ಲಿರುವ ಕನ್ನಡ ಭಾಷೆಗೆ ಕುತ್ತು ಬರುತ್ತಿರುವುದನ್ನು ಕನ್ನಡದ ಮನಸ್ಸುಗಳು ಒಗ್ಗೂಡಿ ತಡೆಯಬೇಕಾಗಿದೆ. ಕನ್ನಡ ಭಾಷೆ ಹೃದಯದ ಭಾಷೆಯಾಗಿದೆ. ಸಮಾಜವನ್ನು ಒಗ್ಗೂಡಿಸುವ ಮತ್ತು ಕನ್ನಡದ ಮನಸ್ಸುಗಳನ್ನು ಕಟ್ಟುವ ಹೆತ್ತ ತಾಯಿ ಭಾಷೆಯಾಗಿದೆ. ಇಂದು ನಡೆದ ಕವಿಗೋಷ್ಟಿಯು ಕನ್ನಡ ನದಿಯಾಗಿ ಹರಿದಂತಿದೆ. ಕನ್ನಡ ವಿರೋದಿ ಯೋಜನೆಗಳನ್ನು ಜಾರಿಗೆ ತರುತ್ತಿರುವ ಸರಕಾರದ ವಿರುದ್ದ ಕನ್ನಡಿಗರಿಂದು ಪ್ರತಿಭಟಿಸದೆ ಇರುವುದರಿಂದ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ಬಂದಿದೆ. ಕನ್ನಡ ಶಾಲೆಗಳಲ್ಲಿ ಕಲಿತ 7 ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದ ಮಹನೀಯರಿಗೆ ಗೌರವಿಸುವ ಬದಲು ಸರಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ದುರಂತವಾಗಿದೆ. ಇಂದಿನ ಸಾಹಿತಿಗಳು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಭರ್ತಿ ಮಾಡುತ್ತಿರುವುದು ದುರಂತವಾಗಿದೆ ಎಂದರು.
ಕನ್ನಡ ಸಂಘ ಸಂಸ್ಥೆಗಳು ಸಾಧಕರಿಗೆ ನೀಡುವ ಪ್ರಶಸ್ತಿಗಳು ಮತ್ತು ಗೌರವಗಳು ರಾಜ್ಯ ಮತ್ತು ರಾಷ್ಟ್ರ ಸರಕಾರಗಳು ನೀಡುವ ಪ್ರಶಸ್ತಿಗಳಿಗಿಂತ ಮಿಗಿಲಾದವು ಎಂದು ಪ್ರತಿಯೊಬ್ಬರು ಅರಿಯಬೇಕಾಗಿದೆ. ಇದರ ಆಧಾರದಡಿ ನಾವು ನಮ್ಮ ಸಂಸ್ಥೆಯಿಂದ ಚಿತ್ರದುರ್ಗದಲ್ಲಿ ಕನ್ನಡ ಶಾಲೆಗಳಲ್ಲಿ 50 ವರ್ಷಗಳ ಸೇವೆ ಸಲ್ಲಿಸಿದ 75 ವಯೋಮಾನದ ಹಿರಿಯ ಶಿಕ್ಷಕರಿಗೆ ಗೌರವ ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ. ಮಠಾಧಿಪತಿಗಳ ಹಾಗು ಗುರುಗಳ ಕೃಪಾಶೀರ್ವಾದವಿದ್ದರೆ ಪ್ರಪಂಚವನ್ನೆ ಗೆಲ್ಲಬಹುದೆಂದು ಡಾ.ರೇವಣ್ಣ ಬಳ್ಳಾರಿ ಎಂದರು.
ಪೌರಾಯುಕ್ತ ಮನೋಹರ್ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನರ ಮನಸ್ಸು ಹೂವಿನಂತೆ ಅರಳಿ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಪ್ರತಿಯೊಬ್ಬರು ಜಂಜಾಟಗಳನ್ನು ದೂರವಿಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೊಡಗಿಸಬೇಕೆಂದು ಕರೆ ನೀಡಿದರು.
ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾಧ್ಯಕ್ಷ ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪ್ಪಿನಂಗಡಿಯ ಸತ್ಯಶಾಂತ ಪ್ರತಿಷ್ಟಾನದ ಅಧ್ಯಕ್ಷೆ ಶಾಂತ ಕುಂಟಿನಿ, ಬೆಂಗಳೂರಿನ ಇಂದ್ರಾಸುಧಾ ಸಾಂಸ್ಕೃತಿಕ ಕಲಾಟ್ರಸ್ಟ್‍ನ ಸುಧಾ, ಮಂಗಳೂರಿನ ಕಥಾಬಿಂಧು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್, ಬ್ಯೂಟಿಷಿಯನ್ ರಾಷ್ಟ್ರ ಪ್ರಶಸ್ತಿ ವಿಜೇತೆ ಪದ್ಮಾವತಿ ಸಚ್ಚಿತಾನಂದಾ ಗುಪ್ತ, ಮುಖಂಡರಾದ ಎಸ್. ವಾಗೀಶ್, ನಂದಿನಿ ಮಲ್ಲಿಕಾರ್ಜುನ್, ಡಾ.ಜಿ.ಎಂ. ನಟರಾಜ್, ಅಪೇಕ್ಷ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 16 ಮಂದಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೂಜಾ ಪ್ರಾರ್ಥಿಸಿದರೆ, ಬಿ.ಎಸ್. ಮಹೇಶ್ ಕುಮಾರ್ ಸ್ವಾಗತಿಸಿದರು. ವಿ.ಪಿ. ಪ್ರದೀಪ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಭಾವತಿ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post