ಭದ್ರಾವತಿ: ರೇಬೀಸ್ ಮಾರಣಾಂತಿಕ ಕಾಯಿಲೆಯಾಗಿರುವ ಹಿನ್ನಲೆಯಲ್ಲಿ ಪ್ರತಿ 9 ನಿಮಿಷಕ್ಕೆ ಓರ್ವರು ಸಾವನ್ನಪ್ಪುತ್ತಿದ್ದಾರೆ. ಸಾಕು ಪ್ರಾಣಿ ನಾಯಿಗಳಿಂದ ಮಕ್ಕಳನ್ನು ದೂರವಿರಿಸುವಲ್ಲಿ ಪೋಷಕರ ಪಾತ್ರ ಮುಖ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಗುಡುದಪ್ಪ ಕಸಬಿ ಹೇಳಿದರು.
ಅವರು ಶುಕ್ರವಾರ ನಗರಸಭಾ ಕಛೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಸರಕಾರಿ ವೈದ್ಯಾಧಿಕಾರಿಗಳ ಸಂಘ ಹಾಗು ಪಶು ಇಲಾಖೆ ಏರ್ಪಡಿಸಿದ್ದ ವಿಶ್ವ ರೇಬೀಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬೀದಿ ನಾಯಿಗಳನ್ನು ನಿಯಂತ್ರಿಸಿದ್ದಲ್ಲಿ ಮಾತ್ರ ಕಾಯಿಲೆ ಹರಡದಂತೆ ತಡೆಗಟ್ಟಲು ಸಾಧ್ಯ. ಸ್ಥಳೀಯ ನಗರಸಭೆ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ನಡೆಸುವ ಮೂಲಕ ನಿಯಂತ್ರಿಸಬಹುದಾಗಿದೆ. ಈ ಮಾರಣಾಂತಿಕ ಕಾಯಿಲೆಯಿಂದ ಪ್ರತಿವರ್ಷ ಸುಮಾರು 59 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ಮಕ್ಕಳಿಗೆ ಬೇಗ ರೇಬೀಸ್ ಹರಡುವ ಹಿನ್ನಲೆಯಲ್ಲಿ ಮನೆಗಳಲ್ಲಿ ಸಾಕು ನಾಯಿಗಳಿಗೆ ಕಾಲಕಾಲಕ್ಕೆ ಚುಚ್ಚುಮದ್ದು ಹಾಕಿಸುವುದು ಸೂಕ್ತ ಎಂದರು.
ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಬಾಬುರತ್ನ ಮಾತನಾಡಿ ನಾಯಿಗಳ ಕಡಿತಕ್ಕೊಳಗಾದ ವ್ಯಕ್ತಿಯು ಕೂಡಲೇ ಗಾಯವನ್ನು ಶುದ್ದ ನೀರಿನಿಂದ ತೊಳೆದು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಮುಂದಾಗಬಹುದಾದ ಅನಾಹುತ ತಪ್ಪಿಸಲು ಸಾಧ್ಯ. ಸ್ವಚ್ಚತೆಯಲ್ಲಿ ನಿರತರಾಗಿರುವ ಪೌರ ಕಾರ್ಮಿಕರು ಮುಂಜಾಗ್ರತೆಯಾಗಿ ಚುಚ್ಚುಮದ್ದು ಪಡೆಯುವುದು ಉತ್ತಮ ಎಂದರು.
ನಗರಸಭಾ ಸದಸ್ಯ ಆರ್.ಕರುಣಾಮೂರ್ತಿ ಮಾತನಾಡಿ ನಗರಸಭೆ ಸಹಯೋಗದಲ್ಲಿ ಆರೋಗ್ಯ ಇಲಾಖೆ ಇಂತಹ ಅರಿವು ಮೂಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಮತ್ತೋರ್ವ ಸದಸ್ಯ ಕೆ.ಎನ್.ಭೈರಪ್ಪಗೌಡ ಮಾತನಾಡಿ ಪೌರ ಕಾರ್ಮಿಕರು ದಿನನಿತ್ಯ ಮುಂಜಾನೆಯಲ್ಲಿ ಸ್ಚಚ್ಚತೆಗೆ ಮುಂದಾಗುತ್ತಾರೆ. ಅವರಿಗೆ ಅರಿವಿನ ಮಾಹಿತಿ ಕಡಿಮೆ ಇರುವ ಹಿನ್ನಲೆಯಲ್ಲಿ ಇಂತಹ ಕಾರ್ಯಕ್ರಮ ಅಗತ್ಯವಿದೆ ಎಂದರು.
ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ನಗರಸಭಾ ಸದಸ್ಯರಾದ ಲಕ್ಷ್ಮೀದೇವಿ, ಫ್ರಾನ್ಸಿಸ್, ಚನ್ನಪ್ಪ, ನರಸಿಂಹನ್, ಬದರಿನಾರಾಯಣ, ಪ್ರಕಾಶ್‌ರಾವ್, ಗುಣಶೇಖರ್, ಪೌರಾಯುಕ್ತ ಶ್ರೀಕಂಠಸ್ವಾಮಿ, ರೋಟರಿ ಮುಖ್ಯಸ್ಥ ವಿಜಯಕುಮಾರ್, ನಗರಸಭಾ ವ್ಯವಸ್ಥಾಪಕಿ ಸುನಿತಾಕುಮಾರಿ, ಇಂಜಿನಿಯರ್ ಶಿವಲಿಂಗಯ್ಯ ಮುಂತಾದವರು ವೇದಿಕೆಯಲ್ಲಿದ್ದರು. ಈಶ್ವರಪ್ಪ ನಿರೂಪಿಸಿದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post