ಭದ್ರಾವತಿ: ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಆರೋಗ್ಯ ಇಲಾಖೆಯು ಅಧಿಕಾರಿಗಳ ಮತ್ತು ನೌಕರರ ಸಾಮರಸ್ಯಕ್ಕೆ ಮತ್ತು ಒಗ್ಗಟ್ಟು ಪ್ರದರ್ಶನಕ್ಕೆ ಕ್ರೀಡಾಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಹೇಳಿದರು.
ಅವರು ಭಾನುವಾರ ನ್ಯೂಟೌನ್ ವಿಐಎಸ್‍ಎಲ್ ಕ್ರೀಡಾಂಗಣದಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಪ್ರಥಮಭಾರಿಗೆ ಏರ್ಪಡಿಸಿದ್ದ ಸೀಮಿತ 6 ಓವರ್‍ಗಳ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ನಂತರ ಬ್ಯಾಟಿಂಗ್ ಮಾಡುವ ಮೂಲಕ ಕ್ರೀಡೆಗೆ ಚಾಲನೆ ನೀಡಿ ಮಾತನಾಡಿದರು. ಇಂತಹ ಪಂದ್ಯಾವಳಿಯು ನೌಕರರಿಗೆ ಮತ್ತು ಅಧಿಕಾರಿಗಳಿಗೆ ಅವಶ್ಯವಾಗಿದೆ. ಪ್ರಥಮ ಭಾರಿಗೆ ಇಲಾಖೆಯು ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೃಷ್ಣಪ್ಪ ಮಾತನಾಡಿ ಕ್ರೀಡೆಯು ನೌಕರರ ಮತ್ತು ಕುಟುಂಬ ಸದಸ್ಯರನ್ನು ಒಗ್ಗೂಡಿಸುವ ಪ್ರಕ್ರಿಯೆಯಾಗಿದೆ. ಈ ಕ್ರೀಡಾಕೂಟದಿಂದ ಮನಸ್ಸುಗಳು ಒಂದಾಗಿ ಸಂತಸ ಮೂಡಿಸುತ್ತದೆ ಅಲ್ಲದೆ ಉತ್ತಮ ಆರೋಗ್ಯಕ್ಕೆ ರಹದಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸುವ ಸ್ಪೂರ್ತಿ ನಿಮ್ಮಿಂದ ದೊರೆತಿದೆ ಎಂದು ಹೇಳಿ ಶುಭ ಕೋರಿದರು.
ಜಿಲ್ಲಾ ಆರೋಗ್ಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಮ.ಸ.ನಂಜುಂಡಸ್ವಾಮಿ ಮಾತನಾಡಿ ಕ್ರೀಡೆಗಳು ಮನುಷ್ಯನಿಗೆ ಅತ್ಯಾವಶ್ಯಕ. ಇದರಿಂದ ಸೌಹಾರ್ದತೆ ಮತ್ತು ಪ್ರೀತಿ ವಿಶ್ವಾಸ ಹಿಮ್ಮಡಿಸಿ ಒಗ್ಗಟ್ಟು ಪ್ರದರ್ಶಿಸುತ್ತದೆ. ಅಧಿಕಾರಿಗಳು ಮತ್ತು ನೌಕರರು ಒಗ್ಗೂಡಿ ಬೆರೆಯುವ ಕಳಕಳಿ ಹೊತ್ತಿದ್ದ ಆರೋಗ್ಯ ಇಲಾಖೆಯ ನೌಕರ ಹಾಗು ಕ್ರೀಡಾಕೂಟದ ಪ್ರದಾನ ಸಂಚಾಲಕ ಎಸ್.ಆರ್.ರವೀಂದ್ರ ಕುಮಾರ್ ರವರ ಆಸೆ ಫಲಿಸಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಗುಡದಪ್ಪ ಕಸಬಿ ಸರ್ವರನ್ನು ಸ್ವಾಗತಿಸಿದರು. ಆರ್‍ಒಎಚ್ ವಿಭಾಗದ ಡಾ.ನಟರಾಜ್, ಸಿಎಒ ಡಾ.ಮಲ್ಲಪ್ಪ, ಶಿವಮೊಗ್ಗ ಟಿಎಚ್‍ಓ ದಿನೇಶ್, ಡಾ.ಅಚ್ಚುತ್, ಡಾ.ನಾಗರಾಜ್ ನಾಯ್ಕ, ಡಾ.ನಟರಾಜ್, ಸ್ಥಳೀಯ ಟಿಎಚ್‍ಒ ಡಾ.ಗಾಯಿತ್ರಿ, ನೌಕರರ ಸಂಘದ ಅಧ್ಯಕ್ಷ ನೀಲೇಶ್ ರಾಜ್, ಪ್ರಧಾನ ಸಂಚಾಲಕ ಆರ್.ಎಸ್.ರವೀಂದ್ರ ಕುಮಾರ್, ವಿ.ಪ್ರಭಾಕರ್, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಮಹಿಳಾ ವೈದ್ಯಾಧಿಕಾರಿಗಳು ಮತ್ತು ಮಹಿಳಾ ನೌಕರರು ಸೇರಿದಂತೆ ಜಿಲ್ಲೆಯ 11 ತಂಡಗಳ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ಆರಂಭದಲ್ಲಿ ತಾಲೂಕು ಆರೋಗ್ಯ ನೌಕರರ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳ ತಂಡಗಳ ನಡುವೆ 6 ಸೀಮಿತ ಓವರ್‍ಗಳಿಗೆ ಕ್ರೀಡಾಕೂಟ ಆರಂಭಗೊಂಡಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post