ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರೈತರಿಗೆ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲು ರೈತರ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ಕೃಷಿ ಹಾಗೂ ರೈತನ ಹಿತಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕೃಷಿ ಇಲಾಖೆಯ ವತಿಯಿಂದ ನಾಗರಾಜ್ ಹೆಗಡೆಯವರು ತಯಾರಿಸಿರುವ ಭೂಸಿರಿ ಹಾಗೂಭೂ ಮಿತ್ರ ಯಂತ್ರವನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕೃಷಿ ಸಚಿವರು ಲೋಕಾರ್ಪಣೆಗೊಳಿಸಿದರು.
ಲೋಕಾರ್ಪಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿ.ಸಿ. ಪಾಟೀಲ್, ಕಸವನ್ನು ರಸವನ್ನಾಗಿ ಮಾಡುವ ನುಡಿಯಂತೆ ನಾಗರಾಜ್ ಹೆಗಡೆಯವರು ತ್ಯಾಜ್ಯದಿಂದ ತಕ್ಷಣವೇ ತಯಾರಾಗುವ ಸಾವಯವ ಗೊಬ್ಬರವನ್ನು ತಯಾರಿಸುವ ಭೂಸಿರಿಯಂತ್ರವನ್ನು ತಯಾರಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. ಕಳೆದ ವರ್ಷ 200 ಕೋಟಿ ರೂ. ಅನ್ನು ಸಾವಯವ ಕೃಷಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ. ಸಾವಯವ ಕೃಷಿ ನಿಟ್ಟಿನಲ್ಲಿ ಭೂಸಿರಿ ಭೂಮಿತ್ರ ಯಂತ್ರಗಳು ಪ್ರಮುಖವಾಗಿವೆ. ಮಣ್ಣಿನ ಪರೀಕ್ಷೆಗೆ ಭೂಮಿತ್ರ ಸಹಾಯಕವಾಗಲಿದೆ.ಪ್ರಯೋಗಾಲಯಗಳಲ್ಲಿ ಮಣ್ಣು ಪರೀಕ್ಷೆಗೆ ಏಳು ದಿನಗಳು ಬೇಕು. ಆದರೆ ತಕ್ಷಣದ ಮಣ್ಣುಪರೀಕ್ಷೆಗೆ ಭೂಮಿತ್ರ ನೆರವಾಗಲಿದೆ. ರಾಸಾಯನಿಕಮುಕ್ತ ಸಾವಯವ ಕೃಷಿಗೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ವಿಶ್ವದಲ್ಲಿಯೇ ತಕ್ಷಣ ತಯಾರಾಗುವ ಭೂಸಿರಿ ಯಂತ್ರವನ್ನು ಮುಖ್ಯಮಂತ್ರಿಗಳು ಹಾಗೂ ಸಭಾಧ್ಯಕ್ಷರು ಲೋಕಾರ್ಪಣೆಗೊಳಿಸಿದ್ದಾರೆ.
ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 285 ದಶಲಕ್ಷ ಟನ್ ಆಹಾರ ಉತ್ಪಾದನೆಯಾಗಿ ಹಾಗೂ 305 ದಶಲಕ್ಷ ಟನ್ ತೋಟಗಾರಿಕಾ ಬೆಳೆಗಳ ಉತ್ಪಾದನೆಯಾಗಿ ಈ ಬೆಳೆಗಳಿಂದ ಅಂದಾಜು 500 ದಶಲಕ್ಷ ಟನ್‌ಗಳಷ್ಟು ಬೆಳೆ ಅವಶೇಷಗಳು ಉತ್ಪತ್ತಿಯಾಗುತ್ತದೆ. ರಾಷ್ಟ್ರದಲ್ಲಿ ಅತೀ ಹೆಚ್ಚು ಬೆಳೆ ಅವಶೇಷಗಳನ್ನು ಉತ್ಪತ್ತಿ ಮಾಡುವ ರಾಜ್ಯಗಳೆಂದರೆ ಉತ್ತರ ಪ್ರದೇಶ 60 ದಶಲಕ್ಷ ಟನ್, ಪಂಚಾಬ್ 51 ದಶಲಕ್ಷ ಟನ್ ಹಾಗೂ ಮಹಾರಾಷ್ಟ್ರದಲ್ಲಿ 46 ದಶಲಕ್ಷ ಟನ್‌ಗಳಷ್ಟು ಬೆಳೆ ಅವಶೇಷಗಳು ಉತ್ಪಾದನೆಯಾಗುತ್ತದೆ. ಇವುಗಳಿಂದ ಉತ್ಕೃಷ್ಟವಾದ ಸಾವಯವ ಗೊಬ್ಬರವನ್ನು ತಯಾರಿಸಬಹುದಾಗಿದ್ದರೂ ಸಹ ರೈತ ಬಾಂಧವರು ಬಹುತೇಕ ಉತ್ತರ ಭಾರತದಲ್ಲಿ ಭತ್ತ ಹಾಗೂ ಗೋದಿ ಹುಲ್ಲನ್ನು ಬೆಂಕಿ ಹಚ್ಚಿ ಸುಡುವುದು ವಾಡಿಕೆಯಾಗಿದೆ ಇದರಿಂದ ವಾಯು ಮಾಲಿನ್ಯ ಹೆಚ್ಚಾಗಿ ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೈಟೆಕ್ ಅಗ್ರಿಕ್ಯೂಲಮ್ ಸಂಸ್ಥೆಯವರು ಡಾ.ನಾಗರಾಜ್ ಹೆಗಡೆಯವರ ನೇತೃತ್ವದಲ್ಲಿ ಭೂಸಿರಿ ಎಂಬ ಸಂಚಾರಿ ವಾಹನ ಆಧಾರಿತ ಪ್ರಪಂಚದಲ್ಲಿಯೇ ಮೊದಲನೆಯದಾಗಿ ತಕ್ಷಣವೇ ಗೊಬ್ಬರ ತಯಾರಿಕಾ ಯಂತ್ರವನ್ನು ಹಾಗೂ ಡಾ. ಹೆಗಡೆ ನ್ಯಾನಾಕ್ಯೂಲಮ್ ಸಂಸ್ಥೆಯಿಂದ ಭೂಮಿತ್ರ ಎಂಬ ಅತ್ಯಾಧುನಿಕ ಮಣ್ಣಿನ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನವನ್ನು ಬಳಸಿ ತಕ್ಷಣವೇ ಮಣ್ಣು ಪರೀಕ್ಷೆ ಮಾಡಿ ವರದಿ ನೀಡುವ ಉಪಕರಣವನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಈ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಸಭಾದ್ಯಕ್ಷರು ಹಾಗೂ ನನ್ನ ವೈಯಕ್ತಿಕ ಪರವಾಗಿ ಈ ಸಂಸ್ಥೆಯನ್ನು ಹಾಗೂ ವಿಶೇಷವಾಗಿ ಡಾ. ನಾಗರಾಜ್ ಹೆಗಡೆಯವರನ್ನು ಅಭಿನಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಭಾಧ್ಯಕ್ಷರು ಮಾತನಾಡಿದರು.
ಏನಿದು ಭೂಸಿರಿ-ಭೂಮಿತ್ರ ಯಂತ್ರ
ಸಾಮಾನ್ಯವಾಗಿ ಕೃಷಿ ತ್ಯಾಜ್ಯ ವಸ್ತುಗಳು ಕಳೆತು ಸಾವಯವ ಗೊಬ್ಬರವಾಗಲು ಕನಿಷ್ಟ 40 ರಿಂದ 60 ದಿನಗಳು ಬೇಕಾಗುತ್ತವೆ. ಆದರೆ ಈ ಭೂಸಿರಿ ಸಂಚಾರಿ ವಾಹನದಲ್ಲಿ ತಕ್ಷಣವೇ ಗೊಬ್ಬರವನ್ನು ತಯಾರಿಸುವ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಹಾಗೂ ರೈತರ ಜಮೀನಿಗೆ ಹೋಗಿ ಅವರ ಕ್ಷೇತ್ರಗಳಲ್ಲಿ ಸಂಗ್ರಹ ಮಾಡಿದ ಕೃಷಿ ತ್ಯಾಜ್ಯ ವಸ್ತುಗಳನ್ನು ತಕ್ಷಣವೇ ಕತ್ತರಿಸಿ ಭೂಸಿರಿ ಯಂತ್ರದ ಮೂಲಕ ಸಾವಯವ ಗೊಬ್ಬರ ತಯಾರಿಸಿಕೊಡುವುದು ಅತ್ಯಂತ ಸೂಕ್ತವಾಗಿರುತ್ತದೆ.
ನಮ್ಮ ರಾಜ್ಯದಲ್ಲಿ ವರ್ಷದ ಮೂರು ಹಂಗಾಮಿನಲ್ಲಿ ಮೆಕ್ಕೆ ಜೋಳವನ್ನು ಸುಮಾರು 20 ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ಗಳಷ್ಟು ಬೆಳೆಯಲಾಗುತ್ತದೆ. ಈ ಬೆಳೆಯಿಂದ ಬಂದ ಜೋಳದ ದಂಟನ್ನು ರೈತರು ಬಹುತೇಕ ಬೆಂಕಿ ಹಚ್ಚಿ ಸುಡುವುದು ಇಲ್ಲವೇ ನಿಧಾನಗತಿಯಲ್ಲಿ ಗೊಬ್ಬರವಾಗಲು ಬಿಸಾಡುವುದು ಸಾಮಾನ್ಯ. ಇದೇ ರೀತಿ ಮಲೆನಾಡಿನಲ್ಲಿಯೂ ಕೂಡಾ ಅಡಿಕೆ, ತೆಂಗು ಗಿಡಗಳ ಒಣಗಿದ ಗರಿಗಳು ಹಾಗೂ ಮರಗಳ ಒಣಗಿದ ಎಲೆಗಳು ಜೈವಿಕವಾಗಿ ಕಳೆಯಲು ಕನಿಷ್ಟ 3 ರಿಂದ 4 ತಿಂಗಳುಗಳು ಬೇಕಾಗುವುದು. ಆದರೆ ಈ ಭೂಸಿರಿ ಯಂತ್ರದಿಂದ ತೊಗರಿ ಕಟ್ಟಿಗೆ, ಕತ್ತಿ ಕಟ್ಟಿಗೆ, ಕಬ್ಬಿನ ರವದಿ, ಗೋವಿನ ಜೋಳದ ದಂಟು, ತೆಂಗು ಅಡಿಕೆಯ ಗರಿಗಳು ಮುಂತಾದ ತ್ಯಾಜ್ಯ ವಸ್ತುಗಳನ್ನು ತಕ್ಷಣವೇ ವಿಘಟನೆ ಮಾಡಿ ಭೂಸಿರಿ ಯಂತ್ರದಿಂದ ಸಾವಯವ ಗೊಬ್ಬರ ತಯಾರಿಸುವುದು ಮಣ್ಣಿನ ಫಲವತ್ತತೆ ಹೆಚ್ಚಿಸುವ ದೃಷ್ಟಿಯಿಂದ ವಾತಾವರಣದ ಮಾಲಿನ್ಯ ತಡೆಯುವಲ್ಲಿ ಕೂಡ ಅತ್ಯಂತ ಸೂಕ್ತವಾದ ಮಾರ್ಗವಾಗಿರುತ್ತದೆ.
ಸಾಮಾನ್ಯವಾಗಿ ಪ್ರಯೋಗಾಲಯಗಳಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಯನ್ನು ರಾಸಾಯನಿಕ ವಿಧಾನಗಳಲ್ಲಿ ಮಾಡಿ ವಿಶ್ಲೇಷಣಾ ವರದಿಯನ್ನು ನೀಡಲು ಕನಿಷ್ಟ ಒಂದು ವಾರ ಸಮಯವಾಗುತ್ತದೆ. ಆದರೆ ಇಂದು ಲೋಕಾರ್ಪಣೆಯಾಗುತ್ತಿರುವ ಭೂಮಿತ್ರ ಯಂತ್ರದ ಮೂಲಕ ತಕ್ಷಣವೇ ಬೆಳೆಗೆ ಬೇಕಾಗುವ ಎಲ್ಲಾ 17 ಪೋಷಕಾಂಶಗಳನ್ನು ಅಲ್ಲದೇ ಹೆಚ್ಚುವರಿಯಾಗಿ ಇನ್ನೂ 5 ಪೋಷಕಾಂಶಗಳು, ಒಟ್ಟಾರೆಯಾಗಿ 23 ಪೋಷಕಾಂಶಗಳನ್ನು ತಕ್ಷಣವೇ ವಿಶ್ಲೇಷಣೆ ಮಾಡಿ ಕೊಡುವ ವ್ಯವಸ್ಥೆ ಈ ಯಂತ್ರದಿಂದ ಸಾಧ್ಯವಾಗುವುದೆಂದು ತಿಳಿದು ಇದೊಂದು ಮಣ್ಣು ಪರೀಕ್ಷೆಯಲ್ಲಿ ಕ್ರಾಂತಿಕಾರಕ ಸಾಧನೆಯಾಗಿದೆ.
ಈ ಪದ್ದತಿಯು ರಾಸಾಯನಿಕ ಪದ್ದತಿಯಾಗಿರದೇ ಭೌತಿಕ ರಸಾಯನ ವಿಜ್ಞಾನ ಹಾಗೂ ಗಣಕ ಯಂತ್ರ ವಿಜ್ಞಾನ ಸೇರಿಸಿ ಮಣ್ಣಿನ ಸ್ಪೆಕ್ಟ್ರೋಸ್ಕೋಪಿ ಪದ್ದತಿಯಿಂದ ಶೀಘ್ರವೇ ಮಣ್ಣಿನ ವಿಶ್ಲೇಷಣೆ ಮಾಡಲಾಗುವುದು. ಮಣ್ಣಿನಲ್ಲಿ ಶೇ. 45 ರಷ್ಟು ಖನಿಜಗಳು, ಶೇ. 25 ರಷ್ಟು ಗಾಳಿ, ಶೇ. 25 ರಷ್ಟು ನೀರು ಮತ್ತು ಶೇ. 5 ರಷ್ಟು ಸಾವಯವ ಪದಾರ್ಥ ಇರುತ್ತದೆ. ಈ ಮಣ್ಣಿನಲ್ಲಿ ಲಭ್ಯವಿರುವ ಪ್ರತಿಯೊಂದು ಖನಿಜ ಪದಾರ್ಥಗಳು ವಿಶಿಷ್ಟವಾದ ಬೆಳಕಿನ ಕಿರಣಗಳನ್ನು ಹೊರಹೊಮ್ಮುವ ಸಾಧ್ಯತೆ ಇರುತ್ತದೆ. ಈ ರೀತಿ ಹೊರಹೊಮ್ಮುವ ಬೆಳಕಿನ ಕಿರಣಗಳ ಲೈನ್‌ಗಳನ್ನು ಅವುಗಳ ವೇವ್‌ಲೆಂಗ್ತ್ ಹಾಗೂ ಫ್ರೀಕ್ವೆನ್ಸಿಗಳ ಆಧಾರದ ಮೇಲೆ ಮಣ್ಣಿನ ಪ್ರತಿ ಖನಿಜಗಳ ಲಭ್ಯತೆಯ ಪ್ರಮಾಣವನ್ನು ಲೆಕ್ಕ ಹಾಕಲಾಗುವುದು.
ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ ಭೂಸಿರಿ ಹಾಗೂ ಭೂಮಿತ್ರ ಯಂತ್ರಗಳಿಂದ ಆಧುನಿಕ ಪದ್ದತಿಗಳನ್ನು ಬಳಸಿ ಕೃಷಿ ತ್ಯಾಜ್ಯ ವಸ್ತುಗಳನ್ನು ತಕ್ಷಣವೇ ವಿಘಟನೆ ಮಾಡಿ ಸಾವಯವ ಗೊಬ್ಬರ ತಯಾರಿಸುವಲ್ಲಿ ಹಾಗೂ ಭೂಮಿತ್ರ ಯಂತ್ರ ಬಳಸಿ ತಕ್ಷಣವೇ ಮಣ್ಣಿನಲ್ಲಿಯ 23 ಪೋಷಕಾಂಶಗಳನ್ನು ಮಣ್ಣಿನ ಸ್ಪೆಕ್ಟ್ರೋಸ್ಕೋಪಿ ವಿಧಾನದ ಮೂಲಕ ವಿಶ್ಲೇಷಣೆ ಮಾಡುವ ಯಂತ್ರಗಳ ಮೂಲಕ ಭೂ ಫಲವತ್ತತೆ ಹಾಗೂ ಭೂ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಸಾಧ್ಯತೆಗಳಿವೆ.
ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ಸಂಘವು 100 ವರ್ಷಗಳನ್ನು ಪೂರೈಸಿದ್ದು ಈಗ ಶತಮಾನೋತ್ಸವದ ಸಂಭ್ರಮದಲ್ಲಿ ಇರುತ್ತದೆ.
ಶತಮಾನೋತ್ಸವದ ಆಚರಣೆಯ ಅಂಗವಾಗಿ ಸಂಘವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.
ರಾಜ್ಯ ಆಡಳಿತ ಸೇವೆಗಳ ಸ್ಥಿತಿಗತಿಗಳ ಕುರಿತು ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಇರುತ್ತವೆ. ಈ ಬಗ್ಗೆ ಕರ್ನಾಟಕ ರಾಜ್ಯದಲ್ಲಾಗಲಿ ಅಥವಾ ರಾಷ್ಟ್ರಮಟ್ಟದಲ್ಲಿಯಾಗಲಿ ಯಾವುದೇ ಅಧ್ಯಾಯನ /ಅಭ್ಯಾಸ ನಡೆಸಿರುವುದು ಕಂಡು ಬರುವುದಿಲ್ಲ.
ಆದ್ದರಿಂದ ವಿವಿಧ ರಾಜ್ಯಗಳಲ್ಲಿ ಇರುವ ರಾಜ್ಯ ಆಡಳಿತ ಸೇವೆಯ ಅಧಿಕಾರಿಗಳ ಸ್ಥಿತಿಗತಿಗಳು, ಅಂದರೆ ರಾಜ್ಯ ಸಿವಿಲ್ ಸೇವೆಯ ಅಧಿಕಾರಿಗಳ ನೇಮಕಾತಿ, ವೇತನ, ಬಡ್ತಿ ಮತ್ತು ಪದೋನ್ನತಿ, ತರಬೇತಿ, ವೃಂದ ಮತ್ತು ನೇಮಕಾತಿ, ವೃಂದ ನಿರ್ವಹಣೆ ಇತ್ಯಾದಿ ವಿಷಯಗಳು ಸೇರಿದಂತೆ ರಾಜ್ಯ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಆಧ್ಯಯನ ನಡೆಸಲು ಯೋಜಿಸಲಾಗಿದೆ.
ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ಸಂಘದ ಪರವಾಗಿ ಸದರಿ ಅಧ್ಯಯನವನ್ನು ಬೆಂಗಳೂರಿನ ಪ್ರತಿಷ್ಠಿತ ಅಧ್ಯಯನ ಸಂಸ್ಥೆಯಾದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಅಧ್ಯಾಯನ ಸಂಸ್ಥೆ ಐಖಇಅ ಮುಖಾಂತರ ನಡೆಸಲಾಗುವುದು. ಈ ಅಧ್ಯಯನದ ನೇತೃತ್ವವನ್ನು ಪ್ರೊ. ಆರ್.ಎಸ್. ದೇಶಪಾಂಡೆ, ನಿವೃತ್ತ ನಿರ್ದೇಶಕರು ವಹಿಸಲಿದ್ದು, ಯೋಜನಾ ನಿರ್ದೇಶಕರಾಗಿ ಡಾ. ಗಾಯತ್ರಿಅವರು ಕಾರ್ಯಕ್ರಮವನ್ನು ನಡೆಸಲಿದ್ದಾರೆ.
ಈ ಅದ್ಯಯನಕ್ಕೆ ಸಂಬಂಧಿಸಿದ ಒಡಂಬಡಿಕೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರ ಸಮಕ್ಷಮದಲ್ಲಿ ಸಹಿ ಮಾಡಲಾಯಿತು. ಈ ಸಂದರ್ಭದಲ್ಲಿ ಸರ್ಕಾರದ ಅಪರಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಹೇಮಲತ ಇವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post