ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಲಗಿ, ಮಂಗಲಗಿವಾಡಿ, ಸಿರಕಟನಳ್ಳಿ ಭಾಗದಲ್ಲಿ ಮೊನ್ನೆ ರಾತ್ರಿ ಭೂಮಿಯೊಳಗಿನಿಂದ ಸ್ಪೋಟದ ರೀತಿಯ ಶಬ್ದ ಕೇಳಿಬಂದಿದ್ದು, ಭಯ, ಆತಂಕದಲ್ಲಿದ್ದ ಗ್ರಾಮಗಳಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ, ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.
ಮಂಗಲಗಿ, ಮಂಗಲಗಿವಾಡಿ, ಸಿರಕಟನಳ್ಳಿ ಗ್ರಾಮಗಳಿಗೆ ಶನಿವಾರ ರಾತ್ರಿ ವೇಳೆ ಭೇಟಿ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸ್ಫೋಟದ ರೀತಿಯ ಶಬ್ದದಿಂದ ಹಾನಿಗಿಡಾದ ಮನೆಗಳನ್ನು ವೀಕ್ಷಿಸಿ, ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಈ ವೇಳೆ ಮಾತನಾಡಿದರು.
ಘಟನೆಗೆ ಸಂಬಂಧಿಸಿದಂತೆ ಸಿರಕಟನಳ್ಳಿ, ಮಂಗಲಗಿ, ಮಂಗಲಗಿವಾಡಿ ಗ್ರಾಮಗಳಿಂದ ನನಗೆ ಪೋನ್ ಬಂದಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ನಾನು ಭೇಟಿ ನೀಡುವ ಮುಂಚೆಯೇ ತಹಶೀಲ್ದಾರರು ಸಿರಕಟನಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದೊಡ್ಡಮಟ್ಟದ ಡ್ಯಾಮೇಜ್ ಏನು ಆಗಿಲ್ಲ. ಭೂಮಿಯಲ್ಲಿ ಶಬ್ದ ಕೇಳಿಸಿರುವುದು ನಿಜವೆಂದು ತಹಶೀಲ್ದಾರರು ಹೇಳಿದ್ದಾರೆ. ಸಂಬಂಧಿಸಿದ ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅವರು ಇಲ್ಲಿನ ಘಟನೆಗಳ ವರದಿ ತರಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇದು ಭೂಕಂಪನವಲ್ಲ. ಭಯ, ಆತಂಕ ಪಡುವಂತ ಘಟನೆ ಕೂಡ ಅಲ್ಲ. ಪ್ರೀಕ್ವೆನ್ಸಿ ಕಡಿಮೆ ಇರುವುದರಿಂದ ದೊಡ್ಡಮಟ್ಟದ ಸಮಸ್ಯೆ ಏನು ಆಗಿಲ್ಲ. ಸಿರಕಟನಳ್ಳಿಯಲ್ಲಿ 3.1 ಫ್ರೀಕ್ವೆನ್ಸಿ ಬಂದಿದೆ. ಮಂಗಲಗಿ ಭಾಗದಲ್ಲಿ 1.8 ಬಂದಿದೆ. ಈ ಮುಂಚೆ ಜಿಲ್ಲೆಯ ಕೆಲ ಭಾಗಗಳಲ್ಲಿ ಇದೇ ರೀತಿ ಭೂಮಿಯಲ್ಲಿ ಶಬ್ದ ಕೇಳಿ ಬಂದಿತ್ತು. ಅದಕ್ಕೂ ಮುಂಚೆ ಚಿಂಚೋಳಿ ಭಾಗದಲ್ಲಿ ದೊಡ್ಡಮಟ್ಟದ ಶಬ್ದ ಕೇಳಿ ಬಂದಿತ್ತು.
ತಜ್ಞರು ಹೇಳುವ ಪ್ರಕಾರ ಅಧಿಕಾರಿಗಳು ಪರಿಶೀಲನೆ ನಡೆಸಿದ ಪ್ರಕಾರ ದೊಡ್ಡಮಟ್ಟದ ಅನಾಹುತ ಇಲ್ಲಿ ನಡೆದಿಲ್ಲ. ಆದರೂ ಈ ಘಟನೆಯ ಬಗ್ಗೆ ತಜ್ಞರನ್ನು ಕರಿಸಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಗ್ರಾಮಸ್ಥರು ಭಯ ಆತಂಕ ಪಡುವ ಅವಶ್ಯಕತೆ ಇಲ್ಲ. ವಾತಾವರಣದಲ್ಲಿ ಹೆಚ್ಚು ಕಡಿಮೆಯಾದಾಗ ಭೂಮಿಯಲ್ಲಿ ಏರು ಪೇರು ಉಂಟಾಗಿ ಈ ರೀತಿಯ ಘಟನೆಗಳು ಅನೇಕ ಕಡೆಗಳಲ್ಲಿ ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.
ಆದರೂ ಈ ಘಟನೆಯ ಬಗ್ಗೆ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ, ಆ ರೀತಿಯ ಎಲ್ಲ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಾನು ಸೂಚಿಸಿದ್ದೇನೆ. ಯಾರು ಕೂಡ ಭಯಗೊಳ್ಳುವ ಅವಶ್ಯಕತೆ ಇಲ್ಲ. ಆ ರೀತಿಯ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ನನಗೆ ಕರೆ ಮಾಡಿ. ನನ್ನ ಪೋನ್ ದಿನವಿಡೀ ಆನ್ ಇರುತ್ತದೆ ಎಂದು ಗ್ರಾಮಸ್ಥರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಧೈರ್ಯ ತುಂಬಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post