ನವದೆಹಲಿ: 17ನೆಯ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, 7 ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಚುನಾವಣಾ ವೇಳಪಟ್ಟಿ ಘೋಷಣೆ ಮಾಡಿದ ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ, ತತಕ್ಷಣದಿಂದಲೇ ದೇಶದಾದ್ಯಂತ ಮಾದರಿ ನೀತಿಸಂಹಿತೆ ಜಾರಿಗೆ ಬರಲಿದೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗ ಪಾಲಿಸಬೇಕು. ಅಲ್ಲದೇ ರಾಜ್ಯ ಹಾಗೂ ಸ್ಥಳೀಯ ಚುನಾವಣಾಧಿಕಾರಿಗಳು ನೀತಿಸಂಹಿತೆ ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಹಾಲಿ 16ನೆಯ ಲೋಕಸಭೆಯ ಅವಧಿ ಜೂನ್ 3ಕ್ಕೆ ಮುಕ್ತಾಯಗೊಳ್ಳಲಿದ್ದು, ಆ ಅವಧಿಯ ಒಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡು, ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರುವ ಅಗತ್ಯವಿದೆ. ಅಲ್ಲದೇ, ಮೋದಿ ಸರ್ಕಾರದ ಅವಧಿ ಅಧಿಕೃತವಾಗಿ ಮೇ ಅಂತ್ಯಕ್ಕೆ ಕೊನೆಗಳ್ಳಲಿದೆ.
ಈ ಅವಧಿಯಲ್ಲಿ ಸರ್ಕಾರಗಳು ಯಾವುದೇ ರೀತಿಯ ಹೊಸ ಯೋಜನೆಗಳನ್ನು, ಯಾವುದೇ ಪ್ರಮುಖ ನಿರ್ಧಾರಗಳನ್ನು ಘೋಷಣೆಗಳನ್ನು ಮಾಡುವಂತಿಲ್ಲ ಎಂದು ಆಯೋಗ ತಾಕೀತು ಮಾಡಿದೆ.
#WATCH live from Delhi: Election Commission of India addresses a press conference. https://t.co/E0yEp9LHYq
— ANI (@ANI) March 10, 2019
ಇನ್ನು, ಯಾವುದೇ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದಲ್ಲಿ ಭಾರತೀಯ ಸೇನಾ ಪಡೆ ಸೇರಿದಂತೆ ಯಾವುದೇ ಭದ್ರತಾ ಪಡೆಗಳ ಫೋಟೋಗಳನ್ನು ಬಳಸುವಂತಿಲ್ಲ ಎಂದು ಆಯೋಗ ಇದೇ ವೇಳೆ ಸ್ಪಷ್ಟವಾಗಿ ತಾಕೀತು ಮಾಡಿದೆ.
17ನೆಯ ಲೋಕಸಭಾ ಚುನಾವಣೆಗೆ ಅಗತ್ಯವಿರುವ ಎಲ್ಲ ಸಿದ್ದತೆಯನ್ನು ಆಯೋಗ ಮಾಡಿಕೊಂಡಿದ್ದು, ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಈ ಬಾರಿ 89.98 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದು, ಅಂದಾಜು 1.59 ಕೋಟಿ ಮತದಾರರು 18-19 ವರ್ಷದ ಒಳಗಿನ ಯುವ ಮತದಾರರಿದ್ದಾರೆ. ದೇಶದಾದ್ಯಂತ 1.50 ಕೋಟಿ ಮತದಾರರು ಹೊಸದಾಗಿ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಈ ವರ್ಷ 8.45 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಭದ್ರತಾ ದೃಷ್ಠಿಯಿಂದ ಸಿಆರ್’ಪಿಎಫ್ ಯೋಧರನ್ನು ನಿಯೋಜನೆ ಮಾಡಲು ತೀರ್ಮಾನಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪಟ್ರೋಲಿಂಗ್ ಹಾಗೂ ರೂಟ್ ಮಾರ್ಚ್ ನಡೆಸಲು ಸೂಚಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು ಮತದಾನಕ್ಕೆ ಮುಂಚಿತವಾಗಿ ತಮ್ಮ ಮೇಲಿರುವ ಕ್ರಿಮಿನಲ್ ಅಪರಾಧಗಳ ಬಗ್ಗೆ ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕು. ಶಬ್ದ ಮಾಲಿನ್ಯ ಮಾಡುವಂತಿಲ್ಲ. ಮತಗಟ್ಟೆಗಳ ಬಳಿ ಶೌಚಾಲಯ. ಚಿಕಿತ್ಸೆ ಕೇಂದ್ರ ಇರಬೇಕು ಎಂದು ಸೂಚಿಸಲಾಗಿದೆ. ಅಲ್ಲದೇ ಈ ಅವಧಿಯಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೂ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ.
ದೇಶದಲ್ಲಿ ನಡೆಯುತ್ತಿರುವ ಪರೀಕ್ಷೆಗಳು ಹಾಗೂ ಹಬ್ಬಗಳನ್ನು ಗಮನದಲ್ಲಿ ಇರಿಸಿಕೊಂಡು ಚುನಾವಣಾ ದಿನಾಂಕವನ್ನು ಆಯೋಗ ನಿಗದಿ ಮಾಡಿದೆ.
ಸುಮಾರು 10 ಲಕ್ಷ ಮತಕೇಂದ್ರಗಳನ್ನು ಆಯೋಗ ತೆರೆಯಲಿದ್ದು, ಇದೇ ಮೊದಲ ಬಾರಿಗೆ ಇವಿಎಂ ಮಷೀನ್’ನಲ್ಲಿ ಅಭ್ಯರ್ಥಿಗಳ ಫೋಟೋ ಕಾಣಿಸುವಂತೆ ಮಾಡಲಾಗಿದೆ. ಅಲ್ಲದೇ, ವಿವಿ ಪ್ಯಾಟ್’ಗಳನ್ನೂ ಸಹ ಬಳಸಲಾಗುತ್ತದೆ ಎಂದಿದ್ದಾರೆ.
ಮತಗಟ್ಟೆ ಬಳಿಯಲ್ಲಿ ನೀಡಲಾಗುವ ಚೀಟಿಯನ್ನು ಯಾವುದೇ ಕಾರಣಕ್ಕೂ ಅಧಿಕೃತ ಗುರುತಿನ ಚೀಟಿ ಎಂದು ಪರಿಗಣಿಸಲಾಗುವುದಿಲ್ಲ ಎಂದಿರುವ ಆಯೋಗ, ಆಯೋಗದಿಂದ ವಿತರಣೆ ಮಾಡಿರುವ ವೋಟರ್ ಐಡಿ, ಡಿಎಲ್, ಆಧಾರ್ ಕಾರ್ಡ್ ಸೇರಿದಂತೆ ಸರ್ಕಾರದಿಂದ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿಯನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದರು.
2014 ರಲ್ಲಿ, 16 ನೇ ಲೋಕಸಭಾ ಚುನಾವಣೆ ಏಪ್ರಿಲ್ 7 ಮತ್ತು ಮೇ 12 ರ ನಡುವೆ ಒಂಬತ್ತು ಹಂತಗಳಲ್ಲಿ ನಡೆದು, ಮೇ 16 ರಂದು ಮತಗಳ ಎಣಿಕೆಯು ನಡೆದಿತ್ತು. ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್’ಡಿಎ ಬಹುಮತ ಪಡೆದು ನರೇಂದ್ರ ಮೋದಿ ಮೇ 26 ರಂದು ಮೋದಿ ಭಾರತದ 14 ನೆಯ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಸಂಪೂರ್ಣವಾದ ಬಹುಮತವನ್ನು ಪಡೆದುಕೊಳ್ಳುವಲ್ಲಿ ಸೋಲನ್ನು ಅನುಭವಿಸಿ, ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಪಡೆಯುವಲ್ಲಿಯೂ ಸಹ ಸೋತಿತ್ತು.
Discussion about this post