ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ದವಾಗಿರುವ ಪಾಕ್ ಹಾಗೂ ಅಲ್ಲಿನ ಉಗ್ರರು ದೇಶದಾದ್ಯಂತ ಹಲವಾರು ವಿದ್ವಂಸಕ ಕೃತ್ಯಗಳನ್ನು ನಡೆಸಲು ಭಾರೀ ಸಂಚು ರೂಪಿಸಿ, ಅದಕ್ಕಾಗಿ ಪಿಒಕೆಯಲ್ಲಿ ಎಲ್ಲ ಸಿದ್ದತೆ ಮಾಡಿಕೊಂಡಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಈ ಕುರಿತಂತೆ ಭಾರತೀಯ ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಝೀ ನ್ಯೂಸ್ ವಿಶೇಷ ವರದಿ ಪ್ರಕಟಿಸಿದ್ದು, ಅದರಂತೆ ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಿ, ಅಲ್ಲೋಲಕಲ್ಲೋಲ ಸೃಷ್ಟಿಸಲು ಎಲ್ಲಾ ವಿಧಾನಗಳನ್ನು ಬಳಸುವ ದಶಕಗಳಷ್ಟು ಹಳೆಯ ನೀತಿಯನ್ನು ಅನುಸರಿಸಿರುವ ಪಿಒಕೆಯಲ್ಲಿ ಭಯೋತ್ಪಾದಕರಿಗೆ ಹೊಸ ಮತ್ತು ಚಲಿಸಬಲ್ಲ ತರಬೇತಿ ಶಿಬಿರಗಳನ್ನು ಸ್ಥಾಪಿಸಿದೆ ಎಂದು ತಿಳಿಸಿವೆ.
ಪಾಕಿಸ್ಥಾನದ ಭಯೋತ್ಪಾದಕ ಗುಂಪು ಜಮಾತೆ-ಇ-ಇಸ್ಲಾಮಿ ರಾವಲಕೋಟ್’ನ ತಾರ್ನೂಟಿ ಮತ್ತು ಪೋತಿ ಬಾಲಾದಲ್ಲಿ ಈ ಭಯೋತ್ಪಾದಕ ಶಿಬಿರಗಳನ್ನು ಮುನ್ನಡೆಸುತ್ತಿದೆ. ಅಲ್ಲಿ ಭಾರತದಲ್ಲಿ ದಾಳಿ ನಡೆಸಲು ನೇಮಕಾತಿ ಮಾಡಿಕೊಂಡು ಬ್ರೈನ್ ವಾಷ್ ಮಾಡಿ, ಎಲ್ಲ ರೀತಿಯಲ್ಲೂ ಶಸ್ತ್ರಸಜ್ಜಿತಗೊಳಿಸಲಾಗುತ್ತಿದೆ ಎಂದಿದೆ.
ಜೈಷ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್-ಎ-ತೊಯ್ಬಾ ಸೇರಿದಂತೆ ವಿವಿಧ ಪಾಕಿಸ್ಥಾನಿ ಗುಂಪುಗಳ ಭಯೋತ್ಪಾದಕರು ಆಗಸ್ಟ್ 2019 ರಲ್ಲಿ ಪಾಕಿಸ್ಥಾನ ಸೇನೆಯ ಸಹಾಯದಿಂದ ಸ್ಥಾಪಿಸಲಾದ ಈ ತರಬೇತಿ ಶಿಬಿರಗಳ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಭಯೋತ್ಪಾದಕರಿಗೆ ಎಲ್’ಒಸಿ ದಾಟಲು ಪಾಕ್ ಸೇನೆ ಸಹಾಯ ಮಾಡುತ್ತಿದ್ದು, ಜಮ್ಮು ಕಾಶ್ಮೀರದ ಜನಪ್ರಿಯ ಧಾರ್ಮಿಕ ದೇವಾಲಯದ ಮೇಲೆ ದಾಳಿ ಮಾಡಲು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಬೀಡುಬಿಟ್ಟಿರುವ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಿದ್ದತೆ ನಡೆಸಿದೆ ಎಂದು ಹೇಳಲಾಗಿದೆ.
ನಟೋರಿಯಸ್ ಟೆರರಿಸ್ಟ್ ಎಂದು ಗುರುತಿಸಲಾಗಿರುವ ಹಿಜ್ಬುಲ್ ಕಮಾಂಡರ್ ಶಮ್ಶರ್ ಖಾನ್’ಗೆ ಭಯೋತ್ಪಾದಕರನ್ನು ಜಮ್ಮು ಕಾಶ್ಮೀರದ ಒಳನುಸುಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಈ ಕುರಿತಂತೆ ಝೀ ನ್ಯೂಸ್ ಪ್ರಕಟಿಸಿರುವ ಮಾಹಿತಿಯಂತೆ ಪಿಒಕೆ ಒಳಗೆ ಪ್ರವೇಶಿಸಿದ ಫೋಟೋಗಳಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರಿರುವುದು ಸ್ಪಷ್ಟವಾಗಿದೆ.
ಇನ್ನು, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ 18 ಭಯೋತ್ಪಾದಕ ಶಿಬಿರಗಳು ಮತ್ತು ಟೆರರಿಸ್ಟ್ ಲಾಂಚ್ ಪ್ಯಾಡ್’ಗಳನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಗುರುತಿಸಿದ್ದು, ಅಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಿ, ಎಲ್‌ಒಸಿ ದಾಟಿ ಭಾರತಕ್ಕೆ ನುಸುಳಲು ತಯಾರು ಮಾಡಲಾಗುತ್ತಿದೆ. ಶಿಬಿರಗಳು ಮತ್ತು ಉಡಾವಣಾ ಪ್ಯಾಡ್’ಗಳನ್ನು ಪಾಕಿಸ್ಥಾನ ಸೇನೆ ಮತ್ತು ಐಎಸ್’ಐ ಸಂಪೂರ್ಣವಾಗಿ ಮೇಲ್ವಿಚಾರಣೆ ಮತ್ತು ಸಹಾಯ ಮಾಡುತ್ತಿದೆ ಎಂದು ಮಾಹಿತಿ ನೀಡಿದೆ.
ಇನ್ನು, ಏಜೆನ್ಸಿಗಳು ಪಿಒಕೆಯಲ್ಲಿ ಭಯೋತ್ಪಾದಕ ಶಿಬಿರಗಳನ್ನು ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಲಾಂಚ್ ಪ್ಯಾಡ್‌ಗಳನ್ನು ಗುರುತಿಸಿವೆ. ಮನ್ಶೇರಾ, ಕೋಟ್ಲಿ ಮತ್ತು ಎ -3 ಎಂಬ ಮೂರು ವಲಯಗಳಲ್ಲಿ ಪ್ರಮುಖ ಭಯೋತ್ಪಾದಕ ಶಿಬಿರಗಳನ್ನು ಗುರುತಿಸಲಾಗಿದೆ. ಮನ್ಶೇರಾ ಅಡಿಯಲ್ಲಿ, ಬಾಲಕೋಟ್, ಗಹಿರ್, ಹಬೀಬುಲ್ಲಾ, ಬಾತ್ರಾಸಿ, ಚೆರೋ ಮಂಡಿ, ಶಿವಾಯ್ ನಲಾ, ಮುಸ್ಕರ, ಮತ್ತು ಅಬ್ದುಲ್ಲಾ ಬಿನ್ ಮಸೂದ್‌ನಲ್ಲಿ ಲಾಂಚ್ ಪ್ಯಾಡ್‌ಗಳಿವೆ. ಕೋಟ್ಲಿ ಪ್ರದೇಶದಲ್ಲಿ, ಗುಲ್ಪುರ, ಸೆಸಾ, ಬರಾಳಿ, ಡುಂಗಿ ಮತ್ತು ಕೋಟ್ಲಿಯಲ್ಲಿ ಭಯೋತ್ಪಾದಕ ಶಿಬಿರಗಳು ಮತ್ತು ಉಡಾವಣಾ ಪ್ಯಾಡ್‌ಗಳನ್ನು ಗುರುತಿಸಲಾಗಿದೆ. ಎ -3 ಸೆಕ್ಟರ್’ನಲ್ಲಿ ಕಾಳಿ ಘಾಟಿ ಮತ್ತು ಹಜೈರ್’ನಲ್ಲಿ ಭಯೋತ್ಪಾದಕ ಶಿಬಿರಗಳು ಕಂಡುಬಂದಿವೆ. ಇವುಗಳ ಜೊತೆಗೆ ಬಹವಾಲ್ಪುರ್, ಬುಂಬಾ ಮತ್ತು ಬರ್ನಾಲಾದಲ್ಲಿ ಹೊಸ ಶಿಬಿರಗಳನ್ನು ಗುರುತಿಸಲಾಗಿದೆ ಎಂದು ವರದಿಯಾಗಿದೆ.
Discussion about this post