ಈ ಲೇಖನ ನೋಡಿ ನನ್ನನ್ನು ಮೋದಿ ಭಕ್ತ ಎಂದು ಹೇಳಿದರೂ, ಗಂಜಿಗಾಗಿ ಮೋದಿಯ ಹೊಗಳಿಕೆ ಎಂದು ಜರೆದರೂ ನನಗೇನೂ ಬೇಸರವಿಲ್ಲ. ಇದೊಂದು Awareness ಮೂಡಿಸು ಸಲುವಾಗಿ ಬರೆದ ಲೇಖನ. ಹಿಂದೆ ಮುಂದೆ ಅರಿಯದೆ ಜರೆದರೇನಾದೀತು ಎಂಬುದೇ ಇದರ ಮುಖ್ಯ ಸಾರಾಂಶ.
ಈ ಲೇಖನದಲ್ಲಿ ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಸಲು ಇಚ್ಛಿಸುತ್ತೇನೆ. ಅದುವೇ, ಮೋದಿ ವ್ಯಕ್ತಿಯಲ್ಲ, ಅದೊಂದು ಶಕ್ತಿ. ನಾನು ಅವರ ಅಲಂಕಾರ ನೋಡಿ ಹೇಳುವುದೂ ಅಲ್ಲ, ಹಿಂದುತ್ವ ಎಂದು ಹೇಳುವುದೂ ಅಲ್ಲ. ಮೂರ್ಖರಿಗೆ ಹಾಗೆ ಅನ್ನಿಸಿದರೆ ನಾನೇನೂ ಮಾಡಲು ಸಾಧ್ಯವಿಲ್ಲ. ನಾನೇನಿದ್ದರೂ ಅವರ ಜನನ ಕಾಲದ ಗ್ರಹಸ್ಥಿತಿಯ ಆಧಾರದಲ್ಲೇ ಹೇಳುವವನು. ಅವರು ಅಧಿಕಾರಕ್ಕೆ ಬಂದ ಮೇಲೆ ಅವರ ಬಗ್ಗೆ ಹೇಳಿದವನೂ ಅಲ್ಲ. 2013 ರಲ್ಲಿ ಹೊಸದಿಗಂತದಲ್ಲಿ ‘ನಮೋ ಎನ್ನದೆ ವಿಧಿ ಇಲ್ಲ’ ಎಂಬ ಲೇಖನ ಬರೆದಿದ್ದೆ. ಅದನ್ನು ಇದರ ಜತೆ ಸೇರಿಸಿದ್ದೇನೆ.
ಯಾರು ಹೃದಯಾಂತರಾಳದಿಂದ ಹಿತವನ್ನು ಬಯಸಿ ಸ್ಪಂದಿಸುತ್ತಾರೋ ಅಂತವರನ್ನು ಹಿಂಸಿಸಿದರೆ, ನಿಂದಿಸಿದರೆ ನಮ್ಮ ಆತ್ಮವೇ ನಮಗೆ ತಿರುಗಿ ಬೀಳುತ್ತದೆ ಎಂಬುದಕ್ಕೆ ಸಾವಿರಾರು ಉದಾಹರಣೆಗಳಿವೆ. ಇದು ನಮ್ಮೊಳಗಿನ ನಿಂದನಾ ಜಾಯಮಾನಕ್ಕೆ ಒಂದು ನ್ಯಾಯವನ್ನು ಕೊಡುವ, ಜಾಗೃತಿಯನ್ನು (Awareness) ನೀಡುವ ಒಂದು ಲೇಖನ ಆಗಲಿ ಎಂಬುದೇ ನನ್ನ ಉದ್ದೇಶ.
ಮಹಾಬಲಿಷ್ಟ ರಾವಣ ರಾಮನನ್ನು ನಿಂದಿಸಿದ, ಕೃಷ್ಣನನ್ನು ಕೌರವ ನಿಂದಿಸಿದ, ಚಾಣಕ್ಯನಿಗೆ ನವನಂದರು ಅವಮಾನಿಸಿದರು. ಆದರೆ ಅವರೆಲ್ಲರೂ ಅವರವರ ಕತ್ತನ್ನು ಅವರವರೇ ಕೊಯ್ದುಕೊಂಡು ಮಣ್ಣು ಪಾಲಾಗಿ ಪಾಪಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡರು. ಇಂತಹ ಸಾವಿರಾರು ಉದಾಹರಣೆಗಳ ಪಟ್ಟಿಗೆ ನರೇಂದ್ರ ದಾಮೋದರ ದಾಸ ಮೋದಿಯವರು ಸೇರುತ್ತಾರೆ. ಇಂತಹ ವ್ಯಕ್ತಿತ್ವ ಬರಬೇಕಾದರೆ ಇದು ಒಂದೆಡೆ ಸಂಸರ್ಗ ಫಲ, ಇನ್ನೊಂದೆಡೆ ಜಾತಕ ಫಲ. ದುರುಪಯೋಗ ಆಗದಂತಹ ಅಖಂಡ ಸಾಮ್ರಾಜ್ಯ ಯೋಗ, ಗಜಕೇಸರಿ ಯೋಗ, ಪರ್ವತ ಯೋಗ, ಅಮಲಾ ಯೋಗಗಳೇ ಈ ಕೀರ್ತಿಗೆ ಕಾರಣ. ಹೇಗೆ ನಿಷ್ಕಳಂಕ ಭಾವನೆಯಿಂದ ಜೀವಿಸುವ ಗೋವನ್ನು ಹತ್ಯೆ ಮಾಡಿ ದೋಷ ಪ್ರಾಪ್ತಿಯಾಗುತ್ತದೋ, ಸರಿಸೃಪದಲ್ಲಿ ನಾಗರ ಹಾವನ್ನು ಅಥವಾ ಇನ್ಯಾವುದೇ ಹಾವುಗಳನ್ನು ಕೊಂದರೆ ನಾಗ ದೋಷ ಬರುವುದೋ ಅದೇ ರೀತಿ ಒಬ್ಬ ಸಜ್ಜನನನ್ನು ಹಿಂಸಿಸಿದರೂ ಬ್ರಹ್ಮ ಹತ್ಯಾದೋಷ ಬಂದೇ ಬರುತ್ತದೆ.
ಮೋದಿ ಅಧಿಕಾರಕ್ಕಾಗಿ ಹಪಹಪಿಸಿದವರಲ್ಲ. ಎಲ್ಲೋ ತಿರುಗುತ್ತಿದ್ದ ಒಬ್ಬ ಫಕೀರನನ್ನು ಅಟಲ್ ಜೀ ಗುಜರಾತ್ ಮುಖ್ಯಮಂತ್ರಿಯನ್ನಾಗಿಸಿದರು. ನಂತರ ರಾಜನಾಥ್ ಸಿಂಗ್ ಕರೆದು ಪ್ರಧಾನಮಂತ್ರಿ ಪದವಿಯಲ್ಲಿ ಕುಳ್ಳಿರಿಸಿದರು. ಆದರೆ ಸಜ್ಜನ ಪ್ರಜೆಗೆ ಕೊಡುವ ಗೌರವಕ್ಕಿಂತ ಮಿಗಿಲಾಗಿ ರಾಜನಾಥ ಸಿಂಘರಿಗೆ ಮೋದಿಯವರು ಕೊಟ್ಟಿಲ್ಲ. ಅಂದು ಮನಸ್ಸು ಮಾಡಿದ್ದರೆ ರಾಜನಾಥ ಸಿಂಘರೇ ಪ್ರಧಾನಿ ಆಗಬಹುದಿತ್ತು. ಆದರೆ ಅವರು ಅಂತಹ ಸ್ವಾರ್ಥಿಯಾಗಿರದೆ ಮೋದಿಗೆ ಕೊಡಿಸಿದರು. ಇವರೆಲ್ಲ ಪ್ರಾತಃಸ್ಮರಣೀಯರು.
ಚುನಾವಣಾ ಕಾಲದಲ್ಲಿ ಎಷ್ಟು ನಾಲಿಗೆ ಉದ್ದ ಬರುತ್ತೋ ಅಷ್ಟರ ಮಟ್ಟಿಗೆ ಮೋದಿಯವರನ್ನು ನಿಂದನೆ ಮಾಡಿದರು. ದೇಶದ ರಕ್ಷಣೆಗಾಗಿ ಕೈಗೊಂಡಂತಹ ಕೆಲಸವನ್ನು ವಿವೇಚನೆ ಇಲ್ಲದೆ ನಿಂದನೆ ಮಾಡಿದರು. ಉತ್ತರ ಭಾರತದ ಲಲ್ಲೂ, ದಕ್ಷಿಣದ ಚಿದಂಬರಂ, ಕೊನೆಗೆ ಮೌನ ಸಿಂಘರೂ ಮೋದಿಯವರನ್ನು ಹಳಿದರು. ಮಧ್ಯಭಾರತದ ದಿಗ್ವಿಜಯ, ಕರ್ನಾಟಕದ ದೊಡ್ಡ ಗೌಡ್ರು, ಸಣ್ಣ ಗೌಡ್ರು, ಸಿದ್ಧರಾಮ, ಶಿವಕುಮಾರ ಇತ್ಯಾದಿ ಜನರು ಹಿಗ್ಗಾ ಮುಗ್ಗ ಬೈದರು, ಹಳಿದರು, ನಿಂದಿಸಿದರು. ಇವರ ಬೆಂಲಿಗ ಪ್ರಜೆಗಳೂ ಕಲ್ಲು ತೂರಿ, ಬೆಂಕಿ ಹಚ್ಚಿ ಪ್ರತಿಭಟಿಸಿ ಮೈ ಸುಟ್ಟುಕೊಂಡದ್ದನ್ನು ನೋಡಿಯಾಯ್ತು. ಮೋದಿಯವರು ಒಂದು ದೇಶದ ಹಾಲಿ ಪ್ರಧಾನಿ ಎಂಬುದನ್ನೂ ಮರೆತು ಸ್ವತಃ ಪಾಕಿಸ್ಥಾನದ ಹಾಲಿ ಪ್ರಧಾನಿಯಾಗಿದ್ದರೂ ಇಮ್ರಾನ್ ಖಾನ್ ಹೀನಾಯವಾಗಿ ನಿಂದಿಸಿದ. ದೇಶದೊಳಗಿನ ನಿಂದಕರು ಈಗ ದಿನಕ್ಕೊಬ್ಬರಂತೆ ತಿಹಾರ್ ಜೈಲು ಪಾಲಾದದ್ದನ್ನೂ ನೋಡಿಯಾಯ್ತು, ಮುಂದೆಯೂ ನೋಡಲಿದ್ದೇವೆ. ನ್ಯಾಯಯುತ ಆಡಳಿತ ನೀಡುವ ನಾಯಕರಿಗೆ ಹಿಂಸೆ ನೀಡಿದರೆ ಅವರು ಎಂದೂ ದ್ವೇಷ ಸಾಧಿಸದೆ, ನ್ಯಾಯ ಪ್ರಕಾರವೇ ತಮ್ಮ ತಮ್ಮ ಕರ್ಮದಲ್ಲಿ ನಿರತರಾಗುತ್ತಾರೆ. ಆದರೆ ಮೇಲೊಬ್ಬ ನಿಯಾಮಕನು ಈ ನಿಂದಕರನ್ನು ನೋಡಿಕೊಳ್ಳುತ್ತಾ ಇರುತ್ತಾನೆ ಎಂಬುದು ಸತ್ಯವಾಗುತ್ತಿದೆ.
ಇಲ್ಲೊಂದು ಶ್ರೀ ಕೃಷ್ಣನು ಗೀತೆಯಲ್ಲಿ ತಿಳಿಸಿದ ಸಂದೇಶವೂ ಇದೆ. ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನಾ ಅಂದರೆ ನೀನು ನಿನ್ನ ಕರ್ಮವನ್ನು ಪ್ರಾಮಾಣಿಕ ಶ್ರದ್ಧೆ ಭಕ್ತಿಯಿಂದ ಮಾಡು. ಫಲ ನಿರೀಕ್ಷಿಸಿದರೆ ಕರ್ಮಕ್ಕೆ ಭಂಗ ಉಂಟಾದೀತು. ಆ ಕರ್ಮಕ್ಕೆ ತಕ್ಕುದಾದ ಫಲ ನಾನೇ ನೀಡುತ್ತೇನೆ ಎಂದು ತಿಳಿಸಿದ್ದ. ಹಿಂದೆ ಕರ್ಮಕ್ಕೆ ತಕ್ಕ ಪ್ರತಿಫಲವು ಪಾಂಡವರಿಗೆ ಸಿಕ್ಕಿ ಕೀರ್ತಿಶಾಲಿಗಳಾದರು. ಈಗಿನ ಸರದಿಯಲ್ಲಿ ಮೋದಿಯವರು ಎಂದೇ ಹೇಳಬೇಕಾಗಿದೆ.
ಅಯ್ಯಾ ನಿಂದಕರೇ ನೀವೆಂದಾದರೂ ಮೋದಿಯವರು ಪ್ರತಿಪಕ್ಷಗಳನ್ನು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು ಕೇಳಿದ್ದೀರಾ? ಹಾಗೇನಾದರೂ ಕೇಳಿದ್ದಿದ್ದರೆ ದಯವಿಟ್ಟು ಪುರಾವೆ ಸಹಿತ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ.
ನಾನು ಮೋದಿಯವರೊಳಗಿನ ಶಕ್ತಿಯನ್ನೇ ಗಮನಿಸಿದ್ದೂ, ಆ ಶಕ್ತಿಗೆ ಶರಣಾದದ್ದೂ ಆಗಿದೆ. ದೇಶದ ಮುಂದೆ ಮಾತ್ರವಲ್ಲ ಇಡಿಯ ಜಗತ್ತಿಗೆ ಆ ಶಕ್ತಿಯ ಪ್ರದರ್ಶನವಾಗುವ ಕಾಲ ಸನ್ನಿಹಿತವಾಗಿದೆ… ಕಾದು ನೋಡಿ…
Discussion about this post