ನವದೆಹಲಿ: ಸಂಚಾರ ನಿಯಮಗಳ ಮಹತ್ತರ ಬದಲಾವಣೆಗೆ ಅಣಿಯಾಗಿರುವ ಕೇಂದ್ರ ಸಾರಿಗೆ ಇಲಾಖೆ ಇದಕ್ಕಾಗಿ ಮೋಟಾರು ವಾಹನಗಳು (ತಿದ್ದುಪಡಿ) ಮಸೂದೆ 2019ಗೆ ಮುಂದಾಗಿದ್ದು, ಇದರನ್ವಯ ಸಂಚಾರ ನಿಯಮಗಳಿಗೆ ಭಾರೀ ಪ್ರಮಾಣದ ದಂಡ ಬೀಳಲಿದೆ.
ಅತ್ಯಂತ ಪ್ರಮುಖವಾಗಿ, ತುರ್ತು ಸೇವೆಯ ಆಂಬ್ಯುಲೆನ್ಸ್’ಗೆ ದಾರಿ ಬಿಡದೇ ತೊಂದರೆಯುಂಟು ಮಾಡಿದರೆ, ಕನಿಷ್ಠ 10 ಸಾವಿರ ರೂ. ದಂಡ ವಿಧಿಸುವ ಮಹತ್ವದ ಪ್ರಸ್ತಾವನೆಯನ್ನು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದ್ದು, ಅನರ್ಹಗೊಂಡಿರುವ ಅಥವಾ ಅವಧಿ ಮುಕ್ತಾಯಗೊಂಡಿರುವ ಪರವಾನಗಿ ಹೊಂದಿ ವಾಹನ ಚಾಲನೆ ಮಾಡಿದರೆ ಕನಿಷ್ಠ 5 ಸಾವಿರ ರೂ. ದಂಡದ ಪ್ರಸ್ತಾವನೆ ಮಾಡಲಾಗಿದೆ.
ಅಲ್ಲದೇ, ಸಂಚಾರ ನಿಯಮಗಳ ಉಲ್ಲಂಘನೆಗೆ ಕಠಿಣ ದಂಡ ವಿಧಿಸುವ ಪ್ರಸ್ತಾವನೆಯ ಅನ್ವಯ ಪ್ರಸ್ತುತ ಇರುವ 100 ರೂ.ಗಳಿಂದ 500 ರೂ.ಗಳಿಗೆ ಏರಿಕೆ ಮಾಡಲಾಗುತ್ತಿದೆ.
ಇನ್ನು, ಒಂದು ವೇಳೆ ನೀವು ನಿಮ್ಮ ಪರವಾನಗಿಯನ್ನು ಮನೆಯಲ್ಲಿಯೇ ಮರೆತು ವಾಹನ ಚಾಲನೆ ಮಾಡುತ್ತಿದ್ದರೆ ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ. ಪರವಾನಗಿ ರಹಿತ ವಾಹನ ಚಾಲನೆಗೆ 5 ಸಾವಿರ ರೂ. ಹಾಗೂ ವಿಮೆ ಇಲ್ಲದೇ ವಾಹನ ಚಾಲನೆ ಮಾಡಿದರೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ನಿಗದಿತ ವೇಗದ ಮಿತಿ ಮೀರಿ ಅತಿ ವೇಗದಲ್ಲಿ ವಾಹನ ಚಾಲನೆ ಮಾಡಿದರೆ, ಪ್ರಸ್ತುತ ಇರುವ 1 ಸಾವಿರ ರೂ.ಗಳಿಂದ 2 ಸಾವಿರ ರೂ.ಗಳಿಗೆ ಏರಿಕೆಯ ಜೊತೆಯಲ್ಲಿ, ಕಾರು ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸದಿದ್ದರೆ ಕನಿಷ್ಠ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ.
ಅತ್ಯಂತ ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದರೆ ಕನಿಷ್ಠ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಈ ಪ್ರಸ್ತಾವನೆಗೆ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಅಪಘಾತಗಳನ್ನು ಕಡಿಮೆಗೊಳಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾತ್ರ ಇದರ ಜಾರಿಗೆ ನಿರ್ಧರಿಸಿದೆ.1
Discussion about this post