ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದೀಪಾವಳಿಯು ದೀಪಗಳ ಅರ್ಥಾತ್ ಬೆಳಕಿನ ಹಬ್ಬ .ಮನೆಮನೆಯ ಮನಮನದ ಕತ್ತಲೆಯನ್ನು ನಿವಾರಿಸಿ, ಬೆಳಕನ್ನು ಉಂಟು ಮಾಡುವ ಹಬ್ಬ.
‘ಶರದೃತುವಿನಲ್ಲಿ ಸಂಭವಿಸುವ ಈ ಹಬ್ಬ ಧಾನ್ಯಲಕ್ಷ್ಮೀ ಮನೆಯೊಳಗೆ ಆಗಮಿಸಿ, ಭೌತಿಕ ಸಂಪತ್ತಿನ ಸಮೃದ್ಧಿಯ ವಾತಾವರಣ ಏರ್ಪಟ್ಟಾಗ ಆಚರಿಸಲ್ಪಡುವಂಥದ್ದು ಗಮನಾರ್ಹವಾಗಿದೆ. ಭೌತಿಕ ಸಂಪತ್ತನ್ನು ಹೇರಳವಾಗಿ ಹೊಂದಿದಾಗ, ಮಾನವ ಅಹಂಕಾರದಿಂದ ಮೈಮರೆಯುವುದು ಸಹಜ. ಅಂಥ ಗರ್ವದ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದುಕೊಳ್ಳಲು ಬೇಕಾದ ವಿಶ್ಲೇಷಣೆಗೆ ಅನುಕೂಲಗಳಾದ ಅನುಷ್ಠಾನವನ್ನು ಈ ದೀಪಾವಳಿ ಹಬ್ಬದಲ್ಲಿ ಅಳವಡಿಸಿರುವುದು ಸ್ಪಷ್ಟವಾಗಿದೆ.ನರಕ ಚತುರ್ದಶಿಯ ತೈಲಾಭ್ಯಂಗ
ಈ ದಿನದ ತೈಲ ಸ್ನಾನ ಆಯುರಾರೋಗ್ಯಭಿವೃದ್ಧಿಗೆ ಪವಿತ್ರತೆಗೆ ನೆಲೆಯಾಗಿದೆ. ನೈತಿಕ ಭಯವಿಲ್ಲದಿದ್ದರೆ ನರಕವೇ ಗತಿ. ಚತುರ್ದಶಿಯೆಂದರೆ ‘ವಿದ್ಯೆ ಎಂಬ ಅರ್ಥ ಕೂಡ ಉಂಟು. ಅಭ್ಯಂಜನ, ಹೊಸ ವಸ್ತ್ರಧಾರಣೆಗಳಿಂದ ಬಹಿರಂಗ ಶುದ್ಧಿಪಡೆದಂತೆ ಸತ್ವ ಗುಣಾತಿಶಯದಿಂದ ಅಂತರಂಗ ಶುದ್ಧಿಯನ್ನು ಪಡೆಯಬೇಕು. ನರಕಾಸುರನನ್ನು ಸಂಕೇತಿಸುವ ಕಾಮ-ಲೋಭಾದಿಗಳನ್ನು ದೂರಿಕರಿಸಲಿ ಎಂಬುದೇ ಈ ಆಚರಣೆಯ ಹಿನ್ನೆಲೆ.
ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆಸಿದರೆ ಅಲ್ಲಿ ಆರೋಗ್ಯ, ಸೌಭಾಗ್ಯ, ಸಂತೋಷ, ಸುಖ, ಶಾಂತಿ, ಸಮೃದ್ಧಿ, ಸಂಪತ್ತು ಇವೆಲ್ಲ ಇರುತ್ತದೆ. ಭೌತಿಕ ಸಂಪತ್ತು ಅಹಂಕಾರಕ್ಕೆ ಕಾರಣವಾಗದಿರಲಿ, ಧರ್ಮ ಮತ್ತು ಮೋಕ್ಷ ಪುರುಷಾರ್ಥಗಳಿಗೆ ಪೋಷಕವಾಗುವಂತೆ ವಿನಿಯೋಗವಾಗಲಿ ಎಂದು ಆಶ್ವಯುಜ ಅಮಾವಾಸ್ಯೆಯಂದು ಶ್ರೀಲಕ್ಷ್ಮೀ ಪೂಜೆ ನಡೆಸುತ್ತಾರೆ.ಬಲೀಂದ್ರನಿಗೆ ಬಹುಪಾರಕು
ಏಳು ಮಂದಿ ಚಿರಂಜೀವಿಗಳಲ್ಲಿ ಬಲಿಯೂ ಒಬ್ಬ. ಪ್ರಹ್ಲಾದನ ಮೊಮ್ಮಗ. ಪರಮ ವೈಷ್ಣವನಾದ ಬಲಿಯ ಸಾತ್ವಿಕ ತೇಜಸ್ಸಿನಿಂದ 3 ಲೋಕಕ್ಕೆ ವಿಸ್ಮಯವಾಯಿತು. ಅವನಲ್ಲಿ ಮಹಾದಾನಿ ಎಂಬ ಸ್ವಾಭಿಮಾನ ವಿಪರೀತವಿದ್ದೀತು. ಇವನ ಅಹಂಕಾರವನ್ನು ಮುರಿಯಲು ಇವನಿಗಾಗಿಯೇ ವಾಮನಾವತಾರವಾಯಿತು. ಕಾಮಧೇನು ಮೂಲಕ ಧಾನ್ಯ ಸಮೃದ್ಧಿ ಪಡೆದುಕೊಳ್ಳುವಲ್ಲಿ ನಮಗೆ ಗೋವು ಅತ್ಯಂತ ಸಹಕಾರಿ, ಇದರ ಉಪಕಾರ ಸ್ಮರಣೆ ರೂಪದಲ್ಲಿ ಕಾರ್ತಿಕ ಶುದ್ಧ ಪಾಡ್ಯದಂದು ವಿಶೇಷವಾಗಿ ಗೋಪೂಜೆಯನ್ನು ಸಲ್ಲಿಸುವ ಸಂಪ್ರದಾಯವಿದೆ.
ಈ ದಿನ ಹಿಟ್ಟಿನಿಂದ ಅಥವಾ ಸಗಣಿಯಿಂದ ಮಾಡುವ ಬಲಿ, ಗೋವರ್ಧನ ಗಿರಿ, ಪಾಂಡವರು ಮುಂತಾದ ಮೂರ್ತಿಗಳು ಆರ್ಯ ಪರಂಪರೆಗೆ ಸೇರಿದ್ದಾದರೆ ಗೋಪೂಜೆ, ಶುದ್ಧ ದ್ರಾವಿಡ ಪರಂಪರೆಯಿಂದ ಬಂದದ್ದು ಹೀಗೆ ಆರ್ಯ ದ್ರಾವಿಡ ಸಂಸ್ಕೃತಿಯ ಸಮಾಗಮವನ್ನು ದೀಪಾವಳಿಯಲ್ಲಿ ಕಾಣಬಹುದು.
ಭಾರತವು ಕೃಷಿ ಪ್ರಧಾನವಾದ ದೇಶ ಮಳೆಗಾಲದಲ್ಲಿ ಕೃಷಿಕರು ಕೃಷಿಕಾರ್ಯ ನಿರತರಾಗುತ್ತಾರೆ. ಆ ಸಮಯದಲ್ಲಿ ಹಬ್ಬಗಳು ವಿರಳ. ಶರದೃತು ಕೃಷಿಗೆ ಸ್ವಲ್ಪ ವಿರಾಮ ವರ್ಷಋತುವಿನಲ್ಲಿ ಕೈಗೊಂಡ ಕೃಷಿ ಕರ್ಮಗಳು ಹೇಮಂತದಲ್ಲಿ ಫಲಿಸುವುದು ಈ ನಿಟ್ಟಿನಲ್ಲಿ ದೀಪಾವಳಿ ಮನೋರಂಜಕ ಪರ್ವವೂ ಆಗಿದೆ.
ದೀಪಾವಳಿಯನ್ನು ಅರ್ಧ ನವರಾತ್ರೋತ್ಸವ ಪರ್ವವೆಂದು ಕರೆಯುತ್ತಾರೆ. ನವರಾತ್ರಿ ಉತ್ಸವವು ಹತ್ತು ದಿನಗಳ ಕಾಲ (ವಿಜಯ ದಶಮಿಯೂ ಸೇರಿ) ಸಾಗಿದರೆ ದೀಪಾವಳಿಯು ಐದು ದಿನಗಳ ಉತ್ಸವ.
ಪಟಾಕಿಯನ್ನು ಸುಡುವುದೆಂದರೆ ಹಣವನ್ನು ಸುಟ್ಟಂತೆ ಎಂಬ ತಗಾದೆ ತೆಗೆದು ಪಟಾಕಿ ಪ್ರಿಯರ ಉತ್ಸಾಹವನ್ನು ಕುಗ್ಗಿಸುವ ಮಂದಿ ಇದ್ದರೂ, ಹಣ ಎಷ್ಟಾದರು ಸರಿ ಪಟಾಕಿಯನ್ನು ಹೊಡೆಯದೆ ಹಬ್ಬದ ಮೆರಗು ವೈಭವಿಸುವುದಿಲ್ಲ ಎಂಬ ಬಹುಮತದ ಅಭಿಪ್ರಾಯಗಳು ಪಟಾಕಿ ಪರವಾಗಿ ಕೇಳಿಬರುತ್ತದೆ. ಆ ಕಾರಣದಿಂದಲೇ ಶಿವಕಾಶಿ ಕಂಪೆನಿಗಳಲ್ಲಿ ತಯಾರಾದ ಕೋಟ್ಯಂತರ ರೂಪಾಯಿ ಮೌಲ್ಯದ ಸುಡು ಮದ್ದುಗಳು ದೀಪಾವಳಿ ಸಂದರ್ಭದಲ್ಲಿ ಹೇರಳವಾಗಿ ಖರ್ಚಾಗುತ್ತದೆ ದೀಪಾವಳಿಯ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳೇ ಮೊದಲಾದ ಮಾಲೀಕರು ಗ್ರಾಹಕರಿಗಾಗಿ ದೀಪಾವಳಿ ಧಮಾಕ ಹೆಸರಿನಲ್ಲಿ ವಿಶೇಷ ಕೊಡುಗೆಗಳ ಮಳಿಗೆಗಳ ಮಾರಾಟ ಮೇಳವನ್ನು ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಉದ್ಯಮ ರಂಗದ ಹೊಸ ಬೆಳವಣಿಗೆ.ಜ್ಞಾನ-ಅಭಿವೃದ್ಧಿ ಸಂಕೇತವಾದ ದೀಪದಲ್ಲಿ ನಾವು ದೈವ ಸಾನಿಧ್ಯ ಕಾಣುತ್ತೇವೆ. ‘ದೀಪ ಉರಿದರೆ ಪಾಪ ಉರಿದಂತೆ ಎಂಬ ನಾಣ್ಣುಡಿಯೊಂದಿದೆ. ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ದೀಪವು ಮನೆಯಲ್ಲಿ ಬೆಳಗುತ್ತಿದ್ದರೆ ದಾರಿದ್ರ್ಯದ ಸುಳಿವಿಲ್ಲ .ದೀಪವನ್ನು ಉರಿಸಲು ಎಣ್ಣೆ ಹೇಗೆ ಅವಶ್ಯವೋ ಹಾಗೆಯೇ ಅಭ್ಯಂಜನ ಸ್ನಾನಕ್ಕೆ ಮಹತ್ವದ ಸ್ಥಾನವಿದೆ. ಕಾರಣ ಹೊರಗಿನ ಕೊಳೆಯನ್ನು ತೊಳೆದು ಹತ್ತಾರು ಜನರಿಗೆ ಬೇಕಾಗುವ ಮನಷ್ಯನಾಗು ಎಂಬ ಆಶಯ ಈ ಅಭ್ಯಂಜನ ಸ್ನಾನದ್ದು ಈ ಹಬ್ಬದ ಪ್ರತಿ ದಿನವೂ ಒಂದೊಂದು ಸಂದೇಶ ನೀಡುವಂತದ್ದೇ ಆಗಿದೆ. ಅದರ ಮಹತ್ವವನ್ನು ಅರಿತಾಗಲೆ ನಿಜವಾದ ದೀಪಾವಳಿಯ ಆಚರಣೆಯಾಗುತ್ತದೆ.
ಸ್ವಯಂ ಬೆಳಗಿ ಇನ್ನೊಬ್ಬರನ್ನು ಬೆಳಗಿಸುವುದು ದೀಪದ ಸ್ವಭಾವ ತಾನು ಬೆಳಗಲು ಇನ್ನೊಂದರ ಹಂಗಿಲ್ಲ. ತಾನಾಗಿಯೇ ಬೆಳಗುತ್ತದೆ. ಇನ್ನೊಬ್ಬರಿಗೆ ಅಧೀನವಾಗಬಾರದು. ಮನುಷ್ಯನೂ ಹೀಗೆ ಸ್ವತಂತ್ರವಾಗಿರಬೇಕು. ಕತ್ತಲನ್ನು ನಿವಾರಿಸುವುದಕ್ಕೆ ಅಷ್ಟೇ ಸೀಮಿತವಲ್ಲ. ಅದು ಜ್ಞಾನದ – ಸಂಕೇತ.ದೀಪ ಮೊದಲು ಆ ಮೇಲೆ ಶಬ್ದ. ದೀಪ ಅಂದರೆ ಸರಿಯಾದ ಅರಿವು. ಶಬ್ದ ಅಂದರೆ ಅರಿವಿನಿಂದ ಉಂಟಾದ ಮಾತು ಮೊದಲು ನಾವು ಅರಿಯಬೇಕು. ಆ ಅರಿವು ನಿಂತ ನೀರಾಗಬಾರದು. ಸಜ್ಜನರ ಹೃದಯ ಮಂದಿರವನ್ನು ತಲುಪುವ ಜ್ಞಾನಗಂಗಾ ಪ್ರವಾಹವಾಗಬೇಕು. ಶಬ್ದದ ಮೂಲಕ ಅರಿವಿನ ಪ್ರಸಾರ ಇದರಿಂದ ನಮ್ಮ ಮನೆ-ಮನವೂ ಬೆಳಗುತ್ತದೆ. ಇದು ದೀಪಾವಳಿಯ ಬಗೆಗೆ ಪ್ರಾಚೀನರು ಇತ್ತ ಸಂದೇಶ.
ಇಂದು ಹಬ್ಬಗಳ ಆಚರಣೆಯ ಅಗತ್ಯ ಇದೆ. ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆ, ಜಾನಪದ ಆವರಣ, ಕೃಷಿ ಸಂಪತ್ತು, ಮಾನಸಿಕ ಆರೋಗ್ಯ ನಮ್ಮಿಂದ, ದೂರವಾಗುತ್ತಿದೆ. ಆಧುನಿಕ ಬದುಕಿನ ಸೋಗಿಗೆ, ಬತ್ತಲೆ ಜಗತ್ತಿನ ನರಕಕ್ಕೆ ಬೀಳುತ್ತಿರುವ ಕಾಣದ ಬಯಕೆಗೆ ಬಲಿಯಾಗುತ್ತಿರುವ ಭಾವೀ ಜನಾಂಗಕ್ಕೆ ದೀಪಾವಳಿಯ ಆಚರಣೆ ಹೊಸ ಆಯಾಮವನ್ನು ನೀಡಲಿ ಎಂಬ ಆಶಯ ನಮ್ಮದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post