ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರ ಜಿಲ್ಲೆಯ ಆನೇಕಲ್’ನಲ್ಲಿ ಪಟಾಕಿ ಅನ್ ಲೋಡ್ ಮಾಡುವ ವೇಳೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 13ಕ್ಕೇರಿದೆ.
ಇಲ್ಲಿನ ನವೀನ್ ಎನ್ನುವವರಿಗೆ ಸೇರಿದ ಪಟಾಕಿ ಅಂಗಡಿಗೆ ಅನ್ ಲೋಡ್ ಮಾಡುವಾಗ ಆಕಸ್ಮಿಕವಾಗಿ ಸ್ಪೋಟ ಸಂಭವಿಸಿದ್ದು, ಇದು ಅಕ್ಕಪಕ್ಕದ 4-5 ಅಂಗಡಿಗಳಿಗೂ ಸಹ ವ್ಯಾಪಿಸಿದೆ. ಸುಮಾರು 4-5 ಅಂಗಡಿಗಳು ಸುಟ್ಟು ಭಸ್ಮವಾಗಿವೆ.
ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗುವುದರೊಂದಿಗೆ 1 ಕ್ಯಾಂಟರ್, 2 ಬೊಲೆರೋ, 4 ಬೈಕ್‌ಗಳು ಸಹ ಬೆಂಕಿಗಾಹುತಿ ಆಗಿವೆ. ದೊಡ್ಡ ಮಳಿಗೆಯಾಗಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಸುಮಾರು 20 ಕಾರ್ಮಿಕರ ಇಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, 13 ಮಂದಿ ಸಜೀವವಾಗಿ ದಹನಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿರಬಹುದು ಎನ್ನಲಾಗಿದೆ.
ಘಟನೆ ಕುರಿತಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸಮೀಪ ಅತ್ತಿಬೆಲೆಯ ಪಟಾಕಿ ಸಂಗ್ರಹ ಮಳಿಗೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ದುರ್ಘಟನೆ ನಡೆದ ಸ್ಥಳಕ್ಕೆ ನಾಳೆ ಭೇಟಿನೀಡಿ, ಪರಿಶೀಲನೆ ನಡೆಸಲಿದ್ದೇನೆ. ಮೃತ ಕಾರ್ಮಿಕರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















